ತೋರುಗಾಣಿಕೆ ದುರಂತವನ್ನೇ ತರುವುದು : ಬೆಳಗಿನ ಹೊಳಹು

ತೋರಿಕೆಯ, ಢಾಂಬಿಕ ಭಕ್ತಿ ಸೃಷ್ಟಿಸುವ ಅನಾಹುತಗಳನ್ನು ಬಸವಣ್ಣನವರು ಈ ವಚನದ ಮೂಲಕ ಹೇಳಿದ್ದಾರೆ…

basava

ತಾಮಸದ ಮುಸುಕು ಕಂಗಳ ಕೆಡಿಸಿತ್ತೆನ್ನ ಭಕ್ತಿ
ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ ಭಕ್ತಿ
ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ ಭಕ್ತಿ
ಇದಿರನಾಶ್ರಯಿಸಲು ಹೋಯಿತ್ತೆನ್ನ ಭಕ್ತಿ
ಹೆಣಮೂಲ ನಾನು ಕೂಡಲ ಸಂಗಮದೇವ
ಕ್ಷಣ ಹದುಳವಿರದೆ ಬಾಯ ಟೊಣೆದು ಹೋಯಿತ್ತೆನ್ನ ಭಕ್ತಿ | ಬಸವಣ್ಣ |

ಭಾವಾರ್ಥ :  ಜ್ಞಾನರಹಿತವಾದ ಭಕ್ತಿಯು ಮೂಢಭಕ್ತಿ ಎನಿಸಿಕೊಳ್ಳುವುದಲ್ಲದೆ ಏನೆಲ್ಲ ಅನರ್ಥಕ್ಕೆ ಕಾರಣವಾಗುವುದು. ಅಜ್ಞಾನದಿಂದ ಆವೃತವಾದ ಭಕ್ತಿಯು ಕಾಮಾಗ್ನಿಗೆ ದೂಡುವುದಲ್ಲದೆ ಹೊಟ್ಟೆಪಾಡಿಗಾಗಿ ಸದಾ ಕುದಿವಂತೆ ಮಾಡುವುದು. ಅಧ್ಯಾತ್ಮಕ್ಕೆ ವಿರುದ್ಧವಾದ ಲೌಕಿಕವನ್ನು ಆಶ್ರಯಿಸುವಂತೆ ಮಾಡುವ ಅಜ್ಞಾನವು ನಮ್ಮನ್ನು ಜಡಜೀವಿಯಾಗಿಸಿರುವುದಷ್ಟೇ ಅಲ್ಲ ಒಂದು ಕ್ಷಣವೂ ಕ್ಷೇಮದಿಂದಿರಲು ಬಿಡದೆ ಪದೇಪದೆ ಅಪಮಾನಿಸುತ್ತಿದೆ.

ಈ ವಚನದಲ್ಲಿ ಬಸವಣ್ಣನವರು ತೋರುಗಾಣಕೆಯ ಭಕ್ತಿಯ ಕುರಿತು ಹೇಳಿದ್ದಾರೆ. ತಮ್ಮನ್ನು ಯೋಗ್ಯರನ್ನಾಗಿ ತೋರಿಸಿಕೊಳ್ಳಲು, ಇತರರ ಮೆಚ್ಚುಗೆ ಪಡೆಯಲು, ಹಣ ಅಥವಾ ಇತರ ಸವಲತ್ತುಗಳ ಲಾಭ ಮಾಡಿಕೊಳ್ಳಲು ಕೆಲವರು ಭಕ್ತಿಯನ್ನು ನಟಿಸುತ್ತಾರೆ. ಇನ್ನೂ ಕೆಲವರಿಗೆ ಅದೊಂದು ವ್ಯಸನವಾಗಿಬಿಟ್ಟಿರುತ್ತದೆ. ಮತ್ತೆ ಕೆಲವರಿಗೆ ತಾವು ಯಾವುದರಲ್ಲಿ / ಯಾರಲ್ಲಿ ಭಕ್ತಿ ಇಟ್ಟಿರುತ್ತಾರೋ ಅದರ ಬಗ್ಗೆ ಅರಿವು ಇರುವುದೇ ಇಲ್ಲ. ಅವರ ಭಕ್ತಿ ಪ್ರಾಮಾಣಿಕವಾಗಿದ್ದರೂ ಮೌಢ್ಯತೆಯಿಂದ ಕೂಡಿರುತ್ತದೆ.

ಇಂಥಾ ತೋರಿಕೆಯ ಭಕ್ತಿಯು ವ್ಯಕ್ತಿಯಲ್ಲಿ ಮೊದಲು ಅಹಂಕಾರವನ್ನು ಹುಟ್ಟಿಸುತ್ತದೆ. ಅಹಂಕಾರ ಮತ್ತು ಅಜ್ಞಾನಗಳು ಪರಸ್ಪರ ಪೂರಕವಾಗಿರುತ್ತವೆ. ಇವು ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭಾದಿಗಳಿಗೆ ಕಾರಣವಾಗುತ್ತವೆ; ಮತ್ತು ಚೈತನ್ಯವನ್ನು ಚಿವುಟಿ ಹಾಕಿ ಜಡಜೀವಿಗಳನ್ನಾಗಿ ಮಾಡುತ್ತವೆ. 

ಭಕ್ತಿಯ ವಿಚಾರದಲ್ಲಿ ಬಸವಣ್ಣನವರು ಇದನ್ನು ಹೇಳಿದ್ದರೂ ನಾವು ಇತರ ವಿಷಯಗಳಿಗೂ ಇದನ್ನು ಅನ್ವಯಿಸಿಕೊಂಡು ನೋಡಬಹುದು. ನಾವು ಪ್ರತಿಯೊಂದೂ ಗೊತ್ತಿರುವಂತೆ ಬೀಗುತ್ತೇವೆ. ನಮ್ಮ ಕೈಯಲ್ಲಿನ ಸ್ಮಾರ್ಟ್ ಫೋನ್’ಗಳು ನಮಗೆ ಮಾಹಿತಿಯ ಆಕರವಾಗಿದೆ. ಅದನ್ನೇ ಜ್ಞಾನವೆಂದು ತಿಳಿಯುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳನ್ನೇ ಪ್ರಶಸ್ತಿಗಳೆಂದು ಭಾವಿಸುತ್ತೇವೆ. ಈ ಅಹಂಕಾರದಲ್ಲಿ ನಿಜವಾದ ಜ್ಞಾನವನ್ನು ನಾವು ಒಳಗೆ ಬಿಟ್ಟುಕೊಳ್ಳುವುದೇ ಇಲ್ಲ. ಪರಿಣಾಮವಾಗಿ ನಾವು ಪ್ರತಿನಿತ್ಯವೂ ಹೆಚ್ಚುಹೆಚ್ಚು ಮೆಚ್ಚುಗೆ ಗಳಿಸುವ ತಲುಬಿಗೆ ಬೀಳುತ್ತೇವೆ. ಇದರಿಂದ ಉಂಟಾಗುವ ಅನರ್ಥಗಳು ಒಂದೆರಡಲ್ಲ!

ಇದು ಕೇವಲ ಒಂದು ಅನ್ವಯ ಉದಾಹರಣೆಯಷ್ಟೆ. ಬಸವಣ್ಣನವರ ವಚನದ ಅಂತರಾರ್ಥವನ್ನು ಗ್ರಹಿಸಿದರೆ, ನಾವು ದೈನಂದಿನ ಬದುಕಿನಲ್ಲಿ ಮಾಡುವ ತಪ್ಪುಗಳು ನಮಗೆ ಅರಿವಾಗುತ್ತವೆ. ಮತ್ತು ಈ ಅರಿವು ನಮ್ಮನ್ನು ಪ್ರಮಾದಗಳಿಂದ ರಕ್ಷಿಸುತ್ತದೆ. 

: ಸಾ.ಹಿರಣ್ಮಯೀ

Leave a Reply