ಎಂದಿನಂತೆ ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಕೂತುಕೊಂಡು ಮನೆಗೆ ಹಿಂದಿರುಗುತ್ತಿದ್ದ. ದಾರಿಯಲ್ಲಿ ಹಳೆಯ ಪರಿಚಿತನೊಬ್ಬ ಖರ್ಜೂರದ ಮರದ ಬುಡಕ್ಕೆ ಒರಗಿಕೊಂಡು ಏನನ್ನೋ ಯೋಚಿಸುತ್ತಿರುವುದು ಅವನ ಕಣ್ಣಿಗೆ ಬಿತ್ತು. ಸುಮ್ಮನಿರಲಾಗದೆ ನಸ್ರುದ್ದೀನ್ ಕತ್ತಯಿಂದ ಇಳಿದು ಅವನ ಚಿಂತೆಗೆ ಕಾರಣವೇನೆಂದು ವಿಚಾರಿಸಿದ.
“ಏನು ಮಾಡಲಿ? ರಾತ್ರಿಯೆಲ್ಲ ನಿದ್ದೆಗೆಟ್ಟು ಹುಚ್ಚು ಹಿಡಿದ ಹಾಗಾಗಿದೆ. ಮಂಚದ ಕೆಳಗೆ ದೆವ್ವ ಇದೆ ಅಂತ ನನಗೆ ಗಾಢವಾಗಿ ಅನ್ನಿಸುತ್ತದೆ.” ಅಂದ.
“ಹಾಗಾದರೆ ಊರ ಹೊರಗಿನ ಫಕೀರನ ಬಳಿ ಸಹಾಯ ಕೇಳು. ಆತ ನವಿಲುಗರಿಯಲ್ಲಿ ಗಾಳಿ ಬೀಸಿ, ಧೂಪ ಹಾಕಿ ಆ ದೆವ್ವವನ್ನು ಓಡಿಸುತ್ತಾನೆ” ಅಂತ ಸಲಹೆ ಕೊಟ್ಟ ನಸ್ರುದ್ದೀನ್.
“ಆ ಯೋಚನೆ ನನಗೆ ನೆನ್ನೆಯೇ ಬಂದು ಫಕೀರನ ಬಳಿ ಮಾತಾಡಿದೆ. ಆತ ನೂರು ದೀನಾರ್ ಕೇಳುತ್ತಿದ್ದಾನೆ” ಅಂದ ಆ ಭಯಪೀಡಿತ ಮನುಷ್ಯ.
ನಸ್ರುದ್ದೀನನಿಗೆ ಅವನ ಮೇಲೆ ಅನುಕಂಪ ಹುಟ್ಟಿತು. “ನನಗೆ ಹತ್ತು ದೀನಾರ್ ಕೊಡು ಸಾಕು, ದೆವ್ವವನ್ನು ಓಡಿಸುವ ಉಪಾಯ ಹೇಳ್ತೀನಿ” ಅಂದ.
ಕೂಡಲೇ ಆ ಮನುಷ್ಯ ತನ್ನ ಕಿಸೆಗೆ ಕೈ ಹಾಕಿ ಹತ್ತು ದೀನಾರ್ ನಸ್ರುದ್ದೀನನ ಕೈಲಿಟ್ಟು “ಉಪಾಯ ಹೇಳು ಅಂದ”.
ಆತ ಕೊಟ್ಟ ಹಣವನ್ನು ತನ್ನ ಕಿಸೆಗಿಳಿಸಿ ಕತ್ತೆಯನ್ನೇರುತ್ತಾ “ನಿನ್ನ ಮಂಚದ ಕಾಲುಗಳನ್ನು ಕತ್ತರಿಸಿಬಿಡು. ಆಗ ಅದರ ಕೆಳಗೆ ದೆವ್ವ ಸೇರಿಕೊಳ್ಳುವ ಪ್ರಮೇಯವೇ ಇಲ್ಲ” ಅಂದ ನಸ್ರುದ್ದೀನ್.