ಸೂಫೀ ಪಂಥ ಮತ್ತು ವೇದಾಂತ : ದ್ವೈತಾದ್ವೈತ ವಿಶಿಷ್ಠ ಸಂಗಮ

ನಾನೇ ಸತ್ಯ ಎಂಬ ಜ್ಞಾನ, ತಾನು ಭಗವಂತನ ಪ್ರೇಮಿ ಎನ್ನುವ ಭಾವುಕತೆ, ಅವನಿಲ್ಲದೆ ನನಗೆ ಅಸ್ತಿತ್ವ ಇಲ್ಲ ಎನ್ನುವ ಶರಣಾಗತಿಗಳೆಲ್ಲವನ್ನೂ ಮೈಗೂಡಿಸಿಕೊಂಡಿದ್ದ ಈ ಪಂಥವೇ `ಸೂಫೀ’ ಪಂಥ. ದ್ವೈತಾದ್ವೈತಗಳೆರಡರ ಫಲವನ್ನೂ ಈ ಪಂಥ ಏಕಕಾಲದಲ್ಲಿ ಸಾಧಿಸಿತ್ತು.  ~ ಚೇತನಾ ತೀರ್ಥಹಳ್ಳಿ

ಮಾನುಷ ಬುದ್ಧಿಯ ಊಹೆಗಳಾಚೆಗಿನ ಸಂಗತಿ ಭಗವಂತ. ಅವರವರ ತರ್ಕ, ನಂಬಿಕೆ ಹಾಗೂ ಶ್ರದ್ಧೆಗಳಿಗೆ, ನಿರಾಕರಣೆಗಳಿಗೂ ನಿಲುಕುವಂತೆ ಭಗವಂತನ ಅಸ್ತಿತ್ವ ಇರುತ್ತದೆ. ಹೀಗೆ ನಿಲುಕಿದ ಭಗವಂತನನ್ನು ಮುಂದಿಟ್ಟುಕೊಂಡೇ ನಾವು ಜಾತಿ ಮತ ಪಂಥಗಳನ್ನು ಕಟ್ಟಿದ್ದೇವೆ. ಈ ಕಟ್ಟುವಿಕೆ ಬಹಳ ಬಾರಿ ಮತ್ತೊಂದರ ಭಂಜನೆಯನ್ನು ಪ್ರೇರೇಪಿಸಿದೆ. ಈ ಭಂಜಕ ಪ್ರವೃತ್ತಿಯಿಂದಾದ ನಷ್ಟಗಳನ್ನು ತುಂಬಿಕೊಡಲೆಂದು ಮತ್ತೆ ಅದೇ ನಂಬುಗೆಯ ಬಿಂಬದಿಂದ ಮತ್ತೊಂದು ಹೊಸ ತತ್ತ್ವದ ಉದಯವಾಗಿದೆ. ಬಹುಶಃ ಈ ಪ್ರಕ್ರಿಯೆಯೇ ಹಲವು ಒಡಕುಗಳ ನಡುವೆಯೂ ಭೂಮಿಯನ್ನು ಸಮರಸದಲ್ಲಿ ಇರಿಸಿರುವುದು.

ಅದ್ವೈತ ತತ್ತ್ವ
ಭಗವಂತ ಎಂದರೆ ಪರಮ ಅಸ್ತಿತ್ವ. ಅದು ಪರಮಸತ್ಯ. ಸೃಷ್ಟಿಯನ್ನು ನಿಯಂತ್ರಿಸುವ ಅಸೀಮ ಶಕ್ತಿ. ಪ್ರಾಚೀನ ಭಾರತೀಯರ ಜ್ಞಾನ ಕಣಜವಾದ ವೇದಗಳು ಭಗವಂತನನ್ನು ನಿರ್ಗುಣ ನಿರಾಕಾರ ಎಂದು ಬಣ್ಣಿಸುತ್ತಲೇ ಆತನ ಒಂದೊಂದು ಶಕ್ತಿಗೆ ಒಂದೊಂದು ದೇವತೆಯನ್ನು ನಿಶ್ಚಯಿಸಿ ಪೂಜಿಸುತ್ತವೆ. ನಿರಾಕಾರಕ್ಕೆ ಭಾವ ಸಾಕಾರ ನೀಡುವ ಬೆರಗಿನ ಬಗೆಯನ್ನು ಅವು ಅನುಸರಿಸುತ್ತವೆ. ಹೀಗೆ ಭಗವಂತನನ್ನು ನಿರಾಕಾರವಾಗಿ ಪ್ರತಿಪಾದಿಸುತ್ತಲೇ ಸಾಕಾರದಲ್ಲಿ ಆರಾಧಿಸುವ ಬಗೆ `ಅದ್ವೈತ’.
ಅದ್ವೈತವು ಭಗವಂತನನ್ನು ತನಗಿಂತ ಬೇರೆಯಾಗಿ ನೋಡುವುದಿಲ್ಲ. ಒಂದು ಹಂತದಲ್ಲಿ `ನಾನೇ ಭಗವಂತ’ ಎನ್ನುವ ಅರಿವನ್ನೂ ಇದು ಮೂಡಿಸುತ್ತದೆ. `ಅಹಂ ಬ್ರಹ್ಮಾಸ್ಮಿ’ (ನಾನೇ ಪರಬ್ರಹ್ಮವಾಗಿದ್ದೇನೆ) ಎನ್ನುವ ತಿಳಿವೇ ಜ್ಞಾನೋದಯ. ಈ ಜ್ಞಾನವೇ ಮುಕ್ತಿಯ ಹೆಬ್ಬಾಗಿಲು ಎನ್ನುತ್ತದೆ.
ಅದ್ವೈತ ತತ್ತ್ವದ ಈ ಚಿಂತನೆಯನ್ನು ವ್ಯಾಪಕಗೊಳಿಸಿದವರು ಆದಿ ಶಂಕರರು. ಕಾಲದ ಹರಿವಿನೊಂದಿಗೆ ಭಾರತದಲ್ಲಿ ದ್ವೈತ, ದ್ವೈತ ಹಾಗೂ ವಿಶಿಷ್ಟಾದ್ವೈತಗಳ ಪ್ರತಿಪಾದಕರಾದ ಸಾವಿರಾರು ಸಂತರು ಆಗಿಹೋದರು. ಈ ಸಂತ ಪರಂಪರೆಯಲ್ಲಿ ಅದ್ವೈತಿಗಳು ಜ್ಞಾನದೊಡನೆ ಭಕ್ತಿಯನ್ನೂ ಭಗವಂತನ ಪ್ರೇಮವನ್ನೂ ಹದವಾಗಿ ಬೆರೆಸಿ ಹೊಸತೊಂದು ಹೊಳಹನ್ನು ಬಿತ್ತಿದರು. ಅಷ್ಟೇ ಅಲ್ಲ, ಜ್ಞಾನ ಭಕ್ತಿಯ ಈ ಬೆಳೆಗಾರರು ಸಮಾನತೆ ಮತ್ತು ಸೌಹಾರ್ದಗಳ ಫಸಲನ್ನೂ ಪಡೆದರು. ಉದಾಹರಣೆಗೆ : ರೈದಾಸ, ಸಂತ ಕಬೀರ, ಗುರು ನಾನಕ್, ತುಕಾರಾಮ, ರಾಮಕೃಷ್ಣ ಪರಮಹಂಸ, ಕನ್ನಡ ನೆಲದ ವಚನಕಾರರು – ಇವರೆಲ್ಲ ಜ್ಞಾನ ಮತ್ತು ವಿಚಾರ ಪ್ರಧಾನವಾದ, ನಿರಾಕಾರದ ಉಪಾಸನೆಯಲ್ಲಿ ಆಸಕ್ತರಾದ ಅದ್ವೈತ ಪರಂಪರೆಗೆ ಸೇರುವಂಥವರು.

ದ್ವೈತ ತತ್ತ್ವ 
ಭಗವಂತನನ್ನು ಸರ್ವಗುಣ ಸಂಪನ್ನ, ರೂಪ – ಗುಣಗಳ ಮೂಲಸ್ರೋತ, ಸಾಕಾರ ರೂಪಿ ಎಂದು ಬಣ್ಣಿಸಿ, ಅವನು ಪರಮಾತ್ಮ, ನಾನು ಜೀವಾತ್ಮವೆಂಬ ಶರಣಾಗತಿಯ ಭಕ್ತಿ ತೋರಿ ಆರಾಧಿಸುವುದು ದ್ವೈತಾಭಿವ್ಯಕ್ತಿ. ನಿರಾಕಾರ ಭಗವಂತನನ್ನು ಸಾಕಾರವಾಗಿ ಭಾವಿಸುವುದರೊಂದಿಗೆ ಹುಟ್ಟಿಕೊಂಡ `ದ್ವೈತ’, ಈ ಭಾವನೆಯನ್ನು ಸ್ಥಾಪಿಸುವುದರೊಂದಿಗೆ ಒಂದು ಪಂಥವಾಗಿ ಬೆಳೆದುಕೊಂಡಿತು.
ಅದ್ವೈತ ತತ್ತ್ವವು ದಾಸ ಭಾವದ, ಮಾಧುರ್ಯದ ಭಕ್ತಿಯನ್ನು ಪ್ರಧಾನವಾಗಿಟ್ಟುಕೊಂಡು ಹಬ್ಬಿತು. ಇಲ್ಲಿ ತಾನು ಭಗವಂತನೊಂದಿಗೆ ಒಂದಾಗಬಯಸುವ ಅಲ್ಪ ಜೀವಿ ಎಂಬ ಭಾವನೆಗೆ ಮಹತ್ವ. ಅಥವಾ ಭಗವಂತ ನೊಬ್ಬನೇ ಸೃಷ್ಟಿಯ `ಪುರುಷ’, ತಾನು ಆತನನ್ನು ಶಾಶ್ವತವಾಗಿ ಒಂದಾಗ ಬಯಸುವ ಪ್ರೇಮಿಕೆ ಎನ್ನುವ ಭಾವ. ಭಕ್ತಿ ಚಳವಳಿಯ ವೈಷ್ಣವ ಪಂಥದ ಸಂತರನೇಕರು ಇದನ್ನು ತಮ್ಮ ಮಾತು – ಗೀತೆಗಳಲ್ಲಿ ಮತ್ತೆ ಮತ್ತೆ ಹೇಳುತ್ತಾರೆ. ತಮ್ಮನ್ನು ಭಗವಂತನ ಪ್ರೇಮಿಕೆಯಾಗಿ ಭಾವಿಸಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ಭಕ್ತಿಂದ ಹಾಡಿದ್ದಾರೆ. ಸಂತರಾದ ಮೀರಾ, ಸೂರ ದಾಸ, ಕನ್ನಡದ ದಾಸ ಪರಂಪರೆಯ ಸಂತರು, ಆಳ್ವಾರರು, ಚೈತನ್ಯ ಮಹಾಪ್ರಭು ಮೊದಲಾದವರೆಲ್ಲ ಈ ಪಂಥಕ್ಕೆ ಸೇರುವಂಥವರು.

ದ್ವೈತಾದ್ವೈತ ಸಂಗಮ
ದ್ವೈತಾದ್ವೈತಗಳ ಈ ಭಾರತೀಯ ಚಿಂತನೆಗಳೆರಡನ್ನೂ ಏಕಕಾಲಕ್ಕೆ ಪ್ರತಿಪಾದಿಸುವ ಆಧ್ಯಾತ್ಮಿಕ ಮಾರ್ಗವೊಂದು ಪರ್ಷಿಯಾದಲ್ಲಿ ಹುಟ್ಟಿ ಹಬ್ಬಿತ್ತು. ಅಧ್ಯಯನಕಾರರು ಇದರ ಮೂಲ ಬೇರುಗಳನ್ನು ಭಾರತದಲ್ಲಿ ಹುಡುಕುತ್ತಾರಾದರೂ ಈ ವಿಶಿಷ್ಟ ಚಿಂತನೆಗೆ ಪುಷ್ಟಿ ನೀಡಿದ ಶ್ರೇಯ ಪರ್ಷಿಯಾದ ನೆಲಕ್ಕೆ ಸಲ್ಲಬೇಕು.
ನಾನೇ ಸತ್ಯ ಎಂಬ ಜ್ಞಾನ, ತಾನು ಭಗವಂತನ ಪ್ರೇಮಿ ಎನ್ನುವ ಭಾವುಕತೆ, ಅವನಿಲ್ಲದೆ ನನಗೆ ಅಸ್ತಿತ್ವ ಇಲ್ಲ ಎನ್ನುವ ಶರಣಾಗತಿಗಳೆಲ್ಲವನ್ನೂ ಮೈಗೂಡಿಸಿಕೊಂಡಿದ್ದ ಈ ಪಂಥವೇ `ಸೂಫೀ’ ಪಂಥ. ದ್ವೈತಾದ್ವೈತಗಳೆರಡರ ಅನುಭಾವವನ್ನೂ ಈ ಪಂಥ ಏಕಕಾಲದಲ್ಲಿ ಸಾಧಿಸಿತ್ತು.

ಮನ್ಸೂರ್ ಅಲ್ ಹಲ್ಲಜ್’ನಂಥವರು ತಮ್ಮ ಅರಿವಿಗೆ ದಕ್ಕಿದ ತಿಳಿವನ್ನು `ಅನ್ ಅಲ್ ಹಕ್’ ಎಂದು ಬಹಿರಂಗವಾಗಿ ಘೋಷಿಸಿದರು. ಅನ್ ಅಲ್ ಹಕ್ ಎಂದರೆ `ನಾನು ಪರಮ ಸತ್ಯವೇ ಆಗಿದ್ದೇನೆ’ ಎಂದು. ಇದು ಸೂಫೀತತ್ತ್ವದ ಜ್ಞಾನ ಮಾರ್ಗ.
ರೂಮಿಯಂಥವರು ತಮ್ಮನ್ನು ಭಗವಂತನ ಪ್ರೇಮಿ ಎಂದುಕೊಂಡು ಆತನಲ್ಲಿ ಮಧುರ – ವಿರಹ ಭಕ್ತಿಯನ್ನು ತೋರುತ್ತಾ ಅಧ್ಯಾತ್ಮ ಸಾಧನೆ ನಡೆಸಿದರು.
ಸೂಫೀ ಸಂತಳಾದ ರಾಬಿಯಾ `ಸ್ವರ್ಗದ ಬಯಕೆ – ನರಕ ಭಯಗಳಿಂದಾಗಲೀ ಭಗವಂತನ ಸಾನ್ನಿಧ್ಯಕ್ಕಾಗಲೀ ಧರ್ಮವನ್ನು ಅನುಸರಿಸಬಾರದು. ಭಗವಂತನನ್ನು ಸುಮ್ಮನೆ ಪ್ರೀತಿಸಬೇಕು, ಅವನಿಗೆ ಶರಣಾಗತರಾಗಬೇಕು’ ಎನ್ನುವ ಮೂಲಕ ನಿಷ್ಕಾಮ ಭಕ್ತಿಯ ಜ್ಞಾನವನ್ನು ಪ್ರದರ್ಶಿಸಿದಳು. ಅಷ್ಟೇ ಅಲ್ಲ, ರಾಬಿಯಾ “ನಾನು ನಿನ್ನನ್ನು (ಭಗವಂತನನ್ನು) ಎರಡು ಬಗೆಯಲ್ಲಿ ಪ್ರೇಮಿಸುತ್ತೇನೆ. ಮೊದಲನೆಯದು – ನೀನು ಯಾರೇ ಆಗಿರು, ನಾನು ನಿನ್ನನ್ನು ಪ್ರೇಮಿಸುವ ಸಲುವಾಗಿಯೇ ಪ್ರೇಮಿಸ್ತೇನೆ (ನನಗೆ ನಿನ್ನನ್ನು ನೋಡಬೇಕೆಂದಿಲ್ಲ); ಎರಡನೆಯದು – ತೇಜಸ್ಸಿನಿಂದ ಕಂಗೊಳಿಸುವ ನಿನ್ನ ಸುಂದರ ಮುಖದ ಪರದೆಯನ್ನು ಸರಿಸಿ, ನಿನ್ನ ಸೌಂದರ್ಯ ಕಣ್ತುಂಬಿಕೊಳ್ಳುತ್ತಾ ನಿನ್ನ ಪ್ರೇಮದಲ್ಲೇ ನನ್ನ ಜೀವಿತವನ್ನಿಡೀ ಕಳೆದುಬಿಡುತ್ತೇನೆ” ಅನ್ನುತ್ತಾಳೆ. 

ಹೀಗೆ ಮೀರಾಳಂತೆ ಭಾವುಕವಾಗಿಯೂ ಅಕ್ಕಮಹಾದೇವಿಯಂತೆ ವಿಚಾರಪೂರ್ಣವಾಗಿಯೂ ಎರಡನ್ನೂ ಮೀರಿ ಶುದ್ಧ ಸೂಫೀ ತತ್ವದಂತೆ ಪ್ರೇಮಪೂರ್ಣವಾಗಿಯೂ ರಾಬಿಯಾ ಭಗವಂತನ ಉಪಾಸನೆ ನಡೆಸಿದಳು. 

ಬೆಸುಗೆಯ ಕೊಂಡಿಗಳು
ಸೂಫೀ ತತ್ತ್ವಕ್ಕೂ ವೇದಾಂತಕ್ಕೂ ನಂಟಿದೆ. ಜಲಾಲುದ್ದಿನ್ ರೂಮಿಯೂ ಸೇರಿದಂತೆ ಪರ್ಷಿಯಾದ ಸೂಫಿ ಸಂತರು ಅಲ್ಲಲ್ಲಿ ತಮ್ಮ ಕೃತಿಗಳಲ್ಲಿ ಭಾರತವನ್ನು ತಮ್ಮ ತಿಳಿವಿನ ಮೂಲವೆಂದು ಹೇಳಿಕೊಳ್ಳುತ್ತಾರೆ. ಈ ಕಾರಣದಿಂದಲೇ ನಮ್ಮ ನೆಲದಲ್ಲಿ ಸೂಫೀ ತತ್ತ್ವವು ಬಹಳ ಬೇಗ ಬೆರೆತು ಸಹಜವೆಂಬಂತೆ ರೂಢಿಗೆ ಬರಲು ಸಾಧ್ಯವಾಯಿತು.

ಮೊಘಲ್ ವಂಶದ ಷಹಜಹಾನನ ಮಗ ದಾರಾಶಿಕೋ ಸ್ವತಃ ಸೂಫೀ ಪಂಥೀಯನಾಗಿದ್ದು, ವೇದಾಂತ ಹಾಗೂ ಇಸ್ಲಾಮ್ ತತ್ತ್ವಗಳೆರಡರಲ್ಲೂ ಅಪಾರ ಅಧ್ಯಯನ ನಡೆಸಿದ್ದನು. ಸೂಫಿ ಹಾಗೂ ವೇದಗಳ ತುಲನೆ ನಡೆಸುತ್ತಾ ಆತ್ಯಂತಿಕವಾಗಿ ಇವೆರಡೂ ಒಂದೇ ಸತ್ಯವನ್ನು ಅರಹುವ ಚಿಂತನೆಗಳಾಗಿವೆ ಎಂದು ನಿರೂಪಿಸಿದ್ದನು. ಅಕ್ಬರನ `ದೀನ್ ಇಲಾಹಿ’ ಕೂಡ ಸೂಫೀ ಹಾಗೂ ವೇದಾಂತ ಚಿಂತನೆಗಳ ಮಿಶ್ರಣವಾಗಿತ್ತು.

ಭಾರತವೂ ಸೇರಿದಂತೆ ಇಸ್ಲಾಮ್ ಧರ್ಮವು ಹರಡಿಕೊಂಡಲ್ಲೆಲ್ಲ ಸೂಫಿ ಚಿಂತನೆಗಳೂ ಹರಡಿ ಆಯಾ ಸ್ಥಳೀಯ ಧರ್ಮ ಹಾಗೂ ಇಸ್ಲಾಮ್ ನಡುವೆ ಒಂದು ಹಂತದ ಬಾಂಧವ್ಯ ಬೆಸೆಯಲು ಪ್ರೇರಣೆಯಾದವು.
ಯಾವ ಆಧ್ಯಾತ್ಮಿಕ ಪಂಥವು ಸಾಂಪ್ರದಾಯಿಕ ಆಚರಣೆಗಳಿಗೆ ಕಟ್ಟು ಬೀಳದೆ, ಶುದ್ಧ ಮಾನವೀಯತೆಯನ್ನೂ ಮಾನವ ಪ್ರೇಮವನ್ನೂ ಪ್ರತಿಪಾದಿಸುತ್ತದೆಯೋ ಅದು ಸಹಜವಾಗಿಯೇ ಸ್ವಾಗತಾರ್ಹವೆನ್ನಿಸುತ್ತದೆ.
ಸೂಫೀ ಪಂಥ ಕೂಡ ಚಿಂತನೆಗಳಿಗೆ ಚೌಕಟ್ಟು ಹಾಕುವ ಆಚರಣೆಗಳಿಂದ ತನ್ನನ್ನು ಬಿಡಿಸಿಕೊಂಡು ಮುಕ್ತವಾಗಿತ್ತು. ಹಾಗೆಂದೇ ಅದು ವಿಶ್ವಾದ್ಯಂತ ಒಲುಮೆಯನ್ನು ಪಡೆಯಿತು. ಜನಸಾಮಾನ್ಯರ ನಡುವೆ ಬೆರೆತು ಸಹಜ ಆಯಾ ನೆಲದ ಗುಣಗಳನ್ನೆ ಮೈಗೂಡಿಸಿಕೊಂಡು ಒಂದಾಯಿತು. 
`ಏಕಂ ಸತ್ ವಿಪ್ರಾಃ ಬಹುಧಾ ವದನ್ತಿ’ ಎನ್ನುವ ವೇದೋಕ್ತಿಯಂತೆ ಸೂಫೀ ತತ್ತ್ವವು – ಇರುವುದೊಂದೆ ಸತ್ಯ, ಅದನ್ನು ಯಾವ ಬಗೆಯಿಂದಲಾದರೂ ಕಂಡುಕೊಳ್ಳಿ ಎಂದಿತಲ್ಲದೆ, ಪ್ರೇಮಪೂರಿತ ಕಣ್ಣುಗಳಿಗೆ ಈ ಸತ್ಯ ಹೆಚ್ಚು ಶೀಘ್ರವಾಗಿ ಮತ್ತು ಸ್ಪಷ್ಟವಾಗಿ ಗೋಚರಿಸುವುದು ಎಂದೂ ಸಾರಿತು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.