‘ಹಾದಿ ಪರಿಪೂರ್ಣವಾಗಿದೆ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.3

ಸಮಸ್ಯೆಗಳು ಎದುರಾಗೋದೇ ಮನುಷ್ಯನಿಂದ, ಅವನಿಗೆ ಸಾಧ್ಯವಾಗಿರುವ ಪ್ರಜ್ಞೆಯ ಕಾರಣಕ್ಕಾಗಿ.  ಇದೇ ಕಾರಣಕ್ಕಾಗಿ ಅಲ್ಲವೆ ಅವ ಸರಿ – ತಪ್ಪು ಎಣಿಸೋದು ? ಸುಂದರ – ಕುರೂಪ ಅನ್ನೋದು? ಇದೇ ಕಾರಣಕ್ಕಾಗಿ ಅಲ್ಲವೆ ಅವ ಗೊಂದಲದ ಗೂಡಾಗಿರೋದು?  ~ ಓಶೋ ರಜನೀಶ್

osho zen

ಹಾದಿ ಪರಿಪೂರ್ಣವಾಗಿದೆ, ಅಪಾರ ಬಯಲಿನಂತೆ.
ಒಂದಿನಿತೂ ಹೆಚ್ಚು – ಕಡಿಮೆಯಿಲ್ಲ.
ಹೌದು, ಸ್ವೀಕಾರ ಮತ್ತು ನಿರಾಕರಣೆಗಳ ನಡುವಿನ ನಮ್ಮ ಆಯ್ಕೆ
ವಿಷಯಗಳ ನೈಜ ಸ್ವಭಾವದಿಂದ ನಮ್ಮನ್ನು ವಿಮುಖರನ್ನಾಗಿಸಿದೆ. 

ನಿಸ್ಸಂಶಯವಾಗಿ ಇಲ್ಲಿ ಯಾವುದೂ
ಹೆಚ್ಚಿನ ಪ್ರಮಾಣದಲ್ಲಿ ಇಲ್ಲ,
ಹಾಗೆಯೇ ಯಾವುದಕ್ಕೂ ಕೊರತೆ ಇಲ್ಲ.
ಈ ಜಗತ್ತಿಗಿಂತ ಬೇರೊಂದು ಉತ್ತಮ ಜಗತ್ತು ಉಂಟೆ?
ನೀವು ದಡ್ಡರಾಗಿದ್ದರೆ ಇದೆ ಎನ್ನುತ್ತೀರಿ.
ಇಲ್ಲಿ ಎಲ್ಲವೂ ಪರಿಪೂರ್ಣ,
ಎಲ್ಲವೂ ಸಮತೋಲನದಲ್ಲಿದೆ.
ಸಮಸ್ಯೆ ಏನಾದರೂ ಇದ್ದರೆ
ಅದು ನಿಮ್ಮೊಳಗೆ.
ನೀವು ಇನ್ನೂ ಸಮತೋಲನ ಸಾಧಿಸಬೇಕಾಗಿದೆ.

ರಾಜಕೀಯ ಮತ್ತು ಅಧ್ಯಾತ್ಮಿಕ ಪ್ರಜ್ಞೆಗಳ ನಡುವಿನ
ವಿರೋಧಾಭಾಸವೇ ಇದು.
ರಾಜಕೀಯ ಮನಸ್ಸಿಗೆ ತನ್ನ ಬಗ್ಗೆ ತೃಪ್ತಿ,
ಜಗತ್ತನ್ನು ತಿದ್ದುವ ಬಯಕೆ.
ಉದಾಹರಣೆಗೆ ಲೇನಿನ್, ಮಾವೋ, ಗಾಂಧಿ.
ಆದರೆ ಅಧ್ಯಾತ್ಮಿಕ ಪ್ರಜ್ಞೆಗೆ
ಜಗದ ಡೊಂಕನ್ನು ಸರಿಮಾಡುವ ಹುಕಿ ಇಲ್ಲ
ಸ್ವಂತದ ಬಗ್ಗೆ ಕಳವಳ, ಸಾಂತ್ವನ.

ಸಮಸ್ಯೆಗಳು ಎದುರಾಗೋದೇ ಮನುಷ್ಯನಿಂದ,
ಅವನಿಗೆ ಸಾಧ್ಯವಾಗಿರುವ ಪ್ರಜ್ಞೆಯ ಕಾರಣಕ್ಕಾಗಿ.
ಇದೇ ಕಾರಣಕ್ಕಾಗಿ ಅಲ್ಲವೆ ಅವ
ಸರಿ – ತಪ್ಪು ಎಣಿಸೋದು ?
ಸುಂದರ – ಕುರೂಪ ಅನ್ನೋದು?
ಇದೇ ಕಾರಣಕ್ಕಾಗಿ ಅಲ್ಲವೆ
ಅವ ಗೊಂದಲದ ಗೂಡಾಗಿರೋದು?

“ ಪ್ರಕೃತಿಯ ಸನಾತನತೆ ಮತ್ತು ಭಗವಂತನ ಅಮರತ್ವ
ಬದುಕಿನ ಎರಡು ದಂಡೆಗಳು.
ಮನುಷ್ಯ ಈ ಎರಡು ಶಾಶ್ವತಗಳ ನಡುವಿನ
ಸೇತುವೆ”
ಎನ್ನುತ್ತಾನೆ ನೀತ್ಸೆ.

ಪ್ರಕೃತಿಯಲ್ಲಿ ಎಲ್ಲ ಸರಿಯಾಗಿದೆ ಮತ್ತು
ಭಗವಂತನೂ ಕೂಡ
ಮನುಷ್ಯ ಇವೆರಡರ ನಡುವಿನ ಸೇತುವೆ ಮಾತ್ರ.
ಅರ್ಧ ಪ್ರಕೃತಿ, ಅರ್ಧ ಭಗವಂತ.
ನಿಜ, ಮನುಷ್ಯನ ಸಮಸ್ಯೆ ಶುರುವಾಗೋದೇ ಇಲ್ಲಿ.
ಹಿಂದೆ ಪ್ರಕೃತಿ, ಮುಂದೆ ಭಗವಂತ
ಈ ಎರಡು ಶಾಶ್ವತಗಳ ನಡುವೆ
ಜಗ್ಗಿದ ಹಗ್ಗದಂತೆ ಮನುಷ್ಯ.
ಒಮ್ಮೆ ಅತ್ತ ದೃಷ್ಟಿ, ಒಮ್ಮೆ ಇತ್ತ ನೋಟ
ಮಧ್ಯೆ ಮನೆ ಕಟ್ಟುವಂತಿಲ್ಲ.
ನಡೆದು ಹೋಗಿ
ಒಂದು ದಂಡೆಯನ್ನಾದರೂ ಮುಟ್ಟಲೇಬೇಕು.

ಜುವಾಂಗ್ ತ್ಸೇ ಹಿಂದೆ ಬಂದು
ಪ್ರಕೃತಿಯಲ್ಲಿ ನೆಲೆಯಾದ.
ಬುದ್ಧ ಮುಂದೆ ಹೋಗಿ
ಭಗವಂತನ ದಂಡೆ ಮುಟ್ಟಿದ.

ಹಿಂದೆ ಬಂದು ಪ್ರಕೃತಿಯಲ್ಲಿ ಒಂದಾಗಿ ಅಥವಾ
ಮುಂದೆ ಹೋಗಿ ಭಗವಂತನನ್ನು ಕೂಡಿಕೊಳ್ಳಿ.
ಸೇತುವೆಯ ಮೇಲೆ ಮಾತ್ರ ನಿಂತು
ಸಮಯ ವ್ಯರ್ಥ ಮಾಡಬೇಡಿ.
ನಾವು ಅರಿತುಕೊಳ್ಳಬೇಕಾದದ್ದು ಇದೇ
ಇದೇ ಎಲ್ಲ ತಿಳುವಳಿಕೆಯ ಅಡಿಪಾಯ.

ಸಮಸ್ಯೆ, ಹಿಂದೆ ಹೋಗಿ ಪ್ರಕೃತಿಯಲ್ಲಿ ನೆಲೆಸುವುದೋ ಅಥವಾ
ಮುಂದೆ ನಡೆದು
ಭಗವಂತನನ್ನು ಮುಟ್ಟುವುದೋ ಎನ್ನುವುದಲ್ಲ
ಸಮಸ್ಯೆ, ನಡುವೆ ನಿಂತರೆ ಆಗುವ ಗೊಂದಲಗಳದ್ದು.

ಲಾವೋತ್ಸೇ, ಜುವಾಂಗ್ ತ್ಸೇ, ಸೊಸಾನ್
ಹಿಂದೆ ಹೋಗಿ ತಾವೋ ಸೇರಿಕೊಂಡರು.
ಬುದ್ಧ, ಶಂಕರ, ಜೀಸಸ್
ಮುಂದೆ ಹೋಗಿ ದಿವ್ಯವನ್ನು ತಲುಪಿಕೊಂಡರು.
ಇದು ದ್ವಂದ್ವ ಅಲ್ಲ,
ಈ ಸೇತುವೆ ಒಂದು ವೃತ್ತ.

ಯಾವ ದಿಕ್ಕಿನಲ್ಲಿ ಪ್ರಯಾಣ ಮಾಡಿದರೂ
ನೀವೂ ಅದೇ ಸಮಾಧಾನದ ಜಾಗ ತಲುಪುತ್ತೀರಿ.
‘ಸುಮ್ಮನಿರುವುದು’ ನಿಮಗೆ ಸಾಧ್ಯವಾಗದ ವಿಷಯವಾದರೆ
ಪತಂತಜಲಿಯನ್ನು ಅನುಸರಿಸಿ.
ಪ್ರಯತ್ನ, ಸಾಧನೆ, ಧೃಢ ನಿರ್ಧಾರ,
ಶ್ರಮ, ಹುಡುಕಾಟದಲ್ಲಿ ಮಗ್ನರಾಗಿರಿ.
ಆಗ ನೀವು ಚಲಿಸಲು ಪ್ರಾರಂಭಿಸುತ್ತೀರಿ.

‘ Law of reverse effects’ ನ ತಿಳಿವು
ನಿಮಗೆ ಸಾಧ್ಯವಾಗುವುದಾದರೆ
ಸೊಸಾನ್, ಜುವಾಂಗ್ ತ್ಸೇ ಯ ಬೆನ್ನು ಹತ್ತಿ,
ಆದರೆ ನಿಂತಲ್ಲಿ ಮಾತ್ರ ನಿಲ್ಲದಿರಿ.
ಸೇತುವೆಯ ಮೇಲೆ ನಿಂತುಕೊಳ್ಳುವುದೆಂದರೆ
ನಮ್ಮನ್ನು ನಾವೇ ವಿಭಜಿಸಿಕೊಂಡಂತೆ.
ಇಲ್ಲಿ ಸಮಾಧಾನವಿಲ್ಲ
ಇದು ಗುರಿಯಲ್ಲ.
ಇದು ಹಾಯ್ದು ಹೋಗುವ ಹಾದಿ ಮಾತ್ರ.

ಮತ್ತೆ ನೀತ್ಸೆಯ ಮಾತಿಗೆ ಬರುವುದಾದರೆ

“ ಮನುಷ್ಯ, ಇರುವವನಲ್ಲ
ಮೀರುವವನು, ದಾಟುವವನು”
ಪ್ರಾಣಿಗಳಿಗೆ ಅಸ್ತಿತ್ವ ಇದೆ
ದೇವರಿಗೆ ಅಸ್ತಿತ್ವ ಇದೆ
ಮನುಷ್ಯ ಇನ್ನೂ ಆ ಹಾದಿಯಲ್ಲಿದ್ದಾನೆ.
ಒಂದು ಪೂರ್ಣತೆಯಿಂದ ಇನ್ನೊಂದು ಪೂರ್ಣತೆಯೆಡೆಗೆ.

ನನ್ನನ್ನು ಕೇಳುವಿರಾದರೆ,
ಸೊಸಾನ್ ನ ಹಾದಿ ಪತಂಜಲಿಗಿಂತ ಸರಳ.
ಪತಂಜಲಿ ಶ್ರಮ ಮಾಡಿ ಮಾಡಿ ಪ್ರಶಾಂತ ಸ್ಥಿತಿಯನ್ನು ಮುಟ್ಟುತ್ತಾನೆ
ಸೊಸಾನ್ ಗೆ ಪ್ರಶಾಂತತೆಯೇ ಹಾದಿ
ಪ್ರಶಾಂತತೆಯೇ ಗುರಿ,
ಮೊದಲ ಹೆಜ್ಜೆಯೇ ಕೊನೆಯ ಹೆಜ್ಜೆ.
ಆದರೆ ಪತಂಜಲಿಯ ದಾರಿ, ಗುರಿ ಒಂದೇ ಅಲ್ಲ
ಈ ಪ್ರಯಾಣದಲ್ಲಿ ನೂರಾರು ಹೆಜ್ಜೆಗಳು.

(ಮುಂದುವರಿಯುವುದು…..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/06/02/osho-18/

ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! ಝೆನ್ ಪರಂಪರೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಓಶೋ, ಚೀನೀ ಝೆನ್ ಕವಿ, ಸಾಧಕ Sosan ರಚಿಸಿದ್ದೆಂದು ಹೇಳಲಾಗುವ Hsin hsin ming ಕಾವ್ಯದ ಬಗ್ಗೆ ನೀಡಿದ ಉಪನ್ಯಾಸದ ಭಾವಾನುವಾದ ಇಲ್ಲಿದೆ. ಅರಳಿಬಳಗದ ಚಿದಂಬರ ನರೇಂದ್ರ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

1 Comment

Leave a Reply