“ನಾನೂ ನಿನ್ನಂತೆಯೇ ತೋಟಗಾರ. ಆದರೆ ನಾನು ಮಾಡುವ ಬೇಸಾಯ ನಿನ್ನ ಬೇಸಾಯದಂತಲ್ಲ…” ಅನ್ನುತ್ತಾ ಅಲ್ಲಮ ಪ್ರಭುಗಳು ತೋಟಗಾರ ಗೊಗ್ಗಯ್ಯನಿಗೆ ಕರ್ಮಯೋಗವನ್ನು ಅರ್ಥಮಾಡಿಸಿದರು. ಅನಂತರ ನಿಜಸಮಾಧಿಯ ಆನಂದವನ್ನೂ ತಮ್ಮ ಗುರುಗಳ ಮೂಲಕ ಪರಿಚಯಿಸಿದರು.
ಅಲ್ಲಮ ಪ್ರಭು ಬನವಾಸಿಯಿಂದ ಸಂಚಾರ ಹೊರಟು ಬೆಳವಲ ನಾಡಿನ ಅಂಚಿಗೆ ತಲುಪಿದ್ದರು. ಊರು ಪ್ರವೇಶಿಸುವ ಮುನ್ನ ಅವರನ್ನು ಸೊಂಪಾಗಿ ಬೆಳೆದುನಿಂತಿದ್ದ ತೋಟ ಸ್ವಾಗತ ಕೋರಿತು. ಅದರ ಒಡೆಯ ತೋಟಗಾರ ಗೊಗ್ಗಯ್ಯ ಅಲ್ಲಮಪ್ರಭುವನ್ನು ಸತ್ಕರಿಸಿದನು. ಅದಕ್ಕೆ ಮುಂಚೆ ಅವರಿಬ್ಬರ ನಡುವೆ ನಡೆದ ಸಂಭಾಷಣೆ ಗೊಗ್ಗಯ್ಯನ ಬದುಕನ್ನೇ ಬದಲಿಸಿತು.
ಆ ಸಂಭಾಷಣೆ ಹೀಗಿದೆ :
ಗೊಗ್ಗಯ್ಯ: ಸ್ವಾಮೀ, ತಾವು ಯಾರು?
ಅಲ್ಲಮ : ನಾನೊಬ್ಬ ಜಂಗಮ. ಎಲ್ಲೆಲ್ಲಿ ಶಿವಭಕ್ತರಿರುತ್ತಾರೋ ಅವರಲ್ಲಿ ಭಕ್ತಿಭಿಕ್ಷೆ ಬೇಡುವವನು. ನನ್ನನ್ನು ಅಲ್ಲಮನೆಂದು ಕರೆಯುತ್ತಾರೆ. ನಿನ್ನ ಹೆಸರೇನು? ನೀನು ಇಷ್ಟು ಕಷ್ಟಪಟ್ಟು ಬೇಸಾಐ ಮಾಡಲು ಕಾರಣವೇನು? ಈ ತೋಟದಿಂದ ನಿನಗೆ ಬರುವ ಭಾಗ್ಯವೇನು?
ಗೊಗ್ಗಯ್ಯ : ಇದು ನನ್ನ ಕುಲವೃತ್ತಿ. ನನ್ನ ಕುಲವೃತ್ತಿಯನ್ನು ಸಂತೋಷದಿಂದ ಮಾಡುವುದರಲ್ಲೇ ನನಗೆ ಸಾರ್ಥಕತೆ ಇದೆ ಎನಿಸುವುದು. ನಿಮ್ಮ ಕುಲವೃತ್ತಿ ಏನೆಂದು ತಿಳಿಯಬಹುದೆ?
ಅಲ್ಲಮ : ನಾನೂ ನಿನ್ನಂತೆಯೇ ತೋಟಗಾರ. ಆದರೆ ನಾನು ಮಾಡುವ ಬೇಸಾಯ ನಿನ್ನ ಬೇಸಾಯದಂತಲ್ಲ. ನನ್ನ ತೋಟ ಎಂಥದೆಂಬುದನ್ನು ಹೇಳುತ್ತೇನೆ ಕೇಳು.
(ಎನ್ನುತ್ತಾ ಅಲ್ಲಮ ಈ ವಚನವನ್ನು ಹೇಳುತ್ತಾರೆ)
ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ
ಗೊಗ್ಗಯ್ಯ : ಪ್ರಭುವೇ! ಬೇಸಾಯವೇ ನನ್ನ ಕಾಯಕ. ನಾನು ಕೇವಲ ಲೌಕಿಕ ವ್ಯಕ್ತಿ. ನೀವು ಕರುಣೆಯಿಂದ ನನಗೆ ಜ್ಞಾನಬೋಧನೆ ಮಾಡಬೇಕು.
ಅಲ್ಲಮ : ಗೊಗ್ಗಯ್ಯ, ಕೇವಲ ಬಾಹ್ಯಾಚರಣೆಗಳಿಂದ ನಿಜವಾದ ಸುಖ ದೊರೆಯುವುದಿಲ್ಲ. ಮಾಡುವ ಕರ್ಮಗಳೆಲ್ಲವನ್ನೂ ಶಿವಾರ್ಪಿತವೆಂಬ ಭಾವದಿಂದ ಮಾಡಿದಾಗ ಕರ್ಮವೆಂಬುದು ಕರ್ಮಯೋಗವಾಗುವುದು. ಆಗ ಶಿವನು ಬೇರೆಯಲ್ಲ, ನಾನು ಬೇರೆಯಲ್ಲ ಎಂಬ ತಾದಾತ್ಮ್ಯ ಉಂಟಾಗುವುದು. ಅಂತರ್ಮುಖಿಯಾಗಿ ಪರಶಿವ ತತ್ತ್ವದ ಚಿಂತನೆಯಲ್ಲಿ ಐಕ್ಯನಾದರೆ ಅದೇ ನಿಜಮುಕ್ತಿ.
ಗೊಗ್ಗಯ್ಯ : ಪ್ರಭುವೇ, ನಿಜ ಸಮಾಧಿ ಹೇಗಿರುತ್ತದೆ? ಅದರ ಅನುಭವ ನನ್ನಂಥಹ ಸಾಮಾನ್ಯನಿಗೂ ಸಾಧ್ಯವೇ?
ಅಲ್ಲಮ: ಯಾಕಾಗದು? ಅಂತಹ ಉನ್ನತ ಸ್ಥಿತಿಯಲ್ಲಿ ಶಿವಾನಂದವನ್ನು ಅನುಭವಿಸುತ್ತಿರುವ ಯೋಗಿಯೊಬ್ಬರನ್ನು ತೋರಿಸುತ್ತೇನೆ ಬಾ.
(ಅಲ್ಲಮ ಗೊಗ್ಗಯ್ಯನನ್ನು ಭೂಗರ್ಭದಲ್ಲಿ ಹುದುಗಿರುವ ದೇಗುಲವೊಂದಕ್ಕೆ ಕರೆದೊಯ್ಯುತ್ತಾನೆ)
ನೋಡು! ಇವರು ಅನಿಮಿಷಯ್ಯ ಎಂಬ ಮಹಾಯೋಗಿಗಳು. ಇವರು ಆನಂದಿಸುತ್ತಿರುವ ಈ ಸ್ಥಿತಿಯೇ ನಿಜ ಸಮಾಧಿಸ್ಥಿತಿ.
ಗೊಗ್ಗಯ್ಯ ಆ ಶಿವಯೋಗಿಯನ್ನು ಕಂಡು ಬೆರಗಾಗಿ ಶರಣು ಶರಣಾರ್ಥಿಯೆಂದು ಶಿರಸಾಷ್ಠಾಂಗ ನಮಿಸಿದನು. ಲೌಕಿಕ ಬೇಸಾಯದ ಗೊಗ್ಗಯ್ಯನಿಗೆ ಅಲೌಕಿಕ ಬೇಸಾಯದ ಅರಿವು ಮೂಡುತ್ತದೆ. ಸ್ವತಃ ತಾನೇ ಜ್ಞಾನಿಯಾಗಿದ್ದರೂ ತನ್ನ ಗುರುವಿನ ಮೂಲಕ ಜ್ಞಾನ ದೀವಿಗೆ ಹೊತ್ತಿಸಿದ ಅಲ್ಲಮ, ಗುರು ಕರುಣೆಯ ಮಹತ್ತು ಮತ್ತು ವಿನಮ್ರತೆ ಎರಡನ್ನೂ ಸಾರುತ್ತಾರೆ. ಅಲ್ಲಮ ಪ್ರಭುದೇವರು ತೋಟಗಾರ ಗೊಗ್ಗಯ್ಯನಿಗೆ ಆತ್ಮವ್ಯವಸಾಯದ ಅರಿವು ಕರುಣಿಸಿದ್ದು ಹೀಗೆ.