ಪರಿಸರ ಕಾಳಜಿ : ಮೂಢನಂಬಿಕೆ ಧರ್ಮವಲ್ಲ, ವೈಜ್ಞಾನಿಕತೆಯೇ ಧರ್ಮ

ಪರಿಸರದ ವಿಷಯದಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಧರ್ಮಭೀರುಗಳಾಗುವ ಅಗತ್ಯವಿದೆ. ನಮ್ಮ ಧಾರ್ಮಿಕತೆಯನ್ನು ಬಹಿರಂಗವಾಗಿ ಸಾಬೀತುಪಡಿಸುವ ತುರ್ತೂ ಇದೆ. ನಾವು ನಮ್ಮ ಧರ್ಮವನ್ನು ಗೌರವಿಸುವುದೇ ಆದರೆ, ನಮ್ಮ ಅನುಕೂಲಕ್ಕಾಗಿಯೇ ನಮ್ಮ ಪರಿಸರವನ್ನು ಕಾಪಾಡುವ ಸಂಕಲ್ಪ ತೊಡಬೇಕು ~ ಆನಂದಪೂರ್ಣ

ಜೂನ್ ತಿಂಗಳು ಮುಗಿಯುತ್ತ ಬಂದಿದೆ. ನದಿಗಳಲ್ಲಿ ನೀರಿಲ್ಲ. ಈ ದುರಂತವನ್ನು ಕಂಡು ಮರುಗಲಾರದಂತೆ ನಮ್ಮ ಕಣ್ಣುಗಳೂ ಬತ್ತಿ ಹೋಗಿವೆ. ಅವಕ್ಕೆ ನೀರಿಲ್ಲದ ನದಿಗಳು ಕಾಣುತ್ತಿಲ್ಲ. ನಾವು ಏನನ್ನು ನೋಡಬೇಕು, ಏನನ್ನು ನೊಡಬಾರದು ಅನ್ನುವುದನ್ನೂ ಮಾರುಕಟ್ಟೆ ಮತ್ತು ರಾಜಕಾರಣಗಳು ನಿಯಂತ್ರಿಸುತ್ತಿವೆ. ಸಕಾಲದಲ್ಲಿ ಮಳೆಯಾಗಿಲ್ಲ ಅನ್ನುವುದು ನಮಗೆ ಆತಂಕದ ವಿಷಯವಾಗಿ ಕಾಣುತ್ತಿಲ್ಲ.

ಅದ್ಯಾವುದೋ ಊರಿನಲ್ಲಿ ಕಪ್ಪೆಗಳನ್ನು ಹಿಡಿದು ತಂದು ಮದುವೆ ಮಾಡಿದ್ದಾರೆ. ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆಯಾಗುತ್ತದೆ ಅನ್ನುವ ಮೂಢನಂಬಿಕೆ. ಗಿಡಗಳನ್ನು ನೆಟ್ಟು ಬೆಳೆಸಿ ಕಾಪಾಡಿಕೊಂಡರೆ ಮಳೆಯಾಗುತ್ತದೆ ಅನ್ನುವ ವೈಜ್ಞಾನಿಕ ನಂಬಿಕೆಯಲ್ಲಿ ಅವರಿಗೆ ಆಸಕ್ತಿ ಇದ್ದಂತಿಲ್ಲ. ಅಥವಾ ಕಾಡುಗಳನ್ನು ಕಡಿಯಕೂಡದು ಅನ್ನುವ ವೇದ ನಿರ್ದೇಶನದ ಬಗ್ಗ ಅವರಿಗೆ ಗೌರವವಿಲ್ಲ. ನಮ್ಮ ಹಿರೀಕರ ಜನಪದೀಯ ಸೂಚನೆಗಳ ಬಗ್ಗೆಯೂ ಅವರಿಗೆ ಅರಿವಿಲ್ಲ. ಕಾಡನ್ನು ಕಡಿಯಬೇಡಿ, ನೆಲವನ್ನು ಬಗೆಯಬೇಡಿ, ನೀರನ್ನು ಪೋಲು ಮಾಡಬೇಡಿ ಇವೆಲ್ಲವೂ ಮಳೆ ಕೊರತೆ ಸೃಷ್ಟಿಸಿ ಬದುಕನ್ನು ನರಕ ಮಾಡುತ್ತವೆ ಎಂದು ಎಲ್ಲ ವೇದ – ಗಾದೆಗಳೂ ಹೇಳಿವೆ. ಆದರೆ ನಮ್ಮಲ್ಲಿ ಕೆಲವರಿಗೆ ಅವುಗಳ ಆಚರಣೆ ಬಿಟ್ಟು ಮೂಢನಂಬಿಕೆಯ ಅನುಸರಣೆಯಲ್ಲೇ ಹೆಚ್ಚು ಆಸಕ್ತಿ.

‘ವನಾನಿ ನ ಪ್ರಜಹಿತಾನಿ’ ಅನ್ನುತ್ತದೆ ಋಗ್ವೇದದ (8.1.13) ಒಂದು ಮಂತ್ರ. ಇದರ ಅರ್ಥ, “ಅರಣ್ಯನಾಶ ಮಾಡಬಾರದು” ಎಂದು. ಇದೊಂದು ನೇರ ಮತ್ತು ಸ್ಪಷ್ಟವಾದ ನಿರ್ದೇಶನ. “ನಮ್ಮ ಪ್ರಾಚೀನ ಕೃತಿಗಳು ಕೋಡ್’ಗಳ ಮೂಲಕ, ಕಥೆಗಳ ಮೂಲಕ ಸುತ್ತಿಬಳಸಿ ಮಾತಾಡುತ್ತವೆಯಾದ್ದರಿಂದ ಅವು ಏನು ಹೇಳುತ್ತವೆಂದು ಅರಿಯುವುದು ಕಷ್ಟ” ಎಂದು ಕೆಲವರು ದೂರುತ್ತಾರೆ. ಆದರೆ ಅರಣ್ಯ ರಕ್ಷಣೆಯ ಕುರಿತ ಈ ಸೂಚನೆ ಎಷ್ಟು ನೇರವಾಗಿ ಮತ್ತು ಖಡಕ್ಕಾಗಿದೆ ಗಮನಿಸಿ. “ಅರಣ್ಯ ನಾಶ ಮಾಡಬಾರದು” – ಅಷ್ಟೇ.

ಅಥರ್ವ ವೇದದ ಪೃಥ್ವೀ ಸೂಕ್ತ (ಶ್ಲೋಕ 12) “ಮಾತಾ ಭೂಮಿಃ ಪುತ್ರೋಹಮ್ ಪೃಥಿವ್ಯಾಃ” ಅನ್ನುತ್ತದೆ. ಇದು ಭಾವುಕ ತಿಳುವಳಿಕೆ. ಈ ನಮ್ಮ ಭೂಮಿ ನಮಗೆ ತಾಯಿ. ನಾವೆಲ್ಲರೂ ಅದರ ಮಕ್ಕಳು. ಆದರೆ ನಾವೇನು ಮಾಡುತ್ತಿದ್ದೇವೆ? ದುರಾಸೆಯಿಂದ ಅದರ ಗರ್ಭ ಬಗೆಬಗೆದು ಮನೆಯನ್ನು ಸಿಂಗರಿಸುತ್ತೇವೆ. ನಮ್ಮ ಹೊಟ್ಟೆ ಹೊರೆದುಕೊಳ್ಳುತ್ತೇವೆ. ನೀರು ಮೊಗೆಯುತ್ತೇವೆ. ಆಮೇಲೆ ಬಗೆದ ಜಾಗಕ್ಕೆ ಮರಾಮತ್ತು ಮಾಡಿದರಾದರೂ ಸರಿ, ನಮಗೆ ಅದರ ಚಿಂತೆಯೇ ಇಲ್ಲ! ನಮಗೇನಿದ್ದರೂ ಕಪ್ಪೆಗಳ ಮದುವೆ ಮಾಡಿಸುವುದರಲ್ಲೇ ಆಸಕ್ತಿ!!

ಇನ್ನು ದೈವೀ ಆಯಾಮದಲ್ಲಿ ನೀಡುವುದಾದರೂ ನಮಗೆ ಯಾರು ಮುಖ್ಯರು? ವೇದಗಳನ್ನೇ ಸನಾತನ ಆಧಾರವಾಗಿಟ್ಟುಕೊಂಡು ನೋಡಿದರೆ ಮಿತ್ರಾವರುಣ, ಇಂದ್ರ, ಮರುತರೇ ಮೊದಲಾದ ಪ್ರಕೃತಿ ಸಮತೋಲನ ಕಾಯುವ ದೇವತೆಗಳೇ ಮುಖ್ಯ ದೇವತೆಗಳು. ಪ್ರಕೃತಿ ಪೂಜೆಯೇ ಅವರ ಪೂಜೆ. ಪ್ರಕೃತಿಯನ್ನು ಗೌರವಿಸುವುದೇ ಅವರ ಗೌರವ. ಪ್ರಕೃತಿ ಸಮತೋಲನ ತಪ್ಪದಂತೆ ನಾವು ನೋಡಿಕೊಂಡರೆ ಈ ದೇವತೆಗಳು ಸುಪ್ರೀತರಾಗಿ ನಮ್ಮನ್ನು ಕಾಯುತ್ತಾರೆ. ಈ ದೇವತೆಗಳ ಪೂಜೆ ಕಷ್ಟವೂ ಅಲ್ಲ, ಖರ್ಚಿನದೂ ಅಲ್ಲ. ನಮ್ಮ ಸುತ್ತಲಿನ ನೀರು, ಗಾಳಿ, ನೆಲ, ವಾತಾವರಣಗಳನ್ನು ಶುಚಿಯಾಗಿಟ್ಟುಕೊಳ್ಳುವುದು, ಮಿತವಾಗಿ ಬಳಸುವುದು, ಗೌರವದಿಂದ ನೋಡಿಕೊಳ್ಳುವುದೇ ಪೂಜೆ – ಯಜ್ಞ ಎಲ್ಲವೂ.

ಈ ಮೇಲಿನ ಹೇಳಿಕೆಗಳು ಬೌದ್ಧಿಕ ಭಾಷಣವೆಂದು ಮೂಗುಮುರಿಯಬೇಡಿ. ಅವು ಬುದ್ಧಿಯಿಂದ ಆಲೋಚಿಸಿದರೆ ಮಾತ್ರ ಮನದಟ್ಟಾಗುವುದು ಹೌದಾದರೂ, ಅವು ನಮ್ಮ ಸನಾತನ ನಿರ್ದೇಶನಗಳೂ ಹೌದು. ನಿಮಗೆ ಬುದ್ಧಿಪ್ರಧಾನ ಆಲೋಚನೆ ಬೇಡವಾದರೆ, ಹೃದಯದಿಂದ ಯೋಚಿಸಿ. ಭಕ್ತಿಯಿಂದ ಯೋಚಿಸಿ. ಧಾರ್ಮಿಕ ನಿಷ್ಠೆಯಿಂದಾದರೂ ಆಲೋಚಿಸಿ. ಪರಿಸರ ರಕ್ಷಣೆ ಕುರಿತು ವಿಜ್ಞಾನ ಮಾತ್ರವಲ್ಲ, ಧರ್ಮವೂ ಹೇಳಿದೆ. ಆದರೆ ನಮ್ಮ ಧರ್ಮ ಕಪ್ಪೆಗಳ ಮದುವೆ ಮಾಡಿಸಿ ಎಂದು ಎಲ್ಲಿಯೂ ಹೇಳಿಲ್ಲ. ಆದರೂ ನಾವು ಅಂಥವನ್ನು ಪ್ರಶ್ನಿಸಿ ಖಂಡಿಸದೆ ಧರ್ಮದ ಅಪಹಾಸ್ಯ ನಡೆಯುವುದನ್ನು ನೋಡುತ್ತ ಸುಮ್ಮನಿದ್ದುಬಿಟ್ಟಿದ್ದೇವೆ.

ಈ ಬೇಸಗೆಯ ತುರ್ತಿನಲ್ಲಿ ನಾವು ಹೆಚ್ಚೇನೂ ಮಾಡಲಾರೆವು. ಅದಾಗಲೇ ಅಪಾಯವಲಯಕ್ಕೆ ನಾವು ಕಾಲಿಟ್ಟಾಗಿದೆ. ಈ ವರ್ಷದ ಬವಣೆ ಅನುಭವಿಸಿಯೇ ತೀರಬೇಕು. ಮತ್ತಿದು ಕೆಲವೇ ವರ್ಷಗಳಲ್ಲಿ ಸರಿಯಾಗುವ ಸಂಗತಿಯೂ ಅಲ್ಲ. ನಮ್ಮ ಕೈಬೆರಳು ಕೊಯ್ದ ಗಾಯ ಮಾಯಲಿಕ್ಕೇ ಒಂದು ವಾರ ಬೇಕು. ಹೀಗಿರುವಾಗ ಭೂಗರ್ಭವನ್ನು ಬಗೆಬಗೆದು ತೆಗೆದಿದ್ದೇವೆ. ಅದು ಮರುಪೂರಣಗೊಳ್ಳಲು ಎಷ್ಟು ವರ್ಷ ಬೇಕಾದಾವು ಯೋಚಿಸಿ!

ಆದ್ದರಿಂದ, ಪರಿಸರದ ವಿಷಯದಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಧರ್ಮಭೀರುಗಳಾಗುವ ಅಗತ್ಯವಿದೆ. ನಮ್ಮ ಧಾರ್ಮಿಕತೆಯನ್ನು ಬಹಿರಂಗವಾಗಿ ಸಾಬೀತುಪಡಿಸುವ ತುರ್ತೂ ಇದೆ. ನಾವು ನಮ್ಮ ಧರ್ಮವನ್ನು ಗೌರವಿಸುವುದೇ ಆದರೆ, ನಮ್ಮ ಅನುಕೂಲಕ್ಕಾಗಿಯೇ ನಮ್ಮ ಪರಿಸರವನ್ನು ಕಾಪಾಡುವ ಸಂಕಲ್ಪ ತೊಡಬೇಕು. “ಇಲ್ಲವಾದರೆ ಕೇವಲ ಬಾಯಿ ಬೂಟಾಟಿಕೆಯ, ಮೂಢನಂಬಿಕೆಯಲ್ಲಿ ಮುಳುಗಿ ಭೂಮಿಯನ್ನು ಹಾಳುಗೈದ ಧರ್ಮಲಂಡರಾಗಿದ್ದರು ನಮ್ಮ ಪೂರ್ವಜರು” ಎಂದು ಮುಂದಿನ ತಲೆಮಾರು ನೆನೆಯುತ್ತದೆ. ಆದ್ದರಿಂದ, ಮೂಢನಂಬಿಕೆಯ ಆಚರಣೆಗಳನ್ನೇ ಧರ್ಮ ಅನ್ನುವ ಆಲೋಚನೆಯಿಂದ ಹೊರಬಂದು ವೈಜ್ಞಾನಿಕ ಚಿಂತನೆ, ಭಾವುಕ ಆಲೋಚನೆಗಳಿಗೆ ಬೆಲೆ ಕೊಡುವುದು ಅಗತ್ಯ. ನಾವು ಮೂಢನಂಬಿಕೆ ಅನುಸರಿಸದೆ ಹೋದರೂ, ಅದನ್ನು ಮಾಡುತ್ತಿರುವವರನ್ನು ಪ್ರಶ್ನಿಸುವುದು ಮತ್ತು ನಿಜವಾದ ಧರ್ಮವೇನೆಂದು ತಿಳಿಸುವುದು ಕೂಡಾ ನಮ್ಮ ಧಾರ್ಮಿಕ ಕರ್ತವ್ಯವೇ ಆಗಿದೆ. 

ಪರಿಸರ ರಕ್ಷಣೆ ಮಾಡದೆಹೋದರೆ ನಮ್ಮ ಮುಂದಿನ ತಲೆಮಾರುಗಳು (ಈಗಲೇ ಅಂಥಾ ದುಃಸ್ಥಿತಿ ಇದೆ) ದಾರುಣ ಅಂತ್ಯ ಕಾಣುತ್ತವೆ. ಈ ಸಂದರ್ಭದಲ್ಲಿ ನಮ್ಮ ನಡೆ ಹೇಗಿರಬೇಕು? ನಿರ್ಧಾರ, ನಮ್ಮ ಕೈಲೇ ಇದೆ.  

 

Leave a Reply