‘ವೃಥಾ ತಲ್ಲಣ….’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2 

ಪೂರ್ಣವಾಗಿ ಅರಿತುಕೊಂಡಾಗ ಮಾತ್ರ ಸಮಾಧಾನ. ಹಾಗಾಗದೆ ಹೋದಾಗ ಕ್ಷೋಭೆ, ಒತ್ತಡ, ಮತ್ತು ದುಗುಡ. ಯಾರಾದರೂ ತೊಂದರೆಯಲ್ಲಿರುವವರು ಕಂಡರೆ ಗಾಬರಿಯಾಗಬೇಡಿ. ಅದು ಅಂಥ ತೊಂದರೆಯೇನಲ್ಲ, ಅವರು ಪರಿಸ್ಥಿತಿಯನ್ನು ಪೂರ್ತಿಯಾಗಿ ಅರ್ಥ ಮಾಡಿಕೊಂಡಿಲ್ಲ ಅಷ್ಟೇ…! ~ ಓಶೋ ರಜನೀಶ್

The Way is Perfect : ಭಾಗ 2

ಎಲ್ಲಿಯವರೆಗೆ ವಿಷಯದ ಆಳ ಅರ್ಥ ಅರಿವಾಗುವುದಿಲ್ಲವೋ
ಅಲ್ಲಿಯವರೆಗೆ ಮನಸ್ಸಿನ ಅವಶ್ಯಕ ಸಮಾಧಾನಕ್ಕೆ ವೃಥಾ ತಲ್ಲಣ.

ಹಾದಿ ಪರಿಪೂರ್ಣವಾಗಿದೆ, ಅಪಾರ ಬಯಲಿನಂತೆ.
ಒಂದಿನಿತೂ ಹೆಚ್ಚು – ಕಡಿಮೆಯಿಲ್ಲ.
ಹೌದು, ಸ್ವೀಕಾರ ಮತ್ತು ನಿರಾಕರಣೆಗಳ ನಡುವಿನ ನಮ್ಮ ಆಯ್ಕೆ,
ವಿಷಯಗಳ ನೈಜ ಸ್ವಭಾವದಿಂದ ನಮ್ಮನ್ನು ವಿಮುಖರನ್ನಾಗಿಸಿದೆ. 

ಬಹಿರಂಗದ ಸಿಕ್ಕಿನಲ್ಲಿ ಸಿಕ್ಕಿಹಾಕಿಕೊಳ್ಳದಿರಿ,
ಅಂತರಂಗದ ಖಾಲೀತನಕ್ಕೆ ಭಾವಪರವಶರಾಗದಿರಿ.
ಆಚರಣೆಗಳ ಸಲುವಾಗಿ ಶ್ರಮಿಸದಿರಿ, ಬೆವರು ಸುರಿಸದಿರಿ.
ಸಹಜವಾಗಿರಿ, ಸಮಾಧಾನವಾಗಿರಿ.
ವಿಷಯದ ಅನನ್ಯತೆಯಲ್ಲಿ ಒಂದಾಗಿ.
ಆಗ ತಾನೇ ತಾನಾಗಿ
ಗೊಂದಲಗಳು ಮರೆಯಾಗುತ್ತ ಹೋಗುತ್ತವೆ.

ಅನಾಸಕ್ತಿ ಸಾಧಿಸಲು ನೀವು ಕ್ರಿಯೆಯನ್ನು ನಿಲ್ಲಿಸುವಿರಾದರೆ
ಆ ನಿಮ್ಮ ಪ್ರಯತ್ನವೇ ನಿಮ್ಮನ್ನು ಕ್ರಿಯೆಯಿಂದ ತುಂಬಿ ತುಳುಕಿಸುತ್ತದೆ.

ಎಲ್ಲಿಯವರೆಗೆ ಒಂದು ಅತಿರೇಕವನ್ನು ಅಪ್ಪಿಕೊಳ್ಳುತ್ತೀರೋ
ಅಲ್ಲಿಯವರೆಗೆ ಪೂರ್ಣತೆಯನ್ನು ಅರ್ಥ ಮಾಡಿಕೊಳ್ಳಲಾರಿರಿ.
ಯಾರಿಗೆ ದಾರಿಯ ಪೂರ್ಣ ವಿಳಾಸ ಗೊತ್ತಿಲ್ಲವೋ
ಅವರು ಸಮರ್ಥನೆ, ನಿರಾಕರಣೆಗಳಲ್ಲಿ ಮಾತ್ರವಲ್ಲ
ಕ್ರಿಯಾಶೀಲತೆ ಮತ್ತು ಅನಾಸಕ್ತಿಗಳಲ್ಲೂ ಸೋಲು ಅನುಭವಿಸುತ್ತಾರೆ.

~ ಸೋಸಾನ್ ನ ಪದ್ಯ

full

ಎಲ್ಲಿಯವರೆಗೆ ವಿಷಯದ ಆಳ ಅರ್ಥ ಅರಿವಾಗುವುದಿಲ್ಲವೋ
ಅಲ್ಲಿಯವರೆಗೆ ಮನಸ್ಸಿನ ಅವಶ್ಯಕ ಸಮಾಧಾನಕ್ಕೆ ವೃಥಾ ತಲ್ಲಣ.

ಪೂರ್ಣವಾಗಿ ಅರಿತುಕೊಂಡಾಗ ಮಾತ್ರ ಸಮಾಧಾನ.
ಹಾಗಾಗದೆ ಹೋದಾಗ ಕ್ಷೋಭೆ, ಒತ್ತಡ, ಮತ್ತು ದುಗುಡ.
ಯಾರಾದರೂ ತೊಂದರೆಯಲ್ಲಿರುವವರು ಕಂಡರೆ ಗಾಬರಿಯಾಗಬೇಡಿ
ಅದು ಅಂಥ ತೊಂದರೆಯೇನಲ್ಲ,
ಅವರು ಪರಿಸ್ಥಿತಿಯನ್ನು ಪೂರ್ತಿಯಾಗಿ 
ಅರ್ಥ ಮಾಡಿಕೊಂಡಿಲ್ಲ ಅಷ್ಟೇ.

ಒಮ್ಮೆ ಹೀಗಾಯಿತು.
ಒಬ್ಬ ಗ್ರಹಸ್ಥ, ನನ್ನ ಹತ್ತಿರ ಬಂದು
ತನ್ನ ಹೆಂಡತಿ ಮಕ್ಕಳ ಬಗ್ಗೆ ತಕರಾರು ಹೇಳಿದ.
ತನ್ನ ಹೆಂಡತಿ ಚಂಡಿ ಎಂದೂ, ಗಯ್ಯಾಳಿ ಎಂದೂ,
ಸದಾ ತನ್ನ ವಿರುದ್ಧ ಮೇಲುಗೈ ಸಾಧಿಸಲು
ಪ್ರಯತ್ನಿಸುತ್ತಾಳೆಂದೂ,
ಮಕ್ಕಳನ್ನು ತನ್ನ ವಿರುದ್ಧ ಎತ್ತಿ ಕಟ್ಟುತ್ತಾಳೆಂದೂ,
ಅಲವತ್ತುಕೊಂಡ.
ಇದರಿಂದಾಗಿಯೇ, ತನ್ನ ಮನಸ್ಸಿನ ಸಮಾಧಾನ
ಹಾಳಾಗಿದೆಯೆಂದೂ ಆಪಾದಿಸಿದ.
ಏನಾದರೂ ಮಾಡಿ
ಹೆಂಡತಿ, ಮಕ್ಕಳ ಮನಸ್ಸು ಬದಲಾಯಿಸುವಂತೆ
ಬಿನ್ನಹ ಮಾಡಿಕೊಂಡ.

ಸಾಧ್ಯವಿಲ್ಲ. 
ಹಾಗೆಲ್ಲ ಬದಲಾಯಿಸಲು ಸಾಧ್ಯವಿಲ್ಲ.
ಆದರೆ ಮನಸ್ಸು ಮಾಡಿದರೆ
ನಿನ್ನನ್ನು ಬದಲಾಯಿಸಿಕೊಳ್ಳಬಹುದು.

ಯಾಕೆ ನಿನ್ನ ಹೆಂಡತಿ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದ್ದಾಳೆ?
ಏಕೆಂದರೆ, ನೀನೂ ಅದೇ ಪ್ರಯತ್ನದಲ್ಲಿದ್ದೀಯ.
ಅದಕ್ಕೇ ಈ ಸಂಘರ್ಷ.
ಯಾಕೆ ಆಕೆ ಮಕ್ಕಳನ್ನು ನಿನ್ನ ವಿರುದ್ಧ ಎತ್ತಿಕಟ್ಟುತ್ತಿದ್ದಾಳೆ? 
ಏಕೆಂದರೆ ನೀನೂ ಅದೇ ಹತೋಟಿಗಾಗಿ ಪೈಪೋಟಿ ಮಾಡುತ್ತಿದ್ದೀಯ.
ಅದಕ್ಕೇ ಈ ಸಂಕಟ, ಅದಕ್ಕೇ ಈ ಅಸಮಾಧಾನ.

ಈ ಮಾತನ್ನು ಸ್ಪಷ್ಟವಾಗಿ ತಿಳಿ.
ನಿನ್ನ ಸಂಕಟಕ್ಕೆ ಕಾರಣ
ಅವಳು ನಿನ್ನನ್ನು ಡಾಮಿನೇಟ್ ಮಾಡುತ್ತಿರುವುದಲ್ಲ
ನೀನು ಅವಳನ್ನು ಹತೋಟಿಯಲ್ಲಿ ಇಡಲು ಬಯಸುತ್ತಿರುವುದು.
ಅಹಂ ಹೇಗೆ ಕೆಲಸ ಮಾಡುತ್ತದೆ
ನಿನಗಿನ್ನೂ ಅರ್ಥವಾಗಿಲ್ಲ.

ನನ್ನ ಮಾತು ಕೇಳು
ಅಹಂ ನ ಉಸಾಬರಿ ಬಿಟ್ಟು ಬಿಡು.
ಜಗತ್ತಿನಲ್ಲಿ ಪ್ರತಿಯೊಬ್ಬರೂ ಮೇಲುಗೈ ಸಾಧಿಸುವ ಸ್ಪರ್ಧೆಯಲ್ಲಿದ್ದಾರೆ,

ಅವಳನ್ನು ಬಲಪಡಿಸುತ್ತಿರುವುದೇ ನಿನ್ನ ಅಹಂ
ನೀನೇ ಅಹಂ ಬಿಟ್ಟು ಬಿಟ್ಟಾಗ
ಅವಳು ನಿರಾಯುಧಳಾಗುತ್ತಾಳೆ
ನೀನೇ ಯುದ್ಧ ಭೂಮಿಯಿಂದ ಹಿಂದೆ ಸರಿದಾಗ
ಅವಳು ಯಾರೊಡನೆ ಯುದ್ಧ ಮಾಡುತ್ತಾಳೆ?
ಆಗ ನಿನ್ನ ಸಂಕಟ
ತಾನೇ ತಾನಾಗಿ ಮಾಯವಾಗುತ್ತದೆ.

ತೀವ್ರತೆಯಲ್ಲಿ ಕೊಂಚ ಹೆಚ್ಚು ಕಡಿಮೆ ಇರಬಹುದೇ ಹೊರತು
ಇದು ಪಕ್ಕಾ ಮನುಷ್ಯ ಸ್ವಭಾವ.

ಯಾರು ಮೊದಲು
ಅಹಂ ನ ಈ ಸ್ವಭಾವವನ್ನು ಅರ್ಥ ಮಾಡಿಕೊಳ್ಳುತ್ತಾರೋ
ಅವರು ಮೊದಲು ಸ್ಪರ್ಧೆಯಿಂದ ದೂರ ಸರಿಯುತ್ತಾರೆ.
ದೂರ ಸರಿಯುವುದೆಂದರೆ
ಎಲ್ಲ ತ್ಯಜಿಸಿ ದೇಶಾಂತರ ಹೋಗುವುದಲ್ಲ,
ಜವಾಬ್ದಾರಿಗಳಿಂದ ವಿಮುಖರಾಗುವುದಲ್ಲ.

ಬದಲಾಗಿ ಮಾನಸಿಕವಾಗಿ 
ಅಹಂ, ಸ್ಪರ್ಧೆ, ಆಕ್ರಮಣ, ಹಿಂಸೆ, ಕೋಪ
ಮುಂತಾದ ಊರುಗಳ ಪ್ರಯಾಣಕ್ಕೆ
ಈಗಾಗಲೇ ನೀವು ರಿಸರ್ವ್ ಮಾಡಿರುವ
ಸೀಟುಗಳನ್ನ ರದ್ದು ಮಾಡುವುದು.

ಎಲ್ಲಿಯವರೆಗೆ ವಿಷಯದ ಆಳ ಅರ್ಥ ಅರಿವಾಗುವುದಿಲ್ಲವೋ
ಅಲ್ಲಿಯವರೆಗೆ ಮನಸ್ಸಿನ ಅವಶ್ಯಕ ಸಮಾಧಾನಕ್ಕೆ ವೃಥಾ ತಲ್ಲಣ.

ಹೌದು ವೃಥಾ ತಲ್ಲಣ
ಈ ತಲ್ಲಣದಿಂದ ಯಾವ ಲಾಭವೂ ಇಲ್ಲ.
ಯಾವ ಗುರಿಯನ್ನೂ ಮುಟ್ಟಲು ಸಾಧ್ಯವಾಗುವುದಿಲ್ಲ.
ಜಗತ್ತನ್ನು ಬದಲಾಯಿಸುವ ಹುಕಿ ಬಿಟ್ಟುಬಿಡಿ.
ನೀವು ಬದಲಾಗಿ
ಆಗ ಜಗತ್ತಿನ ಸಮಸ್ಯೆಗಳು
ನಿಮ್ಮ ತಲ್ಲಣಕ್ಕೆ ಕಾರಣವಾಗುವುದಿಲ್ಲ.
ಇದು ಸಾಧ್ಯವಾಗುವ ವಿಷಯ.

(ಮುಂದುವರಿಯುವುದು…..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/05/27/osho-17/

ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! ಝೆನ್ ಪರಂಪರೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಓಶೋ, ಚೀನೀ ಝೆನ್ ಕವಿ, ಸಾಧಕ Sosan ರಚಿಸಿದ್ದೆಂದು ಹೇಳಲಾಗುವ Hsin hsin ming ಕಾವ್ಯದ ಬಗ್ಗೆ ನೀಡಿದ ಉಪನ್ಯಾಸದ ಭಾವಾನುವಾದ ಇಲ್ಲಿದೆ. ಅರಳಿಬಳಗದ ಚಿದಂಬರ ನರೇಂದ್ರ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

1 Comment

Leave a Reply to ‘ಹಾದಿ ಪರಿಪೂರ್ಣವಾಗಿದೆ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.2 – ಅರಳಿಮರCancel reply