“ನೀನು ಯಾರನ್ನಾದರೂ ಪ್ರೇಮಿಸಿದ್ದೀಯಾ?” : ರಾಮಾನುಜರು ಕೇಳಿದ ಪ್ರಶ್ನೆ

ramanujacharya

ಮ್ಮೆ ರಾಮಾನುಜರು ಸಂಚರಿಸುತ್ತಾ ಒಂದು ಹಳ್ಳಿಯಲ್ಲಿ ತಂಗಿದರು. ಆಗ ಅವರನ್ನು ಕಾಣಲು ಒಬ್ಬ ವ್ಯಕ್ತಿಯು ಬಂದನು. ರಾಮಾನುಜರಿಗೆ ನಮಸ್ಕರಿಸಿ, “ನನಗೆ ಪರಮಾತ್ಮನನ್ನು ಹೊಂದಬೇಕು ಅನ್ನುವ ಇಚ್ಛೆ ಇದೆ. ದಯವಿಟ್ಟು ದಾರಿ ತೋರಿಸಿ” ಅಂದನು.

ರಾಮಾನುಜರು ಅವನ ಮುಖವನ್ನೇ ನೋಡುತ್ತಾ, “ಆಗಬಹುದು. ಆದರೆ ನನ್ನದೊಂದು ಪ್ರಶ್ನೆ ಇದೆ” ಅಂದರು.
ಏನು ಎಂದು ಕೇಳಲಾಗಿ, ಆ ವ್ಯಕ್ತಿಯನ್ನು ಕುರಿತು “ನೀನು ಯಾರನ್ನಾದರೂ ಪ್ರೇಮಿಸಿದ್ದೀಯಾ?” ಎಂದು ಕೇಳಿದರು.

ಆ ವ್ಯಕ್ತಿಯು ಹಾವು ಮೆಟ್ಟಿದವರಂತೆ ಗಾಬರಿಬಿದ್ದು, “ಅಯ್ಯೋ! ಖಂಡಿತವಾಗಿಯೂ ನಾನು ಯಾರನ್ನೂ ಪ್ರೇಮಿಸಿಲ್ಲ. ಅಂಥದ್ದನ್ನೆಲ್ಲ ನಾನು ಯಾವತ್ತೂ ಮಾಡಿಲ್ಲ. ನನಗೆ ಮೊದಲಿಂದಲೂ ಪರಮಾತ್ಮನಲ್ಲೇ ಆಸಕ್ತಿ” ಅಂದ.
ರಾಮಾನುಜರು ಮುಸಿನಗುತ್ತಾ, “ಏನು!? ನೀನು ಅಂಥದನ್ನೆಲ್ಲ ಯಾವತ್ತೂ ಮಾಡಿಯೇ ಇಲ್ಲವೆ? ನಿಜವಾಗಿಯೂ? ಎರಡನೇ ಬಾರಿಗೆ ಕೇಳ್ತಿದ್ದೇನೆ; ನೀನು ಯಾರನ್ನೂ ಪ್ರೇಮಿಸಿಯೇ ಇಲ್ಲವೆ?” ಎಂದು ಕೇಳಿದರು.
ಆ ವ್ಯಕ್ತಿ ಕೈಮುಗಿದು, “ನನ್ನನ್ನು ನಂಬಿ ಆಚಾರ್ಯರೇ. ನಾನು ಭಗವಂತನಲ್ಲಿ ಮನಸ್ಸು ನೆಟ್ಟವನು. ಪ್ರೇಮಿಸಲು ನನಗೆಲ್ಲಿ ಪುರುಸೊತ್ತು? ನನಗೆಲ್ಲಿ ಆಸಕ್ತಿ?” ಅಂದ.
ರಾಮಾನುಜರು ಪಟ್ಟುಬಿಡದೆ, “ನೋಡು, ಮೂರನೇ ಮತ್ತು ಕೊನೆಯ ಬಾರಿಗೆ ಕೇಳ್ತಿದ್ದೇನೆ. ಯಾರನ್ನೂ ಪ್ರೇಮಿಸಿಲ್ಲವೆ ನೀನು?” ಎಂದರು.
ಆತ ಸಾಷ್ಟಾಂಗ ನಮಸ್ಕರಿಸಿ, “ಆಚಾರ್ಯರೇ, ನಾನು ಪ್ರೇಮದ ಆಲೋಚನೆಯನ್ನೆ ಮಾಡಿಲ್ಲ. ನಾನು ಪರಮಾತ್ಮನನ್ನು ಹುಡುಕಿಕೊಂಡು ಅಲೆಯುತ್ತಿದ್ದೇನೆ. ಪ್ರೇಮದ ವಿಷಯ ಬಿಟ್ಟು ಇದಕ್ಕೆ ನನಗೆ ಸಹಾಯ ಮಾಡಿ” ಅಂದ.

ರಾಮಾನುಜರು ಆತನಿಗೆ ತಾವೂ ಕೈಮುಗಿದು, “ನೀನು ನನ್ನನ್ನು ಕ್ಷಮಿಸಬೇಕು. ನೀನು ಹುಡುಕುತ್ತಿರುವ ಪರಮಾತ್ಮನನ್ನು ತೋರಿಸಿಕೊಡಲು ನನ್ನಲ್ಲಿರುವುದು ಪ್ರೇಮದ ದಾರಿಯೊಂದೇ. ಪ್ರೇಮದ ಬಗ್ಗೆಯೇ ತಿಳಿದಿಲ್ಲದ, ಅದರ ಅನುಭವವಿಲ್ಲದ ನಿನ್ನನ್ನು ನಾನು ಹೇಗೆ ತಾನೆ ಆ ದಾರಿಯಲ್ಲಿ ಕರೆದೊಯ್ಯಲಿ? ನೀನು ಯಾರನ್ನಾದರೂ ಪ್ರೇಮಿಸಿದ್ದರೆ, ಆ ಪ್ರೇಮದ ಅನುಭವವನ್ನೆ ವಿಸ್ತರಿಸಿ ಭಗವಂತನವರೆಗೆ ಸಾಗಬಹುದು. ಬೀಜವಿಲ್ಲದೆ ಮರವಾಗುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಪ್ರೇಮವಿಲ್ಲದೆ ಭಗವಂತನನ್ನು ಹೊಂದಲು ಸಾಧ್ಯವಿಲ್ಲ” ಅಂದುಬಿಟ್ಟರು.

 

Leave a Reply