ಅರ್ಥ ಮನೆ ಮಾಡಿಕೊಂಡಿರುವುದು ಆದಿಯಲ್ಲಿ, ಬೀಜದಲ್ಲಿ. ಆದರೆ ಮನಸ್ಸಿಗೆ ಹೀಗೆ ಹುಡುಕುವುದು ಕಷ್ಟ, ಅದು ಭವಿಷ್ಯದಲ್ಲಿ ಹುಡುಕ ಬಯಸುತ್ತದೆ. ‘ಸಾಧನೆ’ ಯ ಅವಶ್ಯಕತೆ ಇರೋದೇ ಇಲ್ಲಿ. ಬೀಜವನ್ನು ಒಡೆದು ಅರ್ಥವನ್ನು ಕಂಡುಕೊಳ್ಳುವುದು ಸುಲಭದ ಮಾತಲ್ಲ ~ Return to the root | ಅಧ್ಯಾಯ 4, ಭಾಗ 3 ; ಮೂಲ: Hsin Hsin Ming | ಕನ್ನಡಕ್ಕೆ : ಚಿದಂಬರ ನರೇಂದ್ರ
ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ
ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ ~ ಸೊಸಾನ್
ಆದಿಯೇ ಅಂತ್ಯ
ಅಂತ್ಯ ಈಗ ನಿಮಗೆ ಕಾಣಿಸದಿರಬಹುದು
ಆದರೆ ಅದು ಆದಿಯಲ್ಲಿಯೇ ಇದೆ.
ಎಲ್ಲವೂ ಬೀಜದಲ್ಲಿಯೇ ಇರುವಾಗ
ಹೂವನ್ನು ಕಾಣಲು ನೀವು ಭವಿಷ್ಯದ ಹಾದಿ ಕಾಯಬೇಕಿಲ್ಲ.
ನೇರವಾಗಿ ಆದಿಯನ್ನು ಬಗೆದು
ಹೂವನ್ನು ಸ್ವಾಗತಿಸಬಹುದು.
ಹೂವನ್ನು ಕಾಣಲು ಮುಖ್ಯವಾಗಿ ಬೇಕಾದದ್ದು
ಹೂವಲ್ಲ, ದೃಷ್ಟಿ ಮತ್ತು
ಈ ದೃಷ್ಟಿಗೆ ಬೇಕಾದದ್ದು ತೀಕ್ಷ್ಣ ಕಣ್ಣುಗಳು.
ಈ ಕಣ್ಣುಗಳಿಲ್ಲಗಿರುವುದು ನಿಮ್ಮ ಸಮಸ್ಯೆ.
ಏಕೆಂದರೆ ಆದಿ ನಿಮ್ಮೆದುರಿಗಿದೆ
ಬೀಜ ನಿಮ್ಮ ಎದುರಿಗಿದೆ
ಆದರೂ ನೀವು ಭವಿಷ್ಯದತ್ತ ಮುಖ ಮಾಡಿದ್ದೀರಿ.
ಹಾಗೆಯೇ,
ಪೂರ್ಣ ಭವಿಷ್ಯ ಇಂದಿನ ವರ್ತಮಾನದಲ್ಲಿದೆ.
ಭವಿಷ್ಯ ಇನ್ನೂ ಘಟಿಸಬೇಕು
ಭೂತ ಕಳೆದು ಹೋದ ಸಂಗತಿ.
ಭೂತವನ್ನು ಛೇದಿಸಿ, ಬೇರಿಗೆ ಮರಳಿದಾಗ
ತಾನೇ ತಾನಾಗಿ ಅರ್ಥ ಅನಾವರಣವಾಗುವುದು.
ಬದಲಾಗಿ ನೀವು ಭವಿಷ್ಯದಲ್ಲಿ ಮಾತ್ರ ಆಸಕ್ತರಾದರೆ
ಕಾಯುವುದು ರೂಢಿಯಾಗುತ್ತದೆ
ದೂರ ನೋಡುವುದು ಹವ್ಯಾಸವಾಗುತ್ತದೆ
ಆಗ ನೀವು ಹತ್ತಿರ ನೋಡುವುದನ್ನು ಮರೆಯುತ್ತೀರಿ,
ಸೂಕ್ಷ್ಮ ನಿಮ್ಮಿಂದ ಮರೆಯಾಗುತ್ತದೆ.
ಆಗಲೇ ಬದುಕು ನಿಮಗೆ ಅರ್ಥಹೀನ ಅನಿಸತೊಡಗುತ್ತದೆ.
ಪಶ್ಚಿಮದ ತತ್ವಜ್ಞಾನದ ಸಮಸ್ಯೆಯೇ ಇದು
ಅದು ಯಾವಾಗಲೂ ಗುರಿಯನ್ನು
ಭವಿಷ್ಯದಲ್ಲಿ ಹುಡುಕ ಬಯಸುತ್ತದೆ.
ಹೌದು, ಗುರಿ ಆದಿಯಲ್ಲೇ ಇದೆ ಎಂದರೆ
ನಿಮಗೆ ಅಸಂಗತ ಅನಿಸಬಹುದು.
ಅದಕ್ಕೆಂದೇ ಮನಸ್ಸು ಗುರಿಯನ್ನು ಭವಿಷ್ಯದಲ್ಲಿಡುತ್ತದೆ.
ಮನಸ್ಸು ಬದುಕುವುದೇ ಬಯಕೆಯ ಹೆಗಲ ಮೇಲೆ ಕೂತು!
ಆದರೆ ಭವಿಷ್ಯ ಹೆಸರಿಗೆ ತಕ್ಕಂತೆ
ಸಾಧ್ಯವಾಗುವುದಲ್ಲ,
ಯಾವಾಗಲೂ ಎದುರಾಗುತ್ತಲೇ ಇರುವಂಥದ್ದು.
ಈ ಕಾಯುವಿಕೆ ಎಂದೂ ವರ್ತಮಾನವಾಗುವ ಸಾಧ್ಯತೆ ಇಲ್ಲವೇ ಇಲ್ಲ.
ಭವಿಷ್ಯ ಒಂದು ಕನಸು, ಒಂದು ಭರವಸೆ ಮಾತ್ರ;
ಎಂದೂ ಘಟಿಸುವಂಥದಲ್ಲ
ಆಗಲೇ ನಿಮಗೆ ಬದುಕು ಅಸಂಗತ ಅರ್ಥಹೀನ ಅನಿಸಲು ಶುರುವಾಗುವುದು.
ಈ ತೊಳಲಾಟ ಆತ್ಮಹತ್ಯೆಗೆ ಕಾರಣವಾಗುವುದು.
ಭವಿಷ್ಯದಲ್ಲಿ ಅರ್ಥ ಹುಡುಕುವುದರ
ಅಪಾಯವೇ ಇದು.
ಅರ್ಥ ಮನೆ ಮಾಡಿಕೊಂಡಿರುವುದು ಆದಿಯಲ್ಲಿ, ಬೀಜದಲ್ಲಿ.
ಆದರೆ ಮನಸ್ಸಿಗೆ ಹೀಗೆ ಹುಡುಕುವುದು ಕಷ್ಟ,
ಅದು ಭವಿಷ್ಯದಲ್ಲಿ ಹುಡುಕ ಬಯಸುತ್ತದೆ.
‘ಸಾಧನೆ’ ಯ ಅವಶ್ಯಕತೆ ಇರೋದೇ ಇಲ್ಲಿ.
ಬೀಜವನ್ನು ಒಡೆದು ಅರ್ಥವನ್ನು ಕಂಡುಕೊಳ್ಳುವುದು
ಸುಲಭದ ಮಾತಲ್ಲ.
ಇದನ್ನು ಕಾಣಲು ಸಾಮಾನ್ಯ ಕಣ್ಣುಗಳ ಸಹಾಯ ಸಾಲದು,
ಅವು ಬೀಜದ ತೊಗಟೆಯನ್ನು ಮಾತ್ರ ನೋಡ ಬಲ್ಲವು.
ಆಗಲೇ ವಿಶೇಷ ದೃಷ್ಟಿಯ ಅವಶ್ಯಕತೆ ಎದುರಾಗುತ್ತದೆ.
ಬೀಜದ ಒಳಗನ್ನು ಕಾಣಬಯಸುವಿರಾದರೆ
ನಿಮ್ಮ ಒಳಗನ್ನು ಪ್ರವೇಶಿಸಿ.
ಒಳಗೆ ನೀವೂ ಒಂದು ಬೀಜವೇ!
ಬೀಜವನ್ನು ಒಡೆದು, ಅರ್ಥವನ್ನು ಕಂಡುಕೊಳ್ಳಲು
ಬೇಕಾಗಿರುವ ವಿಶಿಷ್ಟ ದೃಷ್ಟಿಯನ್ನು
ಸಾಧ್ಯವಾಗಿಸುವ ಸಾಧನೆಯೇ ಧ್ಯಾನ.
ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ
ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ.
ಅರ್ಥವನ್ನು ನಿಮಗೆ ಮನಗಾಣಿಸೋದು
ಬೇರೆ ಯಾರಿಂಗಲೂ ಸಾಧ್ಯವಿಲ್ಲ.
ನಿಮ್ಮೊಳಗೆ ಪ್ರವೇಶ ಮಾಡೋದು
ನಿಮಗೆ ಮಾತ್ರ ಸಾಧ್ಯ
ನಿಮಗೆ ಮಾತ್ರ ಅಲ್ಲಿ ಪ್ರಜ್ಞೆ ಸಾಧ್ಯ.
ಇಡೀ ವಿಶ್ವವೇ ಕನಸಾಗಿರಬಹುದು
ಕನಸಲ್ಲ ಎಂದು ಸಿದ್ಧ ಮಾಡುವುದಾದರೂ ಹೇಗೆ?
ಸಾಧ್ಯವೇ ಇಲ್ಲ.
ಏಕೆಂದರೆ ಕನಸಿನಲ್ಲಿಯೂ ಸಂಗತಿಗಳು
ನಿಜದ ಹಾಗೆಯೇ ಘಟಿಸುತ್ತವೆ,
ಕೆಲವೊಮ್ಮೆ ಎಚ್ಚರದ ಸ್ಥಿತಿಗಿಂತಲೂ ಹೆಚ್ಚು ನಿಜವಾಗಿ.
ಎಚ್ಚರದ ಸ್ಥಿತಿಯಲ್ಲಿ ಸಂಶಯಕ್ಕೆ ಜಾಗ ಉಂಟು
ಆದರೆ ಕನಸಿನ ಸ್ಥಿತಿಯಲ್ಲಿ ಸಂಶಯದ ಪ್ರಶ್ನೆಯೇ ಇಲ್ಲ.
ಜುವಾಂಗ್-ತ್ಸೆ ಗೆ ಒಂದು ಕನಸು ಬಿತ್ತು
ಕನಸಲ್ಲಿ ಬಣ್ಣ ಬಣ್ಣದ ಚಿಟ್ಟೆಯಾಗಿದ್ದ.
ಥಟ್ಟನೆ ಎದ್ದು, ನೋಡಿಕೊಂಡಾಗ
ಹಾಸಿಗೆಯಲ್ಲಿ ಅದೇ ಮನುಷ್ಯ ಪ್ರಾಣಿ.
ನಾನು ಚಿಟ್ಟೆಯ ಕನಸು ಕಾಣುತ್ತಿರುವ
ಮನುಷ್ಯ ಪ್ರಾಣಿಯೋ, ಅಥವಾ
ಮನುಷ್ಯನ ಕನಸು ಕಾಣುತ್ತಿರುವ ಚಿಟ್ಟೆಯೋ?
ಜುವಾಂಗ್-ತ್ಸೆ ಗೆ ಗೊಂದಲ ಶುರುವಾಯ್ತು.
ಹೌದು ಜುವಾಂಗ್ ತ್ಸೇ ಕನಸಿನಲ್ಲಿ
ಚಿಟ್ಟೆಯಾಗಬಲ್ಲನಾದರೆ
ಚಿಟ್ಟೆ ಯಾಕೆ ಕನಸಲ್ಲಿ ಜುವಾಂಗ್ ತ್ಸೇ ಆಗಬಾರದು?
ಸಮಸ್ಯೆ ಇಲ್ಲ
ಜುವಾಂಗ್ ತ್ಸೇ ಎತ್ತಿರೋದು
ಸುಂದರ ಮೂಲಭೂತ ಪ್ರಶ್ನೆ.
ನೆನಪಿನಲ್ಲಿರಲಿ,
ಕನಸಿನಲ್ಲೂ ನೀವು ಇರುತ್ತೀರಿ
ನೀವು ಚಿಟ್ಟೆಯಾಗಿರಬಹುದು , ಆದರೂ ನೀವು ಇರಲೇಬೇಕಲ್ಲ!?
ಕನಸು ಅಸ್ತಿತ್ವದಲ್ಲಿರಬೇಕಾದರೆ, ಕನಸು ಕಾಣುವವ ಅಸ್ತಿತ್ವದಲ್ಲಿರಲೇಬೇಕಲ್ಲ!
ಒಂದಂತೂ ಸತ್ಯ, ಅದು ‘ನೀವು’.
ಈ ಸತ್ಯ ನಿಮಗೆ ಮನವರಿಕೆ ಆದಾಗ
ನೀವು ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ.
ಯಾವುದು ಹಾಗಾದರೆ ನಿಜದ ನಿಜ?
ಅದು ರೂಪವಲ್ಲ, ಆಕಾರವಲ್ಲ;
ರೂಪ, ಆಕಾರ ಬದಲಾಗುತ್ತಲೇ ಇರುತ್ತವೆ.
ಆದರೆ, ಯಾವುದು ಈ ರೂಪದ ಮೂಲಕ ಹಾಯ್ದು ಹೋಗುತ್ತದೋ
ಅದು ಬದಲಾಗುವುದಿಲ್ಲ.
ಅಕಸ್ಮಾತ್ ನಿಮ್ಮೊಳಗೆ ನೀವು ನೋಡಿಕೊಂಡಾಗ
ನಿಮಗೆ ಆಶ್ಚರ್ಯವಾಗಬಹುದು,
ನಿಮಗೆ ಎಷ್ಟು ವಯಸ್ಸಾಗಿದೆ ನಿಮಗೆ ಗೊತ್ತಾಗುವುದಿಲ್ಲ.
ಇಪ್ಪತ್ತೊ ನಲವತ್ತೊ ಕಂಡು ಹಿಡಿಯುತ್ತೀರಿ.
ಪ್ರಜ್ಞೆಗೆ ವಯಸ್ಸಿನ ಹಂಗಿಲ್ಲ
ವಯಸ್ಸು ದೇಹಕ್ಕೆ ಮಾತ್ರ ಸಂಬಂಧಿಸಿದ್ದು,
ಒಳಗಿನ ಸತ್ಯಕ್ಕೆ ವಯಸ್ಸೇ ಆಗುವುದಿಲ್ಲ,
ಅದು ಹುಟ್ಚೂ ಇಲ್ಲ ಆದ್ದರಿಂದ ಸಾಯುವುದೂ ಇಲ್ಲ.
ಒಮ್ಮೆ ನೀವು
ಈ ಅನನ್ಯ, ಬದಲಾಗದೇ ಇರುವ
ಚಲಿಸದೇ ಇರುವ
ಸತ್ಯದಲ್ಲಿ ಒಂದಾದಿರೆಂದರೆ
ನೀವು ಜಗತ್ತನ್ನು ಕಾಣುವ, ಬದುಕನ್ನು ಬಾಳುವ
ರೀತಿಯೇ ಬದಲಾಗುತ್ತದೆ.
ಆಗ ನೀವು ಕನ್ನಡಿಯಾಗುತ್ತೀರಿ
ನಿಜವನ್ನು ಪ್ರತಿಫಲಿಸುತ್ತೀರಿ.
ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ
ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ.
ನೀವು ಬೀಜದ ತೊಗಟೆಯ ಹಿಂದೆ
ಸಂಗತಿಗಳ ಹೊರಮೈಯ ಹಿಂದೆ ಬಿದ್ದಿರಾದರೆ
ನಿಜವನ್ನು ಕಳೆದುಕೊಳ್ಳುತ್ಕೀರಿ.
ಆಸ್ತಿಯ ಹಿಂದೆ, ಯಶಸ್ಸಿನ ಹಿಂದೆ, ಗಂಡು/ಹೆಣ್ಣಿನ ಹಿಂದೆ
ಅಭಿಮಾನ, ಅಧಿಕಾರದ ಹಿಂದೆ ಬಿದ್ದಿರಾದರೆ
ಆ ಸಮಯದಲ್ಲಿ ಕನಸಿನ ಭಾಗವಾಗುತ್ತೀರಿ
ಸದಾಕಾಲಕ್ಕೆ ನಿಮ್ಮನ್ನು ಕಳೆದುಕೊಳ್ಳುತ್ತೀರಿ.
ಹೊರ ಜಗತ್ತಿನಲ್ಲಿ ಎಷ್ಟೇ ಸಾಧನೆ ಮಾಡಿದರೂ
ಒಳ ಜಗತ್ತಿನ ಪರಿಚಯದಿಂದ ವಿಮುಖರಾಗುತ್ತೀರಿ.
ನೆನಪಿನಲ್ಲಿರಲಿ
ನೀವು ಎದುರು ನೋಡಬಹುದಾದರೆ ಅದು ಸಾವನ್ನು ಮಾತ್ರ.
ಸಾವು ಒಂದು ಖಚಿತ ಮಾನದಂಡ.
ಸಾವು ಯಾವುದನ್ನು ತಿರಸ್ಕರಿಸುತ್ತದೆಯೋ
ಅದು ತಿರಸ್ಕಾರಕ್ಕೆ ಅತ್ಯಂತ ಯೋಗ್ಯವಾದದ್ದು.
ಯಾವುದು ಸಾವಿನಾಚೆಗೂ ಸತ್ಯವೋ
ಯಾವುದು ಸಾವಿಗಿಂತಲೂ ಶಕ್ತಿಶಾಲಿಯೋ
ಅದು ಮಾತ್ರ ಸತ್ಯ.
ಸತ್ಯಕ್ಕೆ ಸಾವಿಲ್ಲ.
ಯಾವುದು ಸತ್ಯವಲ್ಲವೋ ಅದು ಸಾವಿರಾರು ಬಾರಿ ಸಾಯುತ್ತದೆ.
(ಮುಂದುವರೆಯುತ್ತದೆ…..)
1 Comment