ಪಶ್ಚಿಮದ ಜ್ಞಾನಿಗೆ ಮಹಾಯೋಗಿನಿ ರಾ-ಉಮ್ ಪ್ರಶ್ನೆ

Ra Um

: ಯಾದಿರಾ

ರಾ-ಉಮ್ ತನ್ನದೇ ಆದ ಆಶ್ರಮವನ್ನು ಆರಂಭಿಸುವ ಮುನ್ನ ಏನು ಮಾಡುತ್ತಿದ್ದಳು ಎಂಬುದಕ್ಕೆ ಸಂಬಂಧಿಸಿದ ವಿವರಗಳು ಹೆಚ್ಚೇನೂ ಲಭ್ಯವಿಲ್ಲ. ಆದರೆ ಅವಳು ಮಹಾಯೋಗಿನಿಯೊಬ್ಬಳ ಆಶ್ರಮದಲ್ಲಿ ಇದ್ದದ್ದಂತೂ ನಿಜ. ತನ್ನ ಶಿಷ್ಯತ್ವದ ದಿನಗಳನ್ನು ಅವಳೇ ಹೇಳಿಕೊಂಡದ್ದಿದೆ. ರಾ-ಉಮ್‌ನ ಗುರುವಾಗಿದ್ದ ಆ ಯೋಗಿನಿ ಪಾಠವನ್ನೇ ಮಾಡುತ್ತಿರಲಿಲ್ಲವಂತೆ. ಅಂತೇವಾಸಿಯಾಗಿ ಅವಳ ಜೊತೆ ಬದುಕುವುದೇ ಕಲಿಕೆಯಾಗಿತ್ತಂತೆ.

ಒಂದು ದಿನ ಆ ಮಹಾಯೋಗಿನಿಯ ಆಶ್ರಮಕ್ಕೆ ಪಶ್ಚಿಮದ ಪ್ರಖ್ಯಾತ ಸಾಧುವೊಬ್ಬರು ಬಂದರು. ಜಗತ್ತಿನ ಎಲ್ಲ ಆಗುಹೋಗುಗಳನ್ನೂ ಲೌಕಿಕ ದೃಷ್ಟಿಯಿಂದಲೇ ಗ್ರಹಿಸಿ ವಿವರಿಸಲು ಸಾಧ್ಯ ಎಂಬುದು ಅವರ ಸಿದ್ಧಾಂತ. ಇದರ ಬಗ್ಗೆ ಆಶ್ರಮವಾಸಿಗಳಿಗೊಂದು ಉಪನ್ಯಾಸ ನೀಡುತ್ತಾ ಅವರು ‘ಎರಡು ಬಿಂದುಗಳ ನಡುವಣ ದೂರವನ್ನು ಯಾವ ಕಡೆಯಿಂದ ಅಳೆದರೂ ಅದು ಒಂದೇ ಆಗಿರುತ್ತದೆ’ ಎಂದರು.

ಉಪನ್ಯಾಸ ಕೇಳುತ್ತಿದ್ದ ರಾ-ಉಮ್, ‘ಬಿಂದುಗಳಲ್ಲಿ ಕಾಲಮಾನದ ಬಿಂದುಗಳೂ ಇವೆಯೇ?’ ಎಂದು ಪ್ರಶ್ನಿಸಿದಳು.

ಇದಕ್ಕೆ ಉತ್ತರಿಸಿದ ವಿದ್ವಾಂಸ, ‘ಹೌದು ದೇಶ – ಕಾಲದೊಳಗಿನ ಯಾವುದೇ ಎರಡು ಬಿಂದುಗಳ ನಡುವಣ ದೂರಕ್ಕೆ ಇದು ಅನ್ವಯಿಸುತ್ತದೆ’ ಎಂದರು.

ರಾ-ಉಮ್‌ ಮತ್ತೆ ಕೇಳಿದಳು, ‘ಸೋಮವಾರದಿಂದ ಶನಿವಾರಕ್ಕೆ ಇರುವ ಅಂತರ ನಾಲ್ಕು ದಿನಗಳು. ಆದರೆ ಶನಿವಾರದಿಂದ ಸೋಮವಾರಕ್ಕೆ ಇರುವ ಅಂತರ ಒಂದೇ ದಿನ; ಅಲ್ಲವೇ?’

ಲೌಕಿಕವಾದಿ ವಿದ್ವಾಂಸ ಉಪನ್ಯಾಸ ನಿಲ್ಲಿಸಿ ಆಶ್ರಮದ ಅಂತೇವಾಸಿಯಾದ!

Leave a Reply