ವಿಪಶ್ಶನದ ಮೂಲಕ ಮನಸ್ಸಿಗೆ ಆಳವಾದ ಶಸ್ತ್ರಚಿಕಿತ್ಸೆ ಮಾಡುತ್ತಾ ನಮ್ಮ ಅಜ್ಞಾನದಿಂದ ಶೇಖರಣೆಗೊಂಡಿರುವ ಕೊಳೆಯನ್ನು ತೆಗೆಯುತ್ತಾ, ಗಾಯಗೊಂಡು ನೋವಿನಿಂದ ಕೂಡಿರುವ ಮನಸ್ಸಿನ ಆಳದಿಂದ ಕೀವನ್ನೂ ತೆಗೆದು ಸ್ವಚ್ಛಮಾಡಿ,`ಮೆತ್ತ’ ಅಥವಾ `ಮೈತ್ರಿ’ ಭಾವನೆಯನ್ನು ತುಂಬಿ ಕರುಣೆ, ಪ್ರೀತಿ, ಸೇವೆ ಎಂಬ ಬೀಜಗಳನ್ನು ನೆಟ್ಟು ಸಮತಾಭಾವದಿಂದ ಇರುವುದನ್ನು ಕಲಿಯುವುದೆ ಧ್ಯಾನದ ಮಾರ್ಗವಾಗಿದೆ. ~ ಚಿನ್ನಸ್ವಾಮಿ ವಡ್ಡಗೆರೆ
ಭಾಗ 3 ಓದಲು ಇಲ್ಲಿ ನೋಡಿ : https://aralimara.com/2019/01/13/vipassana-4/
“ನಮ್ಮ ಅಂತರಾಳದಿಂದ ಉದಯಿಸುವ ಯಾವುದೆ ಬಗೆಯ ದುಃಖಕ್ಕೆ ಪ್ರತಿಕ್ರಿಯೆಯೇ ಕಾರಣ. ಎಲ್ಲಾ ಪ್ರತಿಕ್ರಿಯೆಗಳು ನಿಂತು ಹೋದಲ್ಲಿ ಆಗ ದುಃಖವೆಂಬುದು ಇರುವುದೇ ಇಲ್ಲ” – ಗೌತಮ ಬುದ್ಧ.
ಧ್ಯಾನವೆಂದರೆ ಎಲ್ಲಾ ಮರೆತು ಒಂದೆಡೆ ಕುಳಿತು ಮನಸ್ಸನ್ನು ಏಕಾಗ್ರವಾಗಿಸಿಕೊಂಡು ಒಂದು ಬಗೆಯ ಹಿತಕಾರಿಯಾದ ಮತ್ತಿನಿಂದ ತೇಲುವುದು.ಸುಖಕರವಾದ ಸಂವೇದನೆಗಳ ಜೊತೆಗೆ ಆಟವಾಡುವುದು ಎಂದು ಕೆಲವರ ಭಾವನೆ. ಹೀಗೆ ಧ್ಯಾನ ಮಾಡುವುದೇ ಅಂತಿಮ ಗುರಿಯಾದರೆ ಅದು ಸ್ವಾರ್ಥವೆ ನಿಜ. ಆದರೆ ಧ್ಯಾನದ ಅಂತಿಮ ಗುರಿ ನಮ್ಮ ವಿಕಾರಗಳನ್ನು (ಇದನ್ನೇ ಬುದ್ಧ ಜನ್ಮಾಂತರದಿಂದ ಬಂದ ಸಂಖಾರಗಳು ಎಂದು ಕರೆದ) ಬೇರು ಮಟ್ಟದಿಂದ ನಾಶಮಾಡುತ್ತಾ ಸ್ವಸ್ಥ ಮನಸ್ಸನ್ನು ಪಡೆಯುವ ಮಾರ್ಗವಾಗಿದೆ.
ವಿಪಶ್ಶನದ ಮೂಲಕ ಮನಸ್ಸಿಗೆ ಆಳವಾದ ಶಸ್ತ್ರಚಿಕಿತ್ಸೆ ಮಾಡುತ್ತಾ ನಮ್ಮ ಅಜ್ಞಾನದಿಂದ ಶೇಖರಣೆಗೊಂಡಿರುವ ಕೊಳೆಯನ್ನು ತೆಗೆಯುತ್ತಾ, ಗಾಯಗೊಂಡು ನೋವಿನಿಂದ ಕೂಡಿರುವ ಮನಸ್ಸಿನ ಆಳದಿಂದ ಕೀವನ್ನೂ ತೆಗೆದು ಸ್ವಚ್ಛಮಾಡಿ,`ಮೆತ್ತ’ ಅಥವಾ `ಮೈತ್ರಿ’ ಭಾವನೆಯನ್ನು ತುಂಬಿ ಕರುಣೆ, ಪ್ರೀತಿ, ಸೇವೆ ಎಂಬ ಬೀಜಗಳನ್ನು ನೆಟ್ಟು ಸಮತಾಭಾವದಿಂದ ಇರುವುದನ್ನು ಕಲಿಯುವುದೆ ಧ್ಯಾನದ ಮಾರ್ಗವಾಗಿದೆ.
ಧ್ಯಾನ ಮಾರ್ಗದಲ್ಲಿ ಆರ್ಯ ಅಷ್ಠಾಂಗ ಮಾರ್ಗಗಳ ಪಾಲನೆ ಅತಿಮುಖ್ಯ ಎನ್ನುವುದನ್ನು ಬುದ್ಧ ತಿಳಿಸಿದನು. ಅದರಲ್ಲಿ ಮೊದಲನೆಯ ಭಾಗವಾದ `ಶೀಲ’ದ ಪರಿಪಾಲನೆ ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ಎರಡನೆಯ ಹಂತ `ಸಮಾದಿ’ .
`ಸಮಾದಿ’ ಎಂದರೆ ಏಕಾಗ್ರತೆ. ಮನಸ್ಸಿನ ನಿಯಂತ್ರಣ. ಮನಸ್ಸನ್ನೇ ಗುರಿಯಾಗಿಸಿಕೊಂಡು ಸಾಧಕ ಅಮನಸ್ಕ ಸ್ಥಿತಿಯನ್ನು ತಲುಪುತ್ತಾನೆ. ಇದು ಒಂದು ಬಗೆಯ ಧ್ಯಾನಸ್ಥ ಸ್ಥಿತಿ. ಆದರೆ ಇದೆ ಮನಸ್ಸಿನ ಪೂರ್ಣ ಮುಕ್ತಿಗೆ ಮಾರ್ಗದರ್ಶನವಾಗುವುದಿಲ್ಲ. ಹಾಗಾಗಿ ಬುದ್ಧ ಅಷ್ಠಾಂಗ ಮಾರ್ಗದ ಮೂರನೆಯ ಹಂತವಾದ `ಪನ್ಯ ಅಥವಾ ಪ್ರಜ್ಞೆ’ ಮುಕ್ತಿಗೆ ಎಷ್ಟು ಮುಖ್ಯ ಎನ್ನುವುದನ್ನು ಕಂಡುಕೊಂಡ.
ಹತ್ತು ದಿನಗಳ ವಿಪಶ್ಶನ ಶಿಬಿರದಲ್ಲಿ ಮೊದಲ ಮೂರುವರೆ ದಿನಗಳು ಶೀಲ ಸಮಾದಿಯನ್ನೇ ಗುರಿಯಾಗಿರಿಸಿಕೊಂಡು ಸಾಧಕನಿಗೆ ಕೆಲಸಮಾಡಲು ಕಲಿಸಿಕೊಡಲಾಗುತ್ತದೆ. ಉಸಿರನ್ನು ಅದು ಹೇಗೆ ಬರುತ್ತದೊ ಹಾಗೇ ಸಹಜವಾಗಿ ಗಮನಿಸುತ್ತಾ ಕೂರಬೇಕು. ಮೊದಲ ಎರಡೂವರೆ ದಿನ ಮೂಗಿನ ಹೊಳೆಗಳ ಮೂಲಕ ತ್ರಿಭುಜಾಕಾರದಲ್ಲಿ ಉಸಿರು ಹೊರಬರುವ, ಒಳಹೋಗುವುದನ್ನು ಗಮನಿಸುತ್ತಾ ಅದರ ಸ್ಪರ್ಶವನ್ನು, ಸಂವೇದನೆಯನ್ನು ಅನುಭವಿಸುತ್ತಾ ಇರಬೇಕು. ಇದು ಆರಂಭದಲ್ಲಿ ಕಷ್ಟ. ಒಂದೆಡೆ ಮೌನವಾಗಿ ಕುಳಿತು ಅಭ್ಯಾಸವಿಲ್ಲದ ಮನಸ್ಸು ಅಲೆಯತೊಡುಗುತ್ತದೆ. ಶರೀರ ಮಿಸುಕಾಡತೊಡಗುತ್ತದೆ. ಮಾನಸಿಕ, ಶಾರೀರಿಕ ಬಾಧೆ ಹೆಚ್ಚಾದಂತಾಗಿ ಹಿಂಸೆಯಾಗುತ್ತದೆ. ವರ್ತಮಾನದಲ್ಲಿ ತಲ್ಲೀನವಾಗದ ಮನಸ್ಸು ಭೂತಕಾಲವನ್ನೇ ಕೆದಕುತ್ತಾ ಭವಿಷ್ಯದ ಯೋಜನೆಗಳ ಲೆಕ್ಕಾಚಾರ ಮಾಡುತ್ತಾ ಅಂಡಲಡಯುತ್ತಲೇ ಇರುತ್ತದೆ. ನಾವು ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ಮಾಡದೆ ಸುಮ್ಮನ್ನೆ ಗಮನಿಸುತ್ತಾ ಗಮನಿಸುತ್ತಾ ನಿಯಂತ್ರಣಕ್ಕೆ ಬರುತ್ತದೆ.ಅಲೆಯುವ ಮನದ ಬಗ್ಗೆ ದ್ವೇಷ ಮಾಡದೆ, ಬೇಸರಮಾಡಿಕೊಳ್ಳದೆ ಯಾವುದೆ ಪ್ರತಿಕ್ರಿಯೆಯನ್ನು ನೀಡದೆ ಇರುವುದು ಸಾಧಕನಿಗೆ ಸವಾಲಿನ ಕೆಲಸವೆ ಸರಿ.
ಮೂರು ದಿನದ ನಂತರ ಉಸಿರಿನ ಸ್ಪರ್ಶದ ಸಂವೇದನೆಯನ್ನು ಗಮನಿಸುವುದನ್ನು ಮೂಗಿನ ಹೊಳ್ಳೆಯಿಂದ ತುಟಿಯ ಮೇಲ್ಭಾಗಕ್ಕೆ, ಹೊಳ್ಳೆಗಳ ಕೆಳಕ್ಕೆ ಮತ್ತೆ ತ್ರಿಭುಜಾಕಾರದಲ್ಲಿ ಮತ್ತಷ್ಟು ಕಿರಿದು ಮಾಡಿಕೊಳ್ಳಬೇಕು. ಆಗ ಮನಸ್ಸು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತದೆ. ಇದಾದ ನಂತರ ವಿಪಶ್ಯನ ಧ್ಯಾನವನ್ನು ಕಲಿಸಲಾಗುತ್ತದೆ. ಆರ್ಯ ಅಷ್ಠಾಂಗ ಮಾರ್ಗದ ಪ್ರಮುಖ ಘಟ್ಟ ಮೂರನೆಯ ಹಂತವಾದ `ಪ್ರಜ್ಞೆ’ ಈ ಹಂತದಿಂದ ಮನಸ್ಸು ಹರಿತವಾಗುತ್ತ ಸತ್ಯವನ್ನು ತಿಳಿಯುತ್ತಾ ದುಃಖದ ಮೂಲವನ್ನು ನಾಶಮಾಡುತ್ತಾ ಸಮಚಿತ್ತದಿಂದ ಸಮತಾಭಾವದಿಂದ ಸಾಗುತ್ತಾ ಸಾಗುತ್ತಾ ಹೋಗುತ್ತದೆ. ಧ್ಯಾನದಲ್ಲಿ `ಪ್ರಜ್ಞೆ’ಯ ಹಂತ ಎಷ್ಟೊಂದು ಮುಖ್ಯ ಎನ್ನುವುದನ್ನು ನಂತರ ನೋಡಬಹುದು.
ಇಲ್ಲೇ ನೆನಪಿನಲ್ಲಿ ಇರುವಾಗಲೇ ನನಗಾದ ಒಂದು ವಿಚಿತ್ರ ಅನುಭವವನ್ನು ಹೇಳಿ ಮುಂದುವರಿಯುತ್ತೇನೆ. ನಾಲ್ಕನೇ ದಿನ ವಿಪಶ್ಶನ ಧ್ಯಾನ ಆರಂಭವಾದ ನಂತರ ಧ್ಯಾನವನ್ನು ಮುಗಿಸಿ ರಾತ್ರಿ ಒಂಬತ್ತು ಮೂವತ್ತಕ್ಕೆ ನನಗೆ ಕೊಟ್ಟಿದ್ದ ಕೊಠಡಿಗೆ ಹೋಗಿ ಮಲಗಿದೆ. ರಾತ್ರಿ ಹನ್ನೊಂದು ಗಂಟೆಯಾದರೂ ನಿದ್ದೆ ಬರುತ್ತಿಲ್ಲ. ಒದ್ದಾಟ. ಏನೋ ಅವ್ಯಕ್ತ ಭಯ,ಯಾವುದೋ ಅನಾಹುತ ಸಂಭವಿಸಿದೆ, ನನ್ನ ಪ್ರೀತಿಪಾತ್ರರೂ ನಾನು ಅತಿಯಾಗಿ ಹಚ್ಚಿಕೊಂಡವರಿಗೆ ಅಪಘಾತವಾಗಿದೆ. ಅವರು ಸಾವು ಬದುಕಿನ ನಡುವೆ ಇದ್ದಾರೆ. ನನ್ನ ಮಕ್ಕಳಿಗೆ ಏನೋ ತೊಂದರೆಯಾಗಿದೆ ಎಂಬ ಭಾವನೆ, ಮನಸ್ಸು ಬಿರುಗಾಳಿಗೆ ಸಿಲುಕಿದ ತರಗೆಲೆಯಂತೆ ಹೊಯ್ದಾಡುತ್ತಲೇ ಇದೆ. ಇಲ್ಲಿಂದ ಹೊರಟು ಬಿಡಬೇಕು. ಸರಿ ರಾತ್ರಿಯಲ್ಲಿ ಕಾರು ತೆಗೆದುಕೊಂಡು ಹೊರಟುಬಿಡೋಣ ಎಂದರೆ ಗೇಟ್ ಬಂದ್ ಮಾಡಿರುತ್ತಾರೆ. ಹೀಗೆ ನಾನಾ ಬಗೆಯ ಚಿತ್ರವಿಚಿತ್ರ ಆಲೋಚನೆಗಳಲ್ಲಿ ಮನಸ್ಸು ಮುಳುಗೇಳುತ್ತಿದೆ. ಆರ್ಯಮೌನ ಬೇರೆ ಜಾರಿಯಲ್ಲಿದೆ. ಸರಿ ಹೇಗೋ ಒದ್ದಾಡುತ್ತಾ ಒದ್ದಾಡುತ್ತಾ ಬೆಳಗಿನಜಾವ ಸ್ವಲ್ಪ ನಿದ್ದೆ ಬಂದ ಅನುಭವ.
ಮಾರನೇ ದಿನ ಮಧ್ಯಾಹ್ನ ಆಚಾರ್ಯರನ್ನು ಭೇಟಿಮಾಡಿ ರಾತ್ರಿಯಾದ ಎಲ್ಲಾ ಆತಂಕ, ಭಯದ ಅನುಭವವನ್ನು ಹೇಳಿಕೊಂಡೆ. ಆಗ ಅವರು ” ನಿಮ್ಮೊಳಗಿನ ವಿಕಾರಗಳೆಲ್ಲ ಬೇರು ಸಮ್ಮೇತ ಕಿತ್ತು ಹೋಗುವ ಮುನ್ನಾ ಆ ರೀತಿ ಅನುಭವ ಆಗುತ್ತದೆ. ಒಳ್ಳೆಯದೇ. ನಿಮ್ಮ ಮನಸ್ಸಿಗೆ ಆಳವಾದ ಶಸ್ತ್ರ ಚಿಕಿತ್ಸೆ ಶುರುಮಾಡಿರುವುದರಿಂದ ನೋವಾಗುತ್ತಿದೆ. ಅದಕ್ಕೆಲ್ಲಾ ಹೆದರಬೇಕಾಗಿಲ್ಲ. ಅದೆಲ್ಲ ನಿಮ್ಮ ಮನಸ್ಸಿನ ಕಲ್ಪನೆ ಹೊರಗೆ ಏನೂ ಆಗಿಲ್ಲ ಅಲ್ವಾ” ಎಂದು ಸಮಧಾನ ಹೇಳಿದರು.
ಆಗ ಮನಸ್ಸು ಶಾಂತವಾಗತೊಡಗಿತು. ಇದುವರೆಗಿನ ಅಭ್ಯಾಸದಂತೆ ಬೇರೆಯವರು ಸಂತ್ವಾನ ಮಾಡಿದರೆ ಸುಮ್ಮನಾಗುವ ಗುಣ ಇದಕ್ಕೆ ಇನ್ನೂ ಹೋಗಿಲ್ಲ ಅನಿಸುತ್ತೆ ಎಂದುಕೊಂಡು ನಾನು ಸುಮ್ಮನಾದೆ.
ನಾಲ್ಕನೇ ದಿನದಿಂದ ವಿಪಶ್ಯನ ಧ್ಯಾನ ಆರಂಭವಾದ ಮೇಲೆ ಮೈಕೈ ನುಲಿಯುವುದು, ಮನಸ್ಸು ಅಂಡಲೆಯುವುದು ಎಲ್ಲಾ ಕಡಿಮೆಯಾದವು. ಒಂದು ಗಂಟೆ ಪ್ರತಿಮೆಯಂತೆ ಆಳ್ಳಾಡದೆ ಕುಳಿತುಕೊಳ್ಳುವುದು ಅಭ್ಯಾಸವಾಯಿತು. ವಿಪಶ್ಯನ ಧ್ಯಾನದ ಅನುಭವ ನಿಧಾನಕ್ಕೆ ಬರತೊಡಗಿತು.
ಸಮಾದಿಯ ಸ್ಥಿತಿಯಲ್ಲಿ ಪ್ರಯತ್ನ, ಎಚ್ಚರ, ಏಕಾಗ್ರತೆ ಎಲ್ಲವೂ ಯೋಗ್ಯವಾಗಿದ್ದರೆ ಮನಸ್ಸಿನ ಮೇಲೆ ನಿಯಂತ್ರಣ ಬರುತ್ತದೆ. `ಸಮಾದಿ’ಯನ್ನು ಅಭ್ಯಾಸಿಸುವುದರಿಂದ ಎಂಟು ಬಗೆಯ ಸ್ಥಿತಿಗಳು ಉಂಟಾಗುತ್ತವೆ. ಅದರಲ್ಲಿ ಜ್ಙಾನವೂ ಒಂದು. ಮಾನಸಿಕ ಪರವಶತೆಯ ಸ್ಥಿತಿತಲುಪಿ ಜ್ಞಾನವನ್ನು ವೃದ್ಧಿಪಡಿಸಿ ಅರಿತುಕೊಳ್ಳುವುದರಿಂದ ಮಾನಸಿಕ ವಿಕಾರಗಳು ಬೇರು ಸಮ್ಮೇತ ನಾಶವಾಗುತ್ತಾ ಸಮತೆ ಬೆಳೆಯುತ್ತಾ ಹೋಗುತ್ತದೆ. ಅರಿವು ಮತ್ತು ಸಮತೆಗಳೆ ವಿಪಶ್ಶನ ಧ್ಯಾನವಾಗಿದೆ.
ಬುದ್ಧನ ಬೋಧೆಯಲ್ಲಿ `ಶೀಲ’ವಾಗಲಿ `ಸಮಾದಿ’ಯಾಗಲಿ ಪ್ರಧಾನವಾಗಿರಲಿಲ್ಲ. ಇವೆರಡೂ ಬುದ್ಧನಿಗೆ ಜ್ಞಾನೋದಯವಾಗುವುದಕ್ಕಿಂತ ಮುಂಚಿನಿಂದಲ್ಲೂ ಜನರಿಗೆ ತಿಳಿದಿದ್ದವು ಅದನ್ನು ಅಭ್ಯಾಸ ಮಾಡುತ್ತಿದ್ದರು. `ಪ್ರಜ್ಞೆ’ಯನ್ನು ಬೆಳೆಸುವುದರಿಂದಲೇ ನಾವು ಸ್ವೇಚ್ಛಾಚಾರ ಮತ್ತು ದಮನಗಳ ಅತಿರೇಕದಿಂದ ಹೊರಬಂದು ಮಧ್ಯಮ ಮಾರ್ಗವನ್ನು ಅನುಸರಿಸಲು ಸಾಧ್ಯ ಎನ್ನುವುದನ್ನು ಬುದ್ಧ ಸ್ವತಃ ಅನುಭವದಿಂದ ಕಂಡುಕೊಂಡಿದ್ದ.
ಚಿನ್ನಸ್ವಾಮಿ ವಡ್ಡಗೆರೆಯವರು ನನ್ನ ಓದಿನ ವೇಳೆಯಲ್ಲಿ ಸ್ನೇಹಿತರಾಗಿದ್ದವರು. ಅವರ ವಿಶಿಷ್ಟ ಮತ್ತು ವಿಭಿನ್ನ ಬದುಕು ಮತ್ತು ಸಾಹಸಗಳನ್ನು ಗಮನಿಸುತ್ತಾ, ಹೆಮ್ಮೆ ಮತ್ತು ಅಭಿಮಾನಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಇದ್ದವನು. ಅವರ ವಿಶೇಷ ರೀತಿಯ ನಗು ನನಗೀಗಲೂ ನೆನಪಿದೆ. ಮುಗ್ಧ ಪ್ರೀತಿ ಮತ್ತು ಸದಾ ಅನ್ವೇಷಿತ ಕಾಂತಿ ಅವರ ವ್ಯಕ್ತಿತ್ವದ ಚಹರೆಗಳು.
ಅರಳಿಮರವನ್ನು ಓದುತ್ತಲೇ ಸಂತಸವಾಗಿರುವ ನನಗೆ ವಿಪಶ್ಶನ ಧ್ಯಾನಾನುಭವದ ಕಂತುಗಳು ಸಖತ್ ಖುಷಿ ಕೊಟ್ಟವು. ಹೀಗೆ ಬದಲಾದ ಚಿನ್ನಸ್ವಾಮಿ ನನ್ನಂಥವರಿಗೀಗ ಈ ವಿಚಾರದಲ್ಲಿ ಗುರುಗಳಾಗಿದ್ದಾರೆ!
ಅವರೊಳಗಿನ ಸಂಬುದ್ಧತ್ವಕ್ಕೆ ಮತ್ತು ಕಾರಣರಾದ ಸರ್ವರಿಗೆ ನನ್ನ ಪ್ರೇಮಪೂರ್ವಕ ವಂದನೆಗಳು. ಇದನ್ನು ಬರೆದು ನಾನು ಧನ್ಯನಾಗಿದ್ದೇನೆ.
– Manjuraj H N, Mysuru, 9900119518