ಇಂದು ಜಗತ್ತು ಕಂಡ ಅಪರೂಪದ ತತ್ವಜ್ಞಾನಿ, ಕವಿ, ಚಿಂತಕ, ಅಧ್ಯಾತ್ಮ ಜೀವಿ ಖಲೀಲ್ ಗಿಬ್ರಾನ್ ಜನ್ಮದಿನ. ಈ ಸಂದರ್ಭದಲ್ಲಿ ಗಿಬ್ರಾನ್ ರಚನೆಯ ‘ಮರಳು ಮತ್ತು ನೊರೆ’ ಕೃತಿಯ ಆಯ್ದ ಭಾಗ, ನಿಮ್ಮ ಓದಿಗೆ | ಕನ್ನಡಕ್ಕೆ : ಚಿದಂಬರ ನರೇಂದ್ರ
“ನಾನು ಈ ಸಮುದ್ರ ತೀರಗಳಲ್ಲಿ ನಡೆಯುತ್ತಲೇ ಇದ್ದೇನೆ, ಮರಳು ಮತ್ತು ನೊರೆಯ ನಡುವೆ.
ಅಲೆಯ ಉಬ್ಬರ, ನನ್ನ ಪಾದದ ಗುರುತುಗಳನ್ನ ಅಳಿಸಿ ಹಾಕಿದರೆ, ಬೀಸುವ ಗಾಳಿ, ಈ ನೊರೆಯನ್ನು ಒರೆಸಿ ಹಾಕುತ್ತದೆ.
ಆದರೂ ಹಾಗೇ ಇವೆ,
ಈ ಸಮುದ್ರ
ಮತ್ತು ತೀರ
ಅಂದಿನಿಂದಲೂ.
“ನಾನು ಹೇಳುವದರಲ್ಲಿ ಅರ್ಧಕ್ಕರ್ಧ ಅರ್ಥಹೀನ.
ಆದರೂ ಹೇಳುತ್ತೇನೆ,
ಏಕೆಂದರೆ ಉಳಿದ ಅರ್ಧವಾದರೂ
ನಿಮಗೆ ತಲುಪಲೆಂದು.
~
“ನನ್ನ ಏಕಾಂತ ಹುಟ್ಟಿದ್ದು
ಜನ, ನನ್ನ ತಪ್ಪು ಮಾತುಗಳನ್ನ
ಹೊಗಳಿದಾಗ ಮತ್ತು
ನನ್ನ ಮೌನದ ಮೌಲ್ಯಗಳನ್ನ
ಪ್ರಶ್ನಿಸಿದಾಗ.
~
“ಸತ್ಯದ ಶೋಧನೆಗೆ ಇಬ್ಬರು ಬೇಕೇ ಬೇಕು.
ಒಬ್ಬ, ಅದನ್ನ ನುಡಿಯಲಿಕ್ಕೆ,
ಇನ್ನೊಬ್ಬ, ಅದನ್ನ ಅರ್ಥ ಮಾಡಿಕೊಳ್ಳಲಿಕ್ಕೆ.