ಪ್ರಮಾಣ : ತಾವೋ ಧ್ಯಾನ ~ 18

ನಿಮ್ಮ ಕೂಗು ಆರ್ತವಾಗಿದ್ದರೆ, ಆಳವಾಗಿದ್ದಾರೆ ನಿಮಗೊಂದು ಪ್ರತಿಧ್ವನಿ ಕೇಳಿಸುವುದು. ಈ ಪ್ರತಿಧ್ವನಿಯೇ ನಮ್ಮ ಅಸ್ತಿತ್ವದ ಬಗೆಗಿನ ಪ್ರಮಾಣ ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ

tao

ಅಸ್ತಿತ್ವದ ಅಂಧಕಾರ
ಕಡಿದಾದ ಬಂಡೆಯ ಮೇಲೆ ನಿಂತು
ಖಾಲಿತನವನ್ನೊಮ್ಮೆ ಮಾತಾಡಿಸಿ
ಖಂಡಿತವಾಗಿ
ನಿಮಗೊಂದು ಉತ್ತರ ಕೇಳಿಸುವುದು.

***

ಬೆಟ್ಟದ ತುದಿಯಲ್ಲಿ ಕಡಿದಾಗಿ ಚಾಚಿಕೊಂಡಿರುವ ಬಂಡೆಗಲ್ಲು, ಮನುಷ್ಯರಾಗಿರುವ ನಮ್ಮ ಬದುಕಿನ ದ್ವಂದ್ವವನ್ನು ಧ್ವನಿಪೂರ್ವಕವಾಗಿ ಅಭಿವ್ಯಕ್ತಿಸುತ್ತದೆ ಹೇಗೆಂದರೆ ಬದುಕೂ ಕೂಡ ಹಾಗೇ ಅಮೂರ್ತ ಮತ್ತು ಗೊತ್ತು ಗುರಿಯಿಲ್ಲದ್ದು. ಈ ಬದುಕನ್ನು ನಿರ್ದೇಶಿಸುವ ಶಕ್ತಿಯಿದೆಯೇ? ನಿಯಮಗಳಿವೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶಾಸ್ತ್ರಗಳನ್ನು ಆಶ್ರಯಿಸುವುದು ನಿರರ್ಥಕ ಎನ್ನುವುದು ಸಾಬೀತಾಗಿದೆ. ಸ್ವಂತ ಪ್ರಯೋಗಳನ್ನು ಮಾಡಿದವರು ಮಾತ್ರ ಉತ್ತರದ ಹತ್ತಿರಕ್ಕೆ ಹೋಗಿದ್ದಾರೆ.

ಖಾಲಿ ಕಣಿವೆಯ ಚೈತನ್ಯ, ಅನನ್ಯ.
ಅಂತೆಯೇ ತಾವೋ ಮಹಾಮಾಯಿ
ಸಕಲ ಜಗತ್ತುಗಳ ಹಡೆದವ್ವ.

ಗಾಳಿಯ ಹಾಗೆ, ಕಾಣಿಸದಿದ್ದರೂ
ಉಸಿರಿನ ಹಾಗೆ ಸರಾಗ.

ತಾವೋ ಹಿಂಬಾಲಕರು ಶೂನ್ಯವನ್ನು ಕಣಿವೆಗೆ ಹೋಲಿಸುತ್ತಾರೆ. ಕಣಿವೆ ಪೂರ್ತಿ ಖಾಲಿ ಆದರೂ ಭಾರೀ ಕ್ರೀಯಾಶೀಲ, ಅಪ್ಪಟ ಧನಾತ್ಮಕ. ಕಣಿವೆಯ ಖಾಲೀತನ, ನದಿಗಳನ್ನೂ, ಝರಿಗಳನ್ನೂ, ಸೂರ್ಯನ ಬಿಸಿಲನ್ನು ತನ್ನೊಳಗೆ ಆಕರ್ಷಿಸುತ್ತ ಸುತ್ತ ಮುತ್ತಲಿನ ಬದುಕನ್ನು ಪೊರೆಯುತ್ತದೆ. ಕಣಿವೆಯ ತೆರೆದ ತೋಳುಗಳು ಮನುಷ್ಯರ, ಪ್ರಾಣಿಗಳ ನಡುವೆ ಭೇದ ಎಣಿಸುವುದಿಲ್ಲ. ಖಾಲಿತನ ಎಂದರೆ ಗಾಬರಿಯಲ್ಲ ಬದಲಾಗಿ ಅದು ಎಲ್ಲ ಸಾಧ್ಯತೆಗಳ ತವ ನಿಧಿ.

ಅಪರಿಮಿತದ ಕತ್ತಲೆಯೊಳಗೆ
ವಿಪರೀತದ ಬೆಳಕನಿಕ್ಕಿದವರಾರೋ?
ಬೆಳಗೂ ಅದೇ, ಕತ್ತಲೆಯೂ ಅದೇ !!
ಇದೇನೋ ಚೋದ್ಯವೋ !
ಒಂದಕ್ಕೊಂದಜದು !
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ, ಗುಹೇಶ್ವರ.

ಈ ಖಾಲೀತನದೊಳಗೊಮ್ಮೆ ಇಣುಕಿ ನೋಡಿ, ಕೂಗಿ ಕರೆಯಿರಿ…. ಬರೀ ಧ್ವನಿಯಿಂದಲ್ಲ, ನಿಮ್ಮನ್ನು ನೀವು ಪೂರ್ತಿಯಾಗಿ ತೆರೆದುಕೊಂಡು. ನಿಮ್ಮ ಕೂಗು ಆರ್ತವಾಗಿದ್ದರೆ, ಆಳವಾಗಿದ್ದಾರೆ ನಿಮಗೊಂದು ಪ್ರತಿಧ್ವನಿ ಕೇಳಿಸುವುದು. ಈ ಪ್ರತಿಧ್ವನಿಯೇ ನಮ್ಮ ಅಸ್ತಿತ್ವದ ಬಗೆಗಿನ ಪ್ರಮಾಣ…. ನಾವು ಸರಿದಾರಿಯಲ್ಲಿರುವ ಬಗ್ಗೆ ಸ್ಪಷ್ಟ ಧೃಡೀಕರಣ. ಈ ಉತ್ತೇಜನದ ಕಾರಣವಾಗಿಯೇ ನಮ್ಮ ಹುಡುಕಾಟ ಮತ್ತು ಬದುಕಿನ ಮುಂದುವರಿಕೆ. ಆಗ ಖಾಲಿತನ, ಗಾಬರಿಗೆ ಕಾರಣವಲ್ಲ… ಬದುಕಿನ ನಿತ್ಯ ಸಂಗಾತಿ!

Leave a Reply