“ಆಲೋಚಿಸಿದಷ್ಟೂ ನಿಜಸ್ಥಿತಿಯಿಂದ ದೂರ ಹೋಗುತ್ತೀರಿ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 3.1

ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ, 
ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಅಧ್ಯಾಯ 3 : Truth can not be sought 

ದಾರಿ ಅರ್ಥವಾಗದೇ ಹೋದಾಗ
ವಿಷಯದ ನಿಜಸ್ಥಿತಿಯನ್ನು
ನಿರಾಕರಿಸಲಾಗುತ್ತದೆ ಅಥವಾ 
ಒತ್ತಿ ಹೇಳಲಾಗುತ್ತದೆ.
ನಿರಾಕರಿಸುವುದೆಂದರೆ, ನಿಜದಿಂದ ದೂರ ಸಾಗುವುದು,
ಒತ್ತಿಹೇಳುವುದೆಂದರೆ, ನಿಜದ ಖಾಲೀತನಕ್ಕೆ
ಅಪಮಾನ ಮಾಡುವುದು.

ನಿಜದ ಬಗ್ಗೆ ಎಷ್ಟು ಹೆಚ್ಚು ಮಾತನಾಡುತ್ತೀರೊ,
ಎಷ್ಟು ಹೆಚ್ಚು  ಚಿಂತನೆ ಮಾಡುತ್ತೀರೊ,
ಅಷ್ಟೇ ಹೆಚ್ಚು , ನಿಜದಿಂದ ದೂರವಾಗುತ್ತ ಹೋಗುತ್ತೀರಿ.
ಮಾತು ನಿಲ್ಲಿಸಿದಾಗ, ಯೋಚಿಸುವುದ ಸ್ಥಗಿತಗೊಳಿಸಿದಾಗ
ನಿಮಗೆ ತೆರೆದುಕೊಳ್ಳದ್ದು,  ಯಾವುದೂ ಇರುವುದಿಲ್ಲ
~ ಸೊಸಾನ್ ಪದ್ಯ

ming

ನಿಜ ಸ್ಥಿತಿ ಯಾವಾಗಲೂ 
ನಿಮ್ಮ ಎದೆಯ ಬಾಗಿಲಲ್ಲಿ, ಕಣ್ಣ ಹತ್ತಿರ,
ಬೆರಳ ತುದಿಯಲ್ಲಿ
ನಿಮಗಾಗಿ ಕಾಯುತ್ತಿರುತ್ತದೆ.
ಈ ಸ್ಥಿತಿಯನ್ನು ನೀವು ಮುಟ್ಟ ಬಹುದು
ಅನುಭವಿಸಬಹುದು, ಬದುಕಬಹುದು,
ಆದರೆ ಯೋಚಿಸುವುದು ಸಾಧ್ಯವಾಗುವುದಿಲ್ಲ.

‘ಯೋಚನೆ’ ಯ ಸ್ವಭಾವವನ್ನು 
ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
‘ಯೋಚನೆ’ ಯಾವತ್ತೂ ನೇರವಲ್ಲ.
ನೀವು ನಿಜಸ್ಥಿತಿಯ ‘ಬಗ್ಗೆ’ ಯೋಚಿಸಬಹುದೇ ಹೊರತು
ನಿಜಸ್ಥಿತಿಯನ್ನು ನೇರವಾಗಿ ಚಿಂತನೆಗೆ ಒಳಪಡಿಸಲಾರಿರಿ.
ಇಲ್ಲಿ ‘ಬಗ್ಗೆ’ ಎಂಬ ಶಬ್ದವೇ ಒಂದು ಜಾಲ.
‘ಬಗ್ಗೆ’ ಎಂದರೆ ಯಾವಾಗಲೂ ಪರೋಕ್ಷ.
ಪ್ರತ್ಯಕ್ಷದಿಂದ ದೂರ.

ಹೂವಿನ ಬಗ್ಗೆ  ಯೋಚಿಸುವುದೆಂದರೆ
ಹೂವನ್ನು ದೂರ ನಿಂತು ನೋಡುವುದು.
ಆಗ ‘ಬಗ್ಗೆ’ ಒಂದು ಅಡ್ಡಗೋಡೆ.
ಹೀಗಾದಾಗ, ಹೂವನ್ನು ನೇರವಾಗಿ ತಲಪುವುದು ಸಾಧ್ಯವೇ ಇಲ್ಲ.

ನೋಡುವುದು ನೇರ, ಮುಟ್ಟುವುದು ನೇರ,
ಅನುಭವಿಸುವುದು ನೇರ. ಆದರೆ
ಚಿಂತನೆ ಮಾತ್ರ ಪರೋಕ್ಷ.

ಆದ್ದರಿಂದಲೇ, 
ಪ್ರೇಮಿಗೆ, ನೃತ್ಯಪಟುವಿಗೆ,
ಸಂಗೀತಗಾರನಿಗೆ, ರೈತನಿಗೆ
ಸಾಧ್ಯವಾಗಬಹುದಾದ ದರ್ಶನ
ಆಲೋಚಕನಿಗೆ ಸಾಧ್ಯವಾಗುವುದಿಲ್ಲ.

ಯೋಚನೆ ಮತ್ತು ಅರಿವುಗಳ ನಡುವೆ
ಅವಿನಾಭಾವ ಸಂಬಂಧ.
ಅರಿವು ಉಳಿಸಿಕೊಳ್ಳುತ್ತಲೇ
 ‘ಯೋಚನೆ’ ಯ ವಿಷ ವೃತ್ತದಿಂದ ಪಾರಾಗುವುದು ಹೇಗೆ?
ಇದು ನಿಜದ ಹುಡುಕಾಟದಲ್ಲಿರುವ 
ಮನುಷ್ಯನ ಮುಂದಿರುವ ಮುಖ್ಯ ಸವಾಲು.
ಯೋಚನೆ ತ್ಯಜಿಸುವುದೇ ಉದ್ದೇಶವಾದರೆ
ಮೂರ್ಖನಿಗೂ ಜಾಣನಿಗೂ ಏನು ವ್ಯತ್ಯಾಸ?
ಮೂರ್ಖನೂ ಯೋಚನೆಯನ್ನು ತ್ಯಜಿಸಿದ್ದಾನಲ್ಲ?
ಹೌದು, ಆದರೆ ಅವನಲ್ಲಿ ಅರಿವು
ಗೈರು ಹಾಜರಿಯಲ್ಲಿದೆ.
ಇದೇ ವ್ಯತ್ಯಾಸ .

ಆಲೋಚನೆಯನ್ನು 
ಹೊತ್ತಿ ಉರಿಸುತ್ತಿರುವ ಶಕ್ತಿ
ಅರಿವಾಗಿ ಬದಲಾಗಬೇಕು.
ಆಗ ಆಲೋಚನೆ ಮಾಯವಾಗಿ
ಅರಿವು ಮಾತ್ರ ಉಳಿದುಕೊಳ್ಳುತ್ತದೆ.
ಆಲೋಚನೆಯ ಜೊತೆ
ವಿಷ ವೃತ್ತ ಸುತ್ತುತ್ತಿರುವ ಪ್ರಜ್ಞೆ
ಜಾರಿಕೊಳ್ಳಬಾರದು,
ಪ್ರಖರ ಅರಿವಿನ ಬೆಂಕಿಯಲ್ಲಿ ಕುದ್ದು
ಶುದ್ಧ ಬಂಗಾರವಾಗಬೇಕು.
ಯೋಚನೆ ನಿಲ್ಲಬೇಕು
ಪ್ರಜ್ಞೆಯ ಕಂಪನವೂ ನಿಲ್ಲಬೇಕು
ಪ್ರಜ್ಞೆ ಹರಳುಗಟ್ಟಿ, ಕ್ರಿಯೆ ನೀರಾಗಬೇಕು.

ಅರಿವು, ಕ್ರಿಯೆ 
ಏಕಕಾಲಕ್ಕೆ ಸಾಧ್ಯವಾದಾಗ ಮಾತ್ರ
ನಿಜಸ್ಥಿತಿಯ ದರ್ಶನ.
ಇದು ಬುದ್ಧನಿಗೆ ಸಾಧ್ಯವಾಗಿತ್ತು,
ಜುವಾಂಗ್ ತ್ಸೇ ಮತ್ತು ಸೊಸಾನ್ ಗೆ ಒಲಿದಿತ್ತು.

ಕ್ರಿಯೆಯೊಳಗೆ ತಲ್ಲೀನರಾಗುವುದು,
ಆಲೋಚನೆ ತ್ಯಜಿಸುವುದು,
ಆಲೋಚನೆಯಲ್ಲಿ ವ್ಯಯವಾಗುತ್ತಿರುವ ಶಕ್ತಿಯನ್ನು
ಅರಿವಾಗಿ ಬದಲಾಯಿಸಿಕೊಳ್ಳುವುದು
ಇದೇ ಧ್ಯಾನ.

ಇಲ್ಲಿ ಒಂದು ಅಪಾಯ ಕೂಡ ಇದೆ.
ಪ್ರಜ್ಞೆಗೆ ಆಲೋಚನೆಯ ಜೊತೆ
ಭಾರೀ ಗೆಳೆತನ.
ನೀವು ಆಲೋಚನೆಯನ್ನು ತ್ಯಜಿಸುವಾಗ
ಪ್ರಜ್ಞೆಯೂ ನಿಮ್ಮಿಂದ ತಪ್ಪಿಸಿಕೊಳ್ಳಲು ಹವಣಿಸುತ್ತದೆ.
ಹಾಗೇ ಮುಂದುವರೆದರೆ
ಪ್ರಜ್ಞಾಹೀನ ಸ್ಥಿತಿಯನ್ನು ತಲುಪುತ್ತೀರಿ.
ನಿಜಸ್ಥಿತಿಯಿಂದ ದೂರವಾಗುತ್ತೀರಿ.
ಹಾಗಾಗಬಾರದು
ಪ್ರಜ್ಞೆಯನ್ನು ಸಾಕ್ಷಿಯಾಗಿಟ್ಟುಕೊಂಡೇ
ಆಲೋಚನೆಯನ್ನು ತ್ಯಜಿಸಬೇಕು,
ಹಾಗಾದಾಗ
ಪ್ರಜ್ಞಾಹೀನ ಸ್ಥಿತಿಯೂ ಪ್ರಜ್ಞೆಯ ತೆಕ್ಕೆಗೆ ಬೀಳುತ್ತದೆ
ನೀವು ಬುದ್ಧ ರಾಗುತ್ತೀರಿ, ಸೊಸಾನ್ ಆಗುತ್ತೀರಿ.

ನಿಮ್ಮ ‘ಇರುವಿಕೆ’ ಯ 90 ಪ್ರತಿಶತ ಭಾಗ
ಪ್ರಜ್ಞಾ ರಹಿತ ಸ್ಥಿತಿಯದ್ದಾದರೆ
ಕೇವಲ 10 ಪ್ರತಿಶತ, ಪ್ರಜ್ಞೆಯದು.
ಆ 10 ಪ್ರತಿಶತವೂ ಸದಾ ಹೊಯ್ದಾಟದಲ್ಲಿ.
ಸಿಗುವ ಮೊದಲ ಅವಕಾಶದಲ್ಲಿಯೇ
ಈ 10 ರಷ್ಟು ಭಾಗ
ಪ್ರಜ್ಞಾರಹಿತ ಸ್ಥಿತಿಯೊಡನೆ ಒಂದಾಗಲು
ತುದಿಗಾಲ ಮೇಲೆ ನಿಂತಿರುತ್ತದೆ.
ಮಾದಕ ಪೇಯಗಳಿಂದ, ವಸ್ತುಗಳಿಂದ
ಸಾಧ್ಯವಾಗುವುದೇ ಈ ಪೂರ್ಣ ಪ್ರಜ್ಞಾರಹಿತ ಸ್ಥಿತಿ
ಅಲ್ಲಿ ಕೂಡ ಆಲೋಚನೆಗೆ ಜಾಗವಿಲ್ಲ.
ನೀವು ಒಳ್ಳೆಯ ಕನಸುಗಾರರಾಗಿದ್ದರೆ,
ಅದ್ಭುತ ಕನಸುಗಳನ್ನು ಕಾಣುತ್ತೀರಿ.
ಬುದ್ಧ ಕಾಣಿಸುತ್ತಾನೆ, ಕೃಷ್ಣ ಕಾಣಿಸುತ್ತಾನೆ,
ಕ್ರಿಸ್ತನನ್ನು ಬಯಸುತ್ತೀರಾದರೆ
ಜೀಸಸ್ ಕಾಣಿಸುತ್ತಾನೆ.
ಉನ್ಮತ್ತ ಆನಂದದಲ್ಲಿ ತೇಲಾಡುತ್ತೀರಿ
ಆದರೆ, ಒಂದಿಂಚೂ ನಿಜದತ್ತ ಹೆಜ್ಜೆ ಹಾಕುವುದಿಲ್ಲ.
ಕಾರಣ, ಪ್ರಜ್ಞೆಯ ಅನುಪಸ್ಥಿತಿ
ಅರಿವಿನ ಗೈರು ಹಾಜರಿ.
ಕೇವಲ ವ್ಯಸನಿಗಳಷ್ಟೇ ಅಲ್ಲ,  ಕೆಲ ಸಾಧು ಸಂತರೂ 
ಈ ಜಾಲದ ಬಲಿಪಶುಗಳು.

ಕೇವಲ ನಶೆಯ ವಸ್ತುಗಳಷ್ಟೇ ಅಲ್ಲ
ಸಂಗೀತ, ಮಂತ್ರದಂಥ ಸೂಕ್ಷ್ಮ ವಿಧಾನಗಳೂ
ಈ ವಿಚಾರ ರಹಿತ, ಪ್ರಜ್ಞಾರಹಿತ
ಸ್ಥಿತಿಗೆ ನಿಮ್ಮನ್ನು ತಳ್ಳುತ್ತವೆ.
ನೀವು ಭಾವುಕರಾಗುತ್ತೀರಿ, ಗದ್ಗದಿತರಾಗುತ್ತೀರಿ
ಆದ್ದರಿಂದಲೇ ಇವು 
ಧಾರ್ಮಿಕ ಡಾಂಭಿಕರ ಅಸ್ತ್ರಗಳಾಗಿವೆ.

ಖಂಡಿತ, 
ಆಲೋಚನೆಯನ್ನು ನಿಲ್ಲಿಸಲೇಬೇಕು.
ಆದರೆ, ಪ್ರಜ್ಞಾರಹಿತ ಸ್ಥಿತಿಗೆ ಹೋಗಿ ಅಲ್ಲ,
ಪ್ರಜ್ಞೆಯನ್ನು ಸಾಕ್ಷಿಯಾಗಿಟ್ಟುಕೊಂಡು,
ಇನ್ನಷ್ಟು ಪ್ರಜ್ಞೆಯನ್ನು ಒಳಗೊಳ್ಳುತ್ತ.
ಆಗಲೇ ಆಲೋಚನೆಯತ್ತ ಸಾಗುತ್ತಿರುವ
ಶಕ್ತಿಯ ಪ್ರವಾಹ ಪ್ರಜ್ಞೆಯತ್ತ ಮುಖ ಮಾಡುತ್ತದೆ.
ಆಲೋಚನೆ ಬಲಹೀನವಾಗಿ
ತಾನೇ ಕಳಚಿ ಬೀಳುತ್ತದೆ.

ಈಗ ಸೊಸಾನ್ ನ ಈ ಸೂತ್ರವನ್ನು ಗಮನಿಸಿ

ದಾರಿ ಅರ್ಥವಾಗದೇ ಹೋದಾಗ
ವಿಷಯದ ನಿಜಸ್ಥಿತಿಯನ್ನು
ನಿರಾಕರಿಸಲಾಗುತ್ತದೆ ಅಥವಾ ಒತ್ತಿ ಹೇಳಲಾಗುತ್ತದೆ.
ನಿರಾಕರಿಸುವುದೆಂದರೆ, ನಿಜದಿಂದ ದೂರ ಸಾಗುವುದು,
ಒತ್ತಿಹೇಳುವುದೆಂದರೆ, ನಿಜದ ಖಾಲೀತನಕ್ಕೆ
ಅಪಮಾನಮಾಡುವುದು.

ವಿಷಯದ ನಿಜ ಸ್ಥಿತಿಯನ್ನು ನಿರಾಕರಿಸುವುದೆಂದರೆ …………

ಈ ಸುಂದರ ಕಥೆ ನಿಮಗೆ ನೆನಪಿರಬಹುದು.
ಒಬ್ಬ, 
ಗೋಡೆಯ ಮೇಲೆ ರೇಖೆಯೊಂದನ್ನೆಳೆದು,
ಆ ರೇಖೆಯನ್ನು ಮುಟ್ಟದೇ ಚಿಕ್ಕದಾಗಿಸುವಂತೆ,
ಅಲ್ಲಿ ನೆರೆದಿದ್ದ ಜನರಿಗೆ ಸವಾಲು ಹಾಕಿದ.
ಸುಮಾರು ಜನ, ಇದು ಅಸಾಧ್ಯದ ಮಾತೆಂದು
ಹಿಂದೆ ಸರಿದರು.
ಆಗ, ಚಿಕ್ಕ ಹುಡುಗನೊಬ್ಬ ಮುಂದೆ ಬಂದು
ಗೋಡೆಯ ಮೇಲಿನ ಆ ರೇಖೆಯ ಪಕ್ಕ,
ಇನ್ನೊಂದು ದೊಡ್ಡ ರೇಖೆಯನ್ನೆಳೆದ.
ಆಗ, ಮೊದಲಿನ ರೇಖೆ
ತಾನೇ ತಾನಾಗಿ ಚಿಕ್ಕದಾಯ್ತು.

ಅಕಸ್ಮಾತ್, ಆ ಹುಡುಗ
ಮೊದಲಿನ ರೇಖೆಯ ಪಕ್ಕ
 ಚಿಕ್ಕ ರೇಖೆ ಎಳೆದಿದ್ದರೆ,
ಮೊದಲಿನ ರೇಖೆ ದೊಡ್ಡದಾಗುತ್ತಿತ್ತು.

ಹಾಗಾದರೆ, ಎರಡು ವಿಧಾನಗಳಿವೆ ಎಂದಾಯ್ತು.
ಒಂದು,
ನಮ್ಮ ಇರುವಿಕೆಯನ್ನು ಗುರುತಿಸಿಕೊಂಡು
ದೊಡ್ಡದಾಗಿಸಿಕೊಳ್ಳುತ್ತ ಹೋದಂತೆ,
ಜಗತ್ತು ಚಿಕ್ಕದಾಗುತ್ತ ಹೋಗುತ್ತದೆ.
ಕೊನೆಗೆ ಒಂದು ಕ್ಷಣದಲ್ಲಿ
ನಿಮ್ಮ ಇರುವಿಕೆ ಪೂರ್ಣವಾದಾಗ
ಬ್ರಹ್ಮವಾದಾಗ
ಜಗತ್ತು ಇಲ್ಲವಾಗುತ್ತದೆ.

ಇನ್ನೊಂದು,
ಜಗತ್ತನ್ನು, ಮಾಯೆ, ಭ್ರಮೆ ಎಂದು ತಿರಸ್ಕರಿಸುತ್ತ ಹೋಗುವುದು.
ಜಗತ್ತಿನ ಇರುವಿಕೆಯನ್ನು ನಿರಾಕರಿಸುವುದು.
ಇದಲ್ಲ, ಇದಲ್ಲ ಎನ್ನುತ್ತ
ನಿಮಗೆ ನೀವೇ ಸಮಜಾಯಿಷಿ ಕೊಡುತ್ತ ಹೋಗುವುದು.
ಕೊನೆಗೆ ಒಂದು ಗಳಿಗೆಯಲ್ಲಿ 
ನಿಮ್ಮ ಸಮಜಾಯಿಶಿ ಹಣ್ಣಾಗಿ ಕಳಚಿ ಬೀಳುತ್ತದೆ
ಆಗ ಜಗತ್ತು ಇಲ್ಲವಾಗುತ್ತದೆ.

ಆದರೆ, ಇದು ಕಪಟ.
ತತ್ವಜ್ಞಾನದಲ್ಲಿ ಇಂಥ ಕಪಟಗಳು ಸಾಕಷ್ಟು.

ವೇದಾಂತದ ಉದಾಹರಣೆ ಗಮನಿಸಿ.
ಶಂಕರರು, ತಮ್ಮ ಇರುವಿಕೆಯನ್ನು ಗುರುತಿಸಿಕೊಂಡರು,
ಬ್ರಹ್ಮವಾದರು, ಅಪರಿಮಿತವಾದರು.
ಆಗ ಅವರಿಗೆ
ಜಗತ್ತು ಚಿಕ್ಕದಾಗುತ್ತ, ಆಗುತ್ತ ಹೋಗಿ
ಕೊನೆಗೊಮ್ಮೆ ಮಾಯವಾಯಿತು.
ಅದನ್ನೇ ಅವರು ಮಾಯೆಯೆಂದರು.

ಹಾಗೆ ಹೇಳುವುದು ಅವರಿಗೆ ಮಾತ್ರ ಸಾಧ್ಯವಿತ್ತು.
ಆದರೆ ಅವರ ಹಿಂಬಾಲಕರು
ಎರಡನೇಯ ಹಾದಿ ಹಿಡಿದರು.
ಶಂಕರರ  ಮಾಯಾವಾದವನ್ನು ಮಂತ್ರದಂತೆ ಪಠಿಸಿದರು.
ಜಗತ್ತು ಮಾಯೆಯೆಂದು ತಮ್ಮ ಮನಸ್ಸನ್ನು
ಒಲಿಸುತ್ತ ಹೋದರು.
ಕಪಟದ ತುತ್ತ ತುದಿ ಮುಟ್ಟಿದರು.
ಕೊನೆಗೆ ಒಪ್ಪಿಸಿದರು.
ಜಗತ್ತು ಮಾಯೆಯೆಂದು ಸಾಧಿಸಿದರು.
ತಾವೇ ಬ್ರಹ್ಮ ಎಂಬ ಭ್ರಮೆಗೆ ಒಳಗಾದರು.
ಜಗತ್ತನ್ನು ಮಾಯೆಯೆಂದು ಸಾಧಿಸಿ
ನೀವು ಬ್ರಹ್ಮ ಎಂದು ಘೋಷಿಸಿಕೊಳ್ಳುವುದು ಕಪಟ
ಮೊದಲು ನೀವು ಬ್ರಹ್ಮವಾಗಬೇಕು
ಆಗ ಜಗತ್ತು ಮಾಯೆಯಾಗುತ್ತದೆ.

ಈ ವೇದಾಂತಿಗಳು
ಜಗತ್ತನ್ನು ಮಾಯೆ ಎನ್ನುತ್ತಾರೆ,
ಆದರೆ, ಅವರ ಮೇಲೊಂದು ಕಲ್ಲು ಎಸೆದು ನೋಡಿ
ಹೇಗೆ ಕೆಂಡವಾಗುತ್ತಾರೆ,
ಹೇಗೆ ನಿಮ್ಮತ್ತ ಮರಳಿ ಕಲ್ಲು ತೂರುತ್ತಾರೆ.

ಜಗತ್ತು ಮಾಯೆಯಲ್ಲ,
ಇದು ಅವರ ಪರಿಕಲ್ಪನೆ ಮಾತ್ರ
ಅವರ ತತ್ವಜ್ಞಾನ ಅಷ್ಟೇ. 
ಹಾಗು ತತ್ವಜ್ಞಾನಿಗಳಿಗೆ ಕಪಟತನ ಅಸಾಧ್ಯವೇನಲ್ಲ.

(ಮುಂದುವರೆಯುತ್ತದೆ……..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/06/04/osho-20/

ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! ಝೆನ್ ಪರಂಪರೆಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಓಶೋ, ಚೀನೀ ಝೆನ್ ಕವಿ, ಸಾಧಕ Sosan ರಚಿಸಿದ್ದೆಂದು ಹೇಳಲಾಗುವ Hsin hsin ming ಕಾವ್ಯದ ಬಗ್ಗೆ ನೀಡಿದ ಉಪನ್ಯಾಸದ ಭಾವಾನುವಾದ ಇಲ್ಲಿದೆ. ಅರಳಿಬಳಗದ ಚಿದಂಬರ ನರೇಂದ್ರ ಇದನ್ನು ಕನ್ನಡಕ್ಕೆ ತಂದಿದ್ದಾರೆ. 

2 Comments

Leave a Reply