ಎರಡು ಬಗೆಯ ಅಜ್ಞಾನಿಗಳು : ಶಿವೋsಹಂ ಸರಣಿ

photoನಿಮ್ಮನ್ನು ಹೊಗಳುವಾಗ, ನಿಮ್ಮ ಗುಣಗಾನ ಮಾಡುವಾಗ, ನಿಮ್ಮನ್ನು ಮೆಚ್ಚಿಕೊಳ್ಳುವಾಗ ನೀವು ಅವೆಲ್ಲವೂ ನಿಮ್ಮ ದೇಹದ ಕಾರಣದಿಂದ ಅಂದುಕೊಳ್ಳುತ್ತೀರಿ. ಅದು ನಿಜವೇ ಆಗಿದ್ದಲ್ಲಿ ಚೇತನಾಶೂನ್ಯವಾದ ದೇಹವನ್ನು ನಿಮ್ಮ ಪ್ರೀತಿಪಾತ್ರರು ಅದೇಕೆ ಧಾವಂತದಲ್ಲಿ ವಿಸರ್ಜನೆ ಮಾಡಲು ಮುಂದಾಗುವರು? ನೀವೇ ಯೋಚಿಸಿ…. ~ Whosoever Ji

ಗತ್ತಿನಲ್ಲಿ ಎರಡು ಬಗೆಯ ಅಜ್ಞಾನಿಗಳಿರುತ್ತಾರೆ. ಓದು ಬರಹ ಕಲಿತ ಅಜ್ಞಾನಿಗಳು ಮತ್ತು ಅನಕ್ಷರಸ್ಥ ಅಜ್ಞಾನಿಗಳು. ವಾಸ್ತವದಲ್ಲಿ ಓದು ಬರಹ ಕಲಿತವರ ಅಜ್ಞಾನವು ಅನಕ್ಷರಸ್ಥರ ಅಜ್ಞಾನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ! ಎಲ್ಲಿಯವರೆಗೆ ಕೇವಲ ಮಾಹಿತಿ ಹಾಗೂ ಸೂಚನೆಗಳನ್ನೆ ಜ್ಞಾನವೆಂದು ತಿಳಿದು ವ್ಯಕ್ತಿಯ ತಲೆಯಲ್ಲಿ ತುಂಬಲಾಗುತ್ತದೆಯೋ ಅಲ್ಲಿಯವರೆಗೆ ಆತನ ತಲೆ ಭಾರವಾಗಿ ಅಜ್ಞಾನ ಹೆಚ್ಚುತ್ತ ಹೋಗುವುದೇ ವಿನಾ ನಿಜಜ್ಞಾನವಲ್ಲ. ಈ ಬಗೆಯ ಜ್ಞಾನ ಹೆಚ್ಚಾದಷ್ಟೂ ಹೊರೆ ಹೆಚ್ಚೇ. ಇಂತಹ ಜ್ಞಾನವು ವ್ಯಕ್ತಿಯನ್ನು ಸತ್ಯದಿಂದ ಮತ್ತಷ್ಟು ದೂರಕ್ಕೆ ಕರೆದೊಯ್ಯುತ್ತದೆ. ವಸ್ತುತಃ ಈ ತಥಾಕಥಿತ ಜ್ಞಾನವು ಜ್ಞಾನವಲ್ಲ. ಜ್ಞಾನದ ಭ್ರಮೆ ಮಾತ್ರವಾಗಿರುತ್ತದೆ. ಇದು ವ್ಯಕ್ತಿಯನ್ನು ಜ್ಞಾನಿಯನ್ನಾಗಿ ಮಾಡುವುದಿಲ್ಲ. ಕೇವಲ ಪಂಡಿತನನ್ನಾಗಿಸುತ್ತದೆ ಅಷ್ಟೆ.

ಪಂಡಿತರನ್ನು ನೀವು ಗಮನಿಸಿ ನೋಡಿ. ಅವರು ಹೆಚ್ಚು ಜಡವಾಗಿಯೂ ಹಟಮಾರಿಗಳಾಗಿಯೂ, ಹೊರೆ ಹೊತ್ತವರಂತೆಯೂ, ಗಂಭೀರವಾಗಿಯೂ, ಸುಸ್ತಾದವರಂತೆಯೂ ಕಾಣುತ್ತಾರೆ. ಅವರು ಹೆಚ್ಚು ದುರಾಗ್ರಹಿಗಳಾಗಿಯೇ ತೋರುತ್ತಾರೆ. ಅದೇ ನೀವು ಒಂದಿಷ್ಟೂ ತಿಳಿವಳಿಕೆಯಿಲ್ಲದ ಮಕ್ಕಳನ್ನು ನೋಡಿ. ಅವರು ಹೆಚ್ಚು ಹಗುರವಾಗಿಯೂ ಲವಲವಿಕೆಯಿಂದಲೂ, ಸುಪ್ರಸನ್ನರಾಗಿಯೂ ಇರುತ್ತಾರೆ.

ಮನುಷ್ಯ ಶಿಶುಗಳು ಮಾತ್ರವಲ್ಲ, ಹಸು, ಜಿಂಕೆ, ಸಿಂಹ, ನಾಯಿ, ಬೆಕ್ಕು ಮೊದಲಾದ ಪ್ರಾಣಿ ಹಾಗೂ ಪಕ್ಷಿಗಳ ಮರಿಗಳು ಕೂಡ ಚಿಕ್ಕವಿರುವಾಗ ಹೆಚ್ಚು ಉಲ್ಲಸಿತವಾಗಿಯೂ ಸುಂದರವಾಗಿಯೂ ಇರುತ್ತವೆ. ಇದು ಆಶ್ಚರ್ಯಕರ ಸಂಗತಿಯಲ್ಲವೆ? ಇದು ಏಕೆಂದರೆ, ಪ್ರಕೃತಿದತ್ತವಾದ ಅಜ್ಞಾನಕ್ಕೆ ತನ್ನದೇ ಆದ ಸೌಂದರ್ಯವಿರುತ್ತದೆ. ಈ ಅಜ್ಞಾನವು ಸ್ವಾಭಾವಿಕವಾದದ್ದು. ಸಹಜವೂ ಸರಳವೂ ಆದದ್ದು. ಇದು ನಿರ್ದೋಷಿ. ಆದರೆ ಈ ಅಜ್ಞಾನದಿಂದ ಉಪಯೋಗವಿಲ್ಲ. ಜೀವನ ನಿರ್ವಹಣೆಗೆ ಈ ಸ್ವಾಭಾವಿಕತೆಯ ಮೇಲೆ ಆಕ್ರಮಣ ಮಾಡುವಂತಹ ಚಾಲಾಕಿತನ ಕಲಿಯುವುದು ಅಗತ್ಯವೇ ಆಗಿಬಿಡುತ್ತದೆ. ಈ ಶಿಕ್ಷಣವು ಮನುಷ್ಯನನ್ನು ಚತುರನನ್ನಾಗಿಯೂ ಜಟಿಲ, ಕುಟಿಲ, ನಿಷ್ಠುರವಾಗಿಯೂ ಮಾರ್ಪಡಿಸುತ್ತದೆ.

ನಿಮಗೇ ಅನ್ನಿಸುವುದಿಲ್ಲವೆ? ನಿಮ್ಮ ಸ್ವಾಭಾವಿಕ ಚಹರೆ, ನಿಮ್ಮ ಬಾಲ್ಯದ ಸ್ವಾಭಾವಿಕ ಚಹರೆ ಕಳೆದುಹೋಗಿ ಈಗ ಮುಖವಾಡ ಹೊತ್ತು ತಿರುಗಾಡುತ್ತಿದ್ದೀರಿ ಎಂದು? ಯಾವಾಗಲಾದರೂ ಕನ್ನಡಿಯ ಮುಂದೆ ನಿಂತು ಕೇಳಿಕೊಳ್ಳಿ. ಒಳಗಿನ ಬಿಂಬ ನೀವೆಯೋ ಎಂದು! ನಿಮ್ಮಲ್ಲಿ ಪ್ರಾಮಾಣಿಕತೆ ಇರುವುದೇ ಆದರೆ, ಕನ್ನಡಿಯಲ್ಲಿ ಕಾಣುತ್ತಿರೋದು ಮುಖವಾಡ ತೊಟ್ಟ ನೀವು ಹೊರತು ನಿಜದ ನೀವಲ್ಲ ಎಂದು ಒಪ್ಪಿಕೊಳ್ತೀರಿ.

ನಿಮ್ಮಲ್ಲಿ ಸಂಗ್ರಹ ಹೆಚ್ಚಾದಂತೆಲ್ಲ ಮುಖದ ಸೌಂದರ್ಯ ಮಾಸುತ್ತ ಹೋಗುತ್ತದೆ. ಅದು ಯಾವ ಬಗೆಯ ಸಂಗ್ರಹವಾದರೂ ಆಗಬಹುದು. ಹಣ, ಹೆಸರು, ಮಾಹಿತಿ – ಯಾವುದರದ್ದಾದರೂ ಆಗಬಹುದು. ಅದು ಮುಖವನ್ನು ಮರೆಮಾಚುವ ಮುಖವಾಡವನ್ನು ನಿರ್ಮಿಸುತ್ತದೆ. ಎಲ್ಲೋ ಕೆಲವರು, ಅತ್ಯಂತ ವಿರಳ ಸಂಖ್ಯೆಯ ಕೆಲವರು ಈ ಮುಖವಾಡವನ್ನು ಗುರುತಿಸಿಕೊಳ್ಳುತ್ತಾರೆ. ನಿಜದ ತಮ್ಮನ್ನು ಕಂಡುಕೊಳ್ಳಲು ಹಾತೊರೆಯತೊಡಗುತ್ತಾರೆ. ಮುಖವಾಡ ಕಳಚಿ ನಿಜರೂಪ ದರ್ಶನ ಮಾಡಿಸಬಲ್ಲ ಗುರುವಿನ ತಲಾಶೆಗೆ ಹೊರಡುತ್ತಾರೆ. ಪ್ರಾಮಾಣಿಕವಾಗಿ ಇಂತಹ ಹುಡುಕಾಟಕ್ಕೆ ಹೊರಟವರಿಗೆ ಅದೃಶ್ಯ ಶಕ್ತಿಯು ಸಹಕಾರ ನೀಡುತ್ತದೆ. ಈ ಹುಡುಕಾಟದ ಹಾದಿಯಲ್ಲಿ ವ್ಯಕ್ತಿಗೆ ಆತನ ಪ್ರಶ್ನೆಗಳಿಗೆ ಉತ್ತರರ ಕೊಡಬಲ್ಲ ಮತ್ತೊಬ್ಬ ವ್ಯಕ್ತಿ, ಪುಸ್ತಕ ಅಥವಾ ಸಮುದಾಯದ ಸಂಪರ್ಕ ಮಾಡಿಸುತ್ತದೆ. ಈಗ ಆ ವ್ಯಕ್ತಿಯೊಳಗೊಂದು ಹೊಸ ಕೇಂದ್ರ ನಿರ್ಮಾಣವಾಗುತ್ತದೆ ಮತ್ತು ಆತನ ಮುಂದಿನ ಯಾತ್ರೆಯನ್ನು ಅದು ನಿರ್ದೇಶಿಸತೊಡಗುತ್ತದೆ.

ಗುರುವಿನೊಂದಿಗೆ ಮುಖಾಮುಖಿಯಾದ ಕ್ಷಣದಿಂದ ಆತನ ಬದುಕು ತಿರುವು ಪಡೆದುಕೊಳ್ಳುತ್ತದೆ. ಗುರುವಿನ ಸಂಪರ್ಕದಲ್ಲಿ ಆತನಿಗೆ ತಾನು ಹುಡುಕುತ್ತಿರುವ ವಸ್ತು ಮತ್ತೆಲ್ಲೋ ಇಲ್ಲ, ಅದು ತನ್ನೊಳಗೇ ಇದೆ ಅನ್ನುವುದರ ಅರಿವಾಗುತ್ತದೆ. ಗುರುವು ಎಲ್ಲಕ್ಕಿಂತ ಮೊದಲು ಆತನಿಗೆ ತಿಳಿಯಪಡಿಸುವುದೇ ಆತ ದೇಹವಲ್ಲ ಎನ್ನುವುದನ್ನು.

ಗುರುವು ಆತನು ದೇಹವಲ್ಲ ಎಂದು ಹೇಳುವಾಗ ಈ ಮಾತನ್ನು ಹೇಳುತ್ತಿರುವುದು ಯಾರಿಗೆ? ನೀನು ದೇಹವಲ್ಲ ಎಂದು ಹೇಳುವಾಗ ಇಲ್ಲಿ `ನೀನು’ ಯಾರಾಗಿರುತ್ತಾರೆ? ಅದುವೇ ಚೇತನ. ಗುರುವು ಇಲ್ಲಿ ತಾದಾತ್ಮ್ಯಗೊಂಡಿರುವ ಚೇತನವನ್ನು ಉದ್ದೇಶಿಸಿ ನೀನು ದೇಹವಲ್ಲ ಎಂದು ಹೇಳುತ್ತಿದ್ದಾನೆ. ಗುರುವು ಮೊಟ್ಟಮೊದಲಿಗೆ ನಾಮರೂಪಗಳಿಲ್ಲದೆ ದೇಹದೊಂದಿಗೆ ಗುರುತಿಸಿಕೊಂಡಿರುವ ಚೇತನವನ್ನು ಆ ಭ್ರಮೆಯಿಂದ ಹೊರತರುವ ಕೆಲಸವನ್ನು ಮಾಡುತ್ತಾನೆ. ಚೇತನವು ಯಾವುದೇ ದೇಹವಿಶೇಷವನ್ನು ಸಜೀವಿತಗೊಳಿಸುವ ಜೀವನದಾಯಿನಿ ತತ್ತ್ವವಾಗಿದೆ. ಪಂಚಭೂತಗಳಿಂದ, ಪಂಚತತ್ತ್ವಗಳಿಂದಾದ ಈ ದೇಹವು ಚೇತನದ ಸಂಸರ್ಗವಾಗುತ್ತಲೇ ಸಜೀವಗೊಳ್ಳುತ್ತದೆ.

ನಿಮ್ಮನ್ನು ಹೊಗಳುವಾಗ, ನಿಮ್ಮ ಗುಣಗಾನ ಮಾಡುವಾಗ, ನಿಮ್ಮನ್ನು ಮೆಚ್ಚಿಕೊಳ್ಳುವಾಗ ನೀವು ಅವೆಲ್ಲವೂ ನಿಮ್ಮ ದೇಹದ ಕಾರಣದಿಂದ ಅಂದುಕೊಳ್ಳುತ್ತೀರಿ. ಅದು ನಿಜವೇ ಆಗಿದ್ದಲ್ಲಿ ಚೇತನಾಶೂನ್ಯವಾದ ದೇಹವನ್ನು ನಿಮ್ಮ ಪ್ರೀತಿಪಾತ್ರರು ಅದೇಕೆ ಧಾವಂತದಲ್ಲಿ ವಿಸರ್ಜನೆ ಮಾಡಲು ಮುಂದಾಗುವರು? ನಿಮಗೆ ನೀವೇ ಯೋಚಿಸಿ. ನಿಮ್ಮ ದೇಹಕ್ಕೆ ಬೆಲೆ ದೊರೆಯುತ್ತಿರುವುದು ನಿಮ್ಮೊಳಗಿನ ಚೇತನದಿಂದಲೇ ಹೊರತು ಮತ್ತೇನಲ್ಲ. ಅದು ದೇಹದ ಹೆಚ್ಚುಗಾರಿಕೆಯಲ್ಲ. ಆದರೆ ಚೇತನವು ಅಜ್ಞಾನವಶಾತ್ ತನ್ನನ್ನು ದೇಹದೊಂದಿಗೆ ಗುರುತಿಸಿಕೊಂಡು ಜೀವನದುದ್ದಕ್ಕೂ ಸುಖದುಃಖಗಳನ್ನು ಉಣ್ಣುತ್ತದೆ.

ಆದರೆ ದೇಹದಿಂದ ಚೇತನಕ್ಕೆ ಪ್ರಯೋಜನವೂ ಇಲ್ಲದಿಲ್ಲ. ಅದು ದೇಹ ಮಾಧ್ಯಮದ ಮೂಲಕವಷ್ಟೇ ಪರವಸ್ತುವನ್ನು, ‘ಪರ’ವಾದುದನ್ನು ಅರಿಯಲು ಸಾಧ್ಯವಾಗುವುದು. ಅಷ್ಟೇ ಅಲ್ಲ, ದೇಹಮಾಧ್ಯಮದ ಮೂಲಕ ಅದು ಸ್ವಯಂ ಅನ್ನೂ ಅರಿತುಕೊಳ್ಳುತ್ತದೆ. ಆದರೆ ಚೇತನದ ಈ ಎರಡು ಸಾಧ್ಯತೆಗಳಿಗೆ ಅವಕಾಶವಿರುವುದು ಮನುಷ್ಯ ದೇಹದಲ್ಲಿ ಮಾತ್ರ. ಇನ್ಯಾವ ಪ್ರಾಣಿಯ ದೇಹದಲ್ಲೂ ಚೇತನಕ್ಕೆ ಈ ಅರಿವು ಸಾಧ್ಯವಾಗದು.

(ಹಿಂದಿ ಮೂಲ : ಹೋ ಸೋಎವರ್ ಜೀ ಅವರ ‘ಶಿವೋsಹಂ’ ಕೃತಿ | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ)

Leave a Reply