ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಅಮೇರಿಕದ ಒಬ್ಬ ಕವಿ ಗ್ಯಾರಿ ಸಿಂಡರ್, ಝೆನ್ ಅಭ್ಯಾಸ ಮಾಡಲು ಜಪಾನಿಗೆ ಬರುತ್ತಾನೆ. ಝೆನ್ ಅಭ್ಯಾಸ ಮಾಡುವವರು ಕವಿತೆ ಬರೆಯಬಹುದಾ ಎನ್ನುವ ಸಂದೇಹ ಅವನದು. ಅವನು ಈ ಬಗ್ಗೆ ಮಾಸ್ಟರ್ ರೋಶಿಯನ್ನು ಪ್ರಶ್ನೆ ಮಾಡುತ್ತಾನೆ.
“ ಕವಿತೆ ನಿನ್ನ ಅಂತರಾಳದಿಂದ ಒಡಮೂಡಿ ಬರುವುದಾದರೆ ಕವಿತೆ ಬರೆಯುವುದಕ್ಕೆ ಝೆನ್ ನಲ್ಲಿ ಅಂಥ ಆಕ್ಷೇಪ ಏನೂ ಇಲ್ಲ” ಮಾಸ್ಟರ್ ರೋಶಿ ಉತ್ತರಿಸುತ್ತಾರೆ.
ಝೆನ್ ಅಭ್ಯಾಸದಲ್ಲಿ ಸಿರೀಯಸ್ ಆಗಿ ತೊಡಗಿಕೊಳ್ಳುವ ಆಕಾಂಕ್ಷೆಯಿದ್ದುದರಿಂದ , ಮತ್ತು ಅಂಥ ಸಿರೀಯಸ್ ಆದ ಮನಸ್ಥಿತಿಯನ್ನು ಕಟ್ಚಿಕೊಳ್ಳುವುದು ಕವಿತೆ ಬರೆಯುವುದರಿಂದ ಸಾಧ್ಯವಾಗುತ್ತದೋ ಇಲ್ಲವೋ ಎನ್ನುವ ಗೊಂದಲ ತನ್ನಲ್ಲಿ ಇದ್ದುದರಿಂದ ಗ್ಯಾರಿ ಸಿಂಡರ್ ಎಷ್ಟೋ ವರ್ಷ ಕವಿತೆ ಬರೆಯುವುದನ್ನೇ ಬಿಟ್ಟು ಬಿಟ್ಟ.
ಮಾಸ್ಟರ್ ಸಾವಿನ ಹಾಸಿಗೆ ಮೇಲಿದ್ದಾಗ ಗ್ಯಾರಿ ಸಿಂಡರ್, ರೋಶಿಯನ್ನು ಭೇಟಿಯಾಗಲು ಹೋದ.
“ ಮಾಸ್ಟರ್, ಝೆನ್ ತುಂಬಾ ಸಿರೀಯಸ್, ನಾನು ಕವಿತೆ ಬರೆಯುವುದನ್ನೇ ಬಿಟ್ಟೆ” ಗ್ಯಾರಿ ಮಾತನಾಡಿದ.
“ ಗ್ಯಾರಿ, ನಿನ್ನ ಗ್ರಹಿಕೆ ತಪ್ಪಾದರೂ ಅದರಿಂದ ನಿನಗೆ ಅನುಕೂಲವೇ ಆಗಿದೆ. ಹಾಗೆ ನೋಡಿದರೆ ಕವಿತೆ ಬರೆಯುವುದೇ ಸಿರೀಯಸ್, ಝೆನ್ ಅಂಥ ಸಿರೀಯಸ್ ಏನೂ ಅಲ್ಲ” ಮಾಸ್ಟರ್ ರೋಶಿ ಉತ್ತರಿಸಿದರು.