ಭಗವಂತನನ್ನು ಹಲವು ಹೆಸರುಗಳಿಂದ ಸ್ತುತಿಸುವಾಗ ನಮಗೆ ಆ ಹೆಸರನ್ನು ಏಕೆ ಬಳಸುತ್ತಿದ್ದೇವೆ ಎಂಬ ಅರಿವಿದ್ದರೆ, ನಮ್ಮ ಪ್ರಾರ್ಥನೆ ಮತ್ತಷ್ಟು ಅರ್ಥಪೂರ್ಣವಾಗುತ್ತದೆ….
ವಿಷ್ಣು ಸಹಸ್ರನಾಮವು ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ ಎಂದು ಆರಂಭವಾಗುತ್ತದೆ. ಇಲ್ಲಿ ವಿಶ್ವ, ವಿಷ್ಣು, ವಷಟ್ಕಾರ ಮತ್ತು ಭೂತಭವ್ಯಭವತ್ಪ್ರಭು – ಎಂಬ ನಾಲ್ಕು ಹೆಸರುಗಳಿವೆ. ಇಲ್ಲಿ ಮೂರನೆ ಹೆಸರಾಗಿ ಬರುವ ವಷಟ್ಕಾರ ಎನ್ನುವ ಹೆಸರಿನ ಅರ್ಥವೇನು ನೋಡೋಣ…
ವಷಟ್ಕಾರ ಎಂದು ಆರು ಮುಖಗಳಿರುವ ಭಗವಂತ. ಜ್ಞಾನ, ಶಕ್ತಿ, ಬಲ – ರಕ್ಷಣೆ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಇವೇ ಈ ಆರು ಮುಖಗಳು.
ಭಗವಂತನ ಈ ಆರು ಮುಖಗಳು ಏನನ್ನು ಸಂಕೇತಿಸುತ್ತವೆ?
1. ಜ್ಞಾನವು ಸೃಷ್ಟಿರಚನೆಯ ಜ್ಞಾನವನ್ನೂ, ಸರ್ವಜ್ಞತೆಯನ್ನೂ
2. ಶಕ್ತಿಯು ಸೃಷ್ಟಿಗೆ ಅತಿಮುಖ್ಯವಾದ ಕರ್ತೃತ್ವ ಶಕ್ತಿಯನ್ನೂ
3. ಬಲವು ಸೃಷ್ಟಿಯನ್ನು ಧರಿಸುವ ಧಾರಣಾ ಬಲ ಮತ್ತು ರಕ್ಷಿಸುವ ಸಾಮರ್ಥ್ಯವನ್ನೂ
4. ಐಶ್ವರ್ಯವು ಸಕಲ ಸೃಷ್ಟಿಯ ಮೇಲಿನ ಒಡೆತನವನ್ನೂ
5. ವೀರ್ಯವು ಪರಾಕ್ರಮವನ್ನೂ ದುಷ್ಟ ಶಕ್ತಿಯ ದಮನ ಸಾಮರ್ಥ್ಯವನ್ನೂ
6. ತೇಜಸ್ಸು ಜಗತ್ತನ್ನು ಬೆಳಗಿಸುವ ಪ್ರಖರತೆಯನ್ನೂ – ಸಾರುತ್ತವೆ.
ಭಗವಂತನನ್ನು ‘ವಷಟ್ಕಾರ’ ಎಂದು ಕರೆಯುವಾಗ ನಮಗೆ ಈ ಆರು ಮುಖಗಳ ಬಗ್ಗೆ ತಿಳಿದಿರಬೇಕು. ಆಗ ನಮ್ಮ ಸ್ತುತಿಯು ಅರ್ಥಪೂರ್ಣವೂ ಸಂಪನ್ನವೂ ಆಗುತ್ತದೆ.