ಗರುಡನಿಗೂ ಸರ್ಪಗಳಿಗೂ ವೈರವೇಕೆ? ಕದ್ರು ತನ್ನದೇ ಮಕ್ಕಳಿಗೆ ಶಾಪ ಕೊಟ್ಟಿದ್ದೇಕೆ!?

ಪ್ರಜಾಪತಿ ಕಶ್ಯಪನ ಅನೇಕಾನೇಕ ಪತ್ನಿಯರಲ್ಲಿ ಕದ್ರು ಮತ್ತು ವಿನತೆಯೂ ಇದ್ದರು. ಕದ್ರುವಿಗೆ ಸರ್ಪಗಳು ಮಕ್ಕಳಾಗಿ ಹುಟ್ಟಿದರು. ವಿನತೆಗೆ ಅರುಣ ಮತ್ತು ಗರುಡ ಮಕ್ಕಳಾದರು. ಮುಂದೆ ಅಂಗ ನ್ಯೂನತೆಯಿದ್ದ ಅರುಣನು ಸೂರ್ಯನ ಸಾರಥಿಯಾದನು. ಗರುಡನು ಮಹಾಶಕ್ತಿಶಾಲಿಯಾಗಿ ಬೆಳೆದನು.

ಕಾಲಾಂತರದಲ್ಲಿ ದೇವಾಸುರರು ಸೇರಿ ಅಮೃತ ಪಡೆಯಲೆಂದು ಸಾಗರ ಮಥನ ನಡೆಸಿದರು. ಅಮೃತಕ್ಕೆ ಮೊದಲು ಹೊರಬಂದ ಅಮೂಲ್ಯ ಉಚ್ಚೈಶ್ರವಸ್ ಎಂಬ ಕುದುರೆಯೂ ಇತ್ತು. ಆ ಕುದುರೆ ಹಾಲಿನಂತೆ ಬೆಳ್ಳಗಿತ್ತು. ಅತ್ಯಾಕರ್ಷವಾಗಿತ್ತು. ಅದನ್ನು ನೋಡಲೆಂದೇ ಮೂರು ಲೋಕಗಳಿಂದ ದೇವ ದಾನವ ಮನುಷ್ಯರೂ ತಂಡೋತಂಡವಾಗಿ ಬರುತ್ತಿದ್ದರು.

ಕದ್ರು ಮತ್ತು ವಿನಯತೆಗೂ ಆ ಕುದರೆಯನ್ನು ಕಾಣುವ ತವಕ ಉಂಟಾಯಿತು. ಅದು ಹೇಗಿರಬಹುದೆಂದು ಕುತೂಹಲದಿಂದ ತಮ್ಮಲ್ಲೇ ಚರ್ಚಿಸಿದರು. ವಿನತೆ, “ಕುದುರೆ ಪೂರ್ತಿ ಬೆಳ್ಳಗಿದೆಯಂತೆ. ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲವಂತೆ’’ ಅಂದಳು. ಅದಕ್ಕೆ ಪ್ರತಿಯಾಗಿ ಕದ್ರು, “ಅದು ಹೇಗೆ ಸಾಧ್ಯ ? ಇನ್ನೇನಿಲ್ಲದಿದ್ದರೂ ಅದರ ಬಾಲವಾದರೂ  ಕಪ್ಪಗಿರಬೇಕಲ್ಲವೇ ?’’ ಅಂದಳು. ವಿನತೆ “ಇಲ್ಲ ಬಾಲವೂ ಬೆಳ್ಳಗಿದೆಯಂತೆ’’ ಎಂದು ತನ್ನ ಮಾತನ್ನು ಪುನರುಚ್ಚರಿಸಿದಳು. ವಾಗ್ವಾದ ತಾರಕ್ಕೇರಿತು. ಸೋಲೊಪ್ಪಲು ಸಿದ್ಧವಿಲ್ಲದ ಕದ್ರು, “ಸಾಧ್ಯವೇ ಇಲ್ಲ, ಬೇಕಾದರೆ ಪಂದ್ಯ ಕಟ್ಟೋಣ’’ ಅಂದಳು. “ಏನು ಪಂದ್ಯ ?’’ ಕೇಳಿದಾಗ,  “ಕುದುರೆ ಪೂರ್ತಿ ಬೆಳ್ಳಗಿದ್ದರೆ, ಜೀವನಪೂರ್ತಿ ನಾನು ನಿನ್ನ ಸೇವಕಿಯಾಗಿರುತ್ತೇನೆ. ಕುದುರೆಯ ಬಾಲ ಕಪ್ಪಾಗಿದ್ದರೆ ನೀನು ನನ್ನ ಸೇವಕಿಯಾಗಿರಬೇಕು” ಅಂದಳು. ವಿನತೆ ಇದಕ್ಕೆ ಒಪ್ಪಿದಳು. ಇಬ್ಬರೂ ಕುದುರೆಯನ್ನು ನೋಡಿ ಬರುವುದೆಂದು ನಿಶ್ಚಯಿಸಿದರು.

 ವಾಸ್ತವದಲ್ಲಿ ಸ್ವತಃ ಕದ್ರುವಿಗೂ ಕುದುರೆಯ ಬಾಲ ಕಪ್ಪಾಗಿದೆ ಎಂದು ನಂಬಿಕೆಯಿರಲಿಲ್ಲ. ಆದರೂ ವಿನತೆಯನ್ನು ವಿರೋಧಿಸಲೆಂದೇ ಅವಳು ಬಾಲ ಕಪ್ಪಾಗಿದೆಯೆಂದು ವಾದಿಸಿದ್ದಳು. ಈಗ ಹೆದರಿಕೆ ಶುರುವಾಯಿತು. ಅದು ಸಂಪೂರ್ಣ ಬೆಳ್ಳಗಿದ್ದುಬಿಟ್ಟಿದ್ದರೆ…. ಜೀವಮಾನವಿಡೀ ವಿನತೆಯ ಸೇವಕಿಯಾಗಿರಬೇಕು!

ಮೋಸ ಮಾಡಿಯಾದರೂ ಸರಿ, ತಾನು ಗೆಲ್ಲಲೇಬೇಕೆಂದು ಕದ್ರು ನೀಶ್ಚಯಿಸಿದಳು.  ತನ್ನ ಮಕ್ಕಳಾದ ಸರ್ಪಗಳನ್ನು ಕರೆದಳು. ಶೇಷ, ವಾಸುಕಿ, ತಕ್ಷಕ, ಕಾರ್ಕೋಟಕ ಮೊದಲಾದ ಸರ್ಪಗಳು ತಾಯಿಯ ಬಳಿಗೆ ಬಂದವು. ಕದ್ರು ತನಗೂ ವಿನತೆಗೂ ನಡೆದ ವಾಗ್ವಾದ ವಿವರಿಸಿದಳು. ತಾವು ಪಂಥ ಕಟ್ಟಿದ್ದನ್ನೂ ಹೇಳಿದಳು. “ನೀವು ಹೋಗಿ ಆ ಕುದುರೆಯ ಬಾಲಕ್ಕೆ ಜೋತುಬಿದ್ದು ಅದನ್ನು ಮುಚ್ಚಿಬಿಡಿ. ಆಗ ಅದು ಕಪ್ಪಾಗಿ ಕಾಣುತ್ತದೆ. ನಾನು ಪಂದ್ಯದಲ್ಲಿ ಗೆದ್ದಂತಾಗುತ್ತದೆ” ಅಂದಳು.

ಆಗ ಸರ್ಪಗಳು ನಾವು ಮೋಸ ಮಾಡುವುದಿಲ್ಲ. ನಮ್ಮಿಂದ ಈ ಅನೀತಿಕಾರ್ಯ ಮಾಡಿಸಬೇಡ ಎಂದು ನಿರಾಕರಿಸಿದವು. ಇದರಿಂದ ಕೋಪಗೊಂಡ ಕದ್ರು, “ನನ್ನ ಮಾತಿಗೆ ಎದುರುತ್ತರ ನೀಡುತ್ತೀರಾ!? ನನ್ನ ಮಾತು ಮೀರಿದವರು ಅಗ್ನಿಕುಂಡದಲ್ಲಿ ಬಿದ್ದು ಬೇಯುವುದು ಖಚಿತ’’ – ಎಂದು ಶಾಪ ಕೊಟ್ಟಳು.

ತಾಯಿಯ ಆಕ್ರೋಶ ಕಂಡು ಸರ್ಪಗಳು ಅರೆಮನಸ್ಕರಾಗಿ ಉಚ್ಚೈಶ್ರವಸ್ಸಿನ ಬಳಿ ಹೋದವು. ತಾಯಿ ಹೇಳಿದಂತೆ ಅದರ  ಬಾಲಕ್ಕೆ ಜೋತುಬಿದ್ದವು. ಕದ್ರು ಮತ್ತು ವಿನತೆ ಬಂದು ನೋಡಿದಾಗ ಕುದುರೆಯ ಬಾಲ ಕಪ್ಪಾಗಿತ್ತು ವಿನತೆಯರು ಬಂದು ನೋಡಿದಾಗ ಆ ಕುದುರೆಯೂ ಬಾಲವೂ ಮಾತ್ರ ಕಪ್ಪಾಗಿತ್ತು. ವಿನತೆ ತನ್ನ ಸೋಲೊಪ್ಪಿಕೊಂಡು ಕದ್ರುವಿನ  ಸೇವಕಿಯಾದಳು.

ವೀರನಾದ ಗರುಡನಿಗೆ ಇದು ಸಹ್ಯವಾಗಲಿಲ್ಲ. ತನ್ನ ತಾಯಿಯ ದಾಸ್ಯಮುಕ್ತಿಯಾಗಬೇಕಾದರೆ ಏನು ಮಾಡಬೇಕೆಂದು ಸರ್ಪಗಳ ಬಳಿ ಕೇಳಿದ. ಅವು ತಮ್ಮ ತಾಯಿಯ ಶಾಪ ನೆನೆದು, ಅದಕ್ಕೆ ಮೊದಲೇ ತಯಾರಿ ಮಾಡಿಕೊಳ್ಳುವ ಆಲೋಚನೆಯಿಂದ ತಮಗೆ ಅಮೃತ ತಂದುಕೊಡೆಂದು ಗರುಡನಲ್ಲಿ ಕೇಳಿದವು. ಗರುಡ ಹಿಂದೆ ಮುಂದೆ ನೋಡದೆ ಆಕಾಶಕ್ಕೆ ಚಿಮ್ಮಿ ದೇವಲೊಕ್ಕ ಹೊಕ್ಕ. ಅಮೃತವನ್ನು ಅಪಹರಿಸಿ ಸರ್ಪಗಳ ಮುಂದಿಟ್ಟ. ವಿನತೆಯ ದಾಸ್ಯಮುಕ್ತಿಯಾಯಿತು. ಆದರೆ ಸರ್ಪಗಳಿಗೆ ಮಾತ್ರ ಅಮೃತ ದಕ್ಕಲಿಲ್ಲ. ಸರ್ಪಗಳು ಅಮೃತಕ್ಕೆ ಬಾಯಿಹಾಕುವ ಮೊದಲೇ ಗರುಡನಿಗೆ ಅವುಗಳ ಮೋಸ ತಿಳಿದುಹೋಯಿತು. ತನ್ನ ತಾಯಿಯನ್ನು ವಂಚನೆಯಿಂದ ಸೋಲಿಸಿ ದಾಸಿಯಾಗಿ ಮಾಡಿಕೊಂಡರೆಂದು ಕೋಪದಿಂದ ಕುದ್ದುಹೋದ ಗರುಡ ಅಮೃತಕಲಶ ಕಸಿದು ಇಂದ್ರನಿಗೆ ಮರಳಿಸಿದ. ಅನಂತರ ಪ್ರತೀಕಾರ ತೀರಿಸಲು ಸಿಕ್ಕಸಿಕ್ಕಲ್ಲೆಲ್ಲ ಸರ್ಪಗಳ ಮೇಲೆರಗಿ ಕೊಂದು ತಿನ್ನತೊಡಗಿದ.

ಗರುಡನಿಗೆ ಭಯಪಟ್ಟು ಸರ್ಪಗಳು ತಲೆಮರೆಸಿಕೊಂಡು ಓಡಾಡತೊಡಗಿದವು. ಇತ್ತ ಅಮೃತವೂ ಇಲ್ಲದೆ, ಹೆಚ್ಚುವರಿಯಾಗಿ ತಾಯಿಯ ಶಾಪವನ್ನೂ ಹೊತ್ತು ಆತಂಕದಿಂದ ದಿನ ಕಳೆಯತೊಡಗಿದವು. ಕದ್ರು ಇಡೀ ಸರ್ಪಕುಲಕ್ಕೆ ಶಾಪ ನೀಡಿದ್ದರಿಂದ ಯಾರೂ ಬದುಕುಳಿಯುವ ಅವಕಾಶವೇ ಇರಲಿಲ್ಲ. ಕೊನೆಗೆ ಅವು ತಮ್ಮ ತಂಗಿ ಜರತ್ಕಾರುವನ್ನು ಮದುವೆ ಮಾಡಿಕೊಡಲು ನಿರ್ಧರಿಸಿದರು. ಇದರಿಂದ ಆಕೆ ಬೇರೆ ಕುಲದವಳಾಗುತ್ತಾಳೆ. ಅವಳಿಗೆ ಹುಟ್ಟುವ ಮಗ ತಮ್ಮನ್ನು ರಕ್ಷಿಸಬಹುದೆಂದು ಆಶಿಸಿದರು. ಅದರಂತೆ ಜರತ್ಕಾರು ಎಂಬ ಋಷಿಗೆ ತಮ್ಮ ತಂಗಿ ಜರತ್ಕಾರುವನ್ನು (ಇಬ್ಬರ ಹೆಸರೂ ಒಂದೇ) ಕೊಟ್ಟು ಮದುವೆ ಮಾಡಿದರು. ಅವರಿಗೆ ಹುಟ್ಟಿದ ಮಗನೇ ‘ಆಸ್ತಿಕ’.

ಮುಂದೆ ಪಾಂಡುಕುಲದ ಜನಮೇಜಯ ಸರ್ಪಯಾಗ ಮಾಡುತ್ತಿದ್ದಾಗ ಅಳಿದುಳಿದ ಸರ್ಪಗಳನ್ನು ಈತ ರಕ್ಷಿಸಿದ. ಸರ್ಪಸಂಕುಲ ಅಳಿಯದಂತೆ ಕಾಪಾಡಿದ. ಆ ಕಥೆಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

2 Comments

Leave a Reply