ಮುಸ್ಲಿಮ್ ಸಮುದಾಯ ತಿಂಗಳ ಕಾಲದ ವಿಶಿಷ್ಟ ಬಗೆಯ ಉಪವಾಸ ಮುಗಿಸಿ ಹಬ್ಬದ ಸಂಭ್ರಮದಲ್ಲಿದೆ. ರಂಜಾನ್, ಉಪವಾಸ, ದಾನ ಮತ್ತು ಪ್ರಾರ್ಥನೆಗಳ ಪವಿತ್ರ ತಿಂಗಳು. ಹಬ್ಬದ ಹಿನ್ನೆಲೆಯಲ್ಲಿ, ಸೂಫೀಗಳ ‘ತೋಬಾ’ ಪ್ರಾರ್ಥನೆಯಿಂದ ಹೆಣೆದ ಪದ್ಯ ಇಲ್ಲಿದೆ….
ಪಶ್ಚಾತ್ತಾಪದ ಕಂಬನಿ ಕುದಿಗೆ
ಕರುಳು ಬೆಂದ ವಾಸನೆ
ತೋಬಾ ಎ ಹಾಲ್
ಆಣೆ ಇಡುವೆ ಪ್ರೇಮವೇ,
ತೋಬಾ ಎ ಪಾ
ಹರಾಮಿ ಹೆಜ್ಜೆಯಿಡೆನು ಮತ್ತೆಂದೂ
ಮನ್ನಿಸು,
ಕಡುಪಾಪಿ ನಾನು.
ತೋಬಾ ಎ ಚಶ್ಮ್
ನೀನಲ್ಲದ ಮತ್ತೇನೂ ನೋಡದಿರಲಿ ಕಣ್ಣು
ತೋಬಾ ಎ ಗೋಶ್
ನಿನ್ನ ಸ್ತುತಿಯುಳಿದು ಬೀಳದಿರಲಿ
ಮತ್ಯಾವ ಸದ್ದೂ ಕಿವಿಗಳಿಗೆ…
ತೋಬಾ ಎ ಜಬಾನ್
ಯಾರಾ,
ನಿನ್ನದೇ ಹೆಸರಾಡಲಿ ನಾಲಗೆ
ಮತ್ತೇನೂ ನುಡಿಯದಿರಲಿ.
ತೋಬಾ ಎ ನಫ್ಸ್
ಆತ್ಮವೇ,
ನಿನ್ನ ಬಯಕೆಯೊಂದಿರಲಿ
ತೋಬಾ ಎ ದಿಲ್
ಎದೆಯೊಳಗೆ ಮೊಳೆವ ಮಿಕ್ಕೆಲ್ಲ ವಾಂಛೆಗಳು
ಮುರುಟಿ ಮುಗಿದುಬಿಡಲಿ.
ತೋಬಾ ಎ ಮಾಝಿ, ತೋಬಾ ಎ ಮುಸ್ತಕ್‍ಬೀಲ್
ಶತ್ರುವಿಗು ಸುಖವಿರಲಿ, ದ್ವೇಷವಳಿಯಲಿ ಒಳಗೆ;
ಪ್ರೇಮವೊಂದೆ ಚಿರವಿರಲಿ ನಿನ್ನೆಡೆಗೆ;
ತೋಬಾ ತೋಬಾ ತೋಬಾ….
ಹರಾಮಿ ಹೆಜ್ಜೆಯಿಡೆನು ಮತ್ತೆಂದೂ
ಮನ್ನಿಸು
ಕಡು ಪಾಪಿ ನಾನು.
*
ಆರು ತೋಬಾಗಳು ಸೂಫಿಗಳ ಪ್ರಾರ್ಥನಾ ವಿಧಾನಗಳಲ್ಲೊಂದು. ಸೂಫೀ ಕವಲಿನ ಮೂಲವಾದ ಇಸ್ಲಾಮಿನಲ್ಲೂ ಇದು ಆಚರಣೆಯಲ್ಲಿದೆ. `ತೋಬಾ’ ಒಂದು ಬಗೆಯಲ್ಲಿ ಅಣೆ ಪ್ರಮಾಣವಿದ್ದಂತೆ. ಭಗವಂತನ್ನ ಪ್ರೇಮಿಯೆಂದು ಬಗೆಯುವ ಸೂಫಿಗಳು, ಆತನಿಗೆ ಯಾವತ್ತೂ ದ್ರೋಹವೆಸಗೋದಿಲ್ಲೆಂದು ಈ ಆರು + ಮೂರು ತೋಬಾಗಳನ್ನು ಕೈಗೊಳ್ಳುತ್ತಾರೆ | ಆಕರ : ಸೂಫಿ ಪ್ರೇಮ ಕಾವ್ಯ