ಸೂಪ್’ನಲ್ಲಿ ಹಾವಿನ ತಲೆ ! : ಒಂದು ಝೆನ್ ಕಥೆ ~ Tea time story

ಒಂದು ದಿನ ಝೆನ್ ಆಶ್ರಮಕ್ಕೆ ಝೆನ್ ಮಾಸ್ಟರ್ ಅನಿರೀಕ್ಷಿತವಾಗಿ ಭೇಟಿ ನೀಡಿದ. ಆಶ್ರಮದ ಅಡಿಗೆಯವ ಮಾಸ್ಟರ್ ಗಾಗಿ ವಿಶೇಷ ಸೂಪ್ ತಯಾರಿಸಲು ತರಾತುರಿಯಿಂದ ಸಿದ್ಧತೆ ಮಾಡಿಕೊಳ್ಳತೊಡಗಿದ. ಅವ ಆಶ್ರಮದ ತೋಟಕ್ಕೆ ಹೋಗಿ ಗಡಿಬಿಡಿಯಿಂದ ಒಂದಿಷ್ಟು ತರಕಾರಿ ಕತ್ತರಿಸಿಕೊಂಡು ಬಂದು ರುಚಿಕಟ್ಟಾದ ಸೂಪ್ ತಯಾರಿಸಿದ.

ಮಾಸ್ಟರ್, ಅಡಿಗೆಯವ ತಯಾರಿಸಿದ ಸೂಪ್ ಖುಶಿಯಿಂದ ಸೇವಿಸತೊಡಗಿದ. ಅರ್ಧ ಸೂಪ್ ಸೇವಿಸಿದವನಿಗೆ ಅದರಲ್ಲೊಂದು ಹಾವಿನ ಕತ್ತರಿಸಿದ ತಲೆ ಕಾಣಿಸಿತು. ಮಾಸ್ಟರ್ ಸಿಟ್ಟಿನಿಂದ ಅಡಿಗೆಯವನನ್ನು ಕೂಗಿದ.

ಅಡಿಗೆಯವ ಮಾಸ್ಟರ್ ಎದುರು ಬಂದು ನಿಂತ. “ ಏನಿದು?” ಮಾಸ್ಟರ್ ಸೂಪಿನೊಳಗಿದ್ದ ಹಾವಿನ ತಲೆಯನ್ನು ಅಡಿಗೆಯವನಿಗೆ ತೋರಿಸಿ ಕೇಳಿದ.

ಸೂಪ್ ನ ಬಟ್ಟಲಲ್ಲಿ ಹಾವಿನ ತಲೆ ನೋಡುತ್ತಿದ್ದಂತೆಯೇ ಅಡಿಗೆಯವ “ ಧನ್ಯವಾದ ಮಾಸ್ಟರ್ “ ಎನ್ನುತ್ತ ಹಾವಿನ ತಲೆ ಬಾಯಿಯಲ್ಲಿ ಹಾಕಿಕೊಂಡು ನುಂಗಿ ಏನೂ ನಡೆದೇ ಇಲ್ಲ ಎಂಬಂತೆ ಗಂಭೀರವಾಗಿ ಒಂದೂ ಮಾತನಾಡದೆ ಅಡುಗೆ ಮನೆಯತ್ತ ಹೆಜ್ಜೆ ಹಾಕಿಬಿಟ್ಟ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply