ಪ್ರೇಮವೊಂದು ಹಣತೆ; ಚಿಟ್ಟೆಯಾಗಿ ದೂರಬೇಡಿ, ಬತ್ತಿಯಾಗಿ ತೀರಬೇಡಿ!

ಇದು ಬಹಳ ಸರಳ…. ಹಣತೆಯಿದೆ. ನೀವು ಅದರ ಬೆಂಕಿಯ ಮೊಗ್ಗನ್ನು ಮುತ್ತಿಕ್ಕಿದರೆ ಸುಟ್ಟುಹೋಗುತ್ತೀರಿ. ಅದನ್ನು ನಾಜೂಕಾಗಿ ನೇವರಿಸಿದರೆ, ಅದರ ಬೆಳಕನ್ನು ನಿಮ್ಮಲ್ಲೂ ಹೊತ್ತುಕೊಳ್ಳುತ್ತೀರಿ. ನಿಮ್ಮ ಪ್ರೇಮಿಯನ್ನು ನೀವು ಅರಿಯಬೇಕೆಂದರೆ, ನೀವೂ ಹಣತೆಯಾಗಬೇಕು. ಬೆಳಗುತ್ತಿರುವ ಹಣತೆಯನ್ನು ನಾಜೂಕಿನಿಂದ ಸೋಕಬೇಕು ~ ಅಲಾವಿಕಾ

ಅನ್ನಬಟ್ಟೆಯಾಚೆಗೂ, ಭದ್ರತೆಯಾಚೆಗೂ, ಬಹುತೇಕ ಬದುಕಿನಾಚೆಗೂ ಮನುಷ್ಯರನ್ನು ಕಂಗೆಡಿಸುವ ಸಂಗತಿ ಏನಾದರೂ ಇದ್ದರೆ ಅದು ಪ್ರೇಮ. ಪ್ರೇಮ ಪುರುಸೊತ್ತಿನ ವಿಲಾಸವಲ್ಲ. ವಿಕ್ಷಿಪ್ತರ ಪ್ರಲಾಪವೂ ಅಲ್ಲ. ಅದು ಅತ್ಯಂತ ಸಹಜ ಅನುಭೂತಿ. ಲೌಕಿಕದಲ್ಲಿ, ಸಾಮಾನ್ಯ ಜೀವನದಲ್ಲಿ ಪ್ರೇಮ ಎರಡು ವ್ಯಕ್ತಿಗಳ ಮಿಲನಕ್ಕೆ ಮುನ್ನುಡಿ. ಸಾಮಾನ್ಯಸ್ತರದಲ್ಲಿ ಪ್ರೇಮ ದೈಹಿಕ ಆಕರ್ಷಣೆಯಿಂದಲೇ ಮೂಡುವಂಥದ್ದು. ಮತ್ತು ದೈಹಿಕ ಸಂಪರ್ಕದಲ್ಲಿ ಮುಗಿಯುವಂಥದ್ದು.

ಉಳಿದ ಆದರ್ಶಗಳು, ಜೊತೆ ಸಾಗುವಿಕೆ, ಪರಸ್ಪರ ಬೆಂಬಲ, ಸಹಕಾರಗಳೆಲ್ಲ ಈ ಪ್ರಕ್ರಿಯೆಯ ಸುತ್ತ ಸುತ್ತುವ ಪೂರಕ ಸಂಗತಿಗಳಷ್ಟೇ. ಈ ಸತ್ಯವನ್ನು ನಿರಾಕರಿಸಲಾಗದು. ಆದ್ದರಿಂದ, ನಮ್ಮ – ನಿಮ್ಮಂಥ ಜನಸಾಮಾನ್ಯರ ಪ್ರೇಮದ ಕುರಿತೇ ಮಾತಾಡೋಣ.

ಪ್ರೇಮವೊಂದು ಹಣತೆ. ಯಾವಾಗ ಸೂರ್ಯ ಚಂದ್ರರಂಥ ಸಹಜ ಬೆಳಕಿನ ಮೂಲಗಳೂ – ಅಂದರೆ ದುಡಿಮೆ, ಯಶಸ್ಸು ಇತ್ಯಾದಿ ಯಾವುದೆಲ್ಲವೂ ಮರೆಯಾಗ್ತವೋ ಆಗ ಪ್ರೇಮದ ಪುಟ್ಟ ಹಣತೆ ಎದೆ ತುಂಬಿ ನಮ್ಮನ್ನು ಬೆಳಗುತ್ತದೆ.

ದೀಪ ಬೆಳಗಲು ಗಾಳಿ ಬೇಕಲ್ಲವೆ? ಹಣತೆಯನ್ನು ಗಾಳಿಯಾಡದ ಡಬ್ಬಿಯಲ್ಲಿಟ್ಟರೆ ತೀರಿಹೋಗುವುದು. ಹಾಗೆಯೇ ಪ್ರೇಮವೂ. ಅದನ್ನು ಮುಚ್ಚಟೆಯ ಹೆಸರಲ್ಲಿ, ಸುರಕ್ಷತೆಯ ನೆವದಲ್ಲಿ ಉಸಿರುಗಟ್ಟಿಸಬಾರದು. ಪ್ರೇಮವನ್ನು ಸ್ವತಂತ್ರವಾಗಿ ಬಿಡಬೇಕು. ನೀವು ಅದನ್ನು ಅದರ ಪಾಡಿಗೆ ಬಿಟ್ಟಷ್ಟೂ ಅದು ನಿಮ್ಮ ಪರಿಧಿಯನ್ನು ಬೆಳಕಿನಿಂದ ತುಂಬುತ್ತದೆ.

ಇದು ಬಹಳ ಸರಳ…. ಹಣತೆಯಿದೆ. ನೀವು ಅದರ ಬೆಂಕಿಯ ಮೊಗ್ಗನ್ನು ಮುತ್ತಿಕ್ಕಿದರೆ ಸುಟ್ಟುಹೋಗುತ್ತೀರಿ. ಅದನ್ನು ನಾಜೂಕಾಗಿ ನೇವರಿಸಿದರೆ, ಅದರ ಬೆಳಕನ್ನು ನಿಮ್ಮಲ್ಲೂ ಹೊತ್ತುಕೊಳ್ಳುತ್ತೀರಿ.

ಮುತ್ತಿಕ್ಕುವುದು ಮೋಹ. ಚಿಟ್ಟೆ ಬೆಂಕಿಮೊಗ್ಗಿನ ಮೋಹಕ್ಕೆ ಬಿದ್ದು ಅದನ್ನು ತಬ್ಬಲು ಧಾವಿಸುತ್ತದೆ. ಪರಿಣಾಮ? ಮೊದಲು ಸುಟ್ಟು ಬೂದಿಯಾಗುವುದು ರೆಕ್ಕೆ. ಮೋಹಕ್ಕೆ ಬಿದ್ದರೆ ಮೊದಲು ನೀವು ಕಳೆದುಕೊಳ್ಳೋದು ನಿಮ್ಮ ಸ್ವಾತಂತ್ರ್ಯ. ಸ್ವಾತಂತ್ರ್ಯವೇ ಹೊರಟುಹೋದ ಮೇಲೆ ನಿಮ್ಮ ಬದುಕು ನಿಮ್ಮ ಪಾಲಿಗೆ ಇರುವುದಿಲ್ಲ. ನಿಮ್ಮ ಆಲೋಚನೆಯ ತುಂಬಾ ಪ್ರೇಮಿಯೇ ತುಂಬಿರುತ್ತಾರೆ. ಅದೂ ಯಾವ ಬಗೆಯಲ್ಲಿ? ಅನುಮಾನ, ಅಭದ್ರತೆ, ಹಿಡಿದಿಟ್ಟುಕೊಳ್ಳಬೇಕೆಂಬ ಹಪಾಹಪಿ, ಸಾಧ್ಯವಾಗದ ಚಡಪಡಿಕೆ, ಹಠ, ಹೊಟ್ಟೆಕಿಚ್ಚು…. ಒಂದೆರಡಲ್ಲ ನಮ್ಮ ಕೈಕಾಲು ಕಟ್ಟುವುದು.

ನಿಮ್ಮ ಮೋಹದ ಹತಾಶೆಯಿಂದ ನೀವು ಸುಟ್ಟುಹೋಗುತ್ತೀರಿ, ಮತ್ತೆ ಪ್ರೇಮ ಸುಟ್ಟಿತು ಅನ್ನುತ್ತೀರಿ! ಪ್ರೇಮ ಕುರುಡೆಂದೂ ಮೂರ್ಖತನವೆಂದೂ ವಂಚನೆಯೆಂದೂ ಬಡಬಡಿಸುತ್ತೀರಿ. ನಿಮ್ಮ ಕಥನಕ್ಕೆ ದುರಂತ ಛಾಯೆ ಹೊದೆಸಿ ಇತರರ ದಾರಿ ತಪ್ಪಿಸುತ್ತೀರಿ!!

ನೆನಪಿರಲಿ. ಚಿಟ್ಟೆ ದೀಪವನ್ನು ದೂರಿದ ದಿನ, ಲೋಕದಲ್ಲಿ ಪ್ರೇಮ ಅರ್ಥ ಕಳೆದುಕೊಳ್ಳುತ್ತದೆ.
ಮೋಹಿಸಿದ್ದು ನೀವು. ಧಾವಿಸಿದ್ದು ನೀವು. ದೀಪವನ್ನೇಕೆ ದೂರಬೇಕು!?

ಇಷ್ಟಕ್ಕೂ ಪ್ರೇಮ ಅಂದರೇನು ಗೊತ್ತಾ? “ಪ್ರೇಮವೆಂದರೆ, ಪ್ರೇಮಿಯನ್ನೆ ಬದುಕೋದು”.
ಪ್ರೇಮವೊಂದು ಹಣತೆ. ಮತ್ತು, ಪ್ರೇಮವೇ ಪ್ರೇಮಿ. ನಿಮ್ಮ ಪ್ರೇಮಿಯನ್ನು ನೀವು ಅರಿಯಬೇಕೆಂದರೆ, ನೀವೂ ಹಣತೆಯಾಗಬೇಕು. ಬೆಳಗುತ್ತಿರುವ ಹಣತೆಯನ್ನು ನಾಜೂಕಿನಿಂದ ಸೋಕಬೇಕು. ಅದನ್ನು ಆವರಿಸಬಾರದು. ಅದರ ಪ್ರಭೆ ಮರೆಮಾಚುವಂತೆ ಕವುಚಿಕೊಳ್ಳಬಾರದು. ಹಗುರವಾಗಿ ಅದನ್ನು ನೇವರಿಸಬೇಕು. ಆಗ ನಿಮ್ಮ ಹಣತೆಯ ಬತ್ತಿ ಹೊತ್ತಿಕೊಳ್ಳುವುದು. ನಿಮ್ಮ ಎದೆಯಲ್ಲೂ ಬೆಳಕು ತುಂಬಿಕೊಳ್ಳುವುದು. ಅನಂತರ ನೀವೂ ಬೆಳಕು ಬೀರುವ ಹಣತೆಯಾಗುವಿರಿ. ಪ್ರೇಮವನ್ನು ಮತ್ತಷ್ಟು ಜನರಿಗೆ ಹಂಚುವಿರಿ.

ಹೀಗೆ ಹೊತ್ತಿಕೊಳ್ಳುವ ಪ್ರೇಮ ದೇಹವನ್ನೂ ಮೀರಿ ಸಾಗುತ್ತದೆ. ವ್ಯಕ್ತಿಯನ್ನೂ ಮೀರಿ ಮುನ್ನಡೆಯುತ್ತದೆ. ಬರಬರುತ್ತ ಹಣತೆ ಇಡೀ ಕೋಣೆಯನ್ನು ನಿಚ್ಚಳ ಬೆಳಗುವಂತೆ ನೀವೂ ನಿಮ್ಮ ಪರಿಧಿ ಮೀರಿ ಹರಡಿಕೊಳ್ಳುತ್ತೀರಿ. ಈಗ ನೀವು ಸ್ಥಿರವಾಗಿ ನಿಂತಿದ್ದರೂ ಮನಸ್ಸು ಸ್ವತಂತ್ರವಾಗಿ, ಉಲ್ಲಾಸದಿಂದ ಚಿಟ್ಟೆಯಂತೆ ಹಾರಾಡತೊಡಗುತ್ತದೆ. ಮತ್ತು ಅದರ ರೆಕ್ಕೆಗಳು ಸುಟ್ಟಿರದೆ, ಬೆಳಕು ಸೂಸತೊಡಗುತ್ತದೆ!
ಪ್ರೇಮ ಬೆಳಕಾಗುವುದು ಹೀಗೆ.

ಈಗ ನೀವು ಹಾಡುತ್ತೀರಿ;
ಇದೇ ಮೊದಲ ಸಲ
ದೀಪ ಮುತ್ತಿಟ್ಟ ಚಿಟ್ಟೆ ಹೊತ್ತುರಿಯದೆ
ರೆಕ್ಕೆಗಳಲ್ಲಿ ಬೆಳಕು ಹೊತ್ತು ಹಾರಿದೆ…
ಇದೇ ಮೊದಲ ಸಲ
ಒಲವು ನಿಜವಾಗಿದೆ!

ಹಣತೆಯಂತೂ ಇದೆ, ಪ್ರೇಮವಂತೂ ಇದೆ. ಬೂದಿಯಾಗುತ್ತೀರೋ, ಬೆಳಕಾಗುತ್ತೀರೋ…. ಆಯ್ಕೆ ನಿಮ್ಮದು.

Leave a Reply