ನಾಲ್ಕು ವಿಧದ ಮನುಷ್ಯರು : ಭರ್ತೃಹರಿಯ ನೀತಿ ಶತಕ

ಏತೇ ಸತ್ಪುರುಷಾಃ ಪತಾರ್ಥಘಟಕಾಃ ಸ್ವಾರ್ಥಾನ್ಪರಿತ್ಯಜ್ಯ ಯೇ
ಸಾಮಾನ್ಯಸ್ತುಪರಾರ್ಥಮುದ್ಯಮಭೃತಃ ಸ್ವಾರ್ಥಾವಿರೋಧೇನ ಯೇ |
ತೇಮೀ ಮಾನುಷರಾಕ್ಷಸಾಃ ಪರಹಿತಂ ಸ್ವಾರ್ಥಾಯ ನಿಘ್ನಂತಿಯೇ
ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇ ನ ಜಾನೀಮಹೇ || ನೀತಿ ಶತಕ ||

ಅರ್ಥ : “ಮನುಷ್ಯರಲ್ಲಿ ನಾಲ್ಕು ವಿಧ. ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಇನ್ನೊಬ್ಬರ ಹಿತವನ್ನು ಸಾಧಿಸುವ ಸತ್ಪುರುಷರು (ಉತ್ತಮರು). ತಮ್ಮ ಹಿತಕ್ಕೆ ತೊಂದರೆ ಆಗದಂತೆ ಮತ್ತೊಬ್ಬರ ಹಿತ ಸಾಧನೆ ಮಾಡುವ ಜನ ಸಾಮಾನ್ಯರು (ಮಧ್ಯಮರು). ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಇನ್ನೊಬ್ಬರ ಹಿತವನ್ನು ಹಾಳು ಮಾಡುವ ಧೂರ್ತರು (ಅಧಮರು). ಕಾರಣವೇ ಇಲ್ಲದೆ ಇತರರ ಹಿತವನ್ನು ನಾಶ ಮಾಡುವ ಮತ್ತೊಂದು ವಿಧದವರು. ಈ ನಾಲ್ಕನೆಯವರನ್ನು ಏನೆಂದು ಕರೆಯಬೇಕು?” ಎಂದು ಭರ್ತೃಹರಿ ಕೇಳುತ್ತಿದ್ದಾನೆ.

ತ್ಪುರುಷರು ಅಂದರೆ ಒಳ್ಳೆಯ ಜನರು ಎಂದು ಅರ್ಥ. ಜನರು ಒಳ್ಳೆಯವರಾಗಲಿಕ್ಕೆ ಸಂಪತ್ತು, ಅಧಿಕಾರ ಯಾವುದೂ ಬೇಕಿಲ್ಲ. ಉತ್ತಮ ಸಂಸ್ಕಾರವಿದ್ದರೆ ಸಾಕು. ಇವರು ತಮ್ಮ ಹಿತವನ್ನು, ಸ್ವಾರ್ಥವನ್ನು ಬದಿಗೊತ್ತಿ, ಸದಾ ಮತ್ತೊಬ್ಬರ ನೆರವಿಗೆ ಧಾವಿಸುತ್ತಾ ಇರುತ್ತಾರೆ. ಇಂಥವರನ್ನು ನಾವು ‘ದೇವರಂಥ ಮನುಷ್ಯರು’ ಅನ್ನುತ್ತೇವೆ ಅಲ್ಲವೆ?

ಬಹುತೇಕ ನಮ್ಮ – ನಿಮ್ಮಂಥವರು ಎರಡನೇ ವಿಧದ ಜನಸಾಮಾನ್ಯರು. ನಾವು ತೀರಾ ರಿಸ್ಕ್ ತೆಗೆದುಕೊಂಡು ಉಪಕಾರ ಮಾಡಲು ಹೋಗುವುದಿಲ್ಲ. ನಮಗೇನೂ ನಷ್ಟವಾಗುವುದಿಲ್ಲ ಎಂದಾದರೆ ಮಾತ್ರ ಮುಂದುವರೆಯುತ್ತೇವೆ. ಇವರನ್ನು ಭರ್ತೃಹರಿ ‘ಸಾಮಾನ್ಯರು’ ಎಂದು ಕರೆದಿದ್ದಾನೆ.

ತಮ್ಮ ಕಾರ್ಯಸಾಧನೆಗಾಗಿ ಮತ್ತೊಬ್ಬರ ಕೆಲಸವನ್ನೂ ಬದುಕನ್ನೂ ಹಾಳುಗೆಡವುವರು, ಹಾನಿ ಉಂಟು ಮಾಡಲು ಹಿಂದೆಮುಂದೆ ನೋಡದವರು ಧೂರ್ತರು. ಇಂಥವರ ಕಾಟ ನಾವೂ ಕೆಲವು ಬಾರಿ ಅನುಭವಿಸಿರುತ್ತೇವೆ. ಇಂಥವರ ಸಹವಾಸ ಯಾವತ್ತಿದ್ದರೂ ಕಷ್ಟವನ್ನೆ ತರುತ್ತದೆ. ಭರ್ತೃಹರಿ ಇವರನ್ನು ‘ಮನುಷ್ಯರೂಪದ ರಾಕ್ಷಸರು’ ಎಂದು ಕರೆದಿದ್ದಾನೆ.

ಈ ಮೂರನೇ ವಿಧದವರೇ ಸಾಕಷ್ಟು ಅಪಾಯಕಾರಿ. ಆದರೆ, ಇವರಿಗಿಂತಲೂ ಅಪಾಯಕಾರಿಯಾದ ಇನ್ನೊಂದು ವಿಧವಿದೆ. ಈ ಮಂದಿ ತಮಗೆ ಉಪಯೋಗವಿಲ್ಲದೆ ಇದ್ದರೂ ಸುಖಾಸುಮ್ಮನೆ ಮತ್ತೊಬ್ಬರಿಗೆ ಕಷ್ಟ ಕೊಡುತ್ತಾರೆ, ಹಿಂಸಾವಿನೋದವನ್ನು ಅನುಭವಿಸುತ್ತಾರೆ. ವಿಕೃತ ಮನೋಭಾವದ ಈ ಮನುಷ್ಯರನ್ನು ಏನೆಂದು ಕರೆಯಬೇಕೆಂದೇ ತೋಚದೆ, “ಇವರನ್ನು ಏನೆಂದು ಕರೆಯೋಣ?” ಎಂದು ನಮ್ಮನ್ನೇ ಪ್ರಶ್ನಿಸಿದ್ದಾನೆ.  ಇಂಥವರನ್ನು ಮನುಷ್ಯರೆಂದು ಕರೆಯಲಂತೂ ಆಗದು. ಇಂಥವರಿಂದ ನಾವು ಮಾತ್ರವಲ್ಲ, ನಮ್ಮ ಮೂರು ತಲೆಮಾರು ಕೂಡಾ ದೂರ ನಿಲ್ಲುವುದು ಒಳ್ಳೆಯದು!

Leave a Reply