‘ದ’ ‘ದ’ ‘ದ’ ಎಂದು ಗುಡುಗಿದ ಮೋಡ ಹೇಳಿದ್ದೇನು? : ಒಂದು ಉಪನಿಷತ್ ಪಾಠ

ಯಾವುದೇ ಮಾತು ಅರ್ಥ ಪಡೆಯುವುದು ನಮ್ಮ ಮನಸ್ಸಿನಲ್ಲಿ. ಮಾತಿಗೆ ಅರ್ಥವಿರುವುದಿಲ್ಲ. ಅರ್ಥ ಹೊಮ್ಮುವುದು ನಮ್ಮ ಅಂತಃಸತ್ವದಲ್ಲಿ ಎಂದು ಸಾರುವ ಶುಕ್ಲಯಜುರ್ವೇದದ ಬೃಹದಾರಣ್ಯಕ ಉಪನಿಷತ್ತಿನ ಒಂದು ಕಥೆ | ಚೇತನಾ ತೀರ್ಥಹಳ್ಳಿ

ದೇವತೆಗಳು, ಮನುಷ್ಯರು, ಅಸುರರು ಮೂವರೂ ಪ್ರಜಾಪತಿಯ ಮಕ್ಕಳು. ಅವರು ತಮ್ಮ ತಂದೆಯಿಂದ ಏನಾದರೊಂದು ಉಪದೇಶ ಬೇಕೆಂದು ಬಯಸಿದರು.
ಅದರಂತೆ ಪ್ರಜಾಪತಿಯು ಮೋಡದ ರೂಪ ತಾಳಿ ‘ದ….ದ….ದ…’ ಎಂದು ಗುಡುಗಿದನು.

ದೇವತೆಗಳು ‘ದ’ ಎಂದರೆ ‘ದಮ್ಯತ’ ಎಂಬುದಾಗಿ ಅರ್ಥಮಾಡಿಕೊಂಡರು.
ಅವರು ಸದಾ ಸುಖಭೋಗಗಳೊಂದಿಗೆ ಸ್ವರ್ಗದಲ್ಲಿರುತ್ತಿದ್ದರು. ನಾವು ದಮನ ಮಾಡದಿದ್ದರೆ ಸ್ವರ್ಗವು ಮುಗಿದುಹೋಗುತ್ತದೆ. ಆದ್ದರಿಂದ ಇಂದ್ರಿಯನಿಗ್ರಹ ಮಾಡಿಕೊಳ್ಳಿರಿ ಎಂಬುದಾಗಿ ಪ್ರಜಾಪತಿಯ ಉಪದೇಶವನ್ನು ದೇವತೆಗಳು ಅರ್ಥೈಸಿಕೊಂಡರು.

ಮನುಷ್ಯರು ‘ದ’ ಎಂಬುದನ್ನು ‘ದತ್ತ’ ಎಂಬುದಾಗಿ ಅರ್ಥೈಸಿಕೊಂಡರು.
ಮನುಷ್ಯರು ಸದಾ ಲೋಭಿಗಳು. ದಾನದಿಂದಲೇ ನಮ್ಮ ಕಲ್ಯಾಣವಾಗುವುದು ಎಂಬುದಾಗಿ ಮನುಷ್ಯರು ಅರ್ಥಮಾಡಿಕೊಂಡರು.

ಅಸುರರು ‘ದ’ ಎಂಬುದನ್ನು ‘ದಯಧ್ವ’ ಎಂಬುದಾಗಿ ಅರ್ಥೈಸಿಕೊಂಡರು.
ಅಸುರರು ಕ್ರೂರಿಗಳು, ಹಿಂಸಕರು. ಹಿಂಸೆಯ ಪಾಪದಿಂದ ವಿಮೋಚನೆಯಾಗಬೇಕಾದರೆ ನಾವು ಸರ್ವರಲ್ಲೂ ದಯೆ ತೋರಬೇಕು ಎಂದು ಅವರು ಅರ್ಥೈಸಿಕೊಂಡರು.

ದೇವತೆಗಳು, ಮನುಷ್ಯರು ಮತ್ತು ಅಸುರರು ತಮ್ಮ ತಮ್ಮ ಚಿಂತನೆಗೆ ತಕ್ಕಂತೆ ಪ್ರಜಾಪತಿಯ ಉಪದೇಶವನ್ನು ಅರ್ಥ ಮಾಡಿಕೊಂಡರು. ನಾವೂ ಅಷ್ಟೇ. ನಮ್ಮ ಚಿಂತನೆಗೆ, ನಮ್ಮ ಅಗತ್ಯಕ್ಕೆ ತಕ್ಕಂತೆಯೇ ಮಾತನ್ನು, ಉಪದೇಶವನ್ನು ಅರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದಲೇ, ಉಪದೇಶ ನೀಡುವ ಗುರು ಒಬ್ಬನೇ ಆಗಿದ್ದರೂ ಶಿಷ್ಯರ ಗ್ರಹಿಕೆಯಲ್ಲಿ ವ್ಯತ್ಯಾಸ ಕಾಣುವುದು.

ನಾವು ಪ್ರತಿನಿತ್ಯವೂ ಹಲವರೊಂದಿಗೆ ಒಡನಾಡುತ್ತೇವೆ. ಸದ್ವಿಚಾರಗಳನ್ನು ಓದುತ್ತೇವೆ. ಸಜ್ಜನರ ಸತ್ಸಂಗ ಮಾಡುತ್ತೇವೆ. ಆಗೆಲ್ಲ ನಮಗೇನು ಬೇಕು, ನಾವೇನು ಗ್ರಹಿಸಬೇಕು ಎಂಬುದು ನಮಗೆ ಸ್ಪಷ್ಟವಿರಬೇಕು. ಇಲ್ಲವಾದರೆ ಸಂವಹನ ಮತ್ತು ಸಮಯ ಎರಡೂ ವ್ಯರ್ಥವಾಗುವುದು.

ಇಲ್ಲೊಂದು ಹಾಸ್ಯ ಕಥನ ನೆನಪಾಗುತ್ತಿದೆ.
ಒಮ್ಮೆ ರಾಜನೊಬ್ಬ ಕೊಳದಲ್ಲಿ ರಾಣಿಯರೊಡನೆ ಕ್ರೀಡಿಸುತ್ತಿದ್ದ. ನೀರೆರಚಿ ರಾಣೀಯರನ್ನು ರೇಗಿಸುತ್ತಿದ್ದ. ಪಟ್ಟದ ರಾಣಿ ಮುಖ ಮುಚ್ಚಿಕೊಳ್ಳುತ್ತಾ “ಮೋದಕೈಸ್ತಾಡಯ” ಅಂದಳು. ರಾಜ ಕೂಡಲೇ ಭಟರನ್ನು ಕಳಿಸಿ, ಮೋದಕಗಳನ್ನು ತರಿಸಿ ಅವನ್ನು ರಾಣಿಯತ್ತ ಬೀಸಿ ಹೊಡೆದ!
ವಾಸ್ತವದಲ್ಲಿ ರಾಣಿ ಹೇಳಿದ್ದು ಮಾ ಉದಕೈಃ ತಾಡಯ = ನನ್ನನ್ನು ನೀರಿನಿಂದ ಹೊಡೆಯಬೇಡ ಎಂದು. ಮೂರ್ಖ ರಾಜ ಮೋದಕೈಃ ತಾಡಯ = ಮೋದಕಗಳಿಂದ ಹೊಡೆಯಲು ಹೇಳುತ್ತಿದ್ದಾಳೆ ಅಂದುಕೊಂಡು ತನಗೆ ಹೊಳೆದ ಅರ್ಥದಂತೆ ನಡೆದುಕೊಂಡ. ಮುಂದಿನ ಪರಿಣಾಮ ನೀವು ಊಹಿಸಬಲ್ಲಿರಿ!!
ಆದ್ದರಿಂದ, ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವುದೂ ಒಂದು ವಿದ್ಯೆ. ಅಗತ್ಯಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳುವುದೂ ಒಂದು ವಿದ್ಯೆ. ಈ ವಿದ್ಯೆ ಕರಗತವಾದರೆ ಬದುಕನ್ನು ಹೆಚ್ಚು ಅರ್ಥಪೂರ್ಣವಾಗಿ ನಡೆಸಬಹುದು.

Leave a Reply