ಗುರುವಿನ ಕರುಣೆ ಅದೆಷ್ಟೆಂದರೆ….. ಒಂದು ‘ಹಫೀಜ್’ ಪದ್ಯ

ಸೂಫಿ ಕವಿ ಹಫೀಜ್ ಪದ್ಯ | ಕನ್ನಡಕ್ಕೆ : ಚಿದಂಬರ ನರೇಂದ್ರ

ಪ್ರೇಮ ಪಾಠಗಳ
ಆರಂಭದ ದಿನಗಳಲ್ಲಿ ನಾನಿದ್ದಾಗ
ನನ್ನ ಗುರುಗಳು,
ಒಂದೇ ಮಹಡಿಯ ಮನೆಯಲ್ಲಿ ವಾಸವಾಗಿದ್ದರು.
ಅದು ನನ್ನ ಅದೃಷ್ಟ.

ಗುರುಗಳು,
ಸೃಷ್ಟಿಯ ಸೌಂದರ್ಯವನ್ನೂ,
ಭಗವಂತನ ಅಪರಿಮಿತ,
ಅದ್ಭುತ ಸಾಧ್ಯತೆಗಳನ್ನು
ಬಣ್ಣಿಸತೊಡಗುತ್ತಿದ್ದಂತೆಯೇ
ನಾನು ಹುಚ್ಚೆದ್ದು, ಜೋರಾಗಿ ಹಾಡುತ್ತ 
ಕುಣಿಯಲು ಶುರು ಮಾಡುತ್ತಿದ್ದೆ.
ಈ ಆನಂದ,
ಸಹಿಸಲಸಾಧ್ಯವಾಗಿ
ಕಿಟಕಿ ಹಾರಿಕೊಳ್ಳುತ್ತಿದ್ದೆ,
ಅದೂ ತಲೆ ಕೆಳಗಾಗಿ.

ನನ್ನಂಥ 
ಹುಂಬರ ಸಲುವಾಗಿಯೇ ಗುರುಗಳು
ಒಂದೇ ಮಹಡಿಯ ಮನೆಯಲ್ಲಿ
ವಾಸವಾಗಿದ್ದುದು.

ಅವರ ಈ ಮಮತೆಯ ಕಾರಣಕ್ಕಾಗಿಯೇ
ನಾನು ಕೇವಲ ಹದಿನೇಳು ಬಾರಿ
ಮೂಗು ಮುರಿದುಕೊಂಡಿದ್ದೇನೆ!

Leave a Reply