ಮೂರ್ಖ ರಾಜನ ಹೊಟ್ಟೆ ಕಿಚ್ಚು: ಒಂದು ದೃಷ್ಟಾಂತ ಕಥೆ

ಈ ಕಥೆ ಓದಿದ ಮೇಲೆ ನಿಮಗೆ ನಿಮ್ಮನ್ನೂ ಹೀಗೇ ಕಾಡುವ ಹೊಟ್ಟೆಕಿಚ್ಚಿನ ರಾಜನಂಥವರ ನೆನಪಾಗಬಹುದು. ಹಾಗಂತ ಈ ಕಥೆಯ ಮತ್ತೊಬ್ಬ ರಾಜನಂತೆ ನೀವು ಸಜ್ಜನರೋ ಧರ್ಮಭೀರುಗಳೋ ಆಗಿದ್ದೀರಿ ಎಂದಲ್ಲ. ನಿಮ್ಮ ಬದುಕು, ನಿಮ್ಮ ಅಂತ್ಯ ಹೇಗಿರಬೇಕೆಂದು ನಿರ್ಧರಿಸುವವರು ನೀವೇ. ಯಾವ ರಾಜನ ಉದಾಹರಣೆ ಅನುಸರಿಸುತ್ತೀರೋ, ನೀವೇ ಆಯ್ಕೆ ಮಾಡಿಕೊಳ್ಳಿ! ~ ಚೇತನಾ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜ. ಅವನ ಪಕ್ಕದ ರಾಜ್ಯದಲ್ಲಿ ಮತ್ತೊಬ್ಬ ರಾಜ. ಈ ರಾಜನಿಗೆ ಯಾವಾಗಲೂ ಆ ರಾಜನ ಮೇಲೆ ಕಣ್ಣು. ಅವನ ಮೇಲೆ ವಿನಾಕಾರಣ ಹೊಟ್ಟೆಕಿಚ್ಚು, ಸ್ಪರ್ಧೆ. ಅವನು ಏನು ಮಾಡುತ್ತಾನೋ ಅವೆಲ್ಲವನ್ನೂ ತಾನು ಮಾಡಬೇಕು. ಅವನು ರಾಜ್ಯಕ್ಕೆ ಹೊಸ ಆಯುಧಗಳನ್ನು ತರಿಸಿದರೆ ತಾನೂ ತರಿಸಬೇಕು. ಹೊಸ ಕೃಷಿ ಪದ್ಧತಿ ಪರಿಚಯಿಸಿದರೆ ತಾನೂ ಅದನ್ನು ಮಾಡಬೇಕು. ಮತ್ತೊಂದು ಮದುವೆಯಾದರೆ ತಾನೂ ಆಗಬೇಕು. ಹೀಗೆ…

ಆ ರಾಜ್ಯದ ಹವಾಗುಣ ಮತ್ತು ಅಗತ್ಯಗಳೇ ಬೇರೆ, ಈ ರಾಜ್ಯದ್ದೇ ಬೇರೆ. ಆದರೂ ಈ ರಾಜ, ಆ ರಾಜ ಮಾಡಿದ್ದೆಲ್ಲವನ್ನೂ ಮಾಡಲೇಬೇಕು. ನಷ್ಟವಾದರೂ ಅಷ್ಟೆ, ಏನಾದರೂ ಅಷ್ಟೇ! ಹೀಗಿತ್ತು ಅವನ ಪೈಪೋಟಿ. ಅಷ್ಟು ಮಾತ್ರವಲ್ಲ, ತಾನೇ ಮೇಲೆಂದು ಸಾಬೀತುಪಡಿಸಲು ಮೇಲಿಂದ ಮೇಲೆ ಪಕ್ಕದ ರಾಜ್ಯದ ಮೇಲೆ ಏರಿಹೋಗುವುದೂ ಅವನ ಚಟವಾಗಿಹೋಗಿತ್ತು.

ಪಕ್ಕದ ರಾಜ್ಯ ಸಜ್ಜನ. ಧರ್ಮಭೀರು. ಲೋಭ ಮೋಹಗಳನ್ನು ತೊರೆದ ವಿರಾಗಿ. ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದವ. ಅವನಿಗೆ ಈ ರಾಜನ ಪೈಪೋಟಿ, ಅನಗತ್ಯ ಯುದ್ಧಗಳು ರೇಜಿಗೆ ಹುಟ್ಟಿಸಿದ್ದವು. ಆದ್ದರಿಂದ ಅವನು ತನ್ನ ರಾಜ್ಯವನ್ನು ಪೈಪೋಟಿಯ ರಾಜ್ಯದವನಿಗೇ ಬಿಟ್ಟುಕೊಟ್ಟು ಕಾಡಿಗೆ ಹೊರಟುಹೋದ.

ಈಗ ಹೊಟ್ಟೆಕಿಚ್ಚಿನ ರಾಜನ ಬಳಿ ಎರಡೆರಡು ರಾಜ್ಯ! ಬೇಕಾದಷ್ಟು ಸುಖಸಂಪತ್ತು, ಮನ್ನಣೆ, ಎಲ್ಲವೂ. ಮೊದಮೊದಲು “ಹೇಗೆ! ಅವನನ್ನು ಓಡಿಸಿಬಿಟ್ಟೆ….” ಅಂತ ನೆನೆನೆನೆದು ಗಹಗಹಿಸಿ ನಗುತ್ತಿದ್ದ ರಾಜ ಒಂದಷ್ಟು ದಿನ ಅರಾಮಾಗೇ ಇದ್ದ. ಕ್ರಮೇಣ ಅವನಲ್ಲಿ ಏನೋ ಅಸಮಧಾನ ಇಣುಕತೊಡಗಿತು… ಕೊರತೆ ಕಾಡತೊಡಗಿತು… ಹೊಟ್ಟೆಕಿಚ್ಚುಪಡುವುದು ಅವನಿಗೆ ಅಭ್ಯಾಸವಾಗಿಹೋಗಿತ್ತಲ್ಲ, ಪಕ್ಕದ ರಾಜನಿಲ್ಲದೆ ಅವನು ಚಡಪಡಿಸಿಹೋದ.

ಕಾಡಿಗೆ ಹೋಗಿ ಆ ರಾಜನ ಎದುರು ತನ್ನ ಸಂಪತ್ತಿನ ಪ್ರದರ್ಶನ ಮಾಡಿ ಉರಿಸೋಣವೆಂದು ನಿರ್ಧರಿಸಿದ. ಅದರಂತೆ ಮಾಡಿದ ಕೂಡಾ. ಆದರೆ, ಋಷಿಸದೃಶ ಜೀವನ ನಡೆಸುತ್ತಿದ್ದ ಮಾಜಿ ರಾಜನಿಗೆ ಇದರಿಂದ ಯಾವ ವ್ಯತ್ಯಾಸವೂ ಆಗಲಿಲ್ಲ. ಅವನು ತನ್ನ ಪಾಡಿಗೆ ಸಂತೋಷವಾಗಿಯೇ ಇದ್ದ.

ಇದು ಹೊಟ್ಟೆಕಿಚ್ಚಿನ ರಾಜನ ಕಣ್ಣಿಗೆ ಖಾರದ ಪುಡಿ ಹಾಕಿದಂತೆ ಉರಿಸಿತು. ತಳಮಳಿಸಿಹೋದ…. ಕೊನೆಗೆ ತಾನೂ ರಾಜ್ಯಭಾರ ತೊರೆದು ಕಾಡಿಗೆ ಬಂದ. ಆ ರಾಜನ ಆಶ್ರಮದ ಕುಟೀರದ ಪಕ್ಕದಲ್ಲೇ ತಾನೂ ಕುಟೀರ ಕಟ್ಟಿಸಿಕೊಂಡ. ಏನು ಮಾಡಿದರೂ ಅವನಿಗೆ ಈ ರಾಜನ ಹಾಗೆ ಸಂತೋಷದಿಂದ ನೆಮ್ಮದಿಯಿಂದ ಇರಲು ಸಾಧ್ಯವಾಗಲೇ ಇಲ್ಲ. ಕೊನೆಗೊಂದು ದಿನ ಅದೇ ಕೊರಗಿನಲ್ಲಿ ಸತ್ತುಹೋದ. ತನ್ನ ಮೂರ್ಖತನಕ್ಕೆ ತನ್ನ ನೆಮ್ಮದಿಯ ಬದುಕನ್ನೇ ಬಲಿಕೊಟ್ಟು ಕೊನೆಯಾಗಿಹೋದ. 

*

ಈ ಕಥೆ ಓದಿದ ಮೇಲೆ ನಿಮಗೆ ನಿಮ್ಮನ್ನೂ ಹೀಗೇ ಕಾಡುವ ಹೊಟ್ಟೆಕಿಚ್ಚಿನ ರಾಜನಂಥವರ ನೆನಪಾಗಬಹುದು. ಸುಮ್ಮಸುಮ್ಮನೆ ಪೈಪೋಟಿ ಒಡ್ಡುತ್ತ ತಮಗೆ ತಾವೆ ಚಡಪಡಿಸುತ್ತಾ ನಿಮ್ಮನ್ನೂ ಕೆಣಕುವವರ ನೆನಪಾಗಬಹುದು. ಹಾಗಂತ ಈ ಕಥೆಯ ಮತ್ತೊಬ್ಬ ರಾಜನಂತೆ ನೀವು ಸಜ್ಜನರೋ ಧರ್ಮಭೀರುಗಳೋ ಆಗಿದ್ದೀರಿ ಎಂದಲ್ಲ. ಸಮಸ್ಯೆಗೆ ಒಳಗಾಗುವರು ಯಾವಾಗಲೂ ಸಜ್ಜನರೇ ಆಗಿರುತ್ತಾರೆ ಎಂದೇನಲ್ಲ. ಆದರೂ, ಈ ಕಥೆಯ ಸಜ್ಜನ ರಾಜನಂತೆ ನೀವು ಇತರರ ಮಾತ್ಸರ್ಯಕ್ಕೆ ತಲೆಕೊಡದೆ ನಿಮ್ಮ ಖುಷಿಯನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ಸಂತೋಷ ಇರುವುದು ನಿಮ್ಮೊಳಗೆ ಹೊರತು, ಹೊರಗಿನ ವಸ್ತು – ವಿಷಯಗಳನ್ನಾಗಲೀ ವ್ಯಕ್ತಿಗಳನ್ನಾಗಲೀ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮತ್ತೊಬ್ಬರೊಡನೆ ಹೋಲಿಕೆ, ಪೈಪೋಟಿಗಳು ನಿಮ್ಮನ್ನೆಂದೂ ಸುಖವಾಗಿಡಲಾರವು. ಯಾರು ಈ ಎಲ್ಲ ಅನಗತ್ಯ ಜಿದ್ದಿಗೆ ಬೀಳುತ್ತಾರೋ ಅವರು ಹೊಟ್ಟೆಕಿಚ್ಚಿನ ರಾಜನಂತೆ ಚಡಪಡಿಸುತ್ತಲೇ ಅತೃಪ್ತಿಯಲ್ಲಿ ಕೊನೆಯಾಗಿಹೋಗುತ್ತಾರೆ.

ನಿಮ್ಮ ಬದುಕು, ನಿಮ್ಮ ಅಂತ್ಯ ಹೇಗಿರಬೇಕೆಂದು ನಿರ್ಧರಿಸುವವರು ನೀವೇ. ಯಾವ ರಾಜನ ಉದಾಹರಣೆ ಅನುಸರಿಸುತ್ತೀರೋ, ನೀವೇ ಆಯ್ಕೆ ಮಾಡಿಕೊಳ್ಳಿ!

 

Leave a Reply