ಜನಮೇಜಯ ಸರ್ಪಗಳನ್ನು ಬಲಿಹಾಕುವ ಯಾಗ ನಡೆಸಿದ್ದೇಕೆ? ಅದನ್ನು ತಡೆದವರು ಯಾರು, ಮತ್ತು ಏಕೆ!?

ಸರ್ಪವನ್ನು ಕಂಡಾಗ ಹಿರಿಯರು ‘ಆಸ್ತಿಕ… ಆಸ್ತಿಕ…’ ಎಂದು ಪಠಿಸುತ್ತಾರೆ. ಅದೇಕೆ ಹಾಗೆ ಮಾಡುತ್ತಾರೆ? ಯಾರು ಈ ಆಸ್ತಿಕ? ಸರ್ಪಗಳಿಗೂ ಅವನಿಗೂ ಏನು ಸಂಬಂಧ?  ಜನಮೇಜಯ ಯಾಗ ನಡೆಸಿ ಸರ್ಪಸಂತತಿಯನ್ನೇ ನಾಶ ಮಾಡಲು ಹೊರಟಿದ್ದೇಕೆ….!? ತಿಳಿಯಲು ಈ ಕಥೆ ಓದಿ!

ಕುರುಕ್ಷೇತ್ರ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಅವರ ನಂತರ ಅಭಿಮನ್ಯು – ಉತ್ತರೆಯರ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ.

ಈ ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ತೆರಳಿದ್ದವನು ಬಾಯಾರಿ ಶಮೀಕಮುನಿಯ ಆಶ್ರಮವನ್ನು ಹೊಕ್ಕ. ಸಮಾಧಿಸ್ಥನಾಗಿದ್ದ ಮುನಿ ಈತನನ್ನು ಸತ್ಕರಿಸಲಿಲ್ಲವಾದ ಕಾರಣ ಕೋಪಗೊಂಡು ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋದ. ನಂತರ ಅಲ್ಲಿಗೆ ಬಂದ ಮುನಿಪುತ್ರ ಶೃಂಗಿ ಕ್ರೋಧವಶನಾಗಿ “ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇನ್ನು ಏಳು ದಿನಗಳೊಳಗೆ ಸರ್ಪದ ಕಡಿತದಿಂದ ಸಾಯಲಿ” ಎಂದು ಶಪಿಸಿದ. ಈ ಶಾಪವನ್ನು ಸ್ವೀಕರಿಸಿದ ಪರೀಕ್ಷಿತ, ತನ್ನ ಅಂತಿಮ ದಿನಗಳನ್ನು ಭಾಗವತ ಶ್ರವಣದಲ್ಲಿ ಕಳೆದು, ಸರ್ಪರಾಜ ತಕ್ಷಕನ ಕಡಿತಕ್ಕೆ ಒಳಗಾಗಿ ತೀರಿಹೋದ.

ಪರೀಕ್ಷಿತನ ನಂತರ ಅವನ ಮಗ ಜನಮೇಜಯ ಅಧಿಕಾರಕ್ಕೆ ಬಂದ. ತಂದೆಯನ್ನು ಉಳಿಸಿಕೊಳ್ಳಲು ರಹಸ್ಯ ಭವನ ನಿರ್ಮಿಸಿ ಎಷ್ಟೆಲ್ಲ ಕಷ್ಟಪಟ್ಟಿದ್ದರೂ ತಕ್ಷಕ ಅದನ್ನು ಪ್ರವೇಶಿಸಿ ಕಚ್ಚಿ ಸಾಯಿಸಿದ್ದು ಅವನಿಗೆ ಮರೆಯಲಾಗಿರಲಿಲ್ಲ. ಅದಕ್ಕೆ ಸರಿಯಾಗಿ, ಸರ್ಪಗಳ ಮೇಲೆ ದ್ವೇಷವಿದ್ದ ಉತ್ಥಂಕ ಜನಮೇಜಯನನ್ನು ಭೇಟಿಯಾಗಿ ಅವನನ್ನು ಸೇಡಿಗಾಗಿ ಪ್ರಚೋದಿಸಿದ. “ಸರ್ಪಯಾಗ ನಡೆಸಿ ನಿನ್ನ ತಂದೆಯ ಸಾವಿಗೆ ಕಾರಣವಾದ ಸರ್ಪಕುಲವನ್ನೇ ನಾಶ ಮಾಡು” ಎಂದು ಹುರಿದುಂಬಿಸಿದ.

ಅದರಂತೆ ಜನಮೇಜಯ ಆಸ್ಥಾನ ಪುರೋಹಿತರನ್ನು ಕರೆಸಿ ಸರ್ಪಯಾಗಕ್ಕೆ ದಿನ ನಿಶ್ಚಯಿಸಿದ. ಋತ್ವಿಜರನ್ನು ಕರೆಸಿ ಬೇಕಾದ ಏರ್ಪಾಡು ಮಾಡಿಕೊಳ್ಳಲು ಸೂಚಿಸಿದ.

ಸರ್ಪ ಯಾಗ ಶುರುವಾಯಿತು. ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡಿ, ಅದನ್ನು ಅಗ್ನಿಯ ಬಳಿಗೆ ಆಕರ್ಷಿಸಿ ‘ಸ್ವಾಹಾ’ ಅನ್ನುತ್ತಿದ್ದರು. ಕೂಡಲೇ ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು. ಎಲ್ಲ ಲೋಕಗಳ, ಎಲ್ಲ ಬಗೆಯ ಹಾವುಗಳೂ ಸರಸರನೆ ಬಂದು ಅಗ್ನಿಕುಂಡದೊಳಗೆ ಬೀಳುವುದನ್ನು ನೋಡಿದರೆ ಎಂಥವರೂ ತಲ್ಲಣಿಸಬೇಕು! ಆದರೆ ಜನಮೇಜಯ ತನ್ನ ತಂದೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಬದ್ಧನಾಗಿದ್ದ. ಅವನ ಮನಸ್ಸು ಬದಲಾಗಲಿಲ್ಲ. ಜೊತೆಗೆ ಸರ್ಪಗಳು ಹೀಗೆ ಕುಂಡದೊಳಗೆ ಸುಟ್ಟು ಸಾಯಬೇಕೆನ್ನುವುದು ನಿಯತಿಯ ಇಚ್ಛೆಯಾಗಿತ್ತು. ಜನಮೇಜಯ ನಿಮಿತ್ತ ಮಾತ್ರನಾಗಿದ್ದ. ಸರ್ಪಕುಲದ ತಾಯಿ ಕದ್ರು ನೀಡಿದ ಶಾಪವೇ ಸರ್ಪಯಾಗಕ್ಕೆ ವೇದಿಕೆ ಒದಗಿಸಿತ್ತು. (ಕದ್ರು ತನ್ನದೇ ಮಕ್ಕಳಿಗೆ ಶಾಪ ನೀಡಿದ್ದೇಕೆ? ~ ಇಲ್ಲಿ ಓದಿ : )

ಜನಮೇಜಯನ ಯಜ್ಞಕ್ಕೆ ತನ್ನ ಬಾಂಧವರು ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ತಲ್ಲಣಿಸಿಹೋದ. ಸಹಾಯಕ್ಕಾಘಿ ದೇವೇಂದ್ರನ ಬಳಿ ಧಾವಿಸಿದ. ತಕ್ಷಕನಿಗೆ ಅಭಯ ನೀಡಿದ ದೇವೇಂದ್ರ, “ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಲ್ಲು, ಯಾಗ ಮಂತ್ರ ನಿನ್ನನ್ನು ಸೆಳೆಯಲಾರದು” ಎಂದು ಸೂಚಿಸಿದ. ತಕ್ಷಕ ಹಾಗೇ ಮಾಡಿದ.

ಆದರೆ ಯಾಗ ಮಂತ್ರದ ಆಕರ್ಷಣೆಯ ಬಲದೆದುರು ತಕ್ಷಕನ ಆಟ ನಡೆಯಲಿಲ್ಲ. ಮಂತ್ರವು ದೇವೇಂದ್ರನನ್ನೂ ಸೇರಿಸಿಕೊಂಡೇ ತಕ್ಷಕನನ್ನು ಯಾಗಕುಂಡದೆಡೆ ಸೆಳೆಯಲಾರಂಭಿಸಿತು.

ಇದನ್ನು ಕಂಡು ಭೀತರಾದ ವಾಸುಕಿ ಮೊದಲಾದ ಅಳಿದುಳಿದ ಸರ್ಪಗಳು ತಮ್ಮ ಕುಲಕ್ಕೆ ಹೊರಗಿನವನಾದ, ಸೋದರಳಿಯ ಆಸ್ತಿಕ ಋಷಿಯ ಬಳಿ ಹೋದರು. “ನಮ್ಮ ತಾಯಿಯ ಶಾಪದ ಪರಿಣಾಮವಾಗಿ ನಾವೆಲ್ಲರೂ ಯಜ್ಞ್ಯಕುಂಡದಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ನಿನಗೊಬ್ಬನಿಗೆ ಮಾತ್ರ ನಮ್ಮನ್ನು ಈ ದುರವಸ್ಥೆಯಿಂದ ಪಾರುಮಾಡಲು ಸಾಧ್ಯ. ದಯವಿಟ್ಟು ನಮಗೆ ಸಹಾಯಮಾಡು” ಎಂದು ಕೇಳಿಕೊಂಡರು. ಆಸ್ತಿಕ ಸಂತೋಷದಿಂದಲೇ ಸಮ್ಮತಿಸಿ, “ಹೇಳಿ, ನಾನೇನು ಮಾಡಿದರೆ ಸರ್ಪ ಸಂತತಿ ಉಳಿಯುತ್ತದೆ?” ಎಂದು ಪ್ರಶ್ನಿಸಿದ.  

ಆಗ ವಾಸುಕಿಯು “ಮಗೂ, ಜನಮೇಜಯನು ಸರ್ಪಯಾಗವನ್ನು ಮಾಡುತಿದ್ದಾನೆ. ಬ್ರಹ್ಮಚಾರಿಯಾದ ನೀನು ಅವನ ಬಳಿಗೆ ಹೋಗಿ ಆ ಯಜ್ಞ್ಯವನ್ನು ನಿಲ್ಲಿಸುವಂತೆ ಮಾಡು” ಎಂದು ಸಲಹೆ ನೀಡಿದ. ಆಸ್ತಿಕ ತಡಮಾಡದೆ ಅಲ್ಲಿಂದ ಹೊರಟು ಯಾಗಶಾಲೆಯನ್ನು ತಲುಪಿದ. ಜನಮೇಜಯನ ಮುಂದೆ ಹೋಗಿ ನಿಂತ. ಇನ್ನೇನು ಮಂತ್ರಾಕರ್ಷಣೆಗೆ ಸಿಲುಕಿ ದೇವೇಂದ್ರ ಸಹಿತನಾಗಿ ತಕ್ಷಕ ಕುಂಡದಲ್ಲಿ ಬೀಳುವುದರಲ್ಲಿದ್ದ. ಆದರೆ ಅದಕ್ಕೆ ಅಡ್ಡಿಯಾಗಿ ನಿಂತ ಆಸ್ತಿಕ, “ಬ್ರಹ್ಮಚಾರಿಗೆ ದಕ್ಷಿಣೆ ಕೊಡದೆ ಯಾಗ ಹೇಗೆ ಮುನ್ನಡೆಸುತ್ತೀರಿ?” ಎಂದು ಜನಮೇಜಯನನ್ನು ಇಕ್ಕಟ್ಟಿಗೆ ಸಿಲುಕಿಸಿದ. ಜನಮೇಜಯ, “ಬ್ರಹ್ಮಚಾರಿ! ನಿನಗೇನು ಬೇಕು ಕೇಳು. ಕೊಡುತ್ತೇನೆ” ಎಂದು ವಾಗ್ದಾನ ನೀಡಿಬಿಟ್ಟ. ಇದಕ್ಕಾಗಿಯೇ ಕಾದಿದ್ದ ಆಸ್ತಿಕ “ಈಗಿಂದೀಗಲೇ ಸರ್ಪಯಾಗವನ್ನು ನಿಲ್ಲಿಸಿ. ಇದೇ ನೀವು ನನಗೆ ಕೊಡುವ ದಕ್ಷಿಣೆ!!” ಅಂದುಬಿಟ್ಟ.

ಮಾತಿಗೆ ಬದ್ಧನಾದ ಜನಮೇಜಯನಿಗೆ ಬೇರೆ ದಾರಿಯೇ ಉಳಿಯಲಿಲ್ಲ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಏನೂ ಮಾಡುವಂತಿಲ್ಲ. ಆದರೂ ಆಸ್ತಿಕನಿಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. ದೇವೇಂದ್ರ ಅವನನ್ನು ಸಮಾಧಾನ ಪಡಿಸಿ, ಶೃಂಗಿಯ ಶಾಪವೇ ಕಾರಣವಾಗಿ ನಿನ್ನ ತಂದೆಯ ಮೃತ್ಯುವಾಯಿತು. ಇದರಲ್ಲಿ ತಕ್ಷಕನ ಪಾತ್ರವೇನೂ ಇಲ್ಲ. ಅವನು ನಿಮಿತ್ತ ಮಾತ್ರ ಎಂದು ಅನುನಯಿಸಿದ. ಇದರಿಂದ ಜನಮೇಜಯನೂ ದ್ವೇಷ ಕಳೆದು ಸಮಾಧಾನ ಹೊಂದಿದ.

ತಮ್ಮ ಸೋದರಳಿಯನ ಸಹಾಯಕ್ಕೆ ಕೃತಜ್ಞರಾದ ಸರ್ಪಗಳು “ನಿನ್ನನ್ನು ಯಾರು ಸ್ಮರಿಸುತ್ತಾರೋ ಅವರನ್ನು ನಾವು ಬಾಧಿಸುವುದಿಲ್ಲ” ಎಂದು ವಾಗ್ದಾನ ನೀಡಿದವು. ಇಂದಿಗೂ ಕೆಲವು ಕಡೆಗಳಲ್ಲಿ ಬಹುತೇಖ ವೃದ್ಧರು ಹಾವನ್ನು ಕಂಡಕೂಡಲೇ “ಆಸ್ತಿಕ… ಆಸ್ತಿಕ…” ಎಂದು ಪಠಿಸುವುದು ಇದೇ ಕಾರಣಕ್ಕೆ. ಆಸ್ತಿಕನನ್ನು ಸ್ಮರಿಸಿದರೆ ಸರ್ಪ ತೊಂದರೆ ಕೊಡದೆ ಹೊರಟು ಹೋಗುತ್ತದೆ ಅನ್ನುವ ನಂಬಿಕೆಗೆ ಈ ಕಥೆಯೇ ಹಿನ್ನೆಲೆ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

3 Responses

  1. Praveen D. Kateel's avatar Praveen D. Kateel

    ಅಸ್ತೀಕನಿಂದ ಸರ್ಪಯಾಗ ಕೊನೆಯಾದ ನಂತರ , ಜನಮೀಜಯ ಮಹಾರಾಜ ಅದುವರೆಗೂ ಮಾಡಿದ ಸರ್ಪಯಾಗದ ಪ್ರಾಯಸ್ಚಿತ್ತಕ್ಕಾಗಿ ಏನಾದರೂ ನಾಗಕಲ್ಲು ಪ್ರತಿಷ್ಟೇ / ನಾಗಮಂದಲ…ಮಾಡಿದ್ದಾರೇಯೇ? ಮಾಡಿದ್ದರೆ ಯಾವ ಸ್ಥಳದಲ್ಲಿ ಎ0ಬ ಮಾಹಿತಿ ಇದೆಯಾ?

    Like

Leave a Reply

This site uses Akismet to reduce spam. Learn how your comment data is processed.