ಸಂಶಯ ಪ್ರವೃತ್ತಿಯು ಇತರರ ಮೇಲಿನ ನಂಬಿಕೆಯ ಕೊರತೆಯನ್ನು ಮಾತ್ರವಲ್ಲ, ಸ್ವತಃ ತಮ್ಮ ಮೇಲಿನ ನಂಬಿಕೆಯ ಕೊರತೆಯನ್ನೂ ಬಿಂಬಿಸುತ್ತದೆ ಅನ್ನುತ್ತದೆ ಭಗವದ್ಗೀತೆಯ ಬೋಧನೆ ~ ಆನಂದಪೂರ್ಣ
ಮನುಷ್ಯ ಜೀವಿಯ ಅತಿ ದೊಡ್ಡ ದೌರ್ಬಲ್ಯವೆಂದರೆ ಸಂಶಯ. ಯಾವುದೇ ಸಂಗತಿಯನ್ನು, ವಸ್ತು ಅಥವಾ ವ್ಯಕ್ತಿಯನ್ನು ಪರೀಕ್ಷಿಸುವ ದೃಷ್ಟಿಯಿಂದ, ಪ್ರಾಶ್ನಿಕ ಬುದ್ಧಿಯಿಂದ ಕಾಣುವುದು ಬೇರೆ; ಸಂಶಯ ದೃಷ್ಟಿಯಿಂದ ನೋಡುವುದೇ ಬೇರೆ. ಪರೀಕ್ಷೆ ಮತ್ತು ಪ್ರಶ್ನೆಗಳು ಹೆಚ್ಚಿನ ತಿಳಿವಳಿಕೆಗಾಗಿ ಮತ್ತು ಸ್ಪಷ್ಟತೆಗಾಗಿ ಹುಟ್ಟುತ್ತವೆ. ಆದರೆ ಸಂಶಯ ಹುಟ್ಟುವುದು ನಂಬಿಕೆಯ ಕೊರತೆಯಿಂದ.
ಯಾರು ಸದಾ ಕಾಲವೂ ಪ್ರತಿಯೊಂದನ್ನೂ ಸಂಶಯದಿಂದ ನೋಡುತ್ತಾರೋ ಅವರು ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ. ಅಂಥವರು ಇತರರ ಮೇಲಿನದು ಮಾತ್ರವಲ್ಲ, ಸ್ವತಃ ತಮ್ಮ ಮೇಲಿನ ನಂಬಿಕೆಯ ಕೊರತೆಯನ್ನೂ ಎದುರಿಸುತ್ತಾ ಇರುತ್ತಾರೆ. ಜಗತ್ತು ನಿಂತಿರುವುದೇ ನಂಬಿಕೆ ಯ ಬಲದಿಂದ! ಹೀಗಿರುವಾಗ ಅಪನಂಬಿಕೆಯನ್ನೇ ಆಧಾರವಾಗಿ ಇಟ್ಟುಕೊಂಡವರು ಹೇಗೆ ತಾನೆ ಸಂತೋಷದಿಂದ ಇರಲು ಸಾಧ್ಯ?
ಆದ್ದರಿಂದಲೇ “ಸಂಶಯಪ್ರವೃತ್ತಿಯವರು ಇಲ್ಲಿ ಮಾತ್ರವಲ್ಲ, ಎಲ್ಲಿಯೂ ಸಂತಸದಿಂದ ಇರಲು ಸಾಧ್ಯವಿಲ್ಲ” ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ಅಷ್ಟೇ ಅಲ್ಲ, “ಸಂಶಯಾತ್ಮಾ ವಿನಶ್ಯತಿ” ಎಂದೂ ಕೃಷ್ಣ ಎಚ್ಚರಿಸುತ್ತಾನೆ.
ಸಂಶಯವು ನಮ್ಮನ್ನೇ ನುಂಗುತ್ತದೆ. ಸಂಶಯದ ಕಾರಣದಿಂದ ವ್ಯಕ್ತಿಯು ಮೊದಲು ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ನಂಬಿಕೆಯ ಕೊರತೆಯು ಭಯಕ್ಕೆ ಕಾರಣವಾಗುತ್ತದೆ. ಭಯಭೀತ ವ್ಯಕ್ತಿಯು ತನ್ನನ್ನು ರಕ್ಷಿಸಿಕೊಳ್ಳುವ ಪೊಳ್ಳು ಕಾರಣದಿಂದ ಕ್ರೂರಿಯೂ ಸ್ವಾರ್ಥಿಯೂ ಆಗುತ್ತಾನೆ. ಇಂಥವರು ಸಂಕುಚಿತ ಹೃದಯದವರೂ ಮಹಾ ಜಿಪುಣರು ಕೂಡಾ ಆಗಿರುತ್ತಾರೆ. ದಯೆ, ದಾನ – ಧರ್ಮಾದಿಗಳಿಂದ ಇವರು ಮಾರು ದೂರ.
ಹೀಗೆ ಸಂಶಯವೇ ಕಾರಣವಾಗಿ ವ್ಯಕ್ತಿಯು ಮನುಷ್ಯತ್ವದ ಮೂಲ ಗುಣಗಳನ್ನೇ ಕಳೆದುಕೊಂಡು ದುಷ್ಕರ್ಮಿಯಾಗುತ್ತಾನೆ. ಆತ್ಮ ವಿನಾಶವೆಂದರೆ ಇದೇ ತಾನೆ? ಯಾವ ಮನುಷ್ಯತ್ವವು ಆತ್ಮದ ಮುಕ್ತಿ ಸಾಧನೆಗೆ, ಆ ನಿಟ್ಟಿನ ಪ್ರಯತ್ನಕ್ಕಾಗಿ ದೊರಕಿದೆಯೋ; ಆ ಮನುಷ್ಯತ್ವವನ್ನೇ ಕಳೆದುಕೊಂಡರೆ ಉಳಿಯುವುದೇನು? ವಿನಾಶವೇ ಅಲ್ಲವೆ?
ಆದ್ದರಿಂದ, ಪ್ರಶ್ನಿಸಿ; ಸಂಶಯಪಡಬೇಡಿ. ನೀವು ಯಾರನ್ನಾದರೂ ಯಾವಾಗ ಬೇಕಾದರೂ ಪ್ರಶ್ನಿಸುವ ಸಂಪೂರ್ಣ ಅಧಿಕಾರ ಹೊಂದಿದ್ದೀರಿ. ಈ ಜಗತ್ತು ಉತ್ತರಗಳಿಂದ ತುಂಬಿಕೊಂಡಿದೆ. ಉತ್ತರವಿಲ್ಲದ ಪ್ರಶ್ನೆಯೇ ಈ ಸೃಷ್ಟಿಯಲ್ಲಿ ಇಲ್ಲ. ಆದರೆ ಸಂಶಯದ ಗುಳ್ಳೆಗಳಲ್ಲಿ ಬದುಕುವ ನಾವು ಸರಿಯಾದ ಪ್ರಶ್ನೆ ಕೇಳುವುದನ್ನೆ ಮರೆತು ಕುಳಿತಿದ್ದೇವೆ, ಮುಕ್ತಿಪಥಕ್ಕೆ ಬದಲು ಆತ್ಮವಿನಾಶದತ್ತ ಹಿಮ್ಮುಖ ಹೆಜ್ಜೆ ಇಡುತ್ತಿದ್ದೇವೆ. ಇದನ್ನು ಸರಿಪಡಿಸಿಕೊಳ್ಳಲು ‘ಈ ಕ್ಷಣವೇ’ ಅತ್ಯಂತ ಸೂಕ್ತ ಕ್ಷಣವಾಗಿದೆ!!