ಕವಿ, ಋಷಿ, ಯೋಗಿ, ಸಂತ! ಲೋಕಾದ್ಯಂತ ನಡೆವ ವಸಂತ!! : ವಿವೇಕಾನಂದರ ಕುರಿತು ಜಿಎಸ್ಎಸ್ ಕವಿತೆ

ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಬಹಳ ಸುಂದರವಾಗಿ ಕಟ್ಟಿಕೊಡುತ್ತದೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಈ ಕವಿತೆ….

ಓ ಬಂದ
ಶ್ರೀ ಗುರು ವಿವೇಕಾನಂದ
ಆ ಧ್ರುವ ಮಂಡಲದಿಂದ.

ಮೊರೆಯುವ ಕಡಲಿಗೆ ಹಾರಿ ಧುಮುಕಿದ.
ತೆರೆಗಳ ಸೀಳಿದ, ಈಜಿದ, ನುಗ್ಗಿದ,
ಘಟ್ಟಿ ಬಂಡೆಯಲಿ ಬೇರೂರಿದ, ಬಾನೆತ್ತರ ನೆಗೆದ
ಬೆಳಕಿನ ಗೋಪುರವಾದ.

ಓ ಬಂದ
ಶ್ರೀ ಗುರು ವಿವೇಕಾನಂದ
ಆ ಧ್ರುವ ಮಂಡಲದಿಂದ

ದಕ್ಷಿಣೇಶ್ವರದ ವಿದ್ಯುತ್ ಕೇಂದ್ರದ ಕೋಶಾಗಾರ !
ಪೂರ್ವ ಪಶ್ಚಿಮಕೆ ತಂತಿಯ ಹಾಯಿಸಿ
ಕೊಟ್ಟನು ಬೆಳಕಿನ ಆಹಾರ.
ಕೊಲಂಬೋದಿಂದಾಲ್ಮೋರದ ತನಕವು
ಇವನದೆ ಮಿಂಚಿನ ತೇರು
ಇವನಡಿಗಳ ನುಡಿಗಳ ಸ್ಪರ್ಶಕೆ ಝಗ್ಗನೆ
ಹತ್ತದೆ ಇದ್ದವನಾರು !

ಓ ಬಂದ
ಶ್ರೀಗುರು ವಿವೇಕಾನಂದ
ಆ ಧ್ರುವ ಮಂಡಲದಿಂದ.

ವಜ್ರದ ಮೈ, ಉಕ್ಕಿನ ನರ ಕುಡಿಮಿಂಚಿನ ಕಣ್ಣು ;
ಗುಡುಗಿನ ದನಿ, ಮುಂಗಾರಿನ ವಾಗ್‌ವೈಖರಿ, ಹೊನಲಿನ ನಡೆ,
ಎದೆ ಬೆಳದಿಂಗಳ ಹಣ್ಣು !

ಕವಿ ಋಷಿ ಯೋಗೀ ಸಂತ
ಲೋಕಾದ್ಯಂತ ನಡೆವ ವಸಂತ !

Leave a Reply