ಮೂಲ : ಹಫೀಜ್ | ಅನುವಾದ : ಚಿದಂಬರ ನರೇಂದ್ರ
ಇದೊಳ್ಳೆ ವ್ಯವಹಾರ !
ನಮ್ಮ ಮಹಾನ್ ಧರ್ಮಗಳೇಲ್ಲ
ಸರಕು ಸಾಗಿಸುವ
ದೊಡ್ಡ ದೊಡ್ಡ ಹಡಗುಗಳಾದರೆ,
ಈ ಕವಿತೆಗಳು
ಜೀವ ರಕ್ಷಕ ದೋಣಿಗಳಂತೆ.
ನನಗೆ ಗೊತ್ತಿರುವ
ಪ್ರತೀ ಜಾಣ ಮನುಷ್ಯನೂ
ಹಡಗಿನಿಂದ ದೋಣಿಗೆ ಹಾರಿದ್ದಾನೆ
ಇದೊಳ್ಳೆ ವ್ಯವಹಾರ
ಅಲ್ಲವೆ ಹಫೀಜ್?
~
ಹಫೀಜನಿಗೆ ಅದೊಂದೇ ಕೆಲಸ
ಆಕಾಶ
ಒಂದು ಜೋತು ಬಿದ್ದ
ನೀಲೀ ಸಮುದ್ರ.
ನಕ್ಷತ್ರಗಳು ಸಾಗರದಲ್ಲಿ
ಈಜುತ್ತಿರುವ
ಪುಟ್ಟ ಪುಟ್ಟ ಮೀನುಗಳು.
ಗ್ರಹ ಮಂಡಲಗಳು
ನಾನು ಸವಾರಿ ಮಾಡುವ
ಭಾರಿ ತಿಮಿಂಗಲುಗಳು.
ಸೂರ್ಯ ಮತ್ತು ಅವನ ಬೆಳಕು
ನನ್ನ ಎದೆಯೊಳಗೆ,
ಆಕಾರದೊಳಗೆ
ಒಂದಾಗಿ, ಜೀರ್ಣವಾಗಿವೆ.
ನನಗಿನ್ನು ಹಸಿವಿಲ್ಲ.
ಈ ಉತ್ಕಟ ಆಟದ ಮೈದಾನದಲ್ಲಿ
ಕಾಲಿಡಲು ಒಂದೇ ಶರತ್ತು.
ಹಫೀಜ ನಿಗೆ ಈ ಶರತ್ತನ್ನು
ಕೂಗಿ ಕೂಗಿ
ಹೇಳುವುದೊಂದೇ ಕೆಲಸ.
ಅಳುವವರಿಗೆ,
ಆಟದೊಳಗೆ ಜಾಗವಿಲ್ಲ,
ಆಟ ಬೇಕೆಂದರೆ
ಹಾಡಬೇಕು, ಕುಣಿಯಬೇಕು
ಮೈ ಮುರಿಯಬೇಕು.
ತನ್ನ ಆಟ ಕೆಡಿಸುವವರನ್ನು
ಕಂಡರೆ ಭಗವಂತನಿಗೆ
ಎಲ್ಲಿಲ್ಲದ ಸಿಟ್ಟು.
~
ತನ್ನ ದಿವ್ಯ ಪಾದಗಳಿಂದ ಒದೆಯಬಹುದು !
ಎಂಥ ಕೆಲಸ ತಾನೇ
ಮಾಡಲಿ ನಾನು ಈ ಬದುಕಿನಲ್ಲಿ?
ನಿಯಮಗಳನ್ನು ಮೀರುವ
ಜನರಲ್ಲಿನ ಆಕರ್ಷಣೆಯನ್ನೂ,
ಕಲಾವಿದನ ಉನ್ಮಾದವನ್ನೂ
ತೀವ್ರ ಕಾಮಿಯನ್ನೂ
ಅಪಾರವಾಗಿ ಪ್ರೀತಿಸುವ
ಈ ಪವಿತ್ರ ಭೋಳೆ ಮುದುಕನನ್ನು
ಕೆಲಸಕ್ಕಿಟ್ಟುಕೊಳ್ಳುವ ಉದಾರಿಗಳು
ಯಾರಿದ್ದಾರೆ ಇಲ್ಲಿ?
ಬಹುಶಃ ನಾನು
ಕವಿಯಾಗಬಹುದೇನೋ,
ನನ್ನ ಸುಂದರ ಖಾಲಿ ಕಾಗದಗಳ ಮೇಲೆ
ಭಗವಂತ ಬಂದು ಕೂಡಲಿದ್ದಾನೆ
ಬಹುಶಃ ಅದಕ್ಕೇ ಅನಿಸತ್ತೆ
ನನ್ನ ಪ್ರೇಮವನ್ನು ಇಷ್ಟು ಶುದ್ಧವಾಗಿಟ್ಟಿದ್ದಾನೆ.
ನೀವು ಆ ಪುಟಗಳನ್ನು ಕಾಣಲು ಬಂದಾಗ
ತನ್ನ ದಿವ್ಯ ಪಾದಗಳಿಂದ
ಆತ ನಿಮ್ಮನ್ನ ಒದ್ದರೂ ಒದೆಯಬಹುದು.