ಸೋಶಿಯಲ್ ಮೀಡಿಯಾದಲ್ಲಿ ಸಮಕಾಲೀನ ಸಂಗತಿಗಳಿಗೆ, ಯಾರದೋ ಹೇಳಿಕೆಗೆ, ಮತ್ಯಾರದೋ ಪ್ರತಿಕ್ರಿಯೆಗೆ, ಅಥವಾ ಇನ್ಯಾವುದೇ ವಿಷಯಕ್ಕೆ ಥಟ್ಟಂತ ನಿಮ್ಮ ಅಭಿಪ್ರಾಯ ಬರೆಯಲು ಕೈ ಕಡಿಯುತ್ತದೆ ಅಲ್ಲವೆ? ಆಗೆಲ್ಲ ಅಗಸನ ಕತ್ತೆಯನ್ನು ನೆನೆಯಿರಿ. ವಿಲ್ ರೋಜರ್ಸನ ಹಿತವಚನವನ್ನೂ, ನಮ್ಮ ಸುಭಾಷಿತವನ್ನೂ ನೆನೆಯಿರಿ ~ ಋತಾ
ಅದೊಂದು ಅಗಸನ ಮನೆ. ಅಲ್ಲೊಂದು ಕತ್ತೆ, ಮತ್ತೆ ಮತ್ತೊಂದು ನಾಯಿ.
ಒಂದು ರಾತ್ರಿ ಆ ಮನೆಗೆ ಕಳ್ಳ ಬರ್ತಾನೆ. ಕತ್ತೆಗೆ ಎಚ್ಚರ ಆಗತ್ತೆ. ನಾಯಿಯನ್ನ ತಿವಿದು, “ಏಯ್! ಕಳ್ಳ ಬಂದಿದಾನೆ, ಕೂಗು. ಅಗಸನ್ನ ಎಬ್ಬಿಸು…” ನಾಯಿ ಗೊಣಗುತ್ತೆ. “ಉಹು… ಅಂವ ಸರಿಯಾಗಿ ಅನ್ನ ಹಾಕೋದೇ ಇಲ್ಲ. ನಿನಗಂತೂ ಅಷ್ಟು ದುಡಿದು ಪೆಟ್ಟು ತಿನ್ನೋದೇ ಕೆಲ್ಸ. ತೆಪ್ಪಗೆ ಬಿದ್ದುಕೋಬಾರದಾ?”
ಪಾಪ ಕತ್ತೆ, ಎಷ್ಟಂದರೂ ಕತ್ತೆ. ನಾನೇ ಎಬ್ಬಿಸ್ತೀನಿ ಅಂದುಕೊಂಡು ಜೋರಾಗಿ ಬಡಕೊಳ್ಳುತ್ತೆ. ಕತ್ತೆಯ ಕಿರುಚಾಟಕ್ಕೆ ಹೆದರಿ ಕಳ್ಳ ಓಡಿಹೋಗ್ತಾನೆ. ಅಗಸಂಗೆ ಎಚ್ಚರವಾಗಿಬಿಡತ್ತೆ.
ಕಳ್ಳಗಿಳ್ಳ ಬಂದಿದ್ರೆ ನಾಯಿ ಕೂಗಬೇಕಿತ್ತು. ಈ ಅಪರಾತ್ರೀಲಿ ಕತ್ತೆ ಯಾಕೆ ಬಡಕೊಳ್ತಿದೆ ಅಂತ ಸಿಟ್ಟೇ ಬಂದುಬಿಡತ್ತೆ. ಸೀದಾ ಎದ್ದುಬಂದು, ನಿದ್ದೆಗೆಡಿಸಿದ ಕತ್ತೆಯನ್ನ ಮನಸಾರೆ ಬಡಿದು, ಹೋಗಿ ಬಿದ್ದುಕೊಳ್ತಾನೆ.
ನಾವೂ ಆಗಾಗ ಹೀಗೇ ‘ಕತ್ತೆ’ಯಾಗುತ್ತಿರುತ್ತೇವೆ. ಕಥೆಯ ಕತ್ತೆಯಂತೆ ನಾವೂ ಬಹಳ ಸಲ ತೆಪ್ಪಗಿರಬೇಕಾದ ಸಂದರ್ಭದಲ್ಲಿ ಮಾತಾಡಿ ಸಮಸ್ಯೆಯನ್ನು ತಲೆ ಮೇಲೆ ಎಳೆದುಕೊಳ್ತೇವೆ. ನಮ್ಮ ಅಭಿಪ್ರಾಯವನ್ನ ಯಾರೂ ಕೇಳಿರೋದಿಲ್ಲ. ನಾವು ಅದನ್ನು ಹೇಳಬೇಕಾಗಿಯೂ ಇರೋದಿಲ್ಲ. ಅಥವಾ ನಾವು ಪ್ರತಿಕ್ರಿಯಿಸುವ ಅಗತ್ಯವಿರೋದಿಲ್ಲ. ಅಂಥಾ ಸಂದರ್ಭವೂ ಅದಾಗಿರೋದಿಲ್ಲ. ಆದರೂ ನಮಗೆ ಸಂಬಂಧಪಡದ ವಿಷಯಗಳಲ್ಲಿ ತಲೆ ಹಾಕಲು, ಮುಖ್ಯವಾಗಿ ಬಾಯಿ ಹಾಕಲು ಕಾತರಿಸುತ್ತಿರುತ್ತೇವೆ. ನಮ್ಮಂಥವರ ಈ ಆತುರಗೇಡಿತನ ಕಂಡೇ ವಿಲ್ ರೋಜರ್ಸ್, “ತೆಪ್ಪಗಿರಬಹುದಾದ ಯಾವ ಅವಕಾಶವನ್ನೂ ಕಳೆದುಕೊಳ್ಳಬೇಡಿ” ಅಂದಿದ್ದಾನೆ ವಿಲ್ ರೋಜರ್ಸ್.
ನಮ್ಮ ಸುಭಾಷಿತಗಳು ಕೂಡಾ, “ನಾಪೃಷ್ಟಃ ಕಸ್ಯಾಚಿದ್ ಬ್ರೂಯಾನ್ನ ಚಾನ್ಯಾಯೇನ ಪೃಚ್ಛತಃ” ಎಂದು ಕಿವಿ ಹಿಂಡಿವೆ.
“ಪ್ರಶ್ನಿಸದ ಹೊರತು ಮಾತನಾಡಬೇಡ. ಹಾಗೇ, ಅಸಂಬದ್ಧವಾಗಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವೂ ಇಲ್ಲ” ಅನ್ನೋದು ಇದರ ಅರ್ಥ. ಇದೇ ಸುಭಾಷಿತ ಮುಂದುವರಿದು, “ಜಾನನ್ನಪಿ ಹಿ ಮೇಧಾವೀ ಜಡವಲ್ಲೋಕ ಆಚರೇತ್” ಅನ್ನುತ್ತದೆ. “ಜ್ಞಾನಿಗಳು ಎಲ್ಲವನ್ನೂ ತಿಳಿದಿದ್ದೂ ಏನೂ ಅರಿಯದವರಂತೆ ಸುಮ್ಮನೆ ಜಡವಾಗಿ ಕುಳಿತಿರುತ್ತಾರೆ”; ಆದ್ದರಿಂದ, ನೀವೂ ಅನಗತ್ಯವಾಗಿ ಬಾಯಿ ಹಾಕದೆ ತೆಪ್ಪಗಿರಿ, ಜ್ಞಾನಿಗಳಾಗಿ… ಜಾಣರಾಗಿ ಅನ್ನೋದು ಈ ಸುಭಾಷಿತದ ಇಂಗಿತ.
ಸೋಶಿಯಲ್ ಮೀಡಿಯಾದಲ್ಲಿ ಸಮಕಾಲೀನ ಸಂಗತಿಗಳಿಗೆ, ಯಾರದೋ ಹೇಳಿಕೆಗೆ, ಮತ್ಯಾರದೋ ಪ್ರತಿಕ್ರಿಯೆಗೆ, ಅಥವಾ ಇನ್ಯಾವುದೇ ವಿಷಯಕ್ಕೆ ಥಟ್ಟಂತ ನಿಮ್ಮ ಅಭಿಪ್ರಾಯ ಬರೆಯಲು ಕೈ ಕಡಿಯುತ್ತದೆ ಅಲ್ಲವೆ? ಆಗೆಲ್ಲ ಅಗಸನ ಕತ್ತೆಯನ್ನು ನೆನೆಯಿರಿ. ವಿಲ್ ರೋಜರ್ಸನ ಹಿತವಚನವನ್ನೂ, ನಮ್ಮ ಸುಭಾಷಿತವನ್ನೂ ನೆನೆಯಿರಿ. ಆಮೇಲೂ ಅದು ನಿಮಗೆ ಸಂಬಂಧಿಸಿದ, ನಿಮ್ಮ ಅಭಿಪ್ರಾಯ ದಾಖಲಿಸುವುದರಿಂದ ಕಣದಷ್ಟಾದರೂ ಪ್ರಯೋಜನವಿದೆ ಅನಿಸಿದರೆ ಮಾತ್ರ ಮುಂದುವರೆಯಿರಿ. ಆಗದೇ?