ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಜ್ಞಾನದ ಆಕಾಂಕ್ಷೆಯುಳ್ಳ ಯುವಕನೊಬ್ಬ ಸೂಫೀಯ ಹತ್ತಿರ ಬಂದು ತನ್ನನ್ನು ಶಿಷ್ಯನಾಗಿ ಸ್ವೀಕರಿಸುವಂತೆ ನಿವೇದಿಸಿಕೊಂಡ.
ನೀನು ಒಂದು ಪ್ರಶ್ನೆಗೆ ಉತ್ತರಿಸು, ನಿನ್ನ ಉತ್ತರ ಸರಿಯಾಗಿದ್ದರೆ ಮೂರು ವರ್ಷಗಳ ನಂತರ ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಮಾಸ್ಟರ್ ಒಪ್ಪಿಕೊಂಡಿದ್ದಾರೆಂದು ಅವನಿಗೆ ತಿಳಿಸಲಾಯಿತು.
ಆ ಯುವಕನಿಗೊಂದು ಪ್ರಶ್ನೆ ಕೊಡಲಾಯಿತು. ಪ್ರಶ್ನೆ ಕೇಳಿ, ಆ ಯುವಕನಿಗೆ ಅಚ್ಚರಿಯಾಯಿತು. ತುಂಬ ಯೋಚನೆ ಮಾಡಿದ ಮೇಲೆ ಆ ಯುವಕ ತನ್ನ ಉತ್ತರ ಬರೆದುಕೊಟ್ಟ.
ಸೂಫಿಯ ಪ್ರಧಾನ ಶಿಷ್ಯ ಆ ಉತ್ತರವನ್ನು ಸೂಫೀಗೆ ಮುಟ್ಟಿಸಿ, ಸೂಫೀಯ ನಿರ್ಣಯದೊಂದಿಗೆ ವಾಪಸ್ ಬಂದು ಯುವಕನನ್ನು ಮಾತನಾಡಿಸಿದ.
“ನಿನ್ನ ಉತ್ತರ ಸರಿಯಾಗಿದೆ, ಮೂರು ವರ್ಷಗಳ ನಂತರ ಬಾ, ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಸೂಫೀ ಒಪ್ಪಿಕೊಂಡಿದ್ದಾರೆ.
ಆ ಯುವಕನಿಗೆ ತುಂಬ ಖುಶಿಯಾಯಿತು, “ ಸರಿ ಹಾಗಾದರೆ ಮೂರು ವರ್ಷಗಳ ನಂತರ ವಾಪಸ್ಸು ಬರುತ್ತೇನೆ. ಆದರೆ ನನಗೊಂದು ಕುತೂಹಲ ಅಕಸ್ಮಾತ್ ಉತ್ತರ ತಪ್ಪಾಗಿದ್ದರೆ ಏನಾಗುತ್ತಿತ್ತು?” ಯುವಕ ಪ್ರಶ್ನೆ ಮಾಡಿದ.
“ಓಹ್ ಹಾಗೇನಾದರೂ ನಿನ್ನ ಉತ್ತರ ತಪ್ಪಾಗಿದ್ದರೆ, ಸೂಫೀ ನಿನ್ನನ್ನು ಕೂಡಲೇ ಶಿಷ್ಯನಾಗಿಸಿಕೊಳ್ಳಲು ಒಪ್ಪಿಕೊಳ್ಳುತ್ತಿದ್ದರು”
ಸೂಫಿಯ ಪ್ರಧಾನ ಶಿಷ್ಯ ಉತ್ತರಿಸಿದ.