ಗಿಬ್ರಾನ್’ಗೆ ಕಾಯಕ ಕಂಡಿದ್ದು ಹೀಗೆ….: ‘ಪ್ರವಾದಿ’ಯಿಂದ ಒಂದು ಪದ್ಯ

ಮೂಲ : ಖಲೀಲ್ ಗಿಬ್ರಾನ್, ಪ್ರವಾದಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ಮನುಷ್ಯ,
ಕಾಯಕಕ್ಕೆ ಮುಂದಾಗುವುದು
ಭೂಮಿಯ ಗತಿಯೊಂದಿಗೆ, ಆತ್ಮದೊಂದಿಗೆ
ಜೊತೆ ಜೊತೆಯಾಗಿ ಹೆಜ್ಜೆ ಹಾಕಲು.

ಸೋಮಾರಿಯಾಗುವುದೆಂದರೆ,
ಋತುಮಾನಗಳಿಗೆ ಅಪರಿಚಿತನಾದಂತೆ.
ಗಂಭೀರವಾಗಿ, ತಲೆ ಎತ್ತಿಕೊಂಡು
ಅಪಾರದತ್ತ ಹೆಜ್ಜೆ ಹಾಕುತ್ತಿರುವ
ಬದುಕಿನ ಮೆರವಣಿಗೆಯಿಂದ
ಹೊರಗುಳಿದಂತೆ.

ಕಾಯಕಕ್ಕಿಳಿದಾಗ ನೀವೊಂದು ಕೊಳಲಿನಂತೆ.
ಆಗ ನಿಮ್ಮ ಎದೆಯ ಮೂಲಕ
ಹಾಯ್ದು ಹೋಗುವ ಕಾಲದ ಪಿಸುಮಾತು,
ಸಂಗೀತವಾಗುತ್ತದೆ.

ಕಾಯಕ ಬೇರೇನಲ್ಲ;
ಪ್ರೇಮ ಪ್ರತ್ಯಕ್ಷವಾಗುವ ಒಂದು ವಿಧಾನ.

ಕಾಯಕದಲ್ಲಿ
ಪ್ರೇಮ ಸಾಧ್ಯವಾಗದೇ ಹೋದರೆ,
ಜಿಗುಪ್ಸೆ ಮುಂದೆ ಬಂದು ನಿಂತರೆ,
ತಕ್ಷಣ ಕೆಲಸ ಬಿಟ್ಟು ಹೊರ ನಡೆಯಿರಿ,
ದೇವಸ್ಥಾನದ ಬಾಗಿಲಲ್ಲಿ ಕುಳಿತು
ಖುಷಿಯಿಂದ ಕೆಲಸ ಮಾಡುವವರ ಎದುರು
ಕೈ ಚಾಚಿ.

ಉದಾಸೀನರಾಗಿ ಬೇಯಿಸಿದ ರೊಟ್ಟಿ
ತಿನ್ನವುದು ಕಷ್ಟ ಅಷ್ಟೇ ಅಲ್ಲ
ಉಣ್ಣುವವನ ಅರ್ಧ ಹಸಿವೆಗೂ ನಷ್ಟ.

(ಇದು ‘ಪ್ರವಾದಿ’ ಅನುವಾದದ ‘ಕಾಯಕ’ ಅಧ್ಯಾಯದ ಆಯ್ದ ಭಾಗ. ಇದರ ಪೂರ್ಣಪಾಠ ಇಲ್ಲಿದೆ: https://aralimara.com/2018/08/05/gibran7/ )

2 Comments

Leave a Reply