‘ಶತಾವರಿ’ ತಾವೋಯಿಸಂ ~ ತಾವೋ ಅಗಣಿತ ಸ್ವರೂಪದ 101 ದಾರಿಗಳು

nangali.jpgಒಂದೇ ಮತ, ಒಂದೇ ಧರ್ಮ ಎಂಬ ಏಕಾಂತ ದೃಷ್ಟಿಗೆ ಬದ್ಧವಾಗದೆ, ಮುಕ್ತವಾದ ಮನಸ್ಸಿನ ಅನೇಕಾಂತ ದಾರಿಗಳ ತೆರೆದಬಾಗಿಲೇ ತಾವೋಮಾರ್ಗ ಅಥವಾ ತಾವೋಯಿಸಂ. ತಾವೋಯಿಸಂ ಹೃದಯಪೂರ್ವಕವಾಗಿ ಬದುಕುವ ಬಗೆಯನ್ನು ವ್ಯಕ್ತಿಗೆ ಕಲಿಸುವುದು. ಯಾರನ್ನೂ ಯಾವುದನ್ನೂ ಕುರುಡಾಗಿ ಅನುಸರಿಸದೆ ಕಣ್ಣು ತೆರೆದು ಎಚ್ಚರದಿಂದ ನಡೆಯಬೇಕೆಂದು ಹೇಳುವುದು ~ ಚಂದ್ರಶೇಖರ ನಂಗಲಿ

ಸಾಹಿತ್ಯ ಲೋಕದಲ್ಲಿ ‘ಶತಕ’ ಎಂಬ ಪ್ರಕಾರವಿದೆ. ಯಾವುದಾದರೊಂದು ಛಂದೋ ಪ್ರಕಾರದಲ್ಲಿ ಕವಿಯೊಬ್ಬ ನೂರಕ್ಕೂ ಮೇಲ್ಪಟ್ಟು ಪದ್ಯರಚನೆ ಮಾಡಿದರೆ ಅದನ್ನು ‘ಶತಕ’ ಎಂದು ಕರೆಯಬಹುದು. ಶತಕ (ನೂರು) ಸಾಹಿತ್ಯಕ್ಕೆ ನಿರ್ದಿಷ್ಟ ಸಂಖ್ಯಾಮಿತಿಯಿಲ್ಲ. ನೂರಕ್ಕೂ ಮೇಲ್ಪಟ್ಟ ರಚನೆ ಎಂದರ್ಥ! ‘ನೂರೊಂದು’ ಮತ್ತು ‘ನೂರಾರು’ ಎಂಬ ರೂಢಿಮಾತುಗಳಿಗೂ ಸಂಖ್ಯಾಮಿತಿಯಿಲ್ಲ. ಅಗಣಿತ ಸಂಖ್ಯಾ ಬಲದ ಸೂಚನೆಯಾಗಿಯೂ ಈ ಶಬ್ದಗಳ ಬಳಕೆಯಿದೆ. ಇದೇ ಮಾದರಿಯಲ್ಲಿ ‘101 ತಾವೋಯಿಸಂ’ – ಎಂಬ ಮಾತು ರೂಢಿಗತವಾಗಿದೆ. ತಾವೋ ಮಾರ್ಗದಲ್ಲಿ ಅಗಣಿತ ಸ್ವರೂಪದ ‘ನೂರೊಂದು’ ದಾರಿಗಳಿವೆ ಎಂದರ್ಥ!

ಒಂದೇ ಮತ, ಒಂದೇ ಧರ್ಮ ಎಂಬ ಏಕಾಂತ ದೃಷ್ಟಿಗೆ ಬದ್ಧವಾಗದೆ, ಮುಕ್ತವಾದ ಮನಸ್ಸಿನ ಅನೇಕಾಂತ ದಾರಿಗಳ ತೆರೆದಬಾಗಿಲೇ ತಾವೋಮಾರ್ಗ ಅಥವಾ ತಾವೋಯಿಸಂ. ಇಂಗ್ಲಿಷ್ ನಲ್ಲಿರುವ ‘101 Taoism’ ಎಂಬ ನುಡಿಗಟ್ಟನ್ನು ನಾನು ‘ಶತಾವರಿ ತಾವೋ ಮಾರ್ಗ’ ಎಂದು ಪುನರ್ ಸೃಷ್ಟಿಸಿದ್ದೇನೆ. ‘ಹಲವು ಮಕ್ಕಳ ತಾಯಿ’ ಎಂಬ ಅಮೂಲ್ಯ ಗಿಡಮೂಲಿಕೆಯ ಬಳ್ಳಿಗೆ ‘ಶತಾವರಿ’ ಎಂದು ಕರೆಯುತ್ತಾರೆ. ಅಗಣಿತ ಶಾಖೋಪಶಾಖೆಗಳಿಗೆ ಪ್ರತೀಕವಾದ ‘ಶತಾವರಿ’ಬಳ್ಳಿಯನ್ನೇ ರೂಪಕಮಾಡಿ ‘ಶತಾವರಿ ತಾವೋಮಾರ್ಗ’ ಎಂದು ನಾನಿಲ್ಲಿ ಬಳಸಿದ್ದೇನೆ. ಇದನ್ನು ‘ತರಾವರಿ ತಾವೋಯಿಸಂ’ ಎಂದು ಕರೆದರೂ ತಪ್ಪಿಲ್ಲ.

ಒಂದೇ ಮತ, ಒಂದೇ ಧರ್ಮ ಎಂಬ ಜಡದೃಷ್ಟಿಯನ್ನು ನಿರಾಕರಿಸುವ ‘ತಾವೋಯಿಸಂ’ ಇಂದಿನ ಮತಾಂಧ ಮತ್ತು ಧರ್ಮಾಂಧ ಜಗತ್ತೆಂಬ ಕೆಸರಿನ ಪಾಲಿಗೆ ಕಮಲ. “ಈ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪುಕಟ್ಟಿ ಜಗಳ ಹಚ್ಚುವಂತಾಗಬಾರದು”(ಕುವೆಂಪು)
– ಎಂಬುದೇ ತಾವೋಮಾರ್ಗದ ನಿಲುವು.

ತಾವೋ ಎಂಬ ನಿಸರ್ಗಮಾರ್ಗ
ಮತಧರ್ಮಗಳು ಮತ್ತು ಮಠಮಂದಿರಗಳ ಗೊಡವೆಗೆ ಹೋಗದೆ, ತನ್ನ ಉಸಿರಾಟದ ಲಯಗಳನ್ನೇ ತಾನು ನಚ್ಚಿಕೊಂಡು, ಬಾಳಿನ ವಿಸ್ಮಯಗಳನ್ನು ಅಪ್ಪಿಕೊಂಡು, ಸರಳತೆಯಲ್ಲೇ ಸಂತೋಷವನ್ನು ಅನುಭವಿಸುವ ನಿಸರ್ಗ ಮಾರ್ಗವೇ ‘ತಾವೋಯಿಸಂ’ ! ಕೆಲವರು ಮಾತಾಡುತ್ತಾ “ನನಗೆ ಟೈಮೇ ಇಲ್ಲ” ಎನ್ನುತ್ತಾರೆ. ಈ ಮಾತನ್ನು ತಾವೋಯಿಸಂ ಒಪ್ಪುವುದಿಲ್ಲ! ಏಕೆಂದರೆ ಮಣ್ಣು ನೀರು ಗಾಳಿ ಬೆಳಕು ಆಕಾಶದಂತೆ ‘ಕಾಲ’ವು (ಟೈಮ್) ನಿಸರ್ಗನಿರ್ಮಿತವಲ್ಲ. ಟೈಮ್ ಎಂಬುದು ಮನುಷ್ಯನಿರ್ಮಿತ ಪರಿಕಲ್ಪನೆ. ತನ್ನದೇ ನಿರ್ಮಾಣವನ್ನು ಕುರಿತು ಟೈಮ್ ಎಂಬುದು ತನಗಿಲ್ಲವೆಂದು ಹೇಳುವುದು ಸರಿಯಲ್ಲ! ಆದ್ದರಿಂದ ನಿಸರ್ಗನಿರ್ಮಿತ ಮತ್ತು ಮಾನವನಿರ್ಮಿತಗಳ ವ್ಯತ್ಯಾಸವು ಯಾರಿಗೆ ಗೋಚರಿಸುವುದೋ ಅವರೆಲ್ಲಾ
ತಾವೋಮಾರ್ಗಿಗಳೆಂದೇ ತಿಳಿಯುವುದು.

ಸೂತ್ರರಾಹಿತ್ಯದ ತಾವೋಮಾರ್ಗ
ತಾವೋಯಿಸಂ ಕುರಿತು ಬಹುಜನರಿಗೆ ಉಂಟಾಗುವ ಗೊಂದಲಕ್ಕೆ ಮುಖ್ಯ ಕಾರಣವೆಂದರೆ, ಅದಕ್ಕೊಂದು ಸಿದ್ಧ ಸೂತ್ರಗಳು ಮತ್ತು ಲಕ್ಷಣನಿರ್ವಚನಗಳು ಇಲ್ಲದಿರುವುದು. ಇಂದು ಪ್ರತಿಷ್ಠಿತ ಶಕ್ತಿಯ ಅನೇಕ ಮತಧರ್ಮಗಳು, ಉಪದೇಶಾತ್ಮಕ ಬರಹಗಳು ಮತ್ತು ತತ್ವಶಾಸ್ತ್ರೀಯ ಅನುಸಂಧಾನಗಳನ್ನು ನಿರ್ದೇಶಿಸುತ್ತಿವೆ.

ತಾವೋಯಿಸಂ ಮಾಮೂಲು ಧರ್ಮಗಳಂತೆ ಉಪದೇಶ,ನೀತಿಬೋಧೆ, ತತ್ವಶಾಸ್ತ್ರದ ಕಕ್ಷೆಯಲ್ಲಿ ಪರಿಭ್ರಮಣ ಮಾಡುವುದಿಲ್ಲ. ತಾವೋಮಾರ್ಗದ ಆರಂಭವೇ ಸತ್ಯಶೋಧನೆ. ತಾವೋ…. ವಿವರಣೆಯ ಪಂಜರಕ್ಕೆ ಸಿಕ್ಕುವುದಿಲ್ಲ. ತಾವೋ ಅಥವಾ ದಾವೋ ಎಂದರೆ ದಾರಿ ಎಂದರ್ಥ! ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದಾರಿಯನ್ನು ತಾನೇ ಕಂಡುಕೊಳ್ಳುವುದರ ಕಡೆಗೆ ಹೆಚ್ಚು ಗಮನ ಹರಿಸುವುದು ಇದರ ವೈಶಿಷ್ಟ್ಯ! ವ್ಯಕ್ತಿವಿಶಿಷ್ಟ ದಾರಿಯನ್ನು ಕಂಡುಕೊಳ್ಳಲು ಬಹುಜನರಿಗೆ ಕ್ಲಿಷ್ಟಕರವಾದುದು !ಯಾವುದಾದರೊಂದು ಸಿದ್ಧವಿವರಣೆಯ ಮೋಹಕ್ಕೊಳಗಾಗಿ ತೃಪ್ತಿಕರವಾದ ನಿರೂಪಣೆಯನ್ನು ಬಯಸುವ ಬಹುಜನರ ಚಿತ್ತಕ್ಕೆ ತಾವೋಯಿಸಂ ನ ಸೂತ್ರರಾಹಿತ್ಯವು ಅಪಥ್ಯ!

ಮೂರುಹೆಜ್ಜೆಗಳ ತಾವೋಯಿಸಂ
ಮಹಾವಿಷ್ಣುವು ವಾಮನಾವತಾರದಲ್ಲಿ ಬಲಿಯಿಂದ ಕೇಳಿ ಪಡೆದ ಭೂಮಿಯನ್ನು
ಮೂರುಹೆಜ್ಜೆಗಳಲ್ಲಿ ಅಳತೆ ಹಾಕಿದಂತೆ, ತಾವೋಯಿಸಂ ಅನ್ನು ಮೂರು ಹೆಜ್ಜೆಯಿಂದ ವಿವರಿಸುವ ಪ್ರಯತ್ನವಿದೆ:
1. ಬದುಕನ್ನು ಹೇಗಿದೆಯೋ ಹಾಗೆ ಒಪ್ಪಿಕೋ ಮತ್ತು ಅಪ್ಪಿಕೋ !
2. ನಿನ್ನ ಉಸಿರಾಟದ ಲಯವನ್ನು ಅನುಸರಿಸು ಮತ್ತು ಮನಸ್ಸಿನ ಶಾಂತಿಯನ್ನು ಕಂಡುಕೋ !
3.  ನಿನ್ನ ಮುಖದಲ್ಲಿ ನಗೆಯ ಬಾಗಿಲನ್ನು ಸದಾ ತೆರೆದಿರು ; ಬದುಕಿನ ಅನಂತ ಸಾಧ್ಯತೆಗಳ ಶಕ್ತಿಯನ್ನು ಪಡೆದುಕೋ !
ಈ ಮೂರು ಮಿಂಚುನುಡಿಗಳ ಊರೆಗೋಲು ತಾವೋಯಿಸಂ ಕುರಿತು ಗ್ರಹಿಸಲು ನೆರವಾಗಬಹುದು. 

st,small,215x235-pad,210x230,f8f8f8.lite-1u2

ತಾವೋಯಿಸಂ ಎಂದರೆ ಯಾವುದೇ ವಸ್ತು ಅಥವಾ ಜೀವಿಯ ಇರುವಿಕೆಯನ್ನು ಸುಮ್ಮನೆ ಒಪ್ಪಿಕೊಳ್ಳುವುದು ಎಂದರ್ಥ. ಜೀವನವನ್ನು ಬದುಕುವುದು ಮತ್ತು ನೀನು ಯಾರು? ಎಂದು ಅರಿತು ಕೊಳ್ಳುವುದು ಬಹುಮುಖ್ಯ ! 
ನಿನ್ನ ಪ್ರಕೃತಿಯೆಂಬುದು ನಿತ್ಯ ಪರಿವರ್ತನಶೀಲವಾದುದು ಮತ್ತು ಎಂದೆಂದಿಗೂ ಹಾಗೆಯೇ ಆಗುವಂತಹುದು. ಬಾಳಿನ ವೈವಿಧ್ಯಮಯ ವೈರುಧ್ಯಗಳನ್ನು ಪರಿಹರಿಸಲು ಬಗೆಯದೆ, ನಿನ್ನ ಪ್ರಕೃತಿಯನ್ನು ಒಪ್ಪಿಕೊಂಡು ಬಾಳುವ ಕಡೆಗೆ ಗಮನಹರಿಸು.
ತಾವೋಯಿಸಂ ಪ್ರಕಾರ ಒಬ್ಬ ವ್ಯಕ್ತಿ ಜೀವನಪ್ರವಾಹದಲ್ಲಿ ನೀರಿನಂತೆ ಹರಿಯಲು ಕಲಿಯಬೇಕು. ಯುಗಯಾತ್ರೀಯಾಗಿ ಹರಿಯುತ್ತಾ ಬಂದಿರುವ ತಾವೋಯಿಸಂ ಬಹುಜನರ ಪಾಲಿಗೆ ಬಹುವಿಧವಾಗಿ ಸಂಭವಿಸುತ್ತಾ ಬಂದಿರುವ ಬಹುಸತ್ಯದ ಅಭಿವ್ಯಕ್ತಿಯಾಗಿದೆ. ಶತಾವರಿ ವೈವಿಧ್ಯಗಳು ತಾವೋಯಿಸಂ ಅನುಷ್ಠಾನದಲ್ಲಿ ಮೂಡಿಬಂದಿವೆ. ಈ ಅನುಷ್ಠಾನದಲ್ಲಿ ಕೆಲವು ತತ್ವಶಾಸ್ತ್ರೀಯವೆನಿಸಿಕೊಂಡರೆ ಇನ್ನು ಕೆಲವು ಮತಧರ್ಮೀಯವೆನಿಸಿಕೊಂಡಿವೆ.

ವ್ಯಕ್ತಿಯ ಅಂತರ್ ಪ್ರಕೃತಿಗೆ ಯಾವುದಾದರೊಂದು ಹಣೆಪಟ್ಟಿಯನ್ನು ಹಚ್ಚಲು ನಿರಾಕರಿಸುವ ತಾವೋಯಿಸಂ ಮಾನವಸ್ವಭಾವದ ಅನಂತ ಸಾಧ್ಯತೆಗಳನ್ನು ಪರಿಮಿತಗೊಳಿಸಲು ಇಚ್ಛಿಸುವುದಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಹಲವು ಸತ್ಯಗಳಿಂದ ಬೆಸೆಯಲ್ಪಟ್ಟವರು ಎಂದು ತಾವೋಯಿಸಂ ಭಾವಿಸುತ್ತದೆ. ತಾವೋಯಿಸಂ ಕಲಿಸುವ ಸತ್ಯವೇನೆಂದರೆ ವ್ಯಕ್ತಿಯನ್ನು ಬೆಂಬಲಿಸುವ ಕ್ರಿಯೆಗಳ ಮೂಲಕ ಬದುಕನ್ನು ಅಪ್ಪಿಕೊಳ್ಳುವುದಷ್ಟೆ!

ತಾವೋಯಿಸಂ ಹೃದಯಪೂರ್ವಕವಾಗಿ ಬದುಕುವ ಬಗೆಯನ್ನು ವ್ಯಕ್ತಿಗೆ ಕಲಿಸುವುದು. ಯಾರನ್ನೂ ಯಾವುದನ್ನೂ ಕುರುಡಾಗಿ ಅನುಸರಿಸದೆ ಕಣ್ಣು ತೆರೆದು ಎಚ್ಚರದಿಂದ ನಡೆಯಬೇಕೆಂದು ಹೇಳುವುದು.
ಮೊದಲು ನಿನಗೆ ನೀನು ನಿಜವಾಗು, ನಿನಗೆ ಹೇಗೆ ತೋಚುವುದೋ ಹಾಗೆ ಜಗತ್ತಿನ ಜೊತೆ ಅನುಸಂಧಾನಿಸು, ನಿನ್ನ ಪ್ರಕೃತಿಯಿಂದ ಹೊರತಾದವರ ಜೊತೆ ಹೃದಯಕ್ಕೆ ವಿರುದ್ಧವಾಗದಂತೆ ಅನುಸಂಧಾನಿಸು. ನಿನ್ನನ್ನು ಮತ್ತು ನಿನ್ನ ನಿಜಪ್ರಕೃತಿಯನ್ನು ಒಪ್ಪಿಕೊಳ್ಳಲಾರದವರ ಜೊತೆಗೆ ಯಾವುದೇ ಕ್ರಿಯೆಯ ಅಗತ್ಯವೂ ಇರುವುದಿಲ್ಲ. ಅವರ ಪಾಡಿಗೆ ಅವರನ್ನು ಬಿಟ್ಟು ಬಿಡು ; ಅವರನ್ನು ಬದಲಾಯಿಸಲು ಹೋಗದೆ, ನಿನ್ನೊಂದಿಗೆ ನೀನು ಇದ್ದುಬಿಡು. ಯಾವುದನ್ನೂ ಸ್ವಾಧೀನಮಾಡಿಕೊಳ್ಳುವ ಬುದ್ಧಿ ಬೇಡ ! ನಿನ್ನ ಪ್ರಕೃತಿಗೆ ವಿರುದ್ಧವಾದದ್ದು ನಿನ್ನಿಂದ ಹರಿದು ಹೋಗಲು ಅನುವಾಗುವ ಪಾತ್ರದಂತೆ ನೀನಿರು ! ನಿನ್ನ ಮನಸ್ಸು , ದೇಹ , ಚೈತನ್ಯಗಳು ಸದಾ ಶಕ್ತಿಯುತವಾಗಿರಲು ತಕ್ಕರೀತಿಯ ಕಾರ್ಯಮಗ್ನತೆಯನ್ನು ಶೋಧಿಸುತ್ತಿರು. ನಿನ್ನ ಚೈತನ್ಯಕರವಾದ ಕ್ರಿಯೆಗಳ ಬೆಂಬಲದಿಂದ ಆ ಕ್ಷಣದ ಅಗತ್ಯಗಳು ಪೂರೈಸಲಿ.

ನಿನ್ನೆ > ಇಂದು > ನಾಳೆಯ ಕ್ರಿಯೆಗಳಲ್ಲಿ ಏಕರೂಪತೆ ಇರಬಾರದು. ಏಕರೂಪಾತ್ಮಕ ಕ್ರಿಯೆಗಳು ನಿನ್ನ ಬಾಳನ್ನು ಏಕತಾನತೆಯತ್ತ ತಳ್ಳುತ್ತವೆ. ಬದುಕು ಯಾಂತ್ರಿಕವಾಗುತ್ತದೆ. ಆದ್ದರಿಂದ ನಿನ್ನ ಕ್ರಿಯೆಗಳಲ್ಲಿ ವೈವಿಧ್ಯತೆಯಿರಲಿ!
ಕ್ರಿಯೆಗಳಲ್ಲಿನ ಸ್ಥಿತ್ಯಂತರಗಳು ನಿನ್ನನ್ನು ಕ್ರಿಯಾಶೀಲ ಗೊಳಿಸುತ್ತವೆ. ನಿಸರ್ಗಮುಖಿಯಾದ ಕಾಲ್ನಡಿಗೆಯ ತಿರುಗಾಟಗಳು, ಅರಣ್ಯ ಚಾರಣ, ನದಿ ಜಲಪಾತಗಳಲ್ಲಿ ಸ್ನಾನ, ಪಕ್ಷಿ ವೀಕ್ಷಣೆ, ಪರ್ವತಾರೋಹಣ, ಸಮುದ್ರ ದರ್ಶನ, ಹಳ್ಳಿಗಾಡುಗಳಲ್ಲಿ ವಾಸ್ತವ್ಯ , ಧ್ಯಾನಮಗ್ನತೆ, ಅಧ್ಯಯನ, ಸಂಗೀತ ಕೇಳಿ, ನೃತ್ಯ ನಾಟಕ ಜಾನಪದ ರಂಗಭೂಮಿ ಸಿನೆಮಾ ವೀಕ್ಷಣೆ, ಗಿಡಗಳೊಡನೆ ಸೋದರ ಸ್ನೇಹ, ತೋಟದ ನಿರ್ವಹಣೆ, ಮೂಕಪ್ರಾಣಿಪಕ್ಷಿಗಳ ಒಡನಾಟ, ಅಡುಗೆ ಮಾಡುವುದು, ಮಕ್ಕಳೊಡನೆ ಮಗುವಾಗುವುದು –
ಇವೆಲ್ಲಾ ಕೆಲವು ಉದಾಹರಣೆಗಳು ಮಾತ್ರ. ಸೋಮಾರಿಯಾಗಿ ಕಾಲಕಳೆಯದೆ, ಹಗಲುನಿದ್ದೆ ಮಾಡದೆ ಪ್ರತಿಯೊಂದು ಕ್ಷಣವನ್ನು ಸೃಜನಶೀಲವಾಗಿ ಕಳೆಯುವ ಬಗೆಗಳನ್ನು ಸಾಧ್ಯವಾಗಿಸಿಕೋ !

ನಿನ್ನ ಗಟ್ಟಿಯಾದ ಭಾವನೆಗಳು ಮತ್ತು ಆಂತರಿಕ ಚೋದನೆಗಳನ್ನು ಆಧರಿಸಿದ ತಾವೋಯಿಸಂ ನಿನ್ನನ್ನು ಮತ್ತು ಜಗತ್ತನ್ನು ಅರಿತುಕೊಳ್ಳಲು ನೆರವಾಗುವುದು. ಕಾಲಪ್ರಜ್ಞೆಯನ್ನು ತೊರೆದುಬಿಡು. ನಿರಾಳವಾಗಿರು. ನಿನ್ನ ಸುತ್ತಣ ಜಗತ್ತಿನಲ್ಲಿ ಇಣುಕಿ ನೋಡುತ್ತಿರು. ತಾವೋಯಿಸಂ ಗೆ ನಿರ್ದಿಷ್ಟವಾದ ಪೂರ್ವಸಿದ್ಧ ಯೋಜನೆಗಳಿಲ್ಲ. ಉಸಿರಾಟದ ಲಯಗಳ ನಡುವೆ ನಿಲುಗಡೆಗಳನ್ನು ಕಂಡುಕೋ ! ನಿನ್ನ ಪ್ರತಿಯೊಂದು ಹೆಜ್ಜೆಯೂ ನಿನ್ನ ಬಾಳಿನ ಸುದೀರ್ಘವಾದ ಪಯಣಕ್ಕೆ ಕಲ್ಪಿಸಿದ ಬೆಂಬಲವೆಂದು ತಿಳಿದುಕೋ ! ನಗು ನಗುತಾ ನಲಿ ನಲೀ ! ಏನೇ ಆಗಲೀ! ನಗೆಯು ಅನಂತ ಸಾಧ್ಯತೆಗಳ ಹೆಬ್ಬಾಗಿಲು. ಇದನ್ನು ಸದಾ ತೆರೆದಿರು ! ನಿರೀಕ್ಷೆಗಳ ಹೆಣಭಾರದಲ್ಲಿ ಕುಸಿದುಹೋಗಬೇಡ ! ಅತ್ಯಂತ ಸರಳವಾದ ಈ ದಾರಿಯೇ ನಿನ್ನನ್ನು ಬದುಕಿನ ಆಳ ಆಳಕ್ಕೆ ತಲುಪಿಸುವುದು.
ಕಲಿಯುವ ಪ್ರಕ್ರಿಯೆಯಲ್ಲೇ ಗುಣಮುಖ ಆಗುವ ಪ್ರಕ್ರಿಯೆಯೂ ಇದೆ. ಗುಣಮುಖ ಆಗಲು ಬೇಕಾದಷ್ಟು ಕಾಲವನ್ನು ತೆಗೆದುಕೋ ! ಅವಸರವು ಅಪಾಯಕಾರಿ ! ನಿನ್ನನ್ನು ನೀನು ಘಾತಿಸಿಕೊಳ್ಳಬೇಡ ! ನಿನ್ನ ದೇಹವನ್ನು ತಾಳ್ಮೆಯಿಂದ ಪ್ರೀತಿಸು !

ವಿಶ್ವದಲ್ಲಿ 7 ಬಿಲಿಯನ್ ಜನರಿದ್ದಾರೆಂದರೆ, 7 ಬಿಲಿಯನ್ ತಾವೋ (ದಾರಿ ) ಗಳಿವೆ ಎಂದರ್ಥ. ಪ್ರತಿಯೊಬ್ಬ ವ್ಯಕ್ತಿಯ ಬಾಳು ಏನಾದರೊಂದನ್ನು ಕಲಿಸಬಲ್ಲುದು. ಕೆಲವೊಮ್ಮೆ ನಿನಗೆ ಸುಮ್ಮನಿರಲು ಇಷ್ಟವಾಗುವುದೇ ? ಸುಮ್ಮನಿದ್ದುಬಿಡು! ನಿನ್ನ ಅಂತರಂಗದ ಸದ್ದನ್ನು ಹೃದಯ ಪೂರ್ವಕವಾಗಿ ಕೇಳಿಸಿಕೋ ! ಆಧುನಿಕ ನಾಗರಿಕತೆಯಿಂದ ದತ್ತವಾಗುವ ಕಾಲಚಕ್ರದ ಚಲನೆಯ ಕರ್ಕಶ ಸದ್ದುಗಳಿಗೆ ಕಿವುಡಾಗು. ಪರಿಪೂರ್ಣತೆಯ ಕಡೆಗೆ ಸಾಗುವುದೇ ಜೀವನವೆಂದು ಜನರು ತಿಳಿಯುವರು. ಅದು ಹಾಗಲ್ಲ ! ಕಪ್ಪು- ಬಿಳುಪು, ಒಳಿತು-ಕೆಡುಕು, ಸರಿ-ತಪ್ಪುಗಳ ತೀರ್ಮಾನಕ್ಕೆ ಹೋಗದೆ, ಬದುಕನ್ನು ಹೇಗಿದೆಯೋ ಹಾಗೆ ಒಪ್ಪಿಕೋ ಅಪ್ಪಿಕೋ.
ಅಪರಿಪೂರ್ಣವಾದ, ಅಸ್ತವ್ಯಸ್ತತೆಯ ಗಳಿಗೆಗಳು ಕೂಡಾ ನಮಗೆ ತಿಳಿಹೇಳಬಲ್ಲುದು. ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡ! ನಿರೀಕ್ಷೆಗಳ ಹೊರೆ ನಿನ್ನನ್ನು ಕೆಳಕ್ಕೆ ಬೀಳಿಸಬಹುದು. ಆದ್ದರಿಂದ ನಿರೀಕ್ಷೆಗಳ ವಿಸರ್ಜನವು ತಾವೋಯಿಸಂ ನಲ್ಲಿ ಬಹುಮುಖ್ಯ ವಾದುದು. ಸದಾ ಮುಕ್ತವಾಗಿರು ! ಪ್ರಯೋಗಶೀಲವಾಗಿರು ! ಕಾಯಕವನ್ನು ಪ್ರೀತಿಸು !

ತಾವೋಯಿಸಂ ಪರಂಪರೆ ಏನೆಂದರೆ ಗುರು ಶಿಷ್ಯರ ಭೇದಭಾವ ನಶಿಸಿವುದು. ಆರಂಭದಲ್ಲಿ ಗುರುವು ಶಿಷ್ಯರೊಂದಿಗೆ ಬೆರೆತು ವೈಯುಕ್ತಿಕತೆಗೆ ಧಕ್ಕೆಯಾಗದಂತೆ ಕಾಯಕದಲ್ಲಿ ನಿರತನಾಗುವನು. ಕೊನೆ ಕೊನೆಗೆ ಗುರುತನವೂ ಇಲ್ಲ ! ಶಿಷ್ಯತನವೂ
ಇಲ್ಲ ! ಗುರು ಶಿಷ್ಯ ಭಿನ್ನಭಾವ ಮಾಯವಾಗುವುದು.
ಇದರಿಂದ ತಿಳಿಯ ಬೇಕಾದ ವಿಚಾರವೆಂದರೆ, ಎಂದೆಂದಿಗೂ ನಮ್ಮ ಗುರುವು ನಾವೇ ಹೊರತು ಹೊರಗಣ ವ್ಯಕ್ತಿಯಲ್ಲ! ನಿನ್ನನ್ನು ನೀನು ಗೌರವಿಸಿಕೋ ! ತಾಳ್ಮೆಯಿಂದ ನಿನ್ನೊಳಗಣ ಗುರುವಿನ ಮಾತುಗಳನ್ನು ಕೇಳಿಸಿಕೋ ! ನಿನ್ನ ಅಂತರಂಗವನ್ನು ಹೇಗೆ ನಚ್ಚಿಕೊಳ್ಳಬೇಕೆಂಬುದನ್ನು ಕಲಿತುಕೋ ! ಗತಕಾಲದ ತೀರ್ಮಾನಗಳಿಂದ ನಿರ್ದೇಶಿತನಾಗದಂತೆ ನಿನ್ನನ್ನು ಮುಕ್ತವಾಗಿಸಿಕೋ ! ನೀನು ಹೊಂದಿರುವ ಸಂಬಂಧಗಳಲ್ಲಿ ಸಂಘರ್ಷ ಮತ್ತು ಕೋಪದ ಭಾವನೆಗಳನ್ನು ತೆಗೆದುಹಾಕು! ನಿನ್ನಲ್ಲಿ ಕರುಣಾಮೈತ್ರಿಯಿರಲಿ! ನಿನ್ನ ಬದುಕಿನ ಸತ್ವವೇನಿದೆಯೋ ಅದಕ್ಕೆ ಚಾಲನೆ ನೀಡು.

ವಿಶ್ವದಲ್ಲಿ ಇಂದು ಅಸ್ತಿತ್ವದಲ್ಲಿರುವ ಮತಧರ್ಮಗಳನ್ನು ‘ಪಬ್ಲಿಕ್ ರಿಲಿಜನ್’ ಎನ್ನುತ್ತಾರೆ. ತಾವೋಯಿಸಂ ‘ಪರ್ಸನಲ್ ರಿಲಿಜನ್’ ಎಂದು ಹೇಳಬಹುದು. ಈ ದೃಷ್ಟಿಯಿಂದ ‘Personal Tao’ ಎಂಬ ನುಡಿ ಬಳಕೆಯಲ್ಲಿದೆ. ತಾವೋಯಿಸಂ ಅನ್ನು ಗ್ರಾಂಥಿಕ ಪರಂಪರೆಯ ಅಧ್ಯಯನ ಮಾತ್ರದಿಂದ ಸಮಗ್ರವಾಗಿ ತಿಳಿಯಲು ಸಾಧ್ಯವಿಲ್ಲ. ನಿತ್ಯ ಪರಿವರ್ತನಶೀಲವಾದ ನಿಸರ್ಗದಂತೆಯೇ ತಾವೋಯಿಸಂ ಬದಲಾವಣೆಯ ಹರಿಕಾರನಾಗಿದೆ. ತಾವೋಮಾರ್ಗವನ್ನು CHANGE MANAGEMENT ಎಂದು ಕರೆಯಬಹುದು. ಕಾಲನೊಬ್ಬ ಪವಿತ್ರವೈದ್ಯ! ಕಾಲದೇಶಾನುಸಾರಿಯಾಗಿ ತಾವೋ (=ದಾರಿ) ಬದಲಾಗುತ್ತದೆ ; ಸತ್ಯ ಶೋಧನೆ ಮಾಡುತ್ತದೆ.

ಈ ಪರಿವರ್ತನೆಯ ತಾವೋಯಿಸಂ ಅನ್ನೇ ಕುವೆಂಪು ಅವರು ತಮ್ಮ ಕವಿತೆಯಲ್ಲಿ ನಿರೂಪಿಸಿದ್ದಾರೆ:
– ಯಾವಕಾಲದ ಶಾಸ್ತ್ರವೇನು 
ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೋ ಮನು ಬರೆದಿಟ್ಟುದು
ಇಂದು ಎಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ !
ಮನು ನಿನಗೆ ನೀನು !
– ಹಿಂದಿನಾ ಋಷಿಗಳೂ 
ಮಾನವರೆ ನಮ್ಮಂತೆ, 
ಅವರ ಶಾಸ್ತ್ರವು ಅವರ ಕಾಲಕೆ ಮಾತ್ರ ;
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ,
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ !

Leave a Reply