ಅಧ್ಯಾತ್ಮ ಡೈರಿ : ಖಾಲಿಯೂ ಒಂದು ಇರುವಿಕೆ !

ಯಾವುದೇ ವಸ್ತುವನ್ನು ಹಿಡಿದಿಟ್ಟುಕೊಳ್ಳಲೊಂದು ಖಾಲಿ ‘ಇರಬೇಕು’. ಅನಸ್ತಿತ್ವವೇ ‘ಅಸ್ತಿ’ – `ಇದೆ’ ಎಂದಾಗಬೇಕು. ಈ ಅನಸ್ತಿತ್ವದ ಅಸ್ತಿತ್ವವೇ ಅತ್ಯುಪಯುಕ್ತ, ಇದೇ ಸೃಷ್ಟಿ ಸಾಧ್ಯತೆಯ ಅನಂತ ದಿಬ್ಬ ~ ಅಲಾವಿಕಾ

ಮೂವತ್ತು ಅರೆಗಳಿದ್ದರೂ ಚಕ್ರವನ್ನ ಹಿಡಿದಿಡೋದು ಅವನ್ನು ಒಗ್ಗೂಡಿಸುವ ರಂಧ್ರ.
ಕುಂಬಾರ ಮಣ್ಣು ತುಳಿತುಳಿದು ಚೆಂದದ ಮಡಿಕೆ ಮಾಡಿದರೂ
ಉಪಯೋಗಕ್ಕೆ ಬರೋದು ಆಕಾರವಲ್ಲ, ಅದರೊಳಗಿನ ಖಾಲಿ.
ಬಾಗಿಲಿಲ್ಲದೆ ಕೋಣೆಯೊಳಕ್ಕೆ ಬರಲಾಗದು,
ಕಿಟಕಿಗಳಿಲ್ಲದೆ ಕೋಣೆಯೊಳಕ್ಕೆ ಬರಿ ಕತ್ತಲು.
ಅನಸ್ತಿತ್ವ ನಿಜಕ್ಕೂ ಬಹೂಪಯೋಗಿಯಾಗಿರುವುದು  ~ ಅನ್ನುತ್ತಾನೆ ತತ್ತ್ವಜ್ಞಾನಿ ಲಾವೋತ್ಸು ತನ್ನ `ತಾವೋ ತೆ ಚಿಂಗ್’ದಲ್ಲಿ.

ಅನಸ್ತಿತ್ವ ಅಂದರೆ ಅಸ್ತಿತ್ವದ ಗೈರು. ಅದು ಶೂನ್ಯ. ಅದು ನಿರ್ವಾತವೂ, ಅದು ಖಾಲಿಯೂ ಆಗಿದೆ.
ಈ ನಿರ್ವಾತವು, ಈ ಶೂನ್ಯವು ಅನಂತ ಸಾಧ್ಯತೆಗಳ ತೊಟ್ಟಿಲು. ತುಂಬಿಕೊಂಡಿರುವ ಸ್ಥಳದ ಸಾಧ್ಯತೆಗಳು ಅಲ್ಲಿಗೆ ಮುಗಿದುಹೋಗುತ್ತವೆ. ಆ ಅಷ್ಟು ಸ್ಥಳದ ಸಾಧ್ಯತೆ ಮಿತಗೊಳ್ಳುತ್ತದೆ. ಖಾಲಿ ಇರುವ ಸ್ಥಳ ಯಾವುದಾದರೊಂದು ಹೊಸ ಹುಟ್ಟಿಗೆ, ಹೊಸತರ ಉಪಯೋಗಕ್ಕೆ ಮುಕ್ತವಾಗಿರುತ್ತದೆ.
ತಾವೋ ಈ ಖಾಲಿತನದ ಉಪಯುಕ್ತತೆಯ ಬಗ್ಗೆ ಮಾತಾಡುತ್ತದೆ. ಖಾಲಿ ಅನ್ನುವುದು ಅನಸ್ತಿತ್ವ. ಅಂದರೆ ಯಾವುದಕ್ಕೆ ಅಸ್ತಿತ್ವವೇ ಇಲ್ಲವೋ ಅದು. ಆದರೆ ಈ ಖಾಲಿ ಉಪಯೋಗಕ್ಕೆ ಬರಬೇಕೆಂದರೆ ಅದು `ಇರಬೇಕು’. ಖಾಲಿ ಇಲ್ಲವಾದರೆ ಅದು ತುಂಬಿಕೊಂಡಿದೆ ಎನ್ನುವ ಅರ್ಥ ಉಂಟಾಗುತ್ತದೆ. ಯಾವುದು ತುಂಬಿಕೊಂಡಿರುತ್ತದೆಯೋ ಅದು `ಅಸ್ತಿತ್ವ’ದ ಭಾಗ. ಅದು ಆಕಾರದಿಂದ, ವಸ್ತುವಿನಿಂದ ಆಕ್ರಮಿತ. ಅದೀಗ ಹೊಸ ಉಪಯೋಗಕ್ಕೆ ಬರುವುದಿಲ್ಲ. ಹೊಸ ಸಾಧ್ಯತೆಗೆ ದಕ್ಕುವುದಿಲ್ಲ. ಆದ್ದರಿಂದ ಖಾಲಿ `ಇರಬೇಕು’. ಅನಸ್ತಿತ್ವವೇ `ಅಸ್ತಿ’ – `ಇದೆ’ ಎಂದಾಗಬೇಕು. ಈ ಅನಸ್ತಿತ್ವದ ಅಸ್ತಿತ್ವವೇ ಅತ್ಯುಪಯುಕ್ತ, ಇದೇ ಸೃಷ್ಟಿ ಸಾಧ್ಯತೆಯ ಅನಂತ ದಿಬ್ಬ.

ದೇಹವನ್ನು `ಘಟ’ವೆಂದೂ ಕರೆಯುತ್ತಾರೆ. ಮಡಿಕೆಯು ದೇಹವನ್ನು ಸಮರ್ಥವಾಗಿ ಸಂಕೇತಿಸುತ್ತದೆ. ಪಂಚಭೂತಗಳಿಂದ ಸೃಷ್ಟಿಗೊಂಡ ಶರೀರವು ಜೀವದ್ರವ್ಯವನ್ನು ಹಿಡಿದಿಟ್ಟುಕೊಳ್ಳುವ ಮಡಿಕೆಯಂತೆ. ದೇಹದೊಳಗಿನ ವಸ್ತುಗಳೆಲ್ಲವೂ ಈ ಜೀವದ್ರವ್ಯವನ್ನು ಹಿಡಿದಿಟ್ಟುಕೊಳ್ಳುತ್ತವೆ. ಘಟ ಅಥವಾ ಮಡಿಕೆ ಒಡೆದುಹೋದರೆ ಅದರೊಳಗಿನ ನೀರು ಚೆಲ್ಲಿಹೋಗುತ್ತದೆ. ಕಾಲಕ್ರಮದಲ್ಲಿ ಭೂಮಿಯಿಂದಲೋ ಸೂರ್ಯನಿಂದಲೋ ಹೀರಲ್ಪಟ್ಟು ಇಂಗಿ ಹೋಗುತ್ತದೆ. ಅಥವಾ ನದಿಯೊಳಗೆ ಬಿದ್ದರೆ ವಿಶಾಲ ಹರಿವಿನಲ್ಲಿ ಒಂದಾಗಿಬಿಡುತ್ತದೆ. ಹಾಗೆಯೇ ದೇಹವು ನಾಶವಾದಾಗ ಅದರೊಳಗಿನ ಜೀವದ್ರವ್ಯವು ಸೃಷ್ಟಿಯಲ್ಲಿ ವಿಲೀನವಾಗುತ್ತದೆ.
ಆದರೆ ಈ ನೀರನ್ನು, ಈ ಜೀವದ್ರವ್ಯವನ್ನು ಹಿಡಿದಿಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಖಾಲಿ ಏನಾಗುತ್ತದೆ?
ಅದು ಅನಂತ ಆಕಾಶದೊಂದಿಗೆ ಬೆರೆತುಹೋಗುತ್ತದೆ! ವಾಸ್ತವದಲ್ಲಿ ಅನಂತ ಆಕಾಶವು ಆಕಾರದೊಳಗೆ ಬಂಧಿಸಲ್ಪಟ್ಟು ಆಕಾಶದ ತುಣುಕಾಗಿ ವಿಭಜನೆಗೊಂಡಿರುತ್ತದೆ. ಆಕಾರವು ಅಥವಾ ಗೋಡೆಯು ಅಥವಾ ದೇಹವು ನಾಶವಾದ ಕೂಡಲೆ ಈ ತುಣುಕು ಆಕಾಶವು ಅಖಂಡ ಆಕಾಶದೊಡನೆ ಬೆರೆತುಹೋಗುತ್ತದೆ.

ರೂಪಾಕಾರಗಳಿಲ್ಲದ, ಗಾತ್ರ ಗುರುತುಗಳಿಲ್ಲದ ಆತ್ಮವು ಅನಸ್ತಿತ್ವದ ಅಸ್ತಿತ್ವವೇ ಆಗಿದೆ. ವಾಸ್ತವದಲ್ಲಿ ಆತ್ಮವೆಂಬುದು ಇಲ್ಲ. ಆದರೆ ಈ ಆತ್ಮವು ಜೀವಸಾಧ್ಯತೆಗಳ ತೊಟ್ಟಿಲಾಗಿರುವುದರಿಂದ ಅದು ಇದೆ. ಅಸ್ತಿತ್ವವೇ ಇಲ್ಲದ `ಆತ್ಮ’ ಎನ್ನುವ ಸಂಗತಿಯು ಜೀವ ಸೃಷ್ಟಿಗೆ ಅವಕಾಶ ಮಾಡಿಕೊಡುವುದರಿಂದ ಅದು ಅಸ್ತಿತ್ವದಲ್ಲಿ ಇದೆ ಎಂದಾಗುತ್ತದೆ.

ಆತ್ಮ ಎನ್ನುವ ಖಾಲಿಯೇ ದೇಹದಲ್ಲಿ ಜೀವವನ್ನು ಇರಗೊಡುವುದು. ದೇಹಾಂತದೊಡನೆ ಸೃಷ್ಟಿಯಲ್ಲಿ ಜೀವವು ಲೀನವಾಗುತ್ತದೆಯಷ್ಟೆ? ಆಗ ಪರಮಾತ್ಮದ ತುಣುಕಾದ ಆತ್ಮವೂ ತನ್ನ ಅನಂತ ಮೂಲಸ್ರೋತದೊಡನೆ ಬೆರೆತುಹೋಗುತ್ತದೆ. ಹೇಗೆ ಅನಂತ ಆಕಾಶದ ತುಣುಕು ಮಡಿಕೆಯೊಳಗಿನ ನೀರನ್ನು ಹಿಡಿದಿಡುವ ಖಾಲಿಯಾಗಿ, ತುಣುಕು ಆಕಾಶವಾಗಿರುತ್ತದೆಯೋ, ಹಾಗೆಯೇ ಅನಂತ ಪರಮಾತ್ಮದ ತುಣುಕು ದೇಹದೊಳಗಿನ ಜೀವದ್ರವ್ಯವನ್ನು ಹಿಡಿದಿಡುವ ಖಾಲಿಯಾಗಿ, ಆತ್ಮವಾಗಿ ಅಸ್ತಿತ್ವ ಪಡೆಯುತ್ತದೆ. ಮತ್ತು ಮರಳಿ ತನ್ನ ಮೂಲದೊಡನೆ ಒಂದಾಗುತ್ತದೆ.

ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ಆಕಾಶ ಕೂಡ ಯಾವುದೇ ರೂಪಾಕಾರಗಳಿಲ್ಲದ ಒಂದು ಸಂಗತಿ. ವಾಸ್ತವದಲ್ಲಿ ಯಾವುದು ಅವಕಾಶವನ್ನು ಆಕ್ರಮಿಸುವುದಿಲ್ಲವೋ ಅದು ಅನಸ್ತಿತ್ವವೇ ಆಗಿರುತ್ತದೆ. ಆದ್ದರಿಂದ ಆಕಾಶವೂ ಅನಸ್ತಿತ್ವ. ಈ ಅನಸ್ತಿತ್ವದಲ್ಲಿ ಲಕ್ಷಾಂತರ ಗ್ರಹತಾರೆಗಳು ಇರುವುದರಿಂದ, ಆ ಎಲ್ಲಕ್ಕೂ ಅದು ಸ್ವಯಂ ಅವಕಾಶವಾಗಿ ಒದಗಿರುವುದರಿಂದ ಅಸ್ತಿತ್ವವಾಗಿ ಪರಿಗಣಿಸಲ್ಪಡುತ್ತದೆ. ಹಾಗೆಯೇ ಆತ್ಮವೂ ಕೂಡಾ. ಆತ್ಮವಾಗಲೀ ಪರಮಾತ್ಮವಾಗಲೀ (ನಿರಾಕಾರ ಬ್ರಹ್ಮನ್) ಭೌತಿಕ ಸ್ಥಳವನ್ನು ಆಕ್ರಮಿಸುವುದಿಲ್ಲ. ಸ್ಥೂಲ – ಸೂಕ್ಷ್ಮ ಈ ಯಾವ ಸ್ತರದಲ್ಲಿಯೂ ಅದು ಒದಗಿಬರುವುದಿಲ್ಲ. ಆದರೆ ಅದು ಅನೇಕ ಜೀವಿಗಳ ಸೃಷ್ಟಿಗೆ ಅವಕಾಶ ಕೊಡುತ್ತದೆ. ಹಾಗೆಂದೇ ಅಸ್ತಿತ್ವ ಪಡೆಯುತ್ತದೆ.

ಆದರೆ, ಇಲ್ಲೊಂದು ಪ್ರಶ್ನೆ ಏಳುತ್ತದೆ. ಉಪಯೋಗಕ್ಕೆ ಬರುವುದು ಮಡಿಕೆಯೊಳಗಿನ ಖಾಲಿಯೇ ಆದರೂ ವಸ್ತುವನ್ನು ಹಿಡಿದಿಟ್ಟುಕೊಳ್ಳಬಲ್ಲ ಆ ಖಾಲಿ ಸೃಷ್ಟಿಯಾಗಬೇಕೆಂದರೆ ಅದಕ್ಕೊಂದು ಗೋಡೆ ಅವಶ್ಯವಾಗಿ ಬೇಕಾಗುತ್ತದೆ. ಜೇಡಿಮಣ್ಣಿನಿಂದ ಮಡಿಕೆಯನ್ನು ಮಾಡಿದರಷ್ಟೆ ನೀರು ತುಂಬಲು ಸಾಧನ ಒದಗುವುದು. ರಂಧ್ರವಿದ್ದ ಮಾತ್ರಕ್ಕೆ ಚಕ್ರ ಚಲಿಸುವುದಿಲ್ಲ. ಅದಕ್ಕೆ ಅರೆಗಳ ಅವಶ್ಯಕತೆ ಖಂಡಿತ ಇರುವುದು. ಹಾಗೆಯೇ ದೇಹವೂ. ಆತ್ಮವಿದ್ದ ಮಾತ್ರಕ್ಕೆ ಜೀವಿಯು ಅಸ್ತಿತ್ವ ಪಡೆಯುವುದಿಲ್ಲ. ದೇಹವಿಲ್ಲದೆ ಹೇಗೆ ತಾನೆ ಅದು ಸಾಧ್ಯವಾಗುತ್ತದೆ?

ನಿಜ. ಆದರೆ ಕೇವಲ ಮಡಿಕೆ ಇದ್ದ ಮಾತ್ರಕ್ಕೆ, ಅರೆಗಳಿದ್ದ ಮಾತ್ರಕ್ಕೆ, ದೇಹವಿದ್ದ ಮಾತ್ರಕ್ಕೆ ಅದರ ಉಪಯೋಗವಿಲ್ಲ ಅಲ್ಲವೆ? ಆದ್ದರಿಂದ ಯಾವುದೇ ಸಲಕರಣೆ ಉಪಯುಕ್ತವಾಗಲು ಅದರೊಳಗಿನ ಖಾಲಿ ಮುಖ್ಯವಾಗುತ್ತದೆ. ಹಾಗೂ ಖಾಲಿಯು ಉಪಯುಕ್ತವಾಗಲು ಹೊರಗಿನ ಸಲಕರಣೆಯು ಸಹಕಾರಿಯಾಗುತ್ತದೆ. ಇವು ಪರಸ್ಪರ ಉಪಯೋಗಿ ಸಂಗತಿಗಳು. ಆದರೆ ನಾವು ಕೇವಲ ಹೊರಗಿನ, ಗೋಚರ ಸಂಗತಿಗೆ ಮಾತ್ರ ಮಹತ್ವ ಕೊಡುತ್ತೇವೆ. ಮಡಿಕೆಯ ಅಂದ – ಆಕಾರಕ್ಕೆ ಹೆಚ್ಚು ಶ್ರಮ ವಹಿಸುತ್ತೇವೆ. ದೇಹವನ್ನು ಶೃಂಗರಿಸಿಕೊಳ್ಳುತ್ತೇವೆ. ಆದರೆ ಆತ್ಮದ ಇರುವನ್ನು ಸಾರ್ಥಕಗೊಳಿಸಿಕೊಳ್ಳುವ ಬಗ್ಗೆ ಚಿಂತಿಸುವುದೇ ಇಲ್ಲ.

ಅದು ಮಡಿಕೆಯಿರಲಿ, ದೇಹವಿರಲಿ ಅಥವಾ ಯಾವುದೇ ಸಲಕರಣೆ ಇರಲಿ. ಅದು ಸಾರ್ಥಕಗೊಳ್ಳುವುದು ಹೇಗೆ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆಯೇ. ನೀರು ತುಂಬಿ ತರಲು ಉಪಯೋಗವಿಲ್ಲದ ಮಡಿಕೆ ದಂಡ ಅಲ್ಲವೆ? ಹಾಗೆಯೇ ಆತ್ಮ ಸಂವಹನಕ್ಕೆ ಉಪಯೋಗವಾಗದ ದೇಹ ಕೂಡಾ. ತೂತು ಬಿದ್ದ ಮಡಿಕೆಯ ನಿರರ್ಥಕತೆಯನ್ನೇ ಗಮನಿಸಿ. ಅದರ ತೂತಿನ ಮೂಲಕ ಖಾಲಿಯೂ ಸೋರಿ ಹೋಗಿರುತ್ತದೆ. ಅನಂತ ಆಕಾಶದಲ್ಲಿ ಲೀನವಾಗಿರುತ್ತದೆ. ಹಾಗೆಂದೇ ತೂತು ಮಡಿಕೆ ನೀರನ್ನು ಇಟ್ಟುಕೊಳ್ಳಲಾಗದು. ಅದರಂತೆಯೇ ಅಸ್ವಸ್ಥ ದೇಹವೂ ಕೂಡಾ. ಆದ್ದರಿಂದಲೇ ರೋಗಿಷ್ಟ ದೇಹದಲ್ಲಿ ಆತ್ಮವು ಸದಾ ನಿಷ್ಕ್ರಮಣ ಸ್ಥಿತಿಯಲ್ಲೇ ಇರುತ್ತದೆ. ವೈದ್ಯರು `ಪ್ರಾಣ ಯಾವಾಗ ಬೇಕಿದ್ದರೂ ಹೋಗಬಹುದು’ ಅನ್ನುವುದಿಲ್ಲವೇ? ಅಸ್ವಸ್ಥ ದೇಹವು ಜೀವ ಸೋರಿಹೋಗುವಂಥ ರಂಧ್ರ ಉಂಟು ಮಾಡಿದ್ದರ ಪರಿಣಾಮವಿದು.

ಆದ್ದರಿಂದ ಮೂಲ ದ್ರವ್ಯವನ್ನು ಹಿಡಿದಿಟ್ಟುಕೊಳ್ಳುವಷ್ಟು ಸಮರ್ಥವಾಗಿ, ಹಾಗೂ ಆ ಉದ್ದೇಶಕ್ಕಾಗಿ ಮಾತ್ರ ನಾವು ಸಲಕರಣೆಯನ್ನು ಪೋಷಿಸಿಕೊಳ್ಳಬೇಕು. ಆಗ ಮಾತ್ರ ಮಡಿಕೆಯ ಅಸ್ತಿತ್ವ ಸಾರ್ಥಕಗೊಳ್ಳುವುದು, ದೇಹದ್ದು ಕೂಡಾ.

Leave a Reply