ಆಕಾರದ ಅರಿವು ಮತ್ತು ನಿರಾಕಾರ ಧ್ಯಾನ

photoಕಣ್ಣಿಗೆ ಕಾಣಿಸುವ ಆಕಾರ ನಾಶವಾಗಿಹೋಗುತ್ತದೆ. ಆದರೆ, ಅದಕ್ಕೆ ಮೂಲವಾದ ನಿರಾಕಾರ ಅಸ್ತಿತ್ವ ಅವಿನಾಶಿಯಾಗಿದೆ. ಆಕಾರ ಒಂದು ಕಲ್ಪನೆ. ಚೇತನ ನೈಜ ಅಸ್ತಿತ್ವ ~ Whosoever Ji

ನಮ್ಮ ಧ್ಯಾನ ಬಹುತೇಕ ಆಕಾರದ ಮೇಲೆಯೇ ಕೇಂದ್ರಿತವಾಗುತ್ತದೆ. ನಮಗೆ ಎಲ್ಲೆಲ್ಲೂ ಆಕಾರಗಳೇ ಕಾಣಿಸುತ್ತವೆ. ಆಕಾರದ ಹಿಂದೆ ಏನಿದೆಯೋ, ಯಾವುದು ಆಕಾರಕ್ಕೆ ಆಧಾರವಾಗಿದೆಯೋ, ಅದು ಕಾಣಿಸುವುದೇ ಇಲ್ಲ.
ನಮಗೆ ಹೂ, ಹಣ್ಣುಗಳು ಕಾಣಿಸುತ್ತವೆ. ಮರ – ಬಳ್ಳಿಗಳು ಕಾಣಿಸುತ್ತವೆ. ಪಶು ಪಕ್ಷಿಗಳೂ, ಜೀವ ಜಂತುಗಳೂ ಕಾಣಿಸುತ್ತವೆ. ಮನುಷ್ಯರು, ನದಿ – ಬೆಟ್ಟಗಳ, ಚಂದ್ರ – ತಾರೆಗಳು ಎಲ್ಲವೂ ಕಾಣಿಸುತ್ತವೆ. ಆದರೆ, ಯಾವುದು ಈ ಎಲ್ಲಕ್ಕೂ ಮೂಲಾಧಾರವಾಗಿದೆಯೋ ಅದು ಕಾಣಿಸುವುದಿಲ್ಲ.

ನಮಗೆ ಆಕಾರಗಳು ಕಾಣಿಸುತ್ತವೆ. ಅವುಗಳ ಹಿಂದಿನ ನಿರಾಕಾರ ಕಾಣಿಸುವುದಿಲ್ಲ.
ಏಕೆ ಹೀಗಾಗುತ್ತದೆ? ಈ ಆಕಾರ ವಾಸ್ತವದಲ್ಲಿ ಏನು?
ವಾಸ್ತವದಲ್ಲಿ ಆಕಾರವೆಂಬ ಸಂಗತಿಯೇ ಇಲ್ಲ. ಅಥವಾ, ಅದೊಂದು ವ್ಯಾವಹಾರಿಕ ನಿರ್ಮಿತಿಯಷ್ಟೆ.
ಅದೊಂದು ಆಲೋಚನೆ. ಒಂದು ಗ್ರಹಿಕೆ. ಅದೊಂದು ಕಲ್ಪನೆ ಅಥವಾ ನಂಬಿಕೆ ಮಾತ್ರ.
ಅದೊಂದು ಆಭಾಸ. ಅದೊಂದು ಪ್ರತೀತಿ ಮಾತ್ರ.
ಆಕಾರವೆಂಬುದು ವಸ್ತುತಃ ಇರುವುದಿಲ್ಲ. ಅದು ನೋಟಕ್ಕೆ ದಕ್ಕುತ್ತದೆ, ಆದರೆ ವಾಸ್ತವದಲ್ಲಿ ಇರುವುದಿಲ್ಲ.
ಆಕಾರ ನಮ್ಮ ಗ್ರಹಿಕೆಯಷ್ಟೇ. ಅದು ನಾವು ಆರೋಪಿಸಿಕೊಂಡ ಗ್ರಹಿಕೆ.

ನಮ್ಮೆದುರು ಒಬ್ಬ ವ್ಯಕ್ತಿ ಕುಳಿತುಕೊಂಡಿದ್ದಾನೆ. ನಾವು ಅವನನ್ನು ಕೇವಲ ಒಂದು ಆಕಾರವಾಗಿಯೇ ನೋಡುತ್ತೇವೆ.
ಅವನ ಹಿಂದೆ ನಿರಾಕಾರ ಅಸ್ತಿತ್ವ ಇಲ್ಲದೆ ಹೋಗಿದ್ದರೆ, ನಾವು ಯಾವುದನ್ನು ಚೇತನವೆಂದು ಕರೆಯುತ್ತೇವೋ ಅದು ಇಲ್ಲದೆ ಹೋಗಿದ್ದರೆ, ಆ ಆಕಾರ ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ.
ಕಣ್ಣಿಗೆ ಕಾಣಿಸುವ ಆಕಾರ ನಾಶವಾಗಿಹೋಗುತ್ತದೆ. ಆದರೆ, ಅದಕ್ಕೆ ಮೂಲವಾದ ನಿರಾಕಾರ ಅಸ್ತಿತ್ವ ಅವಿನಾಶಿಯಾಗಿದೆ. ಆಕಾರ ಒಂದು ಕಲ್ಪನೆ. ಚೇತನ ನೈಜ ಅಸ್ತಿತ್ವ.

ಆಭರಣ ಶಾಶ್ವತವಲ್ಲ. ಅದನ್ನು ಮುರಿಸಿ ಬೇರೊಂದು ಆಭರಣವನ್ನು ಮಾಡಿಸಬಹುದು. ಆದರೆ ಚಿನ್ನ, ಚಿನ್ನವಾಗಿಯೇ ಇರುತ್ತದೆ.
ಅದು ಯಾವುದೇ ಆಭರಣ ರೂಪದಲ್ಲಿದ್ದರೂ, ಚಿನ್ನವೇ ಆಗಿ ಉಳಿದಿರುತ್ತದೆ.
ಹಾಗೆಯೇ ದೇಹ ನಷ್ಟವಾದಾಗ ಚೇತನವು ಮತ್ತೊಂದು ರೂಪ ಧರಿಸಿ ಬರುತ್ತದೆ.

ಯಾರಿಗೆ ಯಾವ ರೂಪವೂ ಇರುವುದಿಲ್ಲವೋ, ಎಲ್ಲ ರೂಪಗಳೂ ಅವರದೇ ಆಗಿರುತ್ತದೆ!

ನಿರಾಕಾರ ಚೇತನವು ಎಲ್ಲ ಆಕಾರಗಳಲ್ಲಿಯೂ ಅಸ್ತಿತ್ವದಲ್ಲಿ ಇರುವುದರಿಂದ, ಎಲೆ, ಹೂವು, ಹಣ್ಣು, ಬೆಟ್ಟ, ಗುಡ್ಡ, ನದಿ, ಕಟ್ಟಡ, ಪ್ರಾಣಿ ಪಕ್ಷಿಗಳು, ಮನುಷ್ಯರು – ಹೀಗೆ ಎಲ್ಲವೂ ಅದರದ್ದೇ ರೂಪಗಳಾಗುತ್ತವೆ. ಎಲ್ಲ ರೂಪ, ಆಕಾರ, ಹೆಸರು ಅದರದೇ.

ಅಸ್ತಿತ್ವದಲ್ಲಿರುವ ಪರಮಾತ್ಮ ನಮಗೆ ಕಾಣಿಸುವುದಿಲ್ಲ. ಏಕೆಂದರೆ, ನಾವು ರೂಪ – ಆಕಾರಗಳ ಸುಳಿಯಲ್ಲಿ ಸಿಲುಕಿಬಿಟ್ಟಿರುತ್ತೇವೆ.
ಆ ಆಕಾರಗಳ ಹಿಂದಿನ ನಿರಾಕಾರವನ್ನು ಯಾರು ಅರಿಯುತ್ತಾರೋ, ಅರ್ಥ ಮಾಡಿಕೊಳ್ಳುತ್ತಾರೋ, ಅವರು ಬುದ್ಧರಾಗುತ್ತಾರೆ.
ಮತ್ತು; ಅದನ್ನು ಅರಿಯಲು, ಅರ್ಥ ಮಾಡಿಕೊಳ್ಳಳು ಮತ್ತೆಲ್ಲಿಗೋ ಹೋಗಬೇಕಿಲ್ಲ. ಏಕೆಂದರೆ, ಅದು ನೀವೇ ಆಗಿದ್ದೀರಿ.
ಆ ನಿರಾಕಾರ, ಆ ಮೂಲ ಚೇತನ ನೀವೇ ಆಗಿದ್ದೀರಿ.

ಇಲ್ಲಿ ‘ನೀವೇ ಆಗಿದ್ದೀರಿ’ ಅಂದರೆ, ನಿಮ್ಮ ಹೆಸರಾಗಲೀ, ಚಹರೆಯಾಗಲೀ, ನಿಮ್ಮ ದೇಹವಾಗಲೀ ಅಲ್ಲ. ಇಲ್ಲಿ ‘ನೀವು’ ಅಂದರೆ, ನಿಮ್ಮ ಸತ್ವ, ನಿಮ್ಮ ಸಾರಸರ್ವ, ನಿಮ್ಮ ಎಸೆನ್ಸ್… ನಾನು ಆಗಿನಿಂದಲೂ ವಿವರಿಸುತ್ತಿರುವ ಚೇತನ.
ನೀವು ಅಂದರೆ, ಎಲ್ಲಕ್ಕೂ ಮೂಲಾಧಾರವಾದ ಚೇತನ.
ಯಾವುದು ಇಲ್ಲದೆ ಹೋದರೆ ನಿಮ್ಮ ಅಸ್ತಿತ್ವ ಸಾಧ್ಯವಾಗುತ್ತಿರಲಿಲ್ಲವೋ, ಆ ‘ಆತ್ಮ’. ‘ನೀವೇ ಆಗಿದ್ದೀರಿ’ ಅಂದರೆ, ದೇಹರೂಪಗಳಲ್ಲಿರುವ ಆತ್ಮಗಳು ಎಂದು.

ಯಾರು ಈ ಚೇತನ ತತ್ತ್ವವನ್ನು ಅರ್ಥ ಮಾಡಿಕೊಳ್ಳುತ್ತಾರೋ, ಅವರು ಅದರ ಸ್ಮರಣೆಯಿಂದ ತುಂಬಿಹೋಗುತ್ತಾರೆ ಮತ್ತು ಚೇತನ ತತ್ತ್ವದಲ್ಲಿ ಸ್ಥಿರವಾಗಿ ನಿಂತುಬಿಡುತ್ತಾರೆ.
ಅಲ್ಲಿಂದ ಮುಂದೆ ಅವರ ಬದುಕು ರೂಪಾಂತರಕ್ಕೆ ಒಳಗಾಗುತ್ತದೆ. ಅವರ ಸಂಪೂರ್ಣ ಜೀವನದೃಷ್ಟಿಯೇ ಬದಲಾಗಿ ಹೋಗುತ್ತದೆ.
ವಸ್ತುಗಳು ಮೂಲತಃ ಹೇಗಿವೆಯೋ, ಏನಾಗಿವೆಯೋ, ಹಾಗೆಯೇ ನೋಡಲು ಆರಂಭಿಸುತ್ತಾರೆ.
ಅವರು ಈಗ ವಸ್ತುಗಳನ್ನು ಕಲ್ಪನೆಯಂತೆ ನೋಡುವುದಿಲ್ಲ. ಅವುಗಳ ಮೇಲೆ ಆಕಾರವನ್ನಾಗಲೀ ಗುಣವನ್ನಾಗಲೀ ಆರೋಪಿಸುವುದಿಲ್ಲ. ವಸ್ತುತಃ ಏನಿದೆಯೋ, ಅದನ್ನು ನೋಡಲು ಅವರಿಗೆ ಸಾಧ್ಯವಾಗುತ್ತದೆ. ನಿರಾಕಾರ ಧ್ಯಾನ ಸಾಧ್ಯವಾಗುವುದು ಹೀಗೆ. 

(ಹಿಂದಿ ಮೂಲ : Whosoever ಅವರ “ಶಿವೋsಮ್ ಶಿವೋsಹಮ್” | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ )

Leave a Reply