ದಾಂಪತ್ಯವೊಂದು ದಿವ್ಯ ಅವಕಾಶ : ಖಲೀಲ್ ಗಿಬ್ರಾನ್ | ‘ದ ಪ್ರಾಫೆಟ್’

ಮೂಲ : ದ ಪ್ರಾಫೆಟ್, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ಅಲ್’ಮಿತ್ರ ಮತ್ತೆ ಮಾತಾಡಿದಳು;
ದಾಂಪತ್ಯದ ಬಗ್ಗೆ ವಿವರಣೆ ಕೇಳಿದಳು.

ಅವ ಸ್ಪಷ್ಟ ದನಿಯಲ್ಲಿ ಮಾತನಾಡತೊಡಗಿದ ;
ಕೂಡಿ ಹುಟ್ಟಿದವರು ನೀವು, ಕೂಡಿಯೇ ಬಾಳುವಿರಿ ಕೊನೆಯ ತನಕ.

ಬಿಳೀ ರೆಕ್ಕೆಯ ಸಾವಿನ ಹಕ್ಕಿ ನಿಮ್ಮ ಕಾಲವ ಕುಕ್ಕಿ
ಚೂರು ಚೂರು ಮಾಡುವಾಗಲೂ
ಕೈ ಹಿಡಿದುಕೊಂಡೇ ಇರುವಿರಿ ಕೊನೆಯ ತನಕ.

ಹೌದು,
ಭಗವಂತ ನೆನಪಿಸಿಕೊಳ್ಳಲೂ ನಿರಾಕರಿಸುವ ನೆನಪುಗಳಲ್ಲಿ
ನೀವು ಹತ್ತಿರ, ಒಬ್ಬರಿಗೊಬ್ಬರು.
ಆದರೆ ಈ ಕೂಡಿರುವಿಕೆಯ ನಡುವೆ ಇರಲಿ
ಕೊಂಚ ಬೆಳಕಿಗೆ ದಾರಿ.

ಕುಣಿಯಲಿ ಸಾಂಗವಾಗಿ ನಿಮ್ಮ ನಡುವೆ
ಸ್ವರ್ಗ ಸೀಮೆಯ ಗಾಳಿ.

ಪ್ರೇಮಿಸಿ ಮೈದುಂಬಿ, ಆದರೆ
ಕಟ್ಟಿ ಹಾಕದಿರಿ ಒಬ್ಬರನ್ನೊಬ್ಬರು.

ಆತ್ಮದ ತೀರಗಳ ನಡುವೆ ಹರಿಯಲಿ
ತೀರದ ಸಾಗರದಂತೆ ಪ್ರೇಮ.

ಒಬ್ಬರು ಇನ್ನೊಬ್ಬರ ಬಟ್ಟಲುಗಳನ್ನ ತುಂಬಿ
ಆದರೆ ಹಚ್ಚದಿರಿ ತುಟಿ ಮಾತ್ರ, ಒಂದೇ ಬಟ್ಟಲಿಗೆ.

ಹಂಚಿಕೊಳ್ಳಿ ನಿಮ್ಮ ನಿಮ್ಮ ರೊಟ್ಟಿಗಳ
ಆದರೆ ಕೈ ಹಾಕದಿರಿ ಮಾತ್ರ
ಒಂದೇ ರೊಟ್ಟಿಯ ತುಣುಕಿಗೆ.

ಕೂಡಿ ಹಾಡಿ, ಕೂಡಿ ಕುಣಿಯಿರಿ
ಕೂಡಿ ಖುಷಿಯ ಉತ್ತುಂಗವನ್ನು ಮುಟ್ಟಿ,
ಆದರೆ ಕದಲದಿರಿ ಮಾತ್ರ
ನಿಮ್ಮ ನಿಮ್ಮ ನೆಲವ ಬಿಟ್ಟು.
ಸ್ವರ ವಾದ್ಯದ ತಂತಿಗಳ ನಡುವೆ
ಅಂತರವಿರುವಾಗಲೂ ಅವು
ಹಾಡುವಂತೆ ಒಂದೇ ರಾಗ.

ಹಂಚಿಕೊಳ್ಳಿ ಹೃದಯಗಳನ್ನು ಪ್ರೀತಿಗೆ,
ಆದರೆ ಸುಪರ್ದಿಗಲ್ಲ.
ಬದುಕಿಗೆ ಮಾತ್ರ ಗೊತ್ತು
ನಿಮ್ಮ ಹೃದಯಗಳನ್ನು ಹಿಡಿದಿಡುವ ಗುಟ್ಟು.

ಹತ್ತಿರ ನಿಂತರೂ ಒತ್ತಿಕೊಳ್ಳದಿರಿ ಒಬ್ಬರನ್ನೊಬ್ಬರು.
ನಿಲ್ಲಿ ದೇವಾಲಯದ ಕಂಬಗಳಂತೆ,
ನಡುವೆ ಇರಲಿ ಒಂದು ದಿವ್ಯ ಅವಕಾಶ.

ಮಹಾಮರಗಳು ಬೆಳೆಯುವುದಿಲ್ಲ
ಒಂದು ಇನ್ನೊಂದರ ನೆರಳಿನಲ್ಲಿ.

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

3 Responses

Leave a Reply

This site uses Akismet to reduce spam. Learn how your comment data is processed.