ಎರಡು ಅಪೂರ್ವ ದರ್ಶನಗಳು : ಗುರು ನಿತ್ಯ ಚೈತನ್ಯ ಯತಿ

guruಭೌತಿಕ ಪ್ರಪಂಚದ ವ್ಯಾಪಾರಗಳೆಲ್ಲವನ್ನೂ ಕಾರ್ಯಕಾರಣ ಸಂಬಂಧಗಳ ಮೂಲಕವೇ ನಾನು ಅರಿತುಕೊಂಡಿದ್ದೆ. ಹಾಗೆಯೇ ವ್ಯವಹರಿಸುತ್ತಿದ್ದೆ. ಆದರೆ ಈಗ ಭೌತಿಕ ಪ್ರಪಂಚದ ನಿಯಮಕ್ಕೆ ಸಂಪೂರ್ಣ ವಿರುದ್ಧವಾದ ಒಂದು ಘಟನೆ ನನ್ನ ಕಣ್ಣೆದುರೇ ನಾನು ಎಚ್ಚರದಲ್ಲಿರುವಾಗಲೇ ಸಂಭವಿಸಿತ್ತು…. ~ ಗುರು ನಿತ್ಯ ಚೈತನ್ಯ ಯತಿ | ಭಾವಾನುವಾದ ~ ಎನ್ ಎ ಎಮ್ ಇಸ್ಮಾಯಿಲ್

ಈ ಲೇಖನವನ್ನು ಸಂಪದ ತಾಣದಿಂದ ಮರುಪ್ರಕಟಿಸಲಾಗುತ್ತಿದ್ದು, ಮೂಲ ಲೇಖನದ ಕೊಂಡಿ ಇಲ್ಲಿದೆ :  https://sampada.net/article/2180 

ಒಂದು ದಿನ ಮಧ್ಯಾಹ್ನ ಊಟ ಮುಗಿಸಿ ಕಿಟಕಿಯಾಚೆ ನೋಡುತ್ತಾ ಕುಳಿತಿದ್ದೆ.

ಸ್ಥಳ: ಮುಂಬೈಯ ದಾದರ್‌ನಲ್ಲಿರುವ ಹಳೆಯ ಕಟ್ಟಡವೊಂದರ ಮೂರನೆಯ ಮಹಡಿ. ಕಿಟಕಿಯಿಂದ ಹೊರಕ್ಕೆ ನೋಡಿದರೆ ಅಹ್ಲಾದ ತರುವಂಥದ್ದೇನೂ ಅಲ್ಲಿರಲಿಲ್ಲ. ಆದರೆ ಒಳ್ಳೆಯ ಗಾಳಿ ಬರುತ್ತಿತ್ತು. ಹಾಗಾಗಿ ಕಿಟಕಿಯಿಂದ ಆಕಾಶ ನೋಡುತ್ತಾ ಕುಳಿತುಕೊಳ್ಳುವುದು ಖುಷಿ ಕೊಡುತ್ತಿತ್ತು.

ಈ ಹೊತ್ತಿನಲ್ಲಿ ಒಂದು ಅಸಾಧಾರಣ ವಿದ್ಯಮಾನ ಘಟಿಸಿತು. ಕಪ್ಪಗಿನ ಸ್ಥೂಲ ದೇಹಿಯೊಬ್ಬ ನನ್ನೆದುರು ನಿಂತಿರುವಂತೆ ಭಾಸವಾಯಿತು. ಆತ ಕಿಟಕಿಯ ಹೊರಗಿದ್ದುದರಿಂದ ಶರೀರದ ಮೇಲಿನರ್ಧ ಭಾಗ ಮಾತ್ರ ನನಗೆ ಕಾಣಿಸುತ್ತಿತ್ತು. ಹೀಗೆ ಸುಖಾಸುಮ್ಮನೆ ಯಾರೋ ಕಂಡಂತಾಗುವುದು, ಯಾವುದೋ ಶಬ್ದ ಕೇಳಿಸಿದಂತಾಗುವುದು ಇದೆಲ್ಲಾ ಭ್ರಾಂತಿ ಎಂದು ಮನಶ್ಶಾಸ್ತ್ರದ ಅಧ್ಯಯನದ ವೇಳೆ ಕಲಿತದ್ದು ನೆನಪಿಗೆ ಬಂತು. ಈ ಮೊದಲು ನನಗೆ ಯಾವಾಗಲೂ ಹೀಗಾಗಿರಲಿಲ್ಲ.

ತಕ್ಷಣ ಕುಳಿತಲ್ಲಿಂದ ಮೇಲೆದ್ದು ಮುಖಕ್ಕೆ ಸ್ವಲ್ಪ ನೀರು ಹಾಕಿಕೊಂಡು ಬಂದು ಕಿಟಕಿಯ ಬಳಿ ನಿಂತೆ.
ಹೊರಗೆ ಬಿರು ಬಿಸಿಲು. ಆತ ಮತ್ತೆ ನನ್ನೆದುರು ಕಾಣಿಸಿಕೊಂಡ. ನನಗಿದನ್ನು ನಂಬಲಾಗಲಿಲ್ಲ. ನಾನೊಮ್ಮೆ ಮುಖ ಒರೆಸಿಕೊಂಡೆ. ನನ್ನನ್ನು ನಾನೇ ಚಿವುಟಿ ಭ್ರಮೆಯೋ ವಾಸ್ತವವೋ ಎಂದು ಖಚಿತಪಡಿಸಿಕೊಂಡೆ. ಆತ ಮಾತ್ರ ಆಗಲೂ ಅಲ್ಲೇ ನಿಂತಿದ್ದ. ಈ ಹೊತ್ತಿಗೆ ಅವನ ಬಾಯಿಂದ ಮಾತುಗಳೂ ಹೊರಬಂದವು. ಆತ ಹೆಚ್ಚೇನೂ ಹೇಳಲಿಲ್ಲ. `ನೋಡಬೇಕೆನಿಸುತ್ತಿದೆಯೇ? ಪರವಾಗಿಲ್ಲ ಒಬ್ಬರನ್ನು ಕಳುಹಿಸುತ್ತೇನೆ’. ಇಷ್ಟು ಹೇಳಿ ಆತ ಮಾಯವಾದ.

ನನಗೆ ನಾಚಿಕೆಯಾಯಿತು. ಅಲ್ಲಿಯವರೆಗೂ ಭೌತಿಕ ಪ್ರಪಂಚದ ವ್ಯಾಪಾರಗಳೆಲ್ಲವನ್ನೂ ಕಾರ್ಯಕಾರಣ ಸಂಬಂಧಗಳ ಮೂಲಕವೇ ನಾನು ಅರಿತುಕೊಂಡಿದ್ದೆ. ಹಾಗೆಯೇ ವ್ಯವಹರಿಸುತ್ತಿದ್ದೆ. ಆದರೆ ಈಗ ಭೌತಿಕ ಪ್ರಪಂಚದ ನಿಯಮಕ್ಕೆ ಸಂಪೂರ್ಣ ವಿರುದ್ಧವಾದ ಒಂದು ಘಟನೆ ನನ್ನ ಕಣ್ಣೆದುರೇ ನಾನು ಎಚ್ಚರದಲ್ಲಿರುವಾಗಲೇ ಸಂಭವಿಸಿತ್ತು. ನನ್ನ ವಿಚಾರವಾದಕ್ಕೇ ದೊಡ್ಡ ಆಘಾತನ್ನುಂಟುಮಾಡಿದ ಈ ಘಟನೆಯ ಬಗ್ಗೆ ಚಿಂತಿಸುತ್ತಲೇ ಒಂದು ನಿದ್ರೆ ಎಲ್ಲದಕ್ಕೂ ಒಳ್ಳೆಯ ಪರಿಹಾರ ಅಂದುಕೊಂಡೆ.

ಸುಮಾರು ನಾಲ್ಕು ಗಂಟೆಯವರೆಗೂ ಮಲಗಿದ್ದೆನೇನೋ. ಆ ಹೊತ್ತಿಗೆ ಯಾರೋ ಬಾಗಿಲು ಬಡಿಯತೊಡಗಿದರು. ಬಾಗಿಲು ತೆರೆದರೆ ಒಬ್ಬ ಅಪರಿಚಿತ ಫಾರ್ಸಿ ನಿಂತಿದ್ದ. ನಾನು ಯಾರೆಂದೂ ಕೇಳದೆ ಆತ `ನಿತ್ಯಾನಂದಸ್ವಾಮಿಗಳನ್ನು ನೋಡಲು ವಜ್ರೇಶ್ವರಿಗೆ ಹೋಗುತ್ತಿದ್ದೀರಾ?’ ಎಂದು ಪ್ರಶ್ನಿಸಿದ. ಮಲಗುವ ಮೊದಲು ಕಿಟಕಿಯಲ್ಲಿ ಕಂಡ ಕಪ್ಪಗಿನ ಸ್ಥೂಲದೇಹಿಯನ್ನೂ ಈಗ ಫಾರ್ಸಿ ಕೇಳುತ್ತಿರುವ ಪ್ರಶ್ನೆಯನ್ನೂ ಒಟ್ಟೊಟ್ಟಿಗೆ ಗ್ರಹಿಸಿದಾಗ ನನಗೆ ಮಾತೇ ಹೊರಡಲಿಲ್ಲ. ಏನು ಹೇಳಬೇಕೆಂದು ತಿಳಿಯದೇ ಒದ್ದಾಡುತ್ತಿದ್ದಾಗ ಆ ಅಪರಿಚಿತ ಫಾರ್ಸಿ ಹೇಳಿದ `ನಾಳೆ ಏಳು ಗಂಟೆಗೆ ರೆಡಿಯಾಗಿರಿ. ಕರೆದುಕೊಂಡು ಹೋಗಲು ನಾನು ಬರುತ್ತೇನೆ’. ಒಂದು ಮೌನ ಸಮ್ಮತಿ ನನ್ನೊಳಗೆ ಹುಟ್ಟಿತು.

ಅಂದು ರಾತ್ರಿಯಿಡೀ ನನ್ನದು ಅರೆ ನಿದ್ರೆ. ನಾನು ಒಂಟಿಯಾಗಿ ವಾಸಿಸುತ್ತಿದ್ದುದರಿಂದ ನಡೆದುದನ್ನೆಲ್ಲಾ ಯಾರಲ್ಲಿಯೂ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಮರುದಿನ ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ಬಾಗಿಲು ಬಡಿಯುವ ಸದ್ದು ಕೇಳಿಸಿತು. ಬಾಗಿಲು ತೆರೆದರೆ ಮತ್ತೊಬ್ಬ ಅಪರಿಚಿತ. `ವಜ್ರೇಶ್ವರಿಗೆ ಹೋಗಲು ಕಾರು ತಂದಿದ್ದೇನೆ. ಹೊರಡಿ!’. ನಾನೂ ಮರು ಮಾತನಾಡದೆ ಮನೆಗೆ ಬೀಗ ಹಾಕಿ ಆತನ ಜತೆ ಹೊರಟೆ. ಹಿಂದಿನ ದಿನ ಬಂದಿದ್ದ ಫಾರ್ಸಿ ಕಾರಿನಲ್ಲಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಆತ ಅಲ್ಲಿರಲಿಲ್ಲ. ನನ್ನನ್ನು ಕರೆಯಬಂದವನಲ್ಲಿ ಇದನ್ನು ಕೇಳಿದ್ದಕ್ಕೆ ಆತ `ಅವರು ಹೇಳಿದ್ದಕ್ಕೇ ನಿಮ್ಮನ್ನು ಕರೆದುಕೊಂಡು ಹೋಗುತ್ತಿರುವುದು’ ಎಂದು ಮೌನಕ್ಕೆ ಶರಣಾದ. ಕಾರು ವೇಗವಾಗಿ ಚಲಿಸತೊಡಗಿತು. ಹಿಂದಿನ ದಿನ ಕಿಟಕಿಯಾಚೆ ಕಾಣಿಸಿಕೊಂಡಿದ್ದ ಆ ಕರ್ರಗಿನ ಸ್ಥೂಲದೇಹಿಯ ಚಿತ್ರವನ್ನು ಮತ್ತೆ ಮತ್ತೆ ಕಲ್ಪಿಸಿಕೊಂಡು ಮಾತನಾಡದೆ ಕುಳಿತೆ.

ಸ್ವಲ್ಪ ಹೊತ್ತು ಕಳೆದ ನಂತರ ಕಾರು ವಜ್ರೇಶ್ವರಿಯಲ್ಲಿ ಯಾವುದೋ ದೊಡ್ಡ ಗೇಟಿನ ಬಳಿ ನಿಂತಿತು. ಗೇಟ್‌ ಮುಚ್ಚಿತ್ತು. ಗೇಟಿನಲ್ಲಿದ್ದಾತ `ಇವತ್ತು ಸ್ವಾಮೀಜಿ ಯಾರಿಗೂ ದರ್ಶನ ನೀಡುವುದಿಲ್ಲ. ಗುರುವಾರ ಬನ್ನಿ’ ಎಂದ. ನನ್ನನ್ನು ಕರೆದುಕೊಂಡು ಬಂದಾತ ಕಾರನ್ನು ಅಲ್ಲಿಯೇ ನಿಲ್ಲಿಸಿ `ಇನ್ನೊಂದು ಗೇಟ್‌ ಇದೆ. ಅಲ್ಲಿರುವವನಿಗೆ ಹಣ ಕೊಟ್ಟರೆ ಅವನು ಒಳಗೆ ಬಿಡುತ್ತಾನೆ. ಅವನನ್ನೊಮ್ಮೆ ನೋಡಿ ಬರುತ್ತೇನೆ’ ಎಂದು ಹೇಳಿ ಹೊರಟು ಹೋದ.

ಒಂದು ಆಶ್ರಮದಲ್ಲಿ ಅದೂ ಒಂದು ಮಹಾಸನ್ನಿಧಿಯಲ್ಲಿ ಲಂಚ ಕೊಟ್ಟರೆ ದರ್ಶನ ಸಾಧ್ಯ ಎಂದು ಹೇಳಿದ ಆತನ ಬಗ್ಗೆ ನನಗೆ ತಡೆಯಲಾರದಷ್ಟು ಕೋಪ ಬಂತು. ನಾನಲ್ಲಿಯೇ ಕಾರಿಗೆ ಒರಗಿ ನಿಂತೆ. ಆಗ ಗಡಿಬಿಡಿಯಿಂದ ಗೇಟ್‌ ತೆರೆದು ಒಬ್ಬಾತ ನನ್ನ ಬಳಿಗೆ ಓಡಿಬಂದ. `ಸ್ವಾಮೀಜಿ ಕರೆಯುತ್ತಿದ್ದಾರೆ’ ಎಂದು ಆತ ನನ್ನನ್ನು ಜತೆಗೆ ಹೊರಡುವಂತೆ ಆತುರಪಡಿಸಿದ. `ನನ್ನ ಜತೆ ಮತ್ತೊಬ್ಬರಿದ್ದಾರೆ. ಅವರು ಬಂದ ಮೇಲೆ ಹೋಗೋಣ…’ ಎಂದು ಹೇಳಿದರೆ ಆತ ಅದನ್ನೊಪ್ಪಲಿಲ್ಲ. `ಅದು ಹಾಗಲ್ಲ. ಇಂದು ಯಾರನ್ನೂ ಒಳಕ್ಕೆ ಬಿಡುವುದಿಲ್ಲ. ನಿಮ್ಮ ಮಾತ್ರ ಕರೆದುಕೊಂಡು ಬರಲು ಹೇಳಿದ್ದಾರೆ’ ಎಂದು ಆತ ವಿವರಿಸಿದ. ನಾನು ಅವನೊಂದಿಗೆ ಅಶ್ರಮದೊಳಕ್ಕೆ ಪ್ರವೇಶಿಸಿದೆ. ಗೇಟು ಮತ್ತೆ ಮುಚ್ಚಿಕೊಂಡಿತು.

ಒಂದು ಗೋಡೆಗೆ ಟಾರ್ಪಾಲಿನ್‌ ಕಟ್ಟಿ ನಿರ್ಮಿಸಿದ ಶೆಡ್‌. ಅದರಡಿಯಲ್ಲಿ ಒಂದು ಅಗಲವಾದ ಮರದ ಬೆಂಚು. ಅದು ಸುಮಾರು ಮಂಚದಷ್ಟೇ ದೊಡ್ಡದಿತ್ತು. ಅದರ ಮೇಲೆ ಹಾಸಿಗೆ, ತಲೆ ದಿಂಬಿನಂಥ ಯಾವುದೂ ಇರಲಿಲ್ಲ. ಹಿಂದಿನ ದಿನ ಮಧ್ಯಾಹ್ನ ನನ್ನ ಕಿಟಕಿಯಲ್ಲಿ ಕಾಣಿಸಿಕೊಂಡ ಕರ್ರಗಿನ ಸ್ಥೂಲ ದೇಹಿ ಆ ಬೆಂಚಿನ ಮೇಲೆ ಕುಳಿತಿದ್ದಾರೆ. ನಾನವರ ದೇಹ ಮುಟ್ಟದೆ ಸ್ವಲ್ಪ ದೂರದಿಂದಲೇ ನಮಿಸಿದೆ. ನಾನು ನಿತ್ಯಾನಂದಸ್ವಾಮಿಗಳ ದಿವ್ಯ ಸನ್ನಿಧಾನದಲ್ಲಿದ್ದೇನೆಂದು ತಿಳಿಯಿತು. ಅವರ ಬೆಳಗುವ ಕಣ್ಣುಗಳು ನನ್ನನ್ನು ಅಡಿಯಿಂದ ಮುಡಿಯವರೆಗೆ ಮತ್ತು ಮುಡಿಯಿಂದ ಅಡಿಯವರೆಗೆ ಪರಿಶೀಲಿಸುತ್ತಿದ್ದವು. ಆ ಕಣ್ಣುಗಳೆದುರು ನನ್ನ ಆತ್ಮವೇ ನಗ್ನವಾಗಿ ನಿಂತಂತೆ ನನಗನ್ನಿಸಿತು. ನನ್ನೊಳಗೆ ಅತಿ ಗುಪ್ತವಾಗಿ ಅಡಗಿಸಿಟ್ಟುಕೊಂಡಿರುವ ರಹಸ್ಯಗಳೂ ಸ್ವಾಮಿಗಳಿಗೆ ತಿಳಿಯುತ್ತಿದೆ ಎಂದು ಭಾಸವಾಯಿತು.
ಅವರು ಆಶ್ರಮವಾಸಿಯೊಬ್ಬನಿಗೆ ತಮ್ಮ ಕಣ್ಣುಗಳಲ್ಲೇ ಯಾವುದೋ ಸೂಚನೆ ನೀಡಿದರು. ಆತ ನನಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಒಂದು ಕುರ್ಚಿಯನ್ನು ತಂದಿಟ್ಟ.

ಈ ಮಹಾಸನ್ನಿಧಿಯಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ಉದ್ಧಟತನವಾಗುತ್ತದೆ ಎಂಬುದು ನನ್ನ ಭಾವನೆಯಾಗಿತ್ತು. ಆದರೆ ಕುರ್ಚಿ ತಂದಿಟ್ಟವನು ನನ್ನ ಹತ್ತಿರ ಬಂದು ಮೆಲ್ಲಗಿನ ದನಿಯಲ್ಲಿ `ಹೇಳಿದಂತೆ ಮಾಡಿ. ಕುಳಿತುಕೊಳ್ಳಿ’ ಎಂದ. ನಾನು ಇರಿಸುಮುರಿಸಿನಿಂದಲೇ ಕುರ್ಚಿಯಲ್ಲಿ ಕುಳಿತೆ. ಆಗ ಅದರೆದುರು ಯಾರೋ ಒಂದು ಸ್ಟೂಲ್‌ ತಂದಿಟ್ಟು ಬಾಳೆಹಣ್ಣು ಮತ್ತು ದ್ರಾಕ್ಷಿ ತುಂಬಿದ ತಟ್ಟೆ ಇಟ್ಟರು. ಜತೆಗೆ ಒಂದು ದೊಡ್ಡ ಲೋಟದಲ್ಲಿ ಬಿಸಿ ಹಾಲು; ಇದನ್ನೆಲ್ಲಾ ನೋಡಿದಾಗ ಬಹಳ ನಿರೀಕ್ಷಿಸುತ್ತಿದ್ದ ಅತಿಥಿಯೊಬ್ಬರಿಗೆ ಸ್ವಾಗತ ಕೋರುವುದಕ್ಕೆ ವ್ಯವಸ್ಥೆ ಮಾಡಿದಂತೆ ಇತ್ತು.

ತಾವು ನೋಡುತ್ತಿದ್ದರೆ ನನಗೆ ತಿನ್ನುವುದಕ್ಕೆ ಕಷ್ಟವಾಗುತ್ತದೆ ಎಂಬುದನ್ನು ಅರಿತಂತೆ ಸ್ವಾಮೀಜಿ ಬೆಂಚಿನಲ್ಲಿ ಮಲಗಿ ಗೋಡೆಯ ಕಡೆಗೆ ಹೊರಳಿದರು. ತಿನ್ನಲು ಕೊಟ್ಟದ್ದನ್ನು ಉಳಿಸಿದರೆ ಬೈಯ್ಯಬಹುದೇ ಎಂಬ ಭಯ ನನಗೆ. ಅದರಿಂದಾಗಿ ಎಲ್ಲವನ್ನೂ ತಿಂದೆ. ಮತ್ತೆ ಎದ್ದು ಹೋಗಿ ಕೈ ಬಾಯಿ ತೊಳೆದುಕೊಂಡು ಬಂದು ಕುಳಿತೆ. ಆ ಹೊತ್ತಿಗೆ ಮಲಗಿದ್ದ ಸ್ವಾಮೀಜಿ ಎದ್ದು ಕುಳಿತಿದ್ದರು. ಮತ್ತೊಮ್ಮೆ ನನ್ನನ್ನು ಅಡಿಯಿಂದ ಮುಡಿಯವರೆಗೆ ನೋಡಿದರು. ಮತ್ತೆ ಬಹಳ ಸಂತೃಪ್ತಿಯಿಂದ `ಉಂ, ಊಂ, ಹ್ಞಾಂ, ಹಾಂ’ ಎಂದು ಅಭಿನಂದಿಸಿದರು. ಅದೇ ಕ್ಷಣ ಅಲ್ಲಿಂದ ಹೊರಡಲು ಅನುಮತಿಯೂ ದೊರೆಯಿತು.

ಮುಂದೆ ನಾನು ಸೈಕಿಕ್‌ ಅಂಡ್‌ ಸ್ಪಿರಿಚ್ಯುವಲ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌ನ ಡೈರೆಕ್ಟರ್‌ ಆದಾಗ ನಿತ್ಯಾನಂದ ಸ್ವಾಮಿಗಳನ್ನು ಭೇಟಿಯಾದ ಘಟನೆ ಯೋಗ ಸಿದ್ಧಿಗಳ ಬಗ್ಗೆ ಅಧ್ಯಯನದ ಅಗತ್ಯವನ್ನು ಹೇಳಿತ್ತೆಂದು ಅನ್ನಿಸುತ್ತಿತ್ತು. 
ಸ್ವಾಮೀಜಿ ಸಮಾಧಿಸ್ಥರಾಗುವುದಕ್ಕೆ ಮೂರು ತಿಂಗಳು ಮೊದಲು ಇದೇ ರೀತಿ ಒಬ್ಬ ಅಪರಿಚಿತ ಬಂದು ನನ್ನನ್ನು ಆಶ್ರಮಕ್ಕೆ ಕರೆದುಕೊಂಡು ಹೋದ. ಅಂದು ಅಲ್ಲಿ ದರ್ಶನಕ್ಕಾಗಿ ಬಂದ ನೂರಾರು ಮಂದಿ ಇದ್ದರು. ನಾನೂ ಸನ್ನಿಧಿಗೆ ಹೋಗಿ ವಿನೀತನಾಗಿ ನಿಂತೆ. ಸ್ವಾಮೀಜಿ ಕಣ್ಣುಮುಚ್ಚಿಕೊಂಡಿದ್ದರು. ಅವರಿಗೆ ಏನೂ ಯಾರೂ ಕಾಣಿಸುತ್ತಿಲ್ಲ ಎಂದು ನನಗನ್ನಿಸುತ್ತಿತ್ತು. ಬಿಟ್ಟಕಣ್ಣು ಬಿಟ್ಟಂತೆ ನಿಂತುಕೊಂಡಿದ್ದ ನನ್ನತ್ತ ಅವರ ಚೈತನ್ಯಪೂರ್ಣ ಕಣ್ಣುಗಳು ತಿರುಗಿದವು. ಅವರು `ಓ..ಓ…’ ಎಂದರು. ಒಂದು ಮುಕ್ತಾಯಕ್ಕೆ ತಲುಪಿದಂತಿತ್ತು ಆ ಧ್ವನಿ. ಮುಂದೆ ಶಾರೀರಿಕ ದರ್ಶನ ಇಲ್ಲ ಎಂಬುದು ನನಗರ್ಥವಾಯಿತು. ಅವರಿಗೆ ನಮಿಸಿ ಅಲ್ಲಿಂದ ಹೊರಟೆ.

ಈ ಎರಡೂ ಅಪೂರ್ವ ದರ್ಶನಗಳ ಹೊತ್ತಿನಲ್ಲಿ ಯಾವ ಸಂಭಾಷಣೆಯೂ ನಡೆಯಲಿಲ್ಲ. ಆದರೂ ಅರಿಯಬೇಕಾದುದನ್ನೆಲ್ಲಾ ಅರಿತಂತೆಯೂ ಹೇಳಬೇಕಾದುದನ್ನೆಲ್ಲಾ ಹೇಳಿದಂತೆಯೂ ಕೊಡಬೇಕಾದುದನ್ನೆಲ್ಲಾ ಕೊಟ್ಟಂತೆಯೂ ಭಾಸವಾದ ಒಂದು ಸಾರ್ಥಕತೆ ಆ ನೆನಪಿನಲ್ಲಿ ತುಂಬಿಕೊಂಡಿದೆ.

ಈ ಲೇಖನ ಗುರು ನಿತ್ಯ ಚೈತನ್ಯ ಯತಿ ಬರೆದ ಲೇಖನದ ಸ್ವತಂತ್ರ ಭಾವಾನುವಾದ. ಮೂಲ ಲೇಖನ ಯತಿಗಳ ‘ಮರಕ್ಕಾನಾವತ್ತವರ್’ ಎಂಬ ಮಲಯಾಳಂ ಪುಸ್ತಕದಲ್ಲಿದೆ. ನಿತ್ಯಾನಂದ ಸ್ವಾಮಿಗಳು ಮುಂಬೈ, ಕರ್ನಾಟಕದ ಕರಾವಳಿ ಮತ್ತು ಕೇರಳಗಳಲ್ಲಿ ಪ್ರಸಿದ್ಧರಾಗಿರುವ ಸಂತರು.

Leave a Reply