ಯತ್ಪ್ರಜ್ಞಾನಮುತ ಚೇತೋ ಧೃತಿಶ್ಚ
ಯಜ್ಜ್ಯೋತಿರಂತರಮೃತಂ ಪ್ರಜಾಸು|
ಯಸ್ಮಾನ್ನ ಋತೇ ಕಿಂಚನ ಕರ್ಮ ಕ್ರಿಯತೇ
ತನ್ಮೇ ಮನಃ ಶಿವಸಂಕಲ್ಪಮಸ್ತು||
ಅರ್ಥ: ಯಾವುದು ತಿಳುವಳಿಕೆಯೋ ಮತ್ತು ಆಲೋಚನೆಯ ಶಕ್ತಿಯೋ, ಯಾವುದು ದೃಢತೆಯಿಂದ ಕೂಡಿದೆಯೋ, ಯಾವುದು ಜನರೊಳಗೆ ಎಂದೂ ಅಳಿಯದ ಬೆಳಕಾಗಿರುವುದೋ, ಯಾವುದನ್ನು ಬಿಟ್ಟು ಯಾರೂ ಯಾವ ಕೆಲಸವನ್ನೂ ಮಾಡಲಾರರೊ ಆ ನನ್ನ ಮನಸ್ಸು ಮಂಗಳಕರವಾದ ಸಂಕಲ್ಪದಿಂದ ಕೂಡಿರಲಿ. ಎಲ್ಲರಿಗೂ ಸದಾ ಸನ್ಮಂಗಳವನ್ನೆ ಬಯಸಲಿ.
ಯೇ ಮೇ ಹೃದಯಂ ಯೇ ಚ ದೇವಾ
ಯೇ ಅಂತರಿಕ್ಷಂ ಬಹುಧಾ ಕಲ್ಪಯಂತಿ|
ಯೇ ಶ್ರೋತ್ರಂ ಚ ಚಕ್ಷುಷೀ ಸಂಚರಂತಿ
ತನ್ಮೇ ಮನಃ ಶಿವಸಂಕಲ್ಪಮಸ್ತು||
ಅರ್ಥ: ದೇವತೆಗಳು ಯಾವುದರ ಮೂಲಕ ನನ್ನ ಹೃದಯವನ್ನೂ ಅಂತರಿಕ್ಷವನ್ನೂ ಬಹುವಿಧವಾಗಿ ರೂಪಿಸುವರೋ; ಯಾವುದರ ಇಚ್ಛೆಯಿಂದ ನನ್ನ ಕಿವಿ ಮತ್ತು ಕಣ್ಣುಗಳು ತಮ್ಮ ಕಾರ್ಯ ನಿರ್ವಹಿಸುವವೋ ಆ ನನ್ನ ಮನಸ್ಸು ಶುಭಸಂಕಲ್ಪದಿಂದ ಕೂಡಿರಲಿ.
ಯೇನ ಕರ್ಮಾಣಿ ಪ್ರಚರಂತಿ ಧೀರಾ
ವಿಪ್ರಾ ವಾಚಾ ಮನಸಾ ಕರ್ಮಣಾ ವಾ|
ಯತ್ಸ್ವಾಂ ದಿಶಮನುಸಂಯಂತಿ ಪ್ರಾಣಿನ
ಸ್ತನ್ಮೇ ಮನಃ ಶಿವಸಂಕಲ್ಪಮಸ್ತು||
ಅರ್ಥ: ಸಂಯಮಶೀಲರಾದ ಬ್ರಹ್ಮಜ್ಞಾನಿಗಳು ಮಾತು ಕೃತಿ ಆಲೋಚನೆಗಳನ್ನು ಯಾವುದರ ಮೂಲಕ ನಡೆಸುವರೋ; ಪ್ರಾಣಿಗಳು ಯಾವುದರ ಸೂಚನೆಯಂತೆ ತಮ್ಮ ದಿಕ್ಕು ದಾರಿಗಳನ್ನು ಹಿಡಿದು ಚಲಿಸುವವೋ, ಆ (ಅಂತಹಾ) ನನ್ನ ಮನಸ್ಸು ಶಿವಸಂಕಲ್ಪದಿಂದ ಕೂಡಿರಲಿ.