ಕುಂಡಲಕೇಶಿ ಗಂಡನ ಕೈಹಿಡಿದು ಬರಿಗಾಲಲ್ಲಿ ಬೆಟ್ಟ ಹತ್ತುತ್ತಾಳೆ. ಏರಿ ನಿಂತು, ಪ್ರೇಮ ಸಾಫಲ್ಯದ ಉತ್ತುಂಗದಲ್ಲಿರುವಂತೆ ಸಾರ್ಥಕತೆ ಅನುಭವಿಸುತ್ತಾಳೆ. ಕಳ್ಳ ಆಕೆಯನ್ನು ತಬ್ಬಿಕೊಂಡು ತುದಿಯತ್ತ ಒಯ್ಯುತ್ತಾನೆ. ಆದರೆ… ~ ಚೇತನಾ ತೀರ್ಥಹಳ್ಳಿ
ರಾಜಗೃಹದ ಶ್ರೀಮಂತ ವರ್ತಕನಿಗೆ ಹದಿಹರೆಯದ ಮಗಳೊಬ್ಬಳಿದ್ದಳು. ಅವಳು ಬಹಳ ಚೆಲುವೆ, ಚುರುಕಿನ ಹೆಣ್ಣು. ಹೆಸರು – ಕುಂಡಲಕೇಶಿ. ನಗರದ ಮುಖ್ಯ ಬೀದಿಯಲ್ಲಿದ್ದ ಆ ಶ್ರೀಮಂತನ ಅರಮನೆಯ ಏಳನೇ ಉಪ್ಪರಿಗೆಯಲ್ಲಿ ಅವಳ ವಾಸ. ಅವಳ ಪಾದಗಳು ಯಾವತ್ತೂ ನೆಲ ಸೋಕಿದ್ದೇ ಇಲ್ಲವೆನ್ನುವಷ್ಟು ಸುಖದ ಬದುಕು.
ಒಮ್ಮೆ ಕುಂಡಲಕೇಶಿ ತನ್ನ ಮಾಳಿಗೆಯಿಂದ ಇಳಿ ಸಂಜೆಯ ಸೌಂದರ್ಯವನ್ನ ಕಣ್ತುಂಬಿಕೊಳ್ಳುತ್ತ ಇರುತ್ತಾಳೆ. ಇದ್ದಕ್ಕಿದ್ದ ಹಾಗೆ ಬೀದಿಯಲ್ಲಿ ಕೋಲಾಹಲ ತೊಡಗುತ್ತದೆ. ಜನರೆಲ್ಲ ಒಂದು ಬದಿ ಸರಿದು ನಿಲ್ಲುತ್ತಾರೆ. ಅದರ ಬೆನ್ನಲ್ಲೆ ಕುದುರೆಗಳ ಖುರಪುಟದ ಸದ್ದು. ನಾಲ್ಕು ಜನ ಸವಾರರು ಮುಂದೆ ಹಾದು ಹೋದ ನಂತರ ಒಬ್ಬ ಸುಂದರ ಯುವಕನಿಗೆ ಕೋಳ ತೊಡಿಸಿ ಎಳೆದೊಯ್ಯುತ್ತಿದ್ದ ಇಬ್ಬರು ಸೈನಿಕರು ಕಾಣಿಸುತ್ತಾರೆ. ನೋಡಿದರೇನೇ ಕಳ್ಳನೆಂದು ಖಾತ್ರಿಯಾಗುತ್ತಿದ್ದ ಆ ಯುವಕನ ರೂಪ ಕುಂಡಲಕೇಶಿಯನ್ನು ಸೆಳೆಯುತ್ತದೆ. ಅವನ ಮುಖ ಭಾವ, ದೇಹದ ಭಂಗಿ, ನಿರ್ಲಕ್ಷ್ಯದ ನಡೆಗಳು ಅವಳ ಮನ ಸೂರೆಗೊಳ್ಳುತ್ತವೆ. ಸಂಜೆಯ ಸೂರ್ಯನಂತೆ ಲಜ್ಜೆಗೆಂಪೇರಿ, ಕೋಣೆಯ ಮೂಲೆ ಹಿಡಿದು ಕೂತು ಬಿಡುತ್ತಾಳೆ ಕುಂಡಲಕೇಶಿ. ರಾತ್ರಿಯ ಊಟವನ್ನೂ ಬೇಡವೆನ್ನುತ್ತಾಳೆ. ನಿದ್ರೆ ಮಾಡೆನು ಎಂದು ಹಟ ಹಿಡಿಯುತ್ತಾಳೆ. ಮರು ದಿನವೂ ಇದೇ ಕಥೆ!
ತಾಯ್ತಂದೆಯರಿಗೆ ಆತಂಕ. ದಾಸಿ ತನ್ನ ಒಡತಿಯ ನಡೆಗೆ ಕಾರಣ ಬಿಚ್ಚಿಡುತ್ತಾಳೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಸೆರೆಮನೆಗೊಯ್ದ ಕಳ್ಳನನ್ನು ಮಗಳು ಬಯಸುತ್ತಿದ್ದಾಳೆ! ಅವನೊಂದಿಗೇ ತನ್ನ ಮದುವೆ ಮಾಡಿಸಿ ಕೊಡಿ ಅನ್ನುತ್ತಿದ್ದಾಳೆ!!
ಪ್ರೀತಿಯ ಮಗಳ ಬೆರಳು ತುದಿ ತೋರಿದ್ದನ್ನೆಲ್ಲ ಕಾಲ ಬುಡಕ್ಕೆ ತಂದು ಸುರಿಯುತ್ತಿದ್ದ ತಾಯ್ತಂದೆಯರು ಅವರು. ಮಗಳ ಈ ಬೇಡಿಕೆಗೆ ಬೆದರಿಹೋಗುತ್ತಾರೆ. ಕಳ್ಳನಿಗೆ ಮಗಳ ಮದುವೆ ಮಾಡಿಸುವುದೇ? ಮಗಳು ಹೇಳುತ್ತಾಳೆ, `ಅಪ್ಪಾ, ಹಣಕ್ಕಾಗಿ ಆತ ಕಳ್ಳನಾಗಿದ್ದಾನೆ. ನಮ್ಮ ಮನೆಯಲ್ಲಿ ಊರಿನ ನೂರು ಕುಟುಂಬಗಳು ಕೂತುಣ್ಣುವಷ್ಟು ಸಂಪತ್ತಿದೆ. ಹೀಗಿರುವಾಗ ಅವನು ಇನ್ನು ಮುಂದೆ ಯಾಕಾದರೂ ಕಳ್ಳತನ ಮಾಡುತ್ತಾನೆ? ನಿಮ್ಮ ವ್ಯವಹಾರದಲ್ಲಿ ಸಹಾಯಕನಾಗಿ ನೇಮಿಸಿಕೊಳ್ಳಿ. ಏನಾದರೂ ಮಾಡಿ ಅವನನ್ನು ಬಿಡಿಸಿ ತನ್ನಿ. ಅವನ ಹೊರತು ನಾನು ಯಾರನ್ನೂ ಗಂಡನಾಗಿ ಒಪ್ಪಿಕೊಳ್ಳಲಾರೆ’.
ಶ್ರೀಮಂತ ವರ್ತಕ ಮಗಳ ವಾದ ಸರಣಿಗೆ ಸೋಲುತ್ತಾನೆ. ಅಧಿಕಾರಿಗಳಿಗೆ ಲಂಚ ನೀಡಿ ಕಳ್ಳನನ್ನು ಬಿಡಿಸಿ ತರುತ್ತಾನೆ. ಮಗಳ ಮದುವೆಯನ್ನೂ ಮಾಡಿಸುತ್ತಾನೆ, ಮನೆ ಅಳಿಯನನ್ನಾಗಿಸಿಕೊಳ್ಳುತ್ತಾನೆ. ಕುಂಡಲಕೇಶಿ ತನ್ನೆಲ್ಲ ಪ್ರೇಮವನ್ನು ಅವನಿಗೆ ಧಾರೆ ಎರೆಯುತ್ತಾಳೆ.
ಹೀಗೆ ಕೆಲ ದಿನಗಳು ಕಳೆಯುತ್ತವೆ. ಆ ಕಳ್ಳ ಮೇಲ್ತೋರಿಕೆಗೆ ಅವಳನ್ನು ಪ್ರೀತಿಸುತ್ತಿದ್ದಂತೆ ನಟಿಸುತ್ತಾ ಒಳಗೊಳಗೆ ಚಡಪಡಿಸುತ್ತ ಇರುತ್ತಾನೆ. ಅವನಿಗೆ ಈ ಅರಮನೆ, ವೈಭೋಗ, ಪ್ರೀತಿ ಯಾವುದೂ ಬೇಕಾಗಿಲ್ಲ. ಯಾವಾಗ ನಾನು ಒಂದಷ್ಟು ಗಂಟು ಹೊತ್ತು ಇಲ್ಲಿಂದ ಹೋದೇನು ಎಂದು ಕಾದುಕೊಂಡಿರುತ್ತಾನೆ. ಅದರಂತೆ ಉಪಾಯ ಹೂಡಿ ಒಂದು ದಿನ, `ನಾನು ಜೀವಾವಧಿ ಶಿಕ್ಷೆಯಿಂದ ಪಾರಾದರೆ ಹರಕೆ ಸಲ್ಲಿಸುವುದಾಗಿ ಕಳ್ಳರ ಬೆಟ್ಟದ ದೇವಿಗೆ ಹೇಳಿಕೊಂಡಿದ್ದೆ. ನಾಳೆ ಅಲ್ಲಿಗೆ ಹೋಗೋಣ. ಪೂಜೆ ಮಾಡಿಸಲಿಕ್ಕಿದೆ’ ಅನ್ನುತ್ತಾನೆ. ಮದುವೆಯಾದಾಗಿನಿಂದ ಗಂಡನ ಜೊತೆ ಹೊರಗೆ ಹೋಗಿರದಿದ್ದ ಕುಂಡಲಕೇಶಿ ಸಂಭ್ರಮಿಸುತ್ತಾಳೆ. ಪೂಜೆಗೆ ಏನೇನು ಬೇಕೆಂದು ಕೇಳುತ್ತಾಳೆ. ಕಳ್ಳ ತನಗೆ ಹೊತ್ತೊಯ್ಯಲು ಏನೇನು ಬೇಕೋ ಎಲ್ಲವನ್ನೂ ಪಟ್ಟಿ ಮಾಡಿ ಕೊಟ್ಟು, ನೀನು ಹೊಸ ರೇಷಿಮೆ ಪತ್ತಲವುಟ್ಟು, ಎಲ್ಲ ಆಭರಣಗಳನ್ನೂ ಧರಿಸಿ ಬಾ ಅನ್ನುತ್ತಾನೆ.
ಕುಂಡಲಕೇಶಿ ಗಂಡನ ಕೈಹಿಡಿದು ಬರಿಗಾಲಲ್ಲಿ ಬೆಟ್ಟ ಹತ್ತುತ್ತಾಳೆ. ಏರಿ ನಿಂತು, ಪ್ರೇಮ ಸಾಫಲ್ಯದ ಉತ್ತುಂಗದಲ್ಲಿರುವಂತೆ ಸಾರ್ಥಕತೆ ಅನುಭವಿಸುತ್ತಾಳೆ. ಆದರೆ ಆ ಬೆಟ್ಟದ ಮೇಲೆ ಯಾವುದೇ ದೇವಸ್ಥಾನ ಇರುವುದಿಲ್ಲ. ಗಂಡನನ್ನು ಕೇಳುತ್ತಾಳೆ. ಕಳ್ಳ ಆಕೆಯನ್ನು ತಬ್ಬಿಕೊಂಡು ತುದಿಯತ್ತ ಒಯ್ಯುತ್ತಾನೆ. ಮತ್ತು ಹೇಳುತ್ತಾನೆ, `ಹೆಂಡತಿಯೇ! ನೀನು ನಡೆದಾಡುವ ಖಜಾನೆಯೇ ಆಗಿದ್ದೀಯ. ಮನೆಯಲ್ಲಿ ಎಲ್ಲ ಸಂಪತ್ತು ಕಣ್ಣೆದುರೇ ಇದ್ದರು ಅದನ್ನು ತೆಗೆದುಕೊಳ್ಳಲು ಮನಸಾಗಲಿಲ್ಲ. ಏಕೆಂದರೆ ಕದಿಯುವುದು ಕಳ್ಳರ ಧರ್ಮ. ಆದ್ದರಿಂದ ನಿನ್ನನ್ನು ಕೊಂದು ನಿನ್ನ ಆಭರಣಗಳನ್ನೂ ಈ ಎಲ್ಲ ಸಾಮಾಗ್ರಿಗಳನ್ನೂ ಅಪಹರಿಸಿಕೊಂಡು ಹೋಗೋಣವೆಂದು ಇಲ್ಲಿಗೆ ಕರೆತಂದಿದ್ದೇನೆ. ಕೊನೆಯ ಸಲ ನಿನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸಿಬಿಡು’.
ಕುಂಡಲಕೇಶಿ ಒಂದು ಕ್ಷಣ ಅವಾಕ್ಕಾಗುತ್ತಾಳೆ. ತಾನು ಕೇಳಿಸಿಕೊಳ್ತಿರುವುದು ಸುಳ್ಳೆಂದು ಅಂದುಕೊಳ್ಳುತ್ತಾಲೆ. ಆದರೆ ಅವೆಲ್ಲವೂ ನಿಜ ಅನ್ನುವಂತೆ ಕಳ್ಳ ಅವಳೆದುರೇ ಹುಳ್ಳಗೆ ನಗುತ್ತ ನಿಂತಿದ್ದಾನೆ!
ಒಂದು ತೀವ್ರತೆಯಲ್ಲಿ ನಿಂತವರೇ ಮತ್ತೊಂದು ತೀವ್ರತೆಗೂ ಹೋಗಬಲ್ಲರು. ಕುಂಡಲಕೇಶಿ ಜಾಗೃತಳಾಗುತ್ತಾಳೆ. ಅವಳಿಗೆ ತನ್ನ ಜೀವ ದೊಡ್ಡದು ಅಂತೇನೂ ಅನ್ನಿಸುವುದಿಲ್ಲ. ಆದರೆ ತನ್ನ ಪ್ರೇಮವು ವಂಚನೆಗೊಳಗಾಯಿತಲ್ಲ ಎಂಬ ನೋವು ಇರಿಯುತ್ತದೆ. ಮೆಲುನಗುತ್ತ, `ಸ್ವಾಮಿ, ನಿಮ್ಮ ಬಯಕೆಯಂತೆಯೇ ಆಗಲಿ. ಎಷ್ಟೆಂದರೂ ನಾನು ನಿಮ್ಮ ಹೆಂಡತಿ. ನಿಮ್ಮ ಆಸೆ ಈಡೇರಿಸುವುದು ನನ್ನ ಕರ್ತವ್ಯ. ಕೊನೆಯ ಬಾರಿ ನಿಮಗೆ ನಮಸ್ಕರಿಸಿ ಆಲಂಗಿಸುತ್ತೇನೆ. ಅವಕಾಶ ಮಾಡಿಕೊಡಿ’ ಎನ್ನುತ್ತಾಳೆ. ಕಳ್ಳ ಹೂಂಗುಟ್ಟುತ್ತಾನೆ. ಕುಂಡಲಕೇಶಿ ಅವನಿಗೆ ಮೂರು ಸುತ್ತು ಬಂದು, ಅವನ ಮುಖದ ಬಳಿ ತನ್ನ ಮುಖವಿಟ್ಟು, ನಿಮ್ಮನ್ನು ನಾನು ನೋಡ್ತಿರುವುದು ಇದೇ ಕೊನೆಯ ಸಲ’ ಅನ್ನುತ್ತ ಆಲಂಗಿಸುವಂತೆ ನಟಿಸಿ, ಜೋರಾಗಿ ದಬ್ಬಿ ಬಿಡುತ್ತಾಳೆ. ಈ ಅನಿರೀಕ್ಷಿತಕ್ಕೆ ಸ್ಪಂದಿಸುವ ಮೊದಲೇ ಕಳ್ಳ ಪ್ರಪಾತಕ್ಕೆ ಬೀಳುತ್ತಾನೆ. ಕಲ್ಲಿಗೆ ತಲೆಯೊಡೆದು ಸತ್ತುಹೋಗುತ್ತಾನೆ.
ಈ ಘಟನೆಯಿಂದ ನೊಂದುಕೊಳ್ಳುವ ಕುಂಡಲಕೇಶಿಗೆ ಮನೆಗೆ ಮರಳಲು ಮನಸಾಗುವುದಿಲ್ಲ. ತನ್ನ ಆಭರಣಗಳನ್ನೆಲ್ಲ ಕಳಚಿ, ಮರವೊಂದಕ್ಕೆ ನೇತುಹಾಕುತ್ತಾಳೆ. ಅಲ್ಲಿಂದ ಹೊರಟು, ಪರಿಬ್ಬಾಜಿಕೆಯರ (ಪರಿವ್ರಾಜಿಕಾ – ಸಂಚರಿಸುತ್ತಲೇ ಇರುವ ಬಿಕ್ಖುಣಿಯರು) ಗುಂಪು ಸೇರುತ್ತಾಳೆ.
ಅತ್ಯಂತ ನಿರ್ಲಿಪ್ತಳೂ ವಿರಾಗಿಯೂ ಆಗಿ ಪರಿವರ್ತನೆಗೊಳ್ಳುವ ಕುಂಡಲಕೇಶಿಯು ತನ್ನ ಬುದ್ಧಿವಂತಿಕೆಯಿಂದಾಗಿ ಬಹಳ ಬೇಗ ಪರಿಬ್ಬಾಜಿಕೆಯರ ನಡುವೆ ಗುರುತಿಸಿಕೊಳ್ಳುತ್ತಾಳೆ. ಅವಳ ವಾದ ಸರಣಿಯೆದುರು ಗೆಲ್ಲುವವರೇ ಇಲ್ಲವಾಗುತ್ತಾರೆ. ಧರ್ಮ ಪ್ರಚಾರ ಕಾರ್ಯದಲ್ಲಿ ಆಕೆಯೊಬ್ಬಳಿದ್ದರೆ ಸಾಕು ಅನ್ನುವಷ್ಟು ಖ್ಯಾತಿ ಗಳಿಸುತ್ತಾಳೆ ಕುಂಡಲಕೇಶಿ. ಇದರಿಂದ ಹರ್ಷಗೊಂಡ ಪರಿಬ್ಬಾಜಿಕೆಯರ ಗುರು ಆಕೆಯನ್ನು ಕುರಿತು, `ತಂಗಿ, ನೀನು ಅಪ್ರತಿಮ ಜ್ಞಾನವನ್ನು ಹೊಂದಿರುವೆ. ಉತ್ತಮ ಮಾತುಗಾರಳೂ ಆಗಿರುವೆ. ಹೋಗು. ಜಂಬೂದ್ವೀಪದ ಉದ್ದಗಲ ಸುತ್ತಾಡಿ ಈ ಪನ್ನೇರಳೆ ಟೊಂಗೆಯನ್ನು ನೆಟ್ಟು ಜನರನ್ನು ವಾದಕ್ಕೆ ಆಹ್ವಾನಿಸು. ವಾದದ ಮೂಲಕ ಮಣಿಸಿ ಧರ್ಮಪ್ರಚಾರ ಮಾಡು. ನಿನಗೆ ಸೋಲೆಂಬುದೇ ಇಲ್ಲ. ಹಾಗಿದ್ದೂ ನೀನೇನಾದರೂ ಗೃಹಸ್ಥನೆದುರು ಸೋತರೆ ಆತನ ಚರಣ ದಾಸಿಯಾಗಿ ಸೇವೆ ಮಾಡಿಕೊಂಡು ಜೀವನ ಸಾಗಿಸು. ಯಾರಾದರೂ ಭಿಕ್ಷುವಿಗೆ ಸೋತರೆ ಜೀವಪರ್ಯಂತ ಆತನ ಶಿಷ್ಯೆಯಾಗಿದ್ದು ಸಾಧನೆ ಮಾಡು’ ಎನ್ನುತ್ತಾರೆ.
ಗುರು ನೀಡಿದ ಟೊಂಗೆಯನ್ನು ಹಿಡಿದುಕೊಂಡು ಕುಂಡಲಕೇಶಿ ನಾಡೆಲ್ಲ ಅಲೆಯುತ್ತಾಳೆ. ಅವಳ ವಾದದ ಪ್ರಖರತೆಯ ಅರಿವಿದ್ದವರು ಸ್ಪರ್ಧೆ ನೀಡುವ ಸಾಹಸವನ್ನೆ ಮಾಡದೆ ಶರಣಾಗುತ್ತಾರೆ. ಅವಳು ವಾದಕ್ಕೆ ಆಹ್ವಾನ ನೀಡಿ ಪನ್ನೇರಳೆ ಟೊಂಗೆಯನ್ನು ನೆಟ್ಟರೆ ಅದರ ಸುತ್ತ ನೆರೆದವರು ಆಕೆಯೇ ವಿಜಯಿಯೆಂದು ಘೋಷಿಸಿ ಉಘೇ ಕೂಗುತ್ತಾರೆ. ಹೀಗೆ ಕುಂಡಲಕೇಶಿಯು ಧಮ್ಮ ಸೇನಾನಿ ಸಾರಿಪುತ್ತನಿರುವ ಊರಿಗೆ ಬರುತ್ತಾಳೆ. ಅಲ್ಲಿ ಟೊಂಗೆಯನ್ನು ನೆಟ್ಟು ವಾದಾಹ್ವಾನ ನೀಡುತ್ತಾಳೆ.
ಎಂದಿನಂತೆ ಅದರ ಸುತ್ತ ಜನ ನೆರೆಯುತ್ತಾರೆ. ಅಲ್ಲಿಗೆ ಬರುವ ಸಾರಿಪುತ್ತರು ಅದನ್ನು ಕಂಡು, ಅಲ್ಲಿದ್ದ ಹುಡುಗರಿಗೆ ಅದನ್ನು ಕಾಲಿನಿಂದ ಹೊಸಕಲು ಹೇಳುತ್ತಾರೆ. ಆ ಹುಡುಗರು ಹಾಗೇ ಮಾಡುತ್ತಾರೆ. ವಿಷಯ ತಿಳಿದ ಕುಂಡಲಕೇಶಿಯು ಸಾರಿಪುತ್ತನ ಬಳಿ ಧಾವಿಸುತ್ತಾಳೆ. ಇಂಥಾ ಕಾರ್ಯವನ್ನು ಮಾಡಿದವರು ಸಾಧಾರಣ ಮನುಷ್ಯರಾಗಿರಲು ಸಾಧ್ಯವಿಲ್ಲವೆಂದು ಊಹಿಸುತ್ತಾಳೆ. ಸಾರಿಪುತ್ತರು ಅವಳೆಲ್ಲ ಪ್ರಶ್ನೆಗಳಿಗೂ ಸೂಕ್ತ ಉತ್ತರ ಕೊಡುತ್ತಾರೆ. ಅನಂತರ ಆಕೆಯನ್ನು ಕುರಿತು ಒಂದು ಪ್ರಶ್ನೆ ಕೇಳುತ್ತಾರೆ, `ಒಂದು ಏನನ್ನು ಸೂಚಿಸುತ್ತದೆ?’ ಎಂದು.
ಕುಂಡಲಕೇಶಿಯು ಉತ್ತರ ಕೊಡಲಾಗದೆ ಹೋಗುತ್ತಾಳೆ. ಅದರ ಉತ್ತರ ಕಂಡುಕೊಳ್ಳುವ ಸಲುವಾಗ ಭಿಕ್ಖುಣಿ ದೀಕ್ಷೆ ಸ್ವೀಕರಿಸಿ, ಸಾರಿಪುತ್ತರ ಶಿಷ್ಯೆಯಾಗುತ್ತಾಳೆ. ಸತತ ಸಾಧನೆಯಿಂದ ಉತ್ತರ ಪಡೆದು ಅರಹಂತೆಯಾಗುತ್ತಾಳೆ.