“ಅವರು ಕೊಂದೇಬಿಟ್ಟರೆ ಏನನ್ನಿಸುತ್ತದೆ?” ಬುದ್ಧ ಕೇಳಿದ. ಅದಕ್ಕೆ ಪೂರ್ಣ ಕೊಟ್ಟ ಉತ್ತರವೇನು ಗೊತ್ತೇ? | ಸಂಗ್ರಹ ಮತ್ತು ಅನುವಾದ : ಅಲಾವಿಕಾ
ಬುದ್ಧನಿಗೆ ಪೂರ್ಣ ಎಂಬ ಶಿಷ್ಯನಿದ್ದ. ತನ್ನ ಸಾಧನೆ ಪೂರ್ಣವಾಯಿತು ಅನ್ನಿಸಿದಾಗ ಬುದ್ಧನ ಬಳಿ ಬಂದು, “ನಿಮ್ಮ ಸಂದೇಶವನ್ನು ವಿತರಿಸಲು ಸೂಖಾದ ಕಡೆ ಹೊರಡುತ್ತೇನೆ. ಅನುಮತಿ ಕೊಡಿ” ಎಂದು ಕೇಳಿದ.
ಬಿಹಾರದಲ್ಲಿರುವ ಚಿಕ್ಕ ಊರು ‘ಸೂಖಾ’, ಬರೀ ದುಷ್ಟಜನರಿಂದ ತುಂಬಿದ್ದು, ಕುಖ್ಯಾತಿಗೆ ಒಳಗಾಗಿತ್ತು. ಪೂರ್ಣನಿಗೆ ಮೊದಲು ಯಾವ ಭಿಕ್ಷುವೂ ಅಲ್ಲಿಗೆ ಹೋಗಿರಲಿಲ್ಲ.
ಅದನ್ನು ನೆನೆದು ಬುದ್ಧ ಕೇಳಿದ, “ನೀನು ಅಲ್ಲಿಗೆ ಹೋದರೆ ಆ ಜನ ನಿನಗೆ ಕಿರುಕುಳ ಕೊಡಬಹುದು. ಹಿಂಸೆ ಮಾಡಬಹುದು. ಆಗ ನಿನಗೆ ಏನೆನ್ನಿಸುತ್ತದೆ?”
ಅದಕ್ಕೆ ಪೂರ್ಣ, “ ಅವರು ಕಿರುಕುಳ, ಹಿಂಸೆ ಕೊಡಬಹುದು; ಪ್ರಾಣ ತೆಗೆಯುವುದಿಲ್ಲವಲ್ಲ! ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿರುತ್ತೇನೆ” ಅಂದ.
“ಯಾರಾದರೂ ನಿನ್ನನ್ನು ಕೊಲ್ಲಲು ಮುಂದಾಗಬಹುದು. ಆಗ …. !?”
“ಆಗಲೂ ನನ್ನಲ್ಲಿ ಕೃತಜ್ಞ ಭಾವವೇ ಮೂಡುತ್ತದೆ. ಅವರು ಕೊಲ್ಲಲು ಮುಂದಾಗಬಹುದು, ಆದರೆ ಕೊಂದಿರುವುದಿಲ್ಲವಲ್ಲ!”
“ಕೊನೆಯದಾಗಿ ಕೇಳುತ್ತೇನೆ. ಅವರು ಕೊಂದೇಬಿಡುವರು ಎಂದಿಟ್ಟುಕೋ. ಆಗ ಏನನ್ನಿಸುತ್ತದೆ?”
ಆಗ ಪೂರ್ಣ “ಆಗಲೂ ನಾನು ಕೃತಜ್ಞನಾಗಿಯೇ ಇರುತ್ತೇನೆ. ಅವರು ನನ್ನನ್ನು ಕೊಂದು, ನನ್ನಿಂದ ಮುಂದೆ ನಡೆಯಬಹುದಾದ ತಪ್ಪುಗಳಿಂದ ಬಿಡುಗಡೆಗೊಳಿಸಿರುತ್ತಾರೆ. ಹಾಗಾಗಿ ಅದನ್ನೂ ಅವರ ಕೃಪೆ ಎಂದೇ ಭಾವಿಸುತ್ತೇನೆ” ಎಂದು ಉತ್ತರಿಸಿದ.
ಬುದ್ಧನಿಗೆ ಖುಷಿಯಾಯಿತು. “ಈಗ ನೀನು ಎಲ್ಲಿಗೆ ಬೇಕಾದರೂ ಹೋಗಬಹುದು. ನಿನಗೆ ಈ ಭೂಮಂಡಲದಲ್ಲಿ ಎಲ್ಲರೂ ಬಂಧುಗಳೇ ಆಗಿದ್ದಾರೆ. ಇಂತಹ ಮನಸ್ಥಿತಿಯುಳ್ಳವನಿಗೆ ಭೂಮಿಯ ಮೇಲೆ ಕೆಡುಕೇ ಕಾಣಸಿಗದು” ಎಂದು ಮನದುಂಬಿ ಹಾರೈಸಿದ.