ಜ್ಞಾನೋದಯವೆಂದರೆ ಬೇರೇನಲ್ಲ, ಎಲ್ಲ ಎಲ್ಲೆಗಳ ದಾಟುವುದು. ~ ಫರೀದುದ್ದೀನ್ ಅತ್ತಾರ್ | ಕನ್ನಡಕ್ಕೆ: ಸುನೈಫ್
ಉರಿವ ದೀಪದ
ಬೆಳಕಿನಾಳದ ಗುಟ್ಟನರಿಯಲು
ಚಿಟಪಟ ರೆಕ್ಕೆ ಬಡಿಯುತ್ತಾ
ಸಭೆ ಸೇರಿದವು ಚಿಟ್ಟೆಗಳು,
ಮುಟ್ಟಲಾಗದ ಉರಿಯ
ಅರಿವನು ಹೊತ್ತು ತರಲು
ಚಿಟ್ಟೆಯೊಂದು ಹೊರಡಬೇಕೆಂದು ನಿರ್ಧರಿಸಲಾಗಿ
ಹಾರಿತೊಂದು ಅರಮನೆಯ ಕಿಟಕಿಯ ತನಕ.
ದೀಪ ಒಳಗಿದೆ, ಬೆಳಕು ಕಣ್ಣ ತುಂಬಿದೆ
ಇನ್ನೇನು ಬೇಕು ತನಗೆ?
ಕಂಡ ಕಾಣ್ಕೆಯ
ವರದಿ ಒಪ್ಪಿಸಲು ಮರಳಿತು ಕಾತರದಿ,
‘ಜ್ವಾಲೆಯ ಗುಟ್ಟನು ಅರಿತಿಲ್ಲ ನೀನು’
ದೂರದಿ ಕಂಡ ನೋಟವ
ಒಪ್ಪಲಿಲ್ಲ ಗುರು ಚಿಟ್ಟೆ.
ಮತ್ತೆ ಚಿಟ್ಟೆಯೊಂದು ಹಾರಿತು
ಕೋಟೆ ಬಾಗಿಲ ದಾಟಿ ಅರಮನೆ ಹೊಕ್ಕಿತು
ದೀಪದ ಪ್ರಭೆಯಲ್ಲಿ ಕುಣಿಯಿತು
ರೆಕ್ಕೆಗೆ ಚೂರೇ ಚೂರು ಬೆಂಕಿ ತಗುಲಿದಾಗ
ಒಳಗಿನಿಂದೆದ್ದ ನಡುಕಕೆ ನಲುಗಿ
ಮಂದವಾಯಿತು ಕಣ್ಣು,
ಹಾರಿದ ದೂರವ, ಕಂಡ ಜ್ವಾಲೆಯ
ವರ್ಣಿಸಿತು ಮರಳಿ ಬಂದು
ಗುರು ಚಿಟ್ಟೆ ಹೇಳಿತು:
‘ದೀಪ ಬೆಳಗಲು ಉರಿಯಬೇಕು,
ಆ ಉರಿಯಾಳವ ಕಂಡಿಲ್ಲ ನೀನು’
ಈಗ ಹೊರಟಿತೊಂದು ಕಟ್ಟಾಳು ಚಿಟ್ಟೆ
ಅಗಲಿದ ಪ್ರೇಮಿಯ ಹುಡುಕುವಂತೆ
ಬೆಳಕ ಹುಡುಕುತ ಹಾರಿತು
ಮುಳುಗಿತು ಬೆಳಕಿನಾಳದಲ್ಲಿ
ಮಿಂದೆದ್ದಿತು ಉರಿವ ಕುಡಿಯಲ್ಲಿ
ಬೆಳಕು ಮತ್ತು ಚಿಟ್ಟೆ ಒಂದಾಯಿತು ನಾಟ್ಯದಲ್ಲಿ
ಈಗ ರೆಕ್ಕೆ ದೇಹ ತಲೆಯಲ್ಲೆಲ್ಲ ಬೆಳಕು
ಚಿಟ್ಟೆಯೀಗ ಬರಿಯ ನಸುಗೆಂಪು
ನಾಮರೂಪಗಳು ಅಳಿದು
ಉಳಿದದ್ದು ಉರಿಯ ಬೆಳಕು
ಗುರು ಚಿಟ್ಟೆ ಹೇಳಿತು:
‘ಅವನರಿತ, ಅವನರಿತ
ನಾವು ಹುಡುಕುವ ಸತ್ಯವ ಅವನರಿತ,
ನುಡಿಯಲಾಗದ ಸತ್ಯವ ಅವನರಿತ’
ಜ್ಞಾನೋದಯವೆಂದರೆ ಬೇರೇನಲ್ಲ
ಎಲ್ಲ ಎಲ್ಲೆಗಳ ದಾಟುವುದು.
ದೇಹಾತ್ಮದೊಳಗಿಂದ ಚಿಮ್ಮಿ ಹೊರಬರದೆ
ಗೆಲ್ಲಲಾಗದು ಯಾವ ಗುರಿಯನ್ನೂ.
ನೆನಪಿರಲಿ, ಕೂದಲೆಳೆಯ ಹಮ್ಮು ಸಾಕು
ಮತ್ತೆ ಹತಾಶೆಯ ಕೂಪಕೆ ಮರಳಲು.
ಗುರುತುಗಳೆಲ್ಲ ಅಳಿಯುವಲ್ಲಿ
ಗುರುತಿಟ್ಟು ಹೋಗ ಬಯಸುವಿರಾದರೆ
ನಿಮಗಿದು ಜಾಗವಲ್ಲ.