ಚಕ್ರವ್ಯೂಹದಲ್ಲಿ ಅಭಿಮನ್ಯು : ಏಕಾಂಗಿವೀರನ ರೋಚಕ ಹೋರಾಟ ಹೇಗಿತ್ತು ಗೊತ್ತೆ?

ಹೋರಾಟ ಮತ್ತೆ ಭೀಕರವಾಯಿತು. ಸುತ್ತ ಘೀಳಿಡುತ್ತ ಮೇಲೆರಗುತ್ತಿರುವ ಮದಗಜಗಳೊಡನೆ ಮರಿಸಿಂಹವು ಹೋರಾಡುವಂತೆ ಅಭಿಮನ್ಯು ಕೌರವ ವೀರರನ್ನು ಎದುರಿಸಿದ. ಅವರ ಮೇಲೆ ಅಸ್ತ್ರಗಳನ್ನು ಬಳಸಿದ. ಗಾಳಿಯಲ್ಲಿ ಬಾಣ ಬಾಣ ತಗುಲಿ ಉರಿಯುತ್ತ ಕೆಳಕ್ಕೆ ಬಿದ್ದುವು. ಕುದುರೆಗಳು ನೋವನ್ನು ತಡೆಯಲಾರದೆ ದಿಕ್ಕೆಟ್ಟು ಓಡಿದುವು. ಕಡೆಗೆ ದುರ್ಯೋಧನನೇ ಅಭಿಮನ್ಯುವಿನ ಬಾಣಗಳು ಬೆಂಕಿಯಂತೆ ನೆಟ್ಟುದನ್ನು ತಡೆಯಲಾರದೆ ಓಡಿದ. ಆಮೇಲೆ….

ಮಹಾಭಾರತ ಯುದ್ಧದ ಹನ್ನೆರಡನೆಯ ದಿನ ದುರ್ಯೋಧನ ಚಿಂತಾಕ್ರಾಂತನಾಗಿದ್ದ. ಭೀಷ್ಮರು ಶರಶಯ್ಯೆಯಲ್ಲಿದ್ದರು. ಇನ್ನೇನು ನಾವು ಸೋಲುತ್ತೇವೆ ಎಂದು ದುರ್ಯೋಧನನಿಗೆ ಆತಂಕವಾಗಿಬಿಟ್ಟಿತ್ತು. ದ್ರೋಣರು ಐವರು ಸಂಶಪ್ತಕರನ್ನು ಕರೆಸಿ, ಮರುದಿನ ಅರ್ಜುನನಿಗೆ ಪಂಥಾಹ್ವಾನ ನೀಡುವಂತೆ ಸೂಚಿಸಿದರು. ಯುದ್ಧ ಗೆಲ್ಲುತ್ತೇವೆ, ಇಲ್ಲವೇ ಸಾಯುತ್ತೇವೆ ಎಂದು ಶಪಥ ಮಾಡಿದವರನ್ನು ‘ಸಂಶಪ್ತಕ’ರೆನ್ನುತ್ತಾರೆ.  ಹದಿಮೂರನೆಯ ದಿನ ಈ ಸಂಶಪ್ತಕರು, ಅರ್ಜುನನಿಗೆ ಪಂಥಾಹ್ವಾನ ನೀಡಿದರು. ಅರ್ಜುನ ಕೃಷ್ಣನ ಸಾರಥ್ಯದಲ್ಲಿ ಅವರ ಬೆನ್ನಟ್ಟಿ ಹೊರಟ.

ಅರ್ಜುನ ಅತ್ತ ಹೋಗುತ್ತಲೇ ಇತ್ತ ದ್ರೋಣರು ಕೌರವ ಸೇನೆಯಿಂದ ಚಕ್ರವ್ಯೂಹ ರಚಿಸಿದರು. ಸೈನಿಕರನ್ನು ಚಕ್ರಾಕಾರದಲ್ಲಿ ನಿಲ್ಲಿಸಿ ರಚಿಸುವ ಯುದ್ಧತಂತ್ರವಿದು. ಇದನ್ನು ಭೇದಿಸಿ ಒಳಕ್ಕೆ ಹೋಗಿ ಯುದ್ಧ ಮಾಡುವುದು ಬಹು ಕಷ್ಟ. ಶ್ರೀಕೃಷ್ಣ, ಅವನ ಮಗ ಪ್ರದ್ಯುಮ್ನ ಮತ್ತು ಅರ್ಜುನ – ಈ ಮೂವರಿಗೆ ಮಾತ್ರ ಇದನ್ನು ಒಳಹೊಕ್ಕು ಹೊರಕ್ಕೆ ಬರುವ ರೀತಿ ತಿಳಿದಿತ್ತು. ಅಭಿಮನ್ಯುವಿಗೆ ಚಕ್ರವ್ಯೂಹದ ಒಳಕ್ಕೆ ಹೋಗುವ ರೀತಿ ಮಾತ್ರ ತಿಳಿದಿತ್ತು. ತಾಯಿಯ ಗರ್ಭದಲ್ಲಿರುವಾಗ ಕೃಷ್ಣ ತನ್ನ ತಂಗಿಗೆ ಚಕ್ರವ್ಯೂಹ ಭೇದಿಸುವ ರೀತಿಯನ್ನು ಹೇಳುತ್ತಿದ್ದಾಗ ಭ್ರೂಣರೂಪಿ ಅಭಿಮನ್ಯು ಅದನ್ನು ಕೇಳಿಸಿಕೊಂಡಿದ್ದ. ಆದರೆ ಹೊರಬರುವ ರೀತಿ ಅವನಿಗೆ ತಿಳಿದಿರಲಿಲ್ಲ.

ಧರ್ಮರಾಯ, ಭೀಮ, ನಕುಲ, ಸಹದೇವ, ಧೃಷ್ಟದ್ಯುಮ್ನ, ಅವನ ತಂದೆ ದ್ರುಪದ ರಾಜ ಎಲ್ಲರೂ ಚಕ್ರವ್ಯೂಹ ಸೀಳಿಕೊಂಡು ಒಳಕ್ಕೆ ಹೋಗಲು ಪ್ರಯತ್ನಿಸಿದರು. ಯಾರಿಂದಲೂ ಸಾಧ್ಯವಾಗಲಿಲ್ಲ. ಯುವ ವೀರ ಅಭಿಮನ್ಯು ಮುಂದೆ ಬಂದ. ಹಿರಿಯರು ಬೇಡವೆಂದರೂ ಕೇಳಲಿಲ್ಲ. ಕ್ಷಾತ್ರಧರ್ಮ ಪರಿಪಾಲನೆ ನನ್ನ ಕರ್ತವ್ಯವೆಂದು ಬಿಲ್ಲೇರಿಸಿ ಹೊರಟೇಬಿಟ್ಟ.

ಸಾರಥಿ ರಥವನ್ನು ಮುಂದಕ್ಕೆ ನಡೆಸಿದ. ಆನೆಗಳ ಹಿಂಡಿನ ಮೇಲೆ ಸಿಂಹ ಎರಗುವಂತೆ ವೀರಾಧಿವೀರರ ಸೈನ್ಯದ ಮೇಲೆ ಅಭಿಮನ್ಯು ಎರಿಗಿದ. ಕೌರವ ಸೇನೆಯ ಮಹಾಯೋಧರು ಅವನನ್ನು ತಡೆದರು. ಆದರೆ ಮುನ್ನುಗ್ಗುವ ಬೆಂಕಿಯನ್ನು ಮರಗಳು ತಡೆಗಟ್ಟಿದಂತಾಯಿತು. ದ್ರೋಣಾಚಾರ್ಯನೆದುರಿನಲ್ಲೇ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕನು. ಈ ಎಳೆಯ ವೀರನ ಸಾಹಸವನ್ನು ಕಂಡು ದುರ್ಯೋಧನ ಮತ್ತಿತರರು ಬೆಚ್ಚಿ ಬೆರಗಾದರು. ಕುರುಸೇನೆಯ ಸೈನಿಕರ ಬಾಯಿ ಒಣಗಿತು, ಕಣ್ಣು ಚಂಚಲವಾಯಿತು, ಕೂದಲು ನಿಮಿರಿತು. ಅಭಿಮನ್ಯುವಿನ ಬಾಣಗಳು ಸುತ್ತ ಶತ್ರು ಸೈನಿಕರನ್ನು ನೆಲಕ್ಕೆ ಕೆಡವಿದಂತೆ ಕೌರವ ಸೈನ್ಯ ಓಡಲು ಪ್ರಾರಂಭಿಸಿತು. ಇದನ್ನು ಕಂಡು ದುರ್ಯೋಧನನೇ ಅಭಿಮನ್ಯುವನ್ನು ಎದುರಿಸಿದ. ಅವನು ಅಭಿಮನ್ಯುವನ್ನು ತಡೆಗಟ್ಟಿದುದನ್ನು ನೋಡಿ ದ್ರೋಣ, ಕೃಪ, ಕರ್ಣ ಎಲ್ಲ ಅತಿರಥ ಮಹಾರಥರು ಅವನ ಸಹಾಯಕ್ಕೆಂದು ಓಡಿಬಂದರು. ಅಭಿಮನ್ಯುವಿನ ಹಿಂದೆಯೇ ಚಕ್ರವ್ಯೂಹದ ಒಳಕ್ಕೆ ಬರಲು ಪ್ರಯತ್ನಿಸಿದ ಧರ್ಮರಾಯ, ಭೀಮ ಇಲ್ಲರನ್ನೂ ಜಯದ್ರಥ ತಡೆದು ನಿಲ್ಲಿಸಿದ. ಅವನಿಗೆ ಈಶ್ವರನ ವರವಿತ್ತು – ಅರ್ಜುನನನ್ನು ಬಿಟ್ಟು ಉಳಿದ ಪಾಂಡವರನ್ನೆಲ್ಲ ಒಂದು ದಿನದ ಮಟ್ಟಿಗೆ ತಡೆದು ನಿಲ್ಲಿಸುವೆ ಎಂದು. ಹೀಗಾಗಿ ಬಾಲಕ ಅಭಿಮನ್ಯು ಒಬ್ಬನೇ ಚಕ್ರವ್ಯೂಹದಲ್ಲಿ ಶತ್ರುಗಳ ಮಧ್ಯೆ ಉಳಿದುಕೊಂಡ.

ಅಭಿಮನ್ಯು ಬಿಟ್ಟ ಬಾಣಗಳ ಘಾತಕ್ಕೆ ದುರ್ಯೋಧನ ತತ್ತರಿಸಿದ. ದ್ರೋಣ ಕರ್ಣ ಕೃಪ ಅಶ್ವತ್ಥಾಮ ಮೊದಲಾದವರು ಬಂದು ಅವನನ್ನು ಬಿಡಿಸಿಕೊಂಡು ಅಭಿಮನ್ಯುವಿನ ಮೇಲೆ ಬಿದ್ದರು. ಏಕಾಕಿಯಾಗಿ ಅವನು ಎಲ್ಲರನ್ನೂ ತಡೆದು ನಿಲ್ಲಿಸಿದ. ಒಂದು ಬಾಣದಿಂದ ಕರ್ಣನ ಕವಚವನ್ನು ಭೇದಿಸಿದ. ಮೂರು ಬಾಣಗಳಿಂದ ಸುಷೇಣ, ದೀರ್ಘಲೋಚನ ಮತ್ತು ಇತರರನ್ನು ಕೊಂಡ. ವೀರರಲ್ಲಿ ವೀರ ನೆನ್ನಿಸಿಕೊಂಡ ಶಲ್ಯ ಅಭಿಮನ್ಯುವಿನ ಬಾಣಗಳಿಂದ ರಥದಲ್ಲಿ ಉರುಳಿದ. ಅರ್ಜುನ, ದುರ್ಯೋಧನರಿಗೆ ಶಸ್ತ್ರವಿದ್ಯೆ ಹೇಳಿಕೊಟ್ಟ ದ್ರೋಣಾಚಾರ್ಯನೇ ನೋಡುತ್ತಿದ್ದಂತೆ ಬಾಲಕನ ಬಾಣಗಳಿಂದ ಕಂಗೆಟ್ಟು ಕೌರವ ಸೈನ್ಯ ಓಡಿತು.

ಇದರಿಂದ ಕುಪಿತನಾದ ದುಶ್ಶಾಸನ ತಾನೇ ಅಭಿಮನ್ಯುವನ್ನು ಎದುರಿಸಲು ಬಂದ. ಅಭಿಮನ್ಯು ಕಿಂಚಿತ್ತೂ ಅಂಜಲಿಲ್ಲ. ಏಕಾಏಕಿ ಅವನ ಮೇಲೆ ಬಾಣಗಳ ಮಳೆಗರೆದ. ಅದು ದುಶ್ಯಾಸನನ ಎದೆಯಲ್ಲಿ ನಾಟಿ ರಕ್ತ ಚಿಮ್ಮಿತು. ಅವನು ಮೂರ್ಛೆ ಹೋದ. ದುಶ್ಯಾಸನನ ದುಸ್ಥಿತಿಯನ್ನು ಕಂಡು ಕರ್ಣ ಅಭಿಮನ್ಯುವಿದ್ದ ಕಡೆಗೆ ಧಾವಿಸಿದ. ಅಭಿಮನ್ಯುವಿನ ಮೇಲೆ ನೂರಾರು ಬಾಣಗಳನ್ನು ಸುರಿದ . ಅಭಿಮನ್ಯು ಲೀಲಾ ಜಾಲವಾಗಿ ಅವನ ಬಿಲ್ಲನ್ನೆ ಕತ್ತರಿಸಿದ. ಅವನ ಬಾಣಗಳಿಂದ ಕರ್ಣನ ರಥದ ಧ್ವಜ ಮುರಿದುಬಿತ್ತು. ಅಭಿಮನ್ಯುವಿನ ಬಾಣಗಳ ಹೊಡೆತವನ್ನು ತಾಳಲಾರದೆ ಕರ್ಣನ ರಥವೇ ಹೀಗೆ ಓಡಿದುದನ್ನು ಕಂಡು ಸುತ್ತಲಿದ್ದ ಕೌರವಸೇನೆ ಭಯದಿಂದ ನಡುಗಿತು.

ಕುರುಸೈನ್ಯ ತಲ್ಲಣಿಸಿದುದನ್ನು ನೋಡಿ ಧರ್ಮರಾಯ, ಭೀಮ, ಸಾತ್ಯಕಿ ಎಲ್ಲ ಮತ್ತೆ ಅಭಿಮನ್ಯುವಿನ ಸಹಾಯಕ್ಕೆಂದು ನುಗ್ಗಿದರು. ಆದರೆ ದ್ರೋಣನನು ರಚಿಸಿದ್ದ ಚಕ್ರವ್ಯೂಹ ಸೀಳಿ ಒಳಹೋಗಲು ಅವರಿಗೆ ಸಾಧ್ಯವಾಗಲಿಲ್ಲ.

ತಮ್ಮ ಸೈನ್ಯಕ್ಕೆ ಬಂದ ಸ್ಥಿತಿಯನ್ನು ಕಂಡು ಕೌರವ ವೀರರು ಮತ್ತೆ ಅಭಿಮನ್ಯುವನ್ನು ಮುತ್ತಿದರು. ಅತ್ತ, ಈಶ್ವರನ ವರ ಪಡೆದಿದ್ದ ಜಯದ್ರಥ ಪಾಂಡವಸೈನ್ಯದ ವೀರರನ್ನೆಲ್ಲ ತಡೆದು ನಿಲ್ಲಿಸಿದ್ದ. ಹೀಗಾಗಿ ಅಭಿಮನ್ಯು ಏಕಾಕಿಯಾಗಿಯೇ ಹೋರಾಡಬೇಕಾಯ್ತು. ದುರ್ಯೋಧನ ಮತ್ತೊಮ್ಮೆ ಅಭಿಮನ್ಯುವಿಗೆ ಎದುರಾದ. ದ್ರೋಣ, ಅಶ್ವತ್ಥಾಮ, ಕರ್ಣ ಎಲ್ಲ ಅಭಿಮನ್ಯುವನ್ನು ಸುತ್ತುಗಟ್ಟಿದರು. ದುರ್ಯೋಧನನ ಮಗ ಲಕ್ಷಣ ಅಭಿಮನ್ಯುವಿನ ಮೇಲೆ ಬಾಣಗಳ ಮಳೆಗರೆದ.

ಹೋರಾಟ ಮತ್ತೆ ಭೀಕರವಾಯಿತು. ಸುತ್ತ ಘೀಳಿಡುತ್ತ ಮೇಲೆರಗುತ್ತಿರುವ ಮದಗಜಗಳೊಡನೆ ಮರಿಸಿಂಹವು ಹೋರಾಡುವಂತೆ ಅಭಿಮನ್ಯು ಕೌರವ ವೀರರನ್ನು ಎದುರಿಸಿದ. ಅವರ ಮೇಲೆ ಅಸ್ತ್ರಗಳನ್ನು ಬಳಸಿದ. ಗಾಳಿಯಲ್ಲಿ ಬಾಣ ಬಾಣ ತಗುಲಿ ಉರಿಯುತ್ತ ಕೆಳಕ್ಕೆ ಬಿದ್ದುವು. ಕುದುರೆಗಳು ನೋವನ್ನು ತಡೆಯಲಾರದೆ ದಿಕ್ಕೆಟ್ಟು ಓಡಿದುವು. ಕಡೆಗೆ ದುರ್ಯೋಧನನೇ ಅಭಿಮನ್ಯುವಿನ ಬಾಣಗಳು ಬೆಂಕಿಯಂತೆ ನೆಟ್ಟುದನ್ನು ತಡೆಯಲಾರದೆ ಓಡಿದ.

ಹೀಗೇ ಮುಂದುವರಿದರೆ ಕೌರವರ ಸೇನೆ ಸೋಲುವುದು ಖಚಿತವೆಂದರಿತ ದ್ರೋಣರು, “ಅಭಿಮನ್ಯು ಮಹಾ ಶೂರ. ಅವನ ಕವಚವನ್ನು ಬೇಧಿಸುವುದೇ ಸಾಧ್ಯವಿಲ್ಲ. ಬಲ್ಲವರು ಇವನ ಧನುಸ್ಸನ್ನು ಕತ್ತರಿಸಿದರೆ ಮಾತ್ರ ನಾವು ಗೆಲ್ಲುವ ಅವಕಾಶವಿದೆ. ಇವನು ಹಿಂದಕ್ಕೆ ತಿರುಗಿದಾಗಲೇ ಈ ಕೆಲಸ ಮಾಡಬೇಕು. ಇವನು ಧನುಸ್ಸನ್ನು ಹಿಡಿದಾಗ ಮುಂದೆ ನಿಂತು ಯಾರೂ ಗೆಲ್ಲಲಾರರು. ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸಿ, ರಥವನ್ನು ಮುರಿಯಬೇಕು” ಎಂದು ಸೂಚಿಸಿದರು.

ಈ ಕೆಲಸಕ್ಕೆ ಕರ್ಣ ಮುಂದೆ ಬಂದ. ಹಿಂದಿನಿಂದ ಅಭಿಮನ್ಯುವಿನ ಕೈಗೆ ಗುರಿ ಇಟ್ಟು ಚೂಪಾದ ಬಾಣಗಳನ್ನು ಬಿಟ್ಟ. ಅಭಿಮನ್ಯುವಿನ ಬಿಲ್ಲು ಕತ್ತರಿಸಿತು . ಇದೇ ಸಮಯದಲ್ಲಿ ಭೋಜನೆಂಬುವನು ಅವನ ಕುದುರೆಗಳನ್ನು ಕೊಂದ. ಅಭಿಮನ್ಯುವಿನ ರಥ ಚಲಿಸದೆ ಹೋಯಿತು.  ಕೃಪ, ರಥರಕ್ಷಕರನ್ನು ಹೊಡೆದುರುಳಿಸಿದ. ದ್ರೋಣ, ಕರ್ಣ, ಕೃಪ, ಅಶ್ವತ್ಥಾಮ, ಬೃಹಧ್ವಜ, ಕೃತವರ್ಮ – ಆರುಮಂದಿ ಮಹಾವೀರರು ಆ ತರುಣ ವೀರನನ್ನು ಮುತ್ತಿದರು. ಅಭಿಮನ್ಯುವಿಗೆ ರಥವಿಲ್ಲ, ಧನುಸ್ಸಿಲ್ಲ. ಸಹಾಯ ಮಾಡಲು ತನ್ನ ಕಡೆಯವರು ಯಾರೂ ಇಲ್ಲ!

ಆದರೂ ವೀರ ಅಭಿಮನ್ಯು ಬೆದರಲಿಲ್ಲ, ಬೆಚ್ಚಲಿಲ್ಲ, ದಿಕ್ಕುಗೆಡಲಿಲ್ಲ. ಕತ್ತಿಗುರಾಣಿಗಳನ್ನು ಹಿಡಿದು ರಥದಿಂದ ಮೇಲಕ್ಕೆ ಹಾರಿದ. ಆಗಲೇ ದ್ರೋಣ ಕರ್ಣರು ಅವನ ಗುರಾಣಿಯನ್ನು ಕತ್ತರಿಸಿದರು. ಅಭಿಮನ್ಯು ಭೂಮಿಗೆ ಧುಮುಕಿದ, ರಥದ ಚಕ್ರವನ್ನೇ ತೆಗೆದುಕೊಂಡು ದ್ರೋಣಾಚಾರ್ಯರ ಮೇಲೆ ಎರಗಿದ.  ಸುತ್ತಲಿದ್ದ ಶತ್ರು ವೀರರು ಬಾಣದ ಮೇಲೆ ಬಾಣ ಹೊಡೆದರು. ಚಕ್ರ ನೂರು ಚೂರುಗಳಾಗಿ ಸುತ್ತ ಉದುರಿತು. ಅಭಿಮನ್ಯು ತನ್ನ ರಥದಲ್ಲಿದ್ದ ಗದೆಯನ್ನು ಎತ್ತಿಕೊಂಡು ಶತ್ರುಗಳ ಮೇಲೆ ಬಿದ್ದ. ನೆಲದ ಮೇಲೆ ನಿಂತು ಪ್ರಹಾರಮಾಡುತ್ತಿದ್ದ ಈ ವೀರನ ಏಟಿಗೆ ರಥದಲ್ಲಿದ್ದವರು ಹಿಮ್ಮೆಟ್ಟಿದರು, ದುಶ್ಯಾಸನನ ರಥ ಮತ್ತು ಕುದುರೆಗಳು ಜಜ್ಜಿಹೋದವು.

ಗದೆಯಿಂದಲೇ ಸುತ್ತ ಶತ್ರುಗಳನ್ನು ಹೊಡೆದುರುಳಿಸುತ್ತಿದ್ದ ಅಭಿಮನ್ಯುವನ್ನು ದುಶ್ಯಾಸನನ ಮಗ ಗದೆ ಹಿಡಿದು ಎದುರಿಸಿದ. ಇಬ್ಬರೂ ಪ್ರಹಾರಗಳ ಘಾತಕ್ಕೆ ಕೆಳಕ್ಕೆ ಬಿದ್ದರು. ಆ ವೇಳೆಗಾಗಲೇ ಅಭಿಮನ್ಯು ಸಾಕಷ್ಟು ಬಳಲಿದ್ದ. ಅವನಿನ್ನೂ ನೆಲದ ಮೇಲಿರುವಾಗಲೇ ಚೇತರಿಸಿಕೊಂಡು ದುಶ್ಯಾಸನನ ಮಗ ಎದ್ದ. ಮೇಲೇಳಲು ಪ್ರಯಾಸಪಡುತ್ತಿದ್ದ ಅಭಿಮನ್ಯುವಿನ ಮೇಲೆ ಗದಾಪ್ರಹಾರ ಮಾಡಿದ. ಅದರ ಘಾತವನ್ನು ತಡೆಯಲಾರದೆ ಅಭಿಮನ್ಯು ಸಂಪೂರ್ಣ ಕೆಳಕ್ಕುರುಳಿದ.

ಏಕಾಂಗಿಯಾದರೂ ಧೃತಿಗೆಡದೆ, ಸಂಪೂರ್ಣ ಆತ್ಮವಿಶ್ವಾಸ ಮತ್ತು ಬದ್ಧತೆಯಿಂದ ಹೋರಾಡಿದ ತರುಣ ಅಭಿಮನ್ಯು, ಇಂದಿಗೂ ಶೌರ್ಯಕ್ಕೆ ಮಾದರಿಯಾಗಿದ್ದಾನೆ. ಕುರುಕ್ಷೇತ್ರ ಯುದ್ಧದಲ್ಲಿ ವೀರಮರಣವಪ್ಪಿದ ಈತನ ಸಾಹಸದ ಕ್ಷಣಗಳು ಎಂಥವರೂ ಮೈನವಿರೇಳುವಂತೆ ಮಾಡುತ್ತದೆ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.