ಈಗ ಮಾತು ಸಾಕು : ಒಂದು ರೂಮಿ ಪದ್ಯ

ಜಲಾಲುದ್ದಿನ್ ರೂಮಿ |ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಮಗೆ ಊಟದಲ್ಲಿನ ರುಚಿ ಬೇಕೊ?
ಅಥವಾ ನೀವು, ಊಟದಲ್ಲಿ ರುಚಿ ಬೆರೆಸುವವನ ರುಚಿ ನೋಡ ಬೇಕೊ?

ಸಾಗರದಲ್ಲಿ ಅದ್ಬುತ ಸಂಗತಿಗಳಿವೆ, ಒಪ್ಪುವ ಮಾತು,
ಮತ್ತು ಸ್ವತಃ ಇಡೀ ಸಾಗರವೇ ಇದೆಯಲ್ಲ?

ಮನೆ ಕಟ್ಟುವವನ ತಿಳುವಳಿಕೆಯ ಬಗ್ಗೆ ಗೌರವ ಸರಿ,
ಈಗ ಆ ತಿಳುವಳಿಕೆಯನ್ನೇ ಕಟ್ಟಿದವನ ಬಗ್ಗೆ ಒಮ್ಮೆ ಯೋಚಿಸಿ.

ಬೀಜದಿಂದ ಎಣ್ಣೆ ತೆಗೆಯುವುದು ಕಲೆ ಹೌದು,
ಕಣ್ಣೊಳಗೆ ದೃಷ್ಟಿ ಮನೆಮಾಡಿರುವ ಅದ್ಭುತದ ಮೇಲೊಮ್ಮೆ ಕಣ್ಣು ಹಾಯಿಸಿ.

ಇಡೀ ರಾತ್ರಿ, ಬೇಕುಗಳ ಹುಚ್ಚಾಟ.

ಬೆಳಕು ಹರಿಯುತ್ತಿದ್ದಂತೆಯೇ
ನಿನ್ನ ಅಂಗೈಯಲ್ಲಿ ನನ್ನ ಅಂಗೈ ಹಿಡಿದುಕೊ.
ಇದು ಸಾಧ್ಯವೇ ಎಂದು ಸಂದೇಹ ಪಡುವವರು ಇನ್ನೂ ಇದ್ದಾರೆ.

ಅವರು ಬಂಗಾರದ ಹುಡಿಯನ್ನು ಖಾಲಿ ತೊಟ್ಟಿಯಲ್ಲಿ ಬಿಸಾಕುತ್ತಾರೆ
ಕತ್ತೆಗಳನ್ನು ಹುಡುಕಿಕೊಂಡು ಕೊಟ್ಟಿಗೆಗೆ ಹೋಗುತ್ತಾರೆ.

ಈಗ ಮಾತು ಸಾಕು
ಗೆಳೆಯ, ಕಿವಿಗೆ ಕಣ್ಣು ಹಚ್ಚುವ ಸಾಧ್ಯತೆ ನಿನ್ನಲ್ಲಿದೆ
ಕವಿತೆಯ ಉಳಿದ ಭಾಗವನ್ನು ಆ ಭಾಷೆಯಲ್ಲಿ ಹಾಡು.

Leave a Reply