ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪೌರಾಣಿಕ ಮಹತ್ವವೇನು? : ಮಾಹಿತಿ ಇಲ್ಲಿದೆ …

“ಕುಮಾರಧಾರೆ ಮಿಂದೇವು, ಕುಕ್ಕೆಲಿಂಗನ ಕಂಡೇವು, ಕೊಪ್ಪರಿಗೆ ಅನ್ನ ಉಂಡೇವು” ಎಂಬ ನಾಣ್ಣುಡಿಯಂತೆ ಇಲ್ಲಿ ಪ್ರತಿನಿತ್ಯವೂ ಅನ್ನದಾನವು ನಡೆಯುತ್ತದೆ. ಇತಿಹಾಸ ಪ್ರಸಿದ್ಧ “ಮೂಲಮೃತ್ತಿಕೆ” (ಹುತ್ತದ ಮಣ್ಣು) ಇಲ್ಲಿಯ ಮುಖ್ಯ ಪ್ರಸಾದವಾಗಿದೆ.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕುಮಾರಧಾರಾ ನದಿ ತೀರದಲ್ಲಿದೆ. ಇದು ಪ್ರಾಚೀನ ಕಾಲದಿಂದಲೂ ಮನ್ನಣೆ ಪಡೆದ ಕ್ಷೇತ್ರವಾಗಿದ್ದು, ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿದೆ. ಪುರಾಣೇತಿಹಾಸ ಕಾಲದಿಂದಲೂ ನಾಗಾರಾಧನೆಗೆ ಪ್ರಸಿದ್ಧವಾಗಿರುವ ಈ ಕ್ಷೇತ್ರದಲ್ಲಿ ವಾಸುಕೀ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವನು ಅಭಯಪ್ರದಾಯಕನಾಗಿ ನೆಲೆಸಿದ್ದಾನೆ.

ಸ್ಥಳ ಪುರಾಣ
ರಾಕ್ಷಸ ಸಂಹಾರಕ್ಕಾಗಿ ಜನ್ಮ ತಾಳಿದ ಕಾರ್ತಿಕೇಯನು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ, ಸೋದರ ಗಣೇಶನ ಜೊತೆ ಕುಮಾರಪರ್ವತದಲ್ಲಿ ವಿಹರಿಸುತ್ತಾ ಇರುತ್ತಾನೆ. ದೇವೇಂದ್ರನ ಮಗಳು ದೇವಸೇನಾ ಕಾರ್ತಿಕೇಯನಿಗೆ ಮನಸೋತಿರುತ್ತಾಳೆ. ಇದನ್ನು ತಿಳಿದ ದೇವೇಂದ್ರ ಕುಮಾರಪರ್ವತಕ್ಕೆ ಬಂದು ವಿವಾಹ ಪ್ರಸ್ತಾಪ ಮುಂದಿಡುತ್ತಾನೆ. ಕಾರ್ತಿಕೇಯನು ಅದಕ್ಕೊಪ್ಪಲು, ಅಲ್ಲಿಯೇ ಕುಮಾರಧಾರಾ ತಟದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯ ದಿನ ಕಾರ್ತಿಕೇಯನಿಗೆ ಮದುವೆ ಮಾಡಿಕೊಡುತ್ತಾನೆ.
ಅದೇ ಸಂದರ್ಭದಲ್ಲಿ ಕುಮಾರಧಾರಾ ಬಳಿಯಲ್ಲೇ ನಾಗರಾಜ ವಾಸುಕಿಯು ತಪಶ್ಚರಣೆಯಲ್ಲಿ ತೊಡಗಿರುತ್ತಾನೆ. ಅವನ ಪ್ರಾರ್ಥನೆಯನ್ನು ಮನ್ನಿಸಿ ಕಾರ್ತಿಕೇಯನು ದೇವಸೇನಾಸಮೇತನಾಗಿ ಒಂದಂಶದಿಂದ ಅವನಲ್ಲಿ ಸನ್ನಿಹಿತನಾಗುತ್ತಾನೆ; ಮತ್ತು ನಾಗರೂಪಿಯಾಗಿ ಅಲ್ಲಿ ನೆಲೆಸುತ್ತಾನೆ.

ಇಂದು ಸುಬ್ರಹ್ಮಣ್ಯ ಕ್ಷೇತ್ರವೆಂದೇ ಖ್ಯಾತವಾಗಿರುವ ಶ್ರೀಕ್ಷೇತ್ರವು ಹಿಂದೆ ಕುಕ್ಕೆ ಪಟ್ಟಣವೆಂದು ಪ್ರಸಿದ್ಧಿಯಾಗಿತೆಂದು ಶಾಸನ ಮತ್ತು ಗ್ರಂಥಗಳು ತಿಳಿಸುತ್ತವೆ. ಶ್ರೀ ಆದಿ ಶಂಕರಾಚಾರ್ಯರು ಇಲ್ಲಿ ಕೆಲವು ದಿನ ವಾಸ ಮಾಡಿದ್ದರೆಂದು ಆನಂದ ವಿರಚಿತ “ಶಂಕರ ವಿಜಯ”ದಲ್ಲಿ ಹೇಳಲಾಗಿದೆ. ಹಾಗೆಯೇ, ಶ್ರೀ ಶಂಕರಾಚಾರ್ಯ ವಿರಚಿತ “ಸುಬ್ರಹ್ಮಣ್ಯ ಭುಜಂಗ ಪ್ರಯಾತ ಸ್ತೋತ್ರ”ದಲ್ಲಿ “ಭಜೇ ಕುಕ್ಕೆಲಿಂಗಂ” ಎಂಬುದಾಗಿ ಈ ಕ್ಷೇತ್ರವನ್ನು ಉಲ್ಲೇಖಿಸಲಾಗಿದೆ.

ಶ್ರೀ ಸ್ಕಂದ ಪುರಾಣದ ಸನತ್ ಕುಮಾರ ಸಂಹಿತೆಯು ಸಹ್ಯಾದ್ರಿ ಖಂಡದ ತೀರ್ಥಕ್ಷೇತ್ರಗಳ ಮಹಿಮೆಯನ್ನು ಹೇಳುತ್ತಾ, ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಧಾರಾ ನದಿಯ ತೀರದಲ್ಲಿರುವುದನ್ನು ಉಲ್ಲೇಖಿಸುತ್ತದೆ. ಮತ್ತು, ಶ್ರೀ ಷಣ್ಮುಖ ಸ್ವಾಮಿಯು ತಾರಕಾದಿ ಮಹಾ ಅಸುರರನ್ನು ನಿಗ್ರಹಿಸಿ ತಮ್ಮ ಶಕ್ತ್ಯಾಯುಧ ಧಾರೆಯನ್ನು ಈ ತೀರ್ಥದಲ್ಲಿ ತೊಳೆದುದರಿಂದ ಇಲ್ಲಿನ ನದಿಗೆ ಕುಮಾರಧಾರಾ ತೀರ್ಥವೆಂಬ ಹೆಸರು ಬಂದಿತೆಂದೂ ಹೇಳುತ್ತದೆ.

“ಕುಮಾರಧಾರೆ ಮಿಂದೇವು, ಕುಕ್ಕೆಲಿಂಗನ ಕಂಡೇವು, ಕೊಪ್ಪರಿಗೆ ಅನ್ನ ಉಂಡೇವು” ಎಂಬ ನಾಣ್ಣುಡಿಯಂತೆ ಇಲ್ಲಿ ಪ್ರತಿನಿತ್ಯವೂ ಅನ್ನದಾನವು ನಡೆಯುತ್ತದೆ. ಇತಿಹಾಸ ಪ್ರಸಿದ್ಧ “ಮೂಲಮೃತ್ತಿಕೆ” (ಹುತ್ತದ ಮಣ್ಣು) ಇಲ್ಲಿಯ ಮುಖ್ಯ ಪ್ರಸಾದವಾಗಿದೆ.

ಹೋಗುವುದು ಹೇಗೆ?
ಕುಕ್ಕೆ ಸುಬ್ರಹ್ಮಣ್ಯಕ್ಕೆ ರೈಲು ಮಾರ್ಗವಿದೆ. ಕ್ಷೇತ್ರದಿಂದ 12 ಕಿಮೀ ಅಂತರದಲ್ಲಿ ರೈಲು ನಿಲ್ದಾಣವಿದ್ದು, ದೇವಸ್ಥಾನ ತಲುಪಲು ಸ್ಥಳೀಯ ವಾಹನಗಳನ್ನು ಅಥವಾ ಬಸ್’ಗಳನ್ನು ಬಳಸಬಹುದು. ವಿಮಾನದ ಮೂಲಕ ಪ್ರಯಾಣ ಮಾಡುವವರು ಮಂಗಳೂರಿಗೆ ಹೋಗಿ, ಅಲ್ಲಿಂದ ಪ್ರಯಾಣಿಸಬೇಕು. ಸುಬ್ರಹ್ಮಣ್ಯವು ಮಂಗಳೂರಿಂದ ಸುಮಾರು 112 ಕಿಮೀ ದೂರದಲ್ಲಿದೆ. ಬಹುತೇಕ ರಾಜ್ಯದ ಎಲ್ಲ ಮುಖ್ಯ ಪಟ್ಟಣಗಳಿಂದಲೂ ಸುಬ್ರಹ್ಮಣ್ಯಕ್ಕೆ ಬಸ್ ಸೌಲಭ್ಯವಿದ್ದು, ಬಸ್ ಪ್ರಯಾಣ ಅತ್ಯಂತ ಅನುಕೂಲಕರವಾಗಿದೆ.
ಕ್ಷೇತ್ರದಲ್ಲಿ ವಸತಿ ವ್ಯವಸ್ಥೆಗೆ ಸಾಕಷ್ಟು ಕಟ್ಟಡಗಳು ಮೀಸಲಿದ್ದು, ಮುಂಗಡ ಬುಕಿಂಗ್ ಮಾಡಿಕೊಂಡು ಹೋದರೆ ಅನುಕೂಲ.
ದೇವಸ್ಥಾನ ದರ್ಶನದ ನಂತರ ಬಳಿಯಲ್ಲೇ ಇರುವ ಕುಮಾರಪರ್ವತ ಚಾರಣ ಮಾಡಬಹುದು. ಇದು ಅತ್ಯಂತ ಸುಂದರ ಮತ್ತು ಚಾರಣಿಗರ ಅಚ್ಚುಮೆಚ್ಚಿನ ತಾಣವಾಗಿದೆ.

ರಥೋತ್ಸವ, ಪೂಜೆ ಇತ್ಯಾದಿ ಮಾಹಿತಿಗೆ https://www.kukke.org/kan/uthsavas.aspx – ಈ ಕೊಂಡಿಯನ್ನು ಗಮನಿಸಿ.

2 Comments

  1. Sir vasuki shivana kutthigeyalli iruttaaddarinda sarpa yagavannu thappisikollalu subramanya na more yake hogiddu. Dayavittu thilisi. Nanage avaramma kadruvina shapada bagge thilidukondiddene.

    1. ವಾಸುಕಿ ತಪ್ಪಿಸಿಕೊಳ್ಳಲು ಕಾರ್ತಿಕೇಯನ ಮೊರೆ ಹೋಗಲಿಲ್ಲ…. ನೀವು ಕಥೆಗಳನ್ನು ಬೆರೆಸಿದ್ದೀರಿ.
      ಇದರ ಬಗ್ಗೆ ಸಧ್ಯದಲ್ಲೇ ಬರೆಯುವೆವು.
      ನಿಮ್ಮ ಆಸಕ್ತಿ ಮತ್ತು ಪ್ರತಿಕ್ರಿಯೆಗೆ ಧನ್ಯವಾದ

Leave a Reply