ಪ್ರೇಮಿಸುವುದು : ತಾವೋ ಧ್ಯಾನ ~ 16

ಲೈಂಗಿಕತೆಯನ್ನು ಹತೋಟಿಗೆ,  ನಮ್ಮ ಅನುಕೂಲಕ್ಕೆ, ಸ್ವಾರ್ಥಕ್ಕೆ, ದುರುಪಯೋಗಕ್ಕೆ ಬಳಸುವುದು ಸಾಧುವಲ್ಲ. ಲೈಂಗಿಕತೆ ನಮ್ಮ ವೈಯಕ್ತಿಕ ಒತ್ತಡಗಳಿಗೆ, ಭ್ರಮೆಗಳಿಗೆ ವೇದಿಕೆಯಾಗುವುದೂ ಸಾಧ್ಯವಿಲ್ಲ  ~ ಡೆನ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ನಾನು ಪ್ರೀತಿಯೊಡನೆ
ಒಂದಾಗಿಬಿಟ್ಟಿದ್ದೇನೆ.
ಕಾಮ, ಈಗ ನನ್ನನ್ನು ಕಾಡುವುದಿಲ್ಲ
ಎಂದೆಯಲ್ಲಾ,
ಇದು ತುಂಬಾ ಅಪಾಯಕಾರಿ ಹೇಳಿಕೆ.

ನನ್ನ ಪ್ರೇಮವೂ ಹಾಗೇ
ಎಂದು ನಂಬಬೇಡ.

ಮುಂದೊಂದು ದಿನ
ನೀನು ಹಿಂದೆ ಹೇಗೆ ಪ್ರೇಮಿಸುತ್ತಿದ್ದೆ
ಎಂಬ ಚಿತ್ರ ನೋಡಿದೆಯಾದರೆ
ನಿನಗೆ, ನಿನ್ನ ಬಗ್ಗೆಯೇ ಅಸಹ್ಯವಾಗಬಹುದು.
ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲೂ
ನಾಚುವುದಿಲ್ಲ ನೀನು ಆಗ.

~ ರೂಮಿ

***

ಪ್ರೇಮಿಸುವುದು ತುಂಬ ಸಹಜ, ಸ್ವಾಭಾವಿಕ. ಆದರೆ ನಾಚಿಗೆ ಯಾಕೆ?

ಈ ಹೇಳಿಕೆ ತುಂಬ ಸುಲಭ ಅನಿಸಬಹುದು ಆದರೆ ಈ ಸಂಕೀರ್ಣ ಕಾಲದಲ್ಲಿ ಭಾರೀ ಸವಾಲಿನ ವಿಷಯ. ಲೈಂಗಿಕತೆಯ ಮೇಲೆ ಹಲವಾರು ಅರ್ಥಗಳ ಪದರಗಳನ್ನು ಹೊದಿಸಲಾಗಿದೆ. ಲೈಂಗಿಕತೆಯನ್ನು ಧರ್ಮಗಳು ಕಳ್ಳನಂತೆ ನೋಡುತ್ತವೆ, ಸನ್ಯಾಸಿಗಳು ನಿರಾಕರಿಸುತ್ತಾರೆ, ಪ್ರಣಯಿಗಳು ವೈಭವೀಕರಿಸುತ್ತಾರೆ, ಬುದ್ಧಿಜೀವಿಗಳು ಸೈದ್ಧಾಂತೀಕರಿಸುತ್ತಾರೆ, ಉನ್ಮಾದಿಗಳು ವಿಕೃತಗೊಳಿಸುತ್ತಾರೆ. ಹಾಗೆ ನೋಡಿದರೆ ಪ್ರೇಮಿಸುವುದಕ್ಕೂ ಈ ಕ್ರೀಯೆಗಳಿಗೂ ಯಾವ ಸಂಬಂಧವೂ ಇಲ್ಲ. ಇವು ಹುಟ್ಟಿದ್ದು ಅಂಧ ಅನುಕರಣೆಯಿಂದ ಅಥವಾ ಉದ್ರೇಕದ ನಡುವಳಿಕೆಯಿಂದ. ಮುಕ್ತ ಮತ್ತು ಆರೋಗ್ಯಕರ ಲೈಂಗಿಕತೆಯನ್ನು ಸಾಧಿಸುವ ಸವಾಲನ್ನು ಸ್ವೀಕರಿಸುವುದು ನಮ್ಮಿಂದ ಸಾಧ್ಯವಾಗಬಲ್ಲದೆ?

ಕೊನೆಗೆ, ಇಂದ್ರಿಯಗಳ ಸುಖ,
ತುಚ್ಛ ಹಾಗು ಕಹಿ ಅನ್ನಿಸಬಹುದು.
ನಾವು ಅವನ್ನ ನಿರಾಕರಿಸಬಹುದು,
ಕೆಡುಕಿನ ಹಣೆಪಟ್ಟಿ ಕಟ್ಟಬಹುದು.
ಅದರೂ, ಸತ್ಯದ ನೆಲೆ ಕಂಡ
ಮಹಾನುಭಾವರೂ ಕೂಡ,
ವಿಚಲಿತರಾಗುತ್ತಾರೆ ಒಂದು ಕ್ಷಣ
ಇವುಗಳ ಸಾಮರ್ಥ್ಯದ ಮುಂದೆ.
ಯಾವ ಶಕ್ತಿ ಜೀವಂತವಾಗಿಟ್ಟಿದೆ
ನಮ್ಮ ಈ ಎದೆ ಬಡಿತವನ್ನ? ………ಭರ್ತೃಹರಿ

ಲೈಂಗಿಕತೆಯನ್ನು ಹತೋಟಿಗೆ,  ನಮ್ಮ ಅನುಕೂಲಕ್ಕೆ, ಸ್ವಾರ್ಥಕ್ಕೆ, ದುರುಪಯೋಗಕ್ಕೆ ಬಳಸುವುದು ಸಾಧುವಲ್ಲ. ಲೈಂಗಿಕತೆ ನಮ್ಮ ವೈಯಕ್ತಿಕ ಒತ್ತಡಗಳಿಗೆ, ಭ್ರಮೆಗಳಿಗೆ ವೇದಿಕೆಯಾಗುವುದೂ ಸಾಧ್ಯವಿಲ್ಲ.

ಲೈಂಗಿಕತೆ ನಮ್ಮೊಳಗಿನ ಆಳ ವ್ಯಕ್ತಿತ್ವದ ಪ್ರಾಮಾಣಿಕ ಅಭಿವ್ಯಕ್ತಿ ಆದ್ದರಿಂದ ಅದನ್ನು ವ್ಯಕ್ತ ಮಾಡುವ ವಿಧಾನ ಕೂಡ ಆರೋಗ್ಯಕರವಾಗಿರ ಬೇಕು. ಪ್ರೇಮಿಸುವುದು ನಿಗೂಢ, ಪವಿತ್ರ ಮತ್ತು ಇಬ್ಬರು ವ್ಯಕ್ತಿಗಳ ನಡುವಿನ ಗಾಢವಾದ ಕೊಡು ಕೊಳ್ಳುವಿಕೆ. ಪ್ರೇಮಿಸುವಿಕೆಯಲ್ಲಿ ಹುಟ್ಟಿದ ಪ್ರತಿಯೊಂದಕ್ಕೂ ಭಾಗವಹಿಸಿದ ಇಬ್ಬರೂ ಜವಾಬ್ದಾರರು. ಪ್ರೇಮದಲ್ಲಿ ನಾವು ತೊಡಗಿಸಿರುವುದೇ ನಾವು ಅದರಿಂದ ಪಡೆಯಬಹುದಾದದ್ದನ್ನು ನಿರ್ಧರಿಸುತ್ತದೆ.

ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದಂಥ ಹರುಷ ಕಂಡು
ಮಾತಿಗೊಲಿಯದಮೃತ ಉಂಡು
ದುಃಖ ಹಗುರವೆನುತಿರೆ
ಪ್ರೇಮವೆನಲು ಹಾಸ್ಯವೆ? (ಕೆ ಎಸ್ ನ)

Leave a Reply