ನಾದಯೋಗಿಯ ಮೇಲೊಂದು ಪ್ರಯೋಗ : ಗುರು ನಿತ್ಯ ಚೈತನ್ಯ ಯತಿ

guruದೇಹದ ಯಾವುದೇ ಅಂಗದ ಸಣ್ಣ ಚಲನೆ ಕೂಡಾ ಮೆದುಳಿನ ತರಂಗಗಳ ಆವೃತ್ತಿಯನ್ನು ಹೆಚ್ಚಿಸುತ್ತದೆ. ಆದರೆ ಸ್ವಾಮೀಜಿ ನಲವತ್ತು ನಿಮಿಷಗಳ ಕಾಲ ಉಸಿರು ನಿಲ್ಲಿಸಿ ತಾಳವನ್ನು ಅರವತ್ನಾಲ್ಕು ಮಾತ್ರೆಗಳ ಹಂತದವರೆಗೂ ಕೊಂಡೊಯ್ದು ತಬಲಾ ನುಡಿಸಿದರೂ ಅವರ ಮೆದುಳಿನ ವಿದ್ಯುತ್‌ ತರಂಗಗಳು ಬೀಟಾದಲ್ಲಿಯೇ ಸ್ಥಿರವಾಗಿದ್ದವು. ಮೆದುಳಿನ ಕೆಲಸ ಅನೈಚ್ಚಿಕ. ಆದರೆ ಯೋಗಿಯೊಬ್ಬ ತನಗೆ ಬೇಕಾದಂತೆ ನಿಯಂತ್ರಿಸುತ್ತಾನೆ ಎಂಬುದನ್ನು ನಾವು ಸಾಬೀತು ಮಾಡಿದ್ದೆವು. ನಾದೋಪಾಸನೆಯ ಮೂಲಕ ಸಾಧಿಸುವ ನಾದಲಯ ಮುಂದೆ ಅಧ್ಯಯನ ವಿಷಯವಾಯಿತು ~ ಮಲಯಾಳಂ ಮೂಲ : ಗುರು ನಿತ್ಯ ಚೈತನ್ಯ ಯತಿ | ಭಾವಾನುವಾದ : ಎನ್ ಎ ಎಂ ಇಸ್ಮಾಯಿಲ್

1964ರಲ್ಲಿ ಯಾವುದೋ ಕಾರಣಕ್ಕಾಗಿ ಋಷಿಕೇಶಕ್ಕೆ ಹೋಗಿ ಶಿವಾನಂದಾಶ್ರಮದಲ್ಲಿ ಉಳಿದುಕೊಳ್ಳಬೇಕಾಯಿತು. ಅಲ್ಲಿರುವ ಒಂದು ಕಟ್ಟಡದಿಂದ ರಾತ್ರಿ ಹಗಲೆನ್ನದೆ ಹಾಡು ಕೇಳಿಬರುತ್ತಿತ್ತು. ಈ ಹಾಡಿನ ಮಾಧುರ್ಯಕ್ಕೆ ಮಾರುಹೋದ ನಾನು ಆ ಕಟ್ಟಡ ಬಾಗಿಲನ್ನೊಮ್ಮೆ ತಟ್ಟಿ ನೋಡಿದೆ. ಆಗ ಹಾಡು ನಿಂತು ಬಾಗಿಲು ತೆರೆದುಕೊಂಡಿತು.

ಬಾಗಿಲು ತೆರೆದದ್ದು ಸುಮಾರು ಐವತ್ತರ ಆಸುಪಾಸಿನಲ್ಲಿದ್ದ ಒಬ್ಬ ಸನ್ಯಾಸಿ. ಕಾವಿಧಾರಿ. ಮುಂಡನಕ್ಕೆ ಒಳಗಾದ ತಲೆ. ಮುಖದಲ್ಲಿಯೂ ಕೂದಲುಗಳಿಲ್ಲ.
ಸನ್ಯಾಸಿಗಳ ಹೆಸರು ಕೇಳುವ ಅಗತ್ಯವಿಲ್ಲ. ಸುಮ್ಮನೆ ಸ್ವಾಮೀಜಿ ಎಂದು ಕರೆದರೆ ಸಾಕು. `ಸ್ವಲ್ಪ ಹೊತ್ತು ಹಾಡು ಕೇಳಲೇ ಸ್ವಾಮೀಜಿ?’ ಎಂದೆ.

ಸ್ವಾಮೀಜಿ ಇದಕ್ಕೊಪ್ಪಿದ್ದಷ್ಟೇ ಅಲ್ಲದೆ ನನಗೊಂದು ವಿಶೇಷಾತಿಥಿಯ ಸ್ಥಾನ ನೀಡಿ ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡರು.

ಆಮೇಲೆ ಅವರು ಸುಮಾರು ಒಂದು ಗಂಟೆಗಳ ಕಾಲ ಹಾಡಿದರು. ಹಾಡಿನಲ್ಲಿ `ತನ್ನನ ತಾನನ ತನ್ನಾನ’ ಎಂಬುದನ್ನು ಬಿಟ್ಟರೆ ಬೇರೊಂದು ಪದವೂ ಇರಲಿಲ್ಲ.

`ತಾವೇಕೆ ಇತರ ಸಂಗೀತಗಾರರಂತೆ ಹಾಡದೆ ಬರೇ ತನನ ಹಾಡುತ್ತೀರಲ್ಲಾ?’ ಎಂದು ಪ್ರಶ್ನಿಸಿದೆ.

ಅದಕ್ಕೆ ಆತ `ನಾನು ಭಾಗವತನಲ್ಲ. ನಾನು ನಾದಯೋಗಿ. ನಾನು ನಾದಾನುಸಂಧಾನಕ್ಕಾಗಿ ಹಾಡುತ್ತೇನೆ. ಅಕ್ಬರನ ಆಸ್ಥಾನದಲ್ಲಿ ತಾನ್‌ಸೇನ್‌ ಎಂಬ ಸಂಗೀತಗಾರನಿದ್ದ. ಆತ ನಾದಯೋಗಿ. ಅವನು ರೂಪುಕೊಟ್ಟ ರಾಗಗಳನ್ನು ಬಳಸಿ ನಾನು ನಾದಾನುಸಂಧಾನ ಮಾಡುತ್ತಿದ್ದೇನೆ’ ಎಂದು ಉತ್ತರಿಸಿದರು.

ಈ ಮಾತುಗಳನ್ನಾಡುವಾಗ ಅವರ ಮುಖದಲ್ಲಿದ್ದ ಅಸಾಧಾರಣ ಕಾಂತಿ ಮತ್ತು ವಿವರಣೆಯ ಸೌಮ್ಯತೆ ನನ್ನನ್ನು ಆಕರ್ಷಿಸಿದವು. ನಾನು ಸೈಕಿಕ್‌ ಅಂಡ್‌ ಸ್ಪಿರಿಚ್ಯುವಲ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕನೆಂದು ಪರಿಚಯಿಸಿಕೊಂಡು ನಮ್ಮ ಸಂಶೋಧನೆಗಳಲ್ಲಿ ಸಂಗೀತ ಸಂಬಂಧೀ ಅಧ್ಯಯನಗಳೂ ಇವೆ ಎಂದು ವಿವರಿಸಿದೆ.

ಸ್ವಾಮೀಜಿಗೆ ನಮ್ಮ ಸಂಶೋಧನೆಗಳ ಕುರಿತು ಕುತೂಹಲ ಉಂಟಾಗಿ ಪ್ರಶ್ನಿಸತೊಡಗಿದರು. ನಾದಯೋಗದ ಕುರಿತು ಸಂಶೋಧನೆಗಳನ್ನು ನಡೆಸುವುದಕ್ಕೆ ಇರುವ ಅತಿದೊಡ್ಡ ತೊಂದರೆಯೆಂದರೆ ನಾದಯೋಗಿಗಳು ಸಿಗದೇ ಇರುವುದು ಎಂಬುದನ್ನು ಅವರಿಗೆ ಅರ್ಥ ಮಾಡಿಸಿದೆ.

ಮಂತ್ರಯೋಗ, ಲಯಯೋಗ, ನಾದಯೋಗ ಮುಂತಾದುವುಗಳೆಲ್ಲಾ ಪರಸ್ಪರ ಸಂಬಂಧ ಹೊಂದಿವೆ. ನನ್ನೊಂದಿಗೆ ಚರ್ಚಿಸುತ್ತಿದ್ದ ಸ್ವಾಮೀಜಿ `ತಾನ’ವನ್ನು ಮಂತ್ರದಂತೆ ಪಠಿಸಿ ಲಯ ಸಾಧಿಸುತ್ತಿದ್ದರು.

ಒಬ್ಬ ಮಹಾಯೋಗಿಯನ್ನು ಅವರ ಯೋಗ್ಯತೆಗೂ ಚರ್ಯೆಗೂ ಹೊಂದದ ಕೆಲಸಗಳಲ್ಲಿ ತೊಡಗಿಸುವುದು ತಪ್ಪು ಎಂಬುದು ನನಗೆ ತಿಳಿದದ್ದರಿಂದ ನಾನು ಕ್ಷಮಾಪಣೆಯ ಧ್ವನಿಯಲ್ಲಿ ಅವರನ್ನು ದಿಲ್ಲಿಗೆ ಆಹ್ವಾನಿಸಿದೆ.

ಅವರ ಕುರಿತು ಇನ್ನಷ್ಟು ತಿಳಿಯಲು ಅವರ ಹೆಸರು, ಹುಟ್ಟು, ಶಿಕ್ಷಣ ಮೊದಲಾದುವುಗಳ ಬಗ್ಗೆ ಕೇಳಿದೆ. ಸ್ವಾಮೀಜಿಯ ಹೆಸರು ನಾದ ಬ್ರಹ್ಮಾನಂದ. ಅವರು ಹುಟ್ಟಿದ್ದು ಮೈಸೂರಿಗೆ ಹತ್ತಿರದ ಯಾವುದೋ ಹಳ್ಳಿಯಲ್ಲಿ. ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹಿಂದೂ-ಮುಸ್ಲಿಂ ಬಾಂಧವ್ಯ ಅನನ್ಯ. ಮುಸ್ಲಿಮರ ಮನೆಗಳಲ್ಲೂ ಹಿಂದೂ ಆಚಾರಗಳ ಅನುಷ್ಠಾನ ಅಲ್ಲಿ ಸಾಮಾನ್ಯ. ಭಾರತದಲ್ಲಿ ಮತ್ತೆಲ್ಲೂ ಕಾಣದಷ್ಟು ಸೂಫಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಾಣಸಿಗುತ್ತಾರೆ. ಕಬೀರ್‌ದಾಸ್‌, ಶಿರಡಿ ಸಾಯಿಬಾಬಾ ಮೊದಲಾದವರಂತೆ ಖುರಾನ್‌ ಮತ್ತು ರಾಮಾಯಣಗಳೆರಡರ ಬಗ್ಗೆಯೂ ಅವರಿಗೆ ಸಮಾನ ನಿಷ್ಠೆ. ಅಂಥ ಒಬ್ಬರು ಸೂಫಿ ತಾನ್‌ಸೇನ್‌ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದು ನಾದಯೋಗಿಯಾಗಿದ್ದರು.

ನಾದ ಬ್ರಹ್ಮಾನಂದ ಸ್ವಾಮೀಜಿ ತಮ್ಮ ಶಾಲಾ ಶಿಕ್ಷಣ ಮುಗಿದ ಮೇಲೆ ಈ ಯೋಗಿಯ ಬಳಿ ತಾನ ಕಲಿತರಂತೆ. ನಾದ ಬ್ರಹ್ಮಾನಂದ ಸ್ವಾಮೀಜಿ ಕಾಲೇಜಿಗೆ ಹೋಗಿದ್ದಾರೋ ಇಲ್ಲವೋ ಎಂಬುದನ್ನು ನಾನು ಕೇಳಲಿಲ್ಲ. ಆದರೆ ಅವರ ಮಾತುಗಳು ಉನ್ನತ ಶಿಕ್ಷಣ ಪಡೆದಿರುವ ಕುರುಹುಗಳನ್ನು ಒದಗಿಸುತ್ತಿದ್ದವು.

ಯೋಗದ ಕುರಿತು ಸಂಶೋಧನೆಗಳನ್ನು ನಡೆಸುವಾಗ ಯೋಗಿಯ ಹಿನ್ನೆಲೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಾವು ಅಧ್ಯಯನ ಮುಂದುವರಿಸುತ್ತೇವೆ. ಇದು ಒಂದೇ ಕೋಣೆಯಲ್ಲಿ ನಾಯಿ, ಮೊಲ, ಕೋತಿಗಳು ಒಟ್ಟಿಗೆ ಶಿಕ್ಷಣ ಪಡೆಯುವಂತೆ ಇರುತ್ತದೆ. ಇದರಿಂದ ತಮಗೆ ತೊಂದರೆಯಾಗಬಹುದು ಎಂದು ನಾದಬ್ರಹ್ಮಾನಂದರಲ್ಲಿ ಹೇಳಿದೆ. ಅವರದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. `ನನಗೆ ಈ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿಯಿದೆ’ ಎಂದವರು ಒತ್ತಿ ಹೇಳಿದಾಗ ನನಗೆ ಸಂತೋಷವೇ ಆಯಿತು.

ನಲವತ್ತು ನಿಮಿಷಗಳ ಕಾಲ ಉಸಿರಾಡದೆ ತಬಲ ನುಡಿಸುವುದು ನಾದಬ್ರಹ್ಮಾನಂದರ ಸಿದ್ಧಿಗಳಲ್ಲಿ ಒಂದು. ಆ ಹೊತ್ತಿನಲ್ಲಿ ಅವರ ಮೆದುಳಿನೊಳಗೆ ನಡೆಯುವ ವಿದ್ಯುತ್ಕಾಂತೀಯ ಪ್ರಕ್ರಿಯೆ ಹೇಗಿರುತ್ತದೆ ಎಂದು ಅಧ್ಯಯನ ಮಾಡಲು ನಾವು ಯೋಜನೆ ರೂಪಿಸಿದೆವು. ಹಾಗೆಯೇ ಅವರು ಧ್ಯಾನದ ಮೂಲಕ ಬಹಳ ಹೊತ್ತು ನಾದಸಮಾಧಿಯಲ್ಲಿ ಇರುತ್ತಾರೆ ಎಂಬುದೂ ಕೂಡಾ ನಮಗೆ ಒಳ್ಳೆಯ ಅಧ್ಯಯನ ವಿಷಯ ಎನಿಸಿತ್ತು.

ನನ್ನ ಆಹ್ವಾನಕ್ಕೆ ಮನ್ನಣೆಯಿತ್ತ ಸ್ವಾಮೀಜಿ ತಮ್ಮ ಸಂಗೀತೋಪಕರಣಗಳ ಜತೆಗೆ ದಿಲ್ಲಿಗೆ ಬಂದರು. ಕುಶಲ ವಿಚಾರಿಸುವಂಥ ಯಾವುದೇ ಔಪಚಾರಿಕತೆಗಳನ್ನು ಅವರು ಪಾಲಿಸುತ್ತಿರಲಿಲ್ಲ. ಬಂದವರು ಅವರಿಗಾಗಿ ಏರ್ಪಾಡು ಮಾಡಲಾಗಿದ್ದ ವಸತಿಯಲ್ಲಿ ಉಳಿದುಕೊಂಡರು.

ಒಬ್ಬ ಅಸಾಮಾನ್ಯ ನಾದಯೋಗಿಯನ್ನು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಪ್ರಯೋಗಕ್ಕೆ ಗುರಿಪಡಿಸಲಾಗುತ್ತಿದೆ ಎಂಬುದು ಪತ್ರಿಕೆಗಳಿಗೆ ಹೇಗೋ ತಿಳಿದು ಸುದ್ದಿಯಾಗಿತ್ತು. ಆಮೇಲೆ ನನ್ನ ದೂರವಾಣಿಗೆ ಕರೆಗಳ ಮೇಲೆ ಕರೆಗಳು. ಈ ಪ್ರಯೋಗ ವೀಕ್ಷಣೆಗೆ ದಿಲ್ಲಿಯಲ್ಲಿದ್ದ ಎಲ್ಲಾ ರಾಯಭಾರ ಕಚೇರಿಗಳಿಂದಲೂ ಹಲವರು ಬಂದರು.
ಅಂದೇ ಇನ್ನೊಂದು ಪ್ರಯೋಗಕ್ಕಾಗಿ ಐಐಎಂಸ್‌ನ ನ್ಯೂರೋ ಫಿಸಿಯಾಲಜಿ ವಿಭಾಗಕ್ಕೆ ಒಂದು ಕೋತಿಯನ್ನು ತರಲಾಗಿತ್ತು. ಅದರ ಕೈಕಾಲು ಕಟ್ಟಿ ಕುರ್ಚಿಯಲ್ಲಿ ಕುಳ್ಳಿರಿಸಲಾಗಿತ್ತು. ಅದರ ಎಲೆಕ್ಟ್ರೋ ಎನ್‌ಸೆಫಲೋಗ್ರಾಪ್‌ (ಇಇಜಿ) ತೆಗೆಯಲು ಅಡಿಯಿಂದ ಮುಡಿಯವರೆಗೆ ಹಲವೆಡೆ ವಯರ್‌ಗಳನ್ನು ಅಳವಡಿಸಿಡಲಾಗಿತ್ತು. ನಮ್ಮ ಪ್ರಯೋಗ ನಡೆಯುವಲ್ಲಿಗೆ ಬರುವವರು ಈ ಕೋತಿಯ ದರ್ಶನವನ್ನು ಮಾಡಿಕೊಂಡೇ ಬರಬೇಕಿತ್ತು. ಸ್ವಾಮೀಜಿಯ ಮೇಲೂ ನಾವು ಇಂಥದ್ದೇ ಒಂದು ಪ್ರಯೋಗ ನಡೆಸುತ್ತಿದ್ದರಿಂದ ಸ್ವಾಮೀಜಿ ಆ ಕೋತಿಯನ್ನು ನೋಡುವುದು ನನಗೆ ಅಷ್ಟೇನೂ ಇಷ್ಟವಿರಲಿಲ್ಲ. ಆದರೇನು ಮಾಡುವುದು…

ವಿವಿಧ ರಾಯಭಾರ ಕಚೇರಿಗಳಿಂದ ಪ್ರಯೋಗ ವೀಕ್ಷಣೆಗೆ ಬಂದ ವಿಐಪಿಗಳಿಗೆಲ್ಲಾ ಕುರ್ಚಿಗಳ ವ್ಯವಸ್ಥೆಯನ್ನೂ ಮಾಡಬೇಕಾಯಿತು. ಕೋಟು ಬೂಟುಗಳೊಂದಿಗೆ ಬಂದಿದ್ದ ವಿಐಪಿಗಳೆಲ್ಲಾ ಆಸೀನರಾದ ನಂತರ ಸ್ವಾಮಿಜಿಗೂ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಯಿತು.
ಮೊದಲ ಪ್ರಯೋಗದ ಉದ್ದೇಶ ಸ್ವಾಮೀಜಿ ಧ್ಯಾನಿಸುತ್ತಿರುವಾಗ ಇಇಜಿಯಲ್ಲಿ ಆಲ್ಫಾ ರಿದಂ ಸಿಗುತ್ತದೆಯೇ? ಸಿಕ್ಕರೆ ಅದೆಷ್ಟು ಕಾಲ ಸ್ಥಿರವಾಗಿರುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು.

ಸ್ವಾಮೀಜಿ ಧ್ಯಾನಿಸುವಾಗ ಕಣ್ಣು ಮುಚ್ಚುತ್ತಿರಲಿಲ್ಲ. ಅರ್ಧನಿಮೀಲಿತ ನೇತ್ರರಾಗಿ ಧ್ಯಾನಿಸುವುದು ಅವರ ವಿಧಾನ. ಹಾಗಾಗಿ ಸ್ವಾಮೀಜಿ ಧ್ಯಾನಕ್ಕಾಗಿ ಕುಳಿತರೆ ಅವರಿಗೆ ಎದುರು ಕುಳಿತ ವಿಐಪಿಗಳ ಬೂಟುಗಳು ಮಾತ್ರ ಕಾಣಿಸುವಂಥ ಸ್ಥಿತಿ ಪ್ರಯೋಗ ಶಾಲೆಯಲ್ಲಿತ್ತು. ಸ್ವಾಮೀಜಿ ತಮ್ಮ ಗುರುಗಳ ಮುಖಾರವಿಂದವನ್ನು ಧ್ಯಾನಿಸುತ್ತಿದ್ದರು. ಅಂತಲ್ಲಿ ಬೂಟುಗಳು ಕಂಡರೆ ಏನಾಗಬೇಡ.

ಒಬ್ಬ ಹಿಂದೂ ಆಚಾರ್ಯರ ವೈದಿಕ ನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಇದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ. ಆದರೂ ಸ್ವಾಮೀಜಿ ಇದನ್ನು ವಿರೋಧಿಸಲಿಲ್ಲ
ಎರಡು ಮೂರು ನಿಮಿಷಗಳಲ್ಲಿ ಇಇಜಿಯಲ್ಲಿ ಆಲ್ಫಾ ರಿದಂ ಕಾಣಿಸತೊಡಗಿತು. ಇದನ್ನು ಕಂಡ ನಮಗೆಲ್ಲಾ ಆಶ್ಚರ್ಯವಾಯಿತು. ಎಂಥಾ ಸ್ಥಿತಿಯಲ್ಲೂ ಒಬ್ಬ ಯೋಗಿ ಆತ್ಮ ಸಂಯಮ ಸಾಧಿಸುತ್ತಾನೆ ಎಂಬುದನ್ನು ಇದು ಸಾಬೀತು ಮಾಡಿತು. ಇದಾದ ಮೇಲೆ ನಾವು ಮಾಡಿದ ಕೆಲಸವಂತೂ ಅತಿ ದೊಡ್ಡ ಸಾಹಸ ಎಂದೇ ಹೇಳಬೇಕು.

ಸ್ವಾಮೀಜಿಯ ಮೂಗು, ಬಾಯಿಯನ್ನು ಸಂಪೂರ್ಣವಾಗಿ ಮುಚ್ಚಿ ಅವರ ಉಸಿರಾಟವನ್ನು ನಿಲ್ಲಿಸಿ ಅವರು ತಬಲ ನುಡಿಸವಷ್ಟೂ ಹೊತ್ತು ಬೀಟಾ ರಿದಂ ಸ್ಥಿರವಾಗಿರುತ್ತದೆಯೇ ಎಂಬುದನ್ನು ನಾವು ಪರೀಕ್ಷಿಸಬೇಕಾಗಿತ್ತು. ಸ್ವಾಮೀಜಿ ಹೇಳಿದಂತೆ ನಲವತ್ತು ನಿಮಿಷ ಶ್ವಾಸೋಚ್ಛ್ವಾಸವನ್ನು ನಿಲ್ಲಿಸಲು ಸಾಧ್ಯವೇ? ಈ ಸ್ಥಿತಿಯಲ್ಲಿ ನಾಲ್ಕು, ಎಂಟು, ಹದಿನಾರು, ಮೂವತ್ತೆರಡರ ತಾಳಕ್ರಮದಲ್ಲಿ ತಬಲಾ ಬಾರಿಸಲು ಅವರಿಗೆ ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿತ್ತು.

ಪ್ರಯೋಗಾಲಯದಲ್ಲಿದ್ದ ಎಲ್ಲಾ ವೈದ್ಯರಿಗೂ, ಫಿಸಿಯೋಲಜಿಸ್ಟ್‌ಗಳಿಗೂ ನಮ್ಮ ಪ್ರಯೋಗ ಅತ್ಯಂತ ಕ್ರೂರ ಮತ್ತು ನಿಯಮಬಾಹಿರ ಎನಿಸತೊಡಗಿತ್ತು. ಪ್ರಯೋಗದ ನಡುವೇ ಸ್ವಾಮೀಜಿ ಉಸಿರುಕಟ್ಟಿ ಮೃತಪಟ್ಟರೆ ಉಸಿರುಗಟ್ಟಿಸಿ ಕೊಂದ ಆರೋಪವನ್ನು ನಾವೆಲ್ಲರೂ ಹೊರಬೇಕಾಗುತ್ತಿತ್ತು. ಆದ್ದರಿಂದ `ಇದನ್ನು ನನ್ನಿಷ್ಟಕ್ಕೆ ಅನುಗುಣವಾಗಿ ಮಾಡುತ್ತಿದ್ದೇನೆ. ಈ ಹಿಂದೆಯೂ ಇಂಥದ್ದನ್ನು ಮಾಡಿದ್ದೇನೆ. ಈವರೆಗೆ ಯಾವ ಅಪಾಯವೂ ಸಂಭವಿಸಿಲ್ಲ. ಒಂದು ವೇಳೆ ಈ ಪ್ರಯೋಗದಲ್ಲಿ ಅಪಾಯವೇನಾದರೂ ಆದರೆ ಅದಕ್ಕೆ ನಾನೇ ಜವಾಬ್ದಾರ’ ಎಂಬ ಒಕ್ಕಣೆಯುಳ್ಳ ಕರಾರು ಪತ್ರವೊಂದಕ್ಕೆ ಸ್ವಾಮೀಜಿಯವರಿಂದ ಸಹಿ ಹಾಕಿಸಿದ ನಂತರವಷ್ಟೇ ಪ್ರಯೋಗ ಮುಂದುವರಿಸಲು ವೈದ್ಯರು ಒಪ್ಪಿದರು.

ಮೂಗು ಮತ್ತು ಬಾಯಲ್ಲಿ ಗಾಳಿ ಹೊರಬರದಂತೆ ತಾನು ಒಳಗಿನಿಂದ ಅವುಗಳನ್ನು ಮುಚ್ಚುವುದರಿಂದ ಹೊರಗಿನಿಂದ ಅವನ್ನು ಮುಚ್ಚುವ ಅಗತ್ಯವಿಲ್ಲ ಎಂಬುದು ನಾದ ಬ್ರಹ್ಮಾನಂದಜಿ ಅವರ ಅಭಿಪ್ರಾಯ. ಆದರೆ ಪ್ರಯೋಗ ನಡೆಸುತ್ತಿರುವವರಿಗೆ ಅಗತ್ಯವಿರುವ ನಿಖರತೆಗಾಗಿ ಎಲೆಕ್ಟ್ರೋ ಫಿಸಿಯಾಲಜಿ ಪ್ರೊಫೆಸರ್‌ ಡಾ.ಛಿನ್ನ ಅವರೇ ಸ್ವಾಮೀಜಿಯವರ ಮೂಗನ್ನು ಗಟ್ಟಿಯಾಗಿ ಒತ್ತಿ ಹಿಡಿಯಲು ಒಪ್ಪಿದರು. ನಾವು ಅವರನ್ನು ನಿಜಕ್ಕೂ ಒಂದು ಕ್ರೂರ ಕ್ರಿಯೆಗೆ ಒಪ್ಪಿಸಿದ್ದೆವು.

ಎರಡು ಮೂರು ನಿಮಿಷಗಳಿಗಿಂತ ಹೆಚ್ಚಾಗಿ ಯಾರಿಗೂ ಉಸಿರುಕಟ್ಟಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಮೆದುಳಿಗೆ ಆಘಾತವಾಗುತ್ತದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೂ ನಾವು ಪ್ರಯೋಗವನ್ನು ನಡೆಸಿಯೇ ತೀರಿದೆವು.

ಅದ್ಭುತ!

ದೇಹದ ಯಾವುದೇ ಅಂಗದ ಸಣ್ಣ ಚಲನೆ ಕೂಡಾ ಮೆದುಳಿನ ತರಂಗಗಳ ಆವೃತ್ತಿಯನ್ನು ಹೆಚ್ಚಿಸುತ್ತದೆ. ಆದರೆ ಸ್ವಾಮೀಜಿ ನಲವತ್ತು ನಿಮಿಷಗಳ ಕಾಲ ಉಸಿರು ನಿಲ್ಲಿಸಿ ತಾಳವನ್ನು ಅರವತ್ನಾಲ್ಕು ಮಾತ್ರೆಗಳ ಹಂತದವರೆಗೂ ಕೊಂಡೊಯ್ದು ತಬಲಾ ನುಡಿಸಿದರೂ ಅವರ ಮೆದುಳಿನ ವಿದ್ಯುತ್‌ ತರಂಗಗಳು ಬೀಟಾದಲ್ಲಿಯೇ ಸ್ಥಿರವಾಗಿದ್ದವು. ಮೆದುಳಿನ ಕೆಲಸ ಅನೈಚ್ಚಿಕ. ಆದರೆ ಯೋಗಿಯೊಬ್ಬ ತನಗೆ ಬೇಕಾದಂತೆ ನಿಯಂತ್ರಿಸುತ್ತಾನೆ ಎಂಬುದನ್ನು ನಾವು ಸಾಬೀತು ಮಾಡಿದ್ದೆವು. ನಾದೋಪಾಸನೆಯ ಮೂಲಕ ಸಾಧಿಸುವ ನಾದಲಯ ಮುಂದೆ ಅಧ್ಯಯನ ವಿಷಯವಾಯಿತು.

ನಮ್ಮ ಪ್ರಯೋಗವನ್ನು ಅತ್ಯಂತ ಕುತೂಲದಿಂದ ಮತ್ತು ಅಷ್ಟೇ ಸೂಕ್ಷ್ಮವಾಗಿ ಪರಿಶೀಲಿಸಿವದರಲ್ಲಿ ರೋಡ್ರಿಗಸ್‌ ಕೂಡಾ ಒಬ್ಬರು. ಅವರು ಚಿಲಿ ರಾಯಭಾರ ಕಚೇರಿಯಿಂದ ಬಂದಿದ್ದ ಒಬ್ಬ ವಿಜ್ಞಾನಿ. ಮುಂದೆ ಅವರು ಸ್ವಾಮೀಜಿಯನ್ನು ಚಿಲಿ ರಾಯಭಾರ ಕಚೇರಿಗೆ ಕರೆದೊಯ್ದು ಮತ್ತಷ್ಟು ಪ್ರಯೋಗಗಳಿಗೆ ಗುರಿಪಡಿಸಿದರು. ಸ್ವಾಮಿಜಿಯ ಹೊಟ್ಟೆ, ಎದೆ, ಕೆನ್ನೆ ಮುಂತಾದೆಡೆಗಳಿಂದೆಲ್ಲಾ ಸ್ವಾಮೀಜಿ ಹಾಡುವ ತಾನವನ್ನು ಧ್ವನಿಮುದ್ರಿಸಿಕೊಂಡರು.
ಸಂಗೀತದಿಂದ ಸಾಂಧ್ರವಾಗಿದ್ದ ಅವರ ದೇಹ ನಮಗೆ ಒಂದು ಅದ್ಭುತ ವಸ್ತುವಿನಂತೆ ಕಾಣಿಸುತ್ತಿತ್ತು.

ಪ್ರಯೋಗಗಳ ಫಲಿತಾಂಶಕ್ಕಿಂತ ಆಕರ್ಷಣೀಯವಾಗಿದ್ದದ್ದು ಆ ಮಹಾತ್ಮನ ಅತ್ಯಂತ ವಿನಯಪೂರ್ವಕ ನಡವಳಿಕೆ ಮತ್ತು ಪ್ರಯೋಗಗಳಿಗೆ ಅವರು ನೀಡುತ್ತಿದ್ದ ಸಹಕಾರ. ಸ್ವಾಮಿ ಬ್ರಹ್ಮಾನಂದರು ಪರಿಚಯವಾಗದೇ ಅವರ ಸಾಧನೆಗಳನ್ನು ವೈಜ್ಞಾನಿಕ ಪ್ರಯೋಗಗಳಿಗೆ ಒಳಪಡಿಸಿ ವಿಶ್ಲೇಷಿಸಲು ಸಾಧ್ಯವಾಗದೇ ಇದ್ದಿದ್ದರೆ ನಾನಿನ್ನೂ ಭಾರತೀಯ ಯೋಗ ಸಿದ್ಧಿಗಳನ್ನು ಅಪನಂಬಿಕೆಯಿಂದಲೇ ನೋಡುತ್ತಿದ್ದನೇನೋ?

ಮನಸ್ಸಿನ ಕ್ರಿಯೆಗಳಾದ ವಿಚಾರ, ಮನನ, ಧ್ಯಾನ ಎಂಬವುಗಳ ಮೂಲಕ ರಕ್ತ ಪರಿಚಲನೆ, ಮೆದುಳಿನೊಳಗಿನ ವಿದ್ಯುತ್ಕಾಂತೀಯ ಪ್ರಕ್ರಿಯೆ ಮುಂತಾದುವುಗಳನ್ನೆಲ್ಲಾ ನಿಯಂತ್ರಿಸಲು ಸಾಧ್ಯ ಎಂಬುದನ್ನು ಅವರೊಂದಿಗಿನ ಒಡನಾಟದಿಂದ ತಿಳಿಯಿತು. ಮುಂದೆ ಈ ಅನುಭವಗಳನ್ನು ನನ್ನ ಬದುಕಿನಲ್ಲಿ ಅತ್ಯಂತ ಉಪಯುಕ್ತವಾದ ರೀತಿಯಲ್ಲಿ ಬಳಸಲು ಸಾಧ್ಯವಾದದ್ದನ್ನು ನಾನಿಲ್ಲಿ ಸ್ಮರಿಸುತ್ತೇನೆ.

ಸುಮಾರು ಐವತ್ತು ವರ್ಷ ವಯಸ್ಸಿವರು ಎಂದು ನಾನಂದುಕೊಂಡಿದ್ದ ಸ್ವಾಮಿಜಿಯ ನಿಜವಾದ ವಯಸ್ಸು ಎಪ್ಪತ್ತನಾಲ್ಕು. ನಾನವರನ್ನು ಕೊನೆಯ ಬಾರಿ ಕಂಡದ್ದು ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ. ಅಂದೂ ನನಗೆ ನನಗವರ ನಾದಸಾಧನೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು. ಇದನ್ನು ಬರೆಯುವ ಹೊತ್ತಿಗೆ ಅವರು ನನ್ನಿಂದ ದೂರವಾಗಿದ್ದರೂ ಅವರು ನಾದದ ಮೂಲಕ ಹಚ್ಚಿದ್ದ ಹಣತೆ ನನ್ನ ಹೃದಯದೊಳಗೆ ಉರಿಯುತ್ತಲೇ ಇದೆ.

ಗುರು ನಿತ್ಯಚೈತನ್ಯ ಯತಿ 1924ರಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮುರಿಞಕಲ್ಲ್‌ ಎಂಬಲ್ಲಿ ಹುಟ್ಟಿದರು. 1952ರಲ್ಲಿ ಶ್ರೀ ನಾರಾಯಣಗುರುಗಳ ಉತ್ತರಾಧಿಕಾರಿಯಾಗಿದ್ದ ಶ್ರೀ ನಟರಾಜಗುರುಗಳ ಶಿಷ್ಯತ್ವ ಸ್ವೀಕರಿಸಿದರು. ತತ್ವಶಾಸ್ತ್ರ ಮತ್ತು ಮನೋವಿಜ್ಞಾನದ ವಿದ್ವಾಂಸರಾಗಿದ್ದ ಶ್ರೀ ನಿತ್ಯಚೈತನ್ಯ ಯತಿ ಇಂಗ್ಲಿಷ್‌ ಹಾಗೂ ಮಲೆಯಾಳಂನಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. 1999ರಲ್ಲಿ ಸಮಾಧಿಸ್ಥರಾಗುವವರೆಗೂ ಫರ್ನ್‌ ಹಿಲ್ಸ್‌ನ ನಾರಾಯಣ ಗುರುಕುಲಂ ಮತ್ತು ಈಸ್ಟ್‌ ವೆಸ್ಟ್‌ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿದ್ದರು. ಈ ಲೇಖನ ಯತಿಗಳ `ಮರಕ್ಕಾನಾವತ್ತವರ್‌’ ಪುಸ್ತಕದಲ್ಲಿರುವ ಇಬ್ಬರು ಅಸಾಧಾರಣ ಯೋಗಿಗಳ ಕುರಿತ ಲೇಖನದ ಆಯ್ದ ಭಾಗದ ಭಾವಾನುವಾದ .
ಎನ್ ಎ ಎಂ ಇಸ್ಮಾಯಿಲ್ ಅವರ ಬ್ಲಾಗ್ ನಿಂದ ಇದನ್ನು ಮರುಪ್ರಕಟಿಸಲಾಗುತ್ತಿದೆ . ಲೇಖನದ ಮೂಲ ಕೊಂಡಿ ಇಲ್ಲಿದೆ : https://ismail.in/2006/05/22/ನಾದಯೋಗಿಯ-ಮೇಲೊಂದು-ಪ್ರಯೋಗ/

Leave a Reply