ಮುಕ್ತಿ ಮಾರ್ಗದಲ್ಲಿ ನಡೆಸುವ 7 ಬಗೆಯ ತ್ಯಾಗಗಳು

ನಮ್ಮ ಆಧ್ಯಾತ್ಮ ಶಾಸ್ತ್ರದಲ್ಲಿ ತ್ಯಾಗವನ್ನು ಏಳು ಪ್ರಕಾರಗಳಲ್ಲಿ ವಿಂಗಡಿಸಿದ್ದಾರೆ. ಆ ಎಳು ತ್ಯಾಗಗಳನ್ನು ಪ್ರಪಂಚದ ಪ್ರತಿಯೊಬ್ಬರೂ ಸಹ ಆಚರಿಸಬಹುದಾಗಿದೆ ಹಾಗೂ ತನ್ಮೂಲಕ ಮಾನವ ಜೀವನದ ಸರ್ವೋಚ್ಚ ಪ್ರಯೋಜನವಾದ ಮೋಕ್ಷವನ್ನು ಪಡೆಯಬಹುದಾಗಿದೆ.

ಭಾರತೀಯ ಶಾಸ್ತ್ರ, ಸಾಹಿತ್ಯ, ಜಾನಪದ ಮುಂತಾದ ಎಲ್ಲ ಕಡೆಗಳಲ್ಲಿ ಆಧ್ಯಾತ್ಮಿಕ ಸಾಧನೆಯ ಅಂತಿಮ ಪ್ರಯೋಜನವಾದ “ಬಿಡುಗಡೆ”ಯನ್ನು ಮುಕ್ತಿ, ಭಗತ್ಪ್ರಾಪ್ತಿ, ನಿರ್ವಾಣ, ಮೋಕ್ಷ, ಕೈವಲ್ಯ ಮುಂತಾದ ಅನೇಕ ಹೆಸರುಗಳಲ್ಲಿ ವಿವಿಧ ಪ್ರಕಾರಗಳಲ್ಲಿ ಹೇಳಿದ್ದಾರೆ. ಅಂತಹ ಮುಕ್ತಿಯನ್ನು ಪಡೆಯಬೇಕಾದರೆ ಸಾಮಾಜಿಕ ಮತ್ತು ಸಾಂಸಾರಿಕ ಜೀವನವನ್ನು ಬಿಟ್ಟು ಕಾಡಿಗೆ ಹೋಗಿ ತಪಸ್ಸು ಮಾಡಬೇಕು ಅನ್ನುವ ಅಭಿಪ್ರಾಯ ಸಾಮಾನ್ಯ ಜನಮಾನಸದಲ್ಲಿ ಇದೆ. ಆದರೆ, ವಾಸ್ತವವಾಗಿ ಸಂಪೂರ್ಣವಾಗಿ ಲೌಕಿಕ ಜೀವನದಲ್ಲಿ ಇದ್ದುಕೊಂಡು ಎಲ್ಲರಂತೆ ಸಾಮಾನ್ಯ ಜೀವನ ನಡೆಸಿಕೊಂಡೇ ಆ ಪರಮಾತ್ಮ ಸಾಕ್ಷಾತ್ಕಾರವನ್ನು ಅಥವಾ ಮುಕ್ತಿಯನ್ನು ಪಡೆಯಲಿಕ್ಕೆ ಸಾಧ್ಯವಿದೆ. ತ್ಯಾಗವೇ ಆ ನಿಟ್ಟಿನ ಮುಖ್ಯ ಸಾಧನವಾಗಿದೆ.

ನಮ್ಮ ಆಧ್ಯಾತ್ಮ ಶಾಸ್ತ್ರದಲ್ಲಿ ತ್ಯಾಗವನ್ನು ಏಳು ಪ್ರಕಾರಗಳಲ್ಲಿ ವಿಂಗಡಿಸಿದ್ದಾರೆ. ಆ ಎಳು ತ್ಯಾಗಗಳನ್ನು ಪ್ರಪಂಚದ ಪ್ರತಿಯೊಬ್ಬರೂ ಸಹ ಆಚರಿಸಬಹುದಾಗಿದೆ ಹಾಗೂ ತನ್ಮೂಲಕ ಮಾನವ ಜೀವನದ ಸರ್ವೋಚ್ಚ ಪ್ರಯೋಜನವಾದ ಮೋಕ್ಷವನ್ನು ಪಡೆಯಬಹುದಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿರುವ 7 ತ್ಯಾಗಗಳು ಹೀಗಿವೆ:

1. ನಿಷಿದ್ಧ ಕರ್ಮಗಳ ಸಂಪೂರ್ಣ ತ್ಯಾಗ.
ಕಳ್ಳತನ, ವ್ಯಭಿಚಾರ, ಸುಳ್ಳು, ಕಪಟ, ಹಠ, ಬಲಾತ್ಕಾರ, ಹಿಂಸೆ, ಅಭಕ್ಷ್ಯ-ಭೋಜನ ಮತ್ತು ಪ್ರಮಾದ ಮುಂತಾದ ನಿಷಿದ್ಧ ಕರ್ಮಗಳನ್ನು ಕಾಯಾ-ವಾಚಾ-ಮನಸಾ ಈ ಮೂರರಲ್ಲಿ ಯಾವ ರೀತಿಯಿಂದಲೂ ಸಹ ಮಾಡದೇ ಇರುವುದು ಮೊದಲನೇ ಶ್ರೇಣಿಯ ತ್ಯಾಗವಾಗಿದೆ.

2. ಸಕಾಮ ಕರ್ಮಗಳ ತ್ಯಾಗ
ಹೆಂಡತಿ/ಗಂಡ, ಮಕ್ಕಳು, ವಿದ್ಯೆ, ಉದ್ಯೋಗ, ಆಸ್ತಿ ಪಾಸ್ತಿ ಮುಂತಾದ ಪ್ರಿಯ ವಸ್ತುಗಳನ್ನು ಪಡೆಯುವ ಉದ್ದೇಶದಿಂದ ಮತ್ತು ರೋಗ ರುಜಿನಾದಿಗಳಿಂದ ಪಾರಾಗುವ ಉದ್ದೇಶದಿಂದ ಮಾಡಲಾಗುವ ಪೂಜೆ, ಹೋಮ, ದಾನ, ಉಪಾಸನೆ, ಪ್ರಾರ್ಥನೆ, ದೇವರಲ್ಲಿ ಬೇಡಿಕೆಗಳನ್ನು ಸಲ್ಲಿಸುವುದು, ಹರಕೆ ಹೊತ್ತುಕೊಳ್ಳುವುದು, ದೇವರು ಒಳ್ಳೇದು ಮಾಡಲಿ ಅನ್ನುವ ಆಸೆಯಿಂದ ದೇವಸ್ಥಾನಗಳಿಗೆ ಹೋಗುವುದು ಇತ್ಯಾದಿ ”ಸಕಾಮ” ಅಂದರೆ ಫಲ ಪಡೆಯುವ ಕಾಮನೆಯನ್ನು ಇಟ್ಟುಕೊಂಡು ಮಾಡುವ ಕರ್ಮಗಳನ್ನು ಆಚರಿಸದೇ ಇರುವುದು ಎರಡನೇಯ ಶ್ರೇಣಿಯ ತ್ಯಾಗವಾಗಿದೆ.

3. ದುರಾಸೆಯ ಪೂರ್ಣ ತ್ಯಾಗ
ಗೌರವ, ಹೊಗಳಿಕೆ, ಪ್ರತಿಷ್ಥೆ, ಉದ್ಯೋಗ, ಹೆಂಡತಿ/ಗಂಡ ಮಕ್ಕಳು ಐಶ್ವರ್ಯ ಮುಂತಾದವುಗಳು ಪ್ರಾರಬ್ಧಕ್ಕೆ ತಕ್ಕಂತೆ ಪ್ರಾಪ್ತವಾಗಿರುತ್ತವೆ. ಅವುಗಳನ್ನು ಹೆಚ್ಚಿಸಿಕೊಳ್ಳುವ ಅಸೆ ಮತ್ತು ತನ್ಮೂಲಕ ಅಡ್ಡದಾರಿ ಹಿಡಿಯುವಿಕೆ ”ದುರಾಸೆಯೇ” ಆಗಿದೆ. ಅಂತಹ ದುರಾಸೆಯನ್ನು ತ್ಯಾಗ ಮಾಡುವುದು ಮೂರನೆಯ ಶ್ರೇಣಿಯ ತ್ಯಾಗವಾಗಿದೆ.

4. ಇತರರಿಂದ ಸೇವೆ ಮಾಡಿಸಿಕೊಳ್ಳುವುದರ ತ್ಯಾಗ
ತನ್ನ ಶಾರೀರಿಕ ಹಾಗೂ ಮಾನಸಿಕ ಸುಖಕ್ಕಾಗಿ ಬೇರೆಯವರಿಂದ ಹಣ ಮುಂತಾದ ಪದಾರ್ಥಗಳನ್ನು ಯಾಚಿಸುವುದು, ಅಥವಾ ಸೇವೆ ಮಾಡುವಂತೆ ಯಾಚಿಸುವುದು, ಯಾಚಿಸದೇ ಇದ್ದರೂ ಅನಾಯಾಸವಾಗಿ ದೊರೆತ ಪದಾರ್ಥಗಳನ್ನು/ಉಡುಗೊರೆಗಳನ್ನು ಸ್ವೀಕರಿಸುವುದು, ಅನಾಯಾಸವಾಗಿ ಒದಗಿ ಬಂಡ ಸೇವೆ/ಉಪಚಾರ ಮುಂತಾದವುಗಳನ್ನು ಮಾಡಿಸಿಕೊಳ್ಳುವುದು, ಬೇರೆಯವರಿಂದ ತನಗೆ ಉಪಯೋಗವಾಗಬಹುದು ಎಂಬ ಉದ್ದೇಶವನ್ನು ಮನಸ್ಸಿನಲ್ಲಿ ಹೊಂದಿರುವುದು ಇವೆಲ್ಲವುಗಳ ತ್ಯಾಗ* ಮಾಡುವುದು ನಾಲ್ಕನೆಯ ಹಂತದ ತ್ಯಾಗವಾಗಿದೆ.

5. ಸಮಸ್ತ ಕರ್ತವ್ಯಗಳಲ್ಲಿ ಆಲಸ್ಯ ಮತ್ತು ಫಲದ ಇಚ್ಛೆಯ ತ್ಯಾಗ
ಈಶ್ವರನಲ್ಲಿ ಭಕ್ತಿ , ದೇವತೆಗಳ ಪೂಜೆ, ತಂದೆ-ತಾಯಿ, ಗುರು ಹಿರಿಯರ ಶುಶ್ರೂಷೆ, ಯಜ್ಞ, ದಾನ, ತಪಸ್ಸು ಹಾಗೂ ವರ್ಣಾಶ್ರಮಕ್ಕೆ ಅನುಗುಣವಾದ ಉದ್ಯೋಗದ ಮೂಲಕ ಗೃಹಕೃತ್ಯಗಳ ನಿರ್ವಹಣೆ, ಶರೀರವನ್ನು ಸ್ವಸ್ಥವಾಗಿ ಇಟ್ಟುಕೊಳ್ಳಲು ಮಾಡಬೇಕಾದ ಕ್ರಿಯೆಗಳು ಮುಂತಾದ ಎಲ್ಲ ಕರ್ಮಗಳಲ್ಲಿ ಆಲಸ್ಯವನ್ನು ಹೊಂದಬಾರದು ಮತ್ತು ಅವುಗಳಿಂದ ಎನೂ ಪ್ರತಿಫಲಗಳನ್ನು ಅಪೇಕ್ಷಿಸಬಾರದು. ಇದು ತ್ಯಾಗದ ಐದನೆಯ ಹಂತವಾಗಿದೆ.

6. ಪ್ರಾಪಂಚಿಕವಾದ ಪದಾರ್ಥಗಳಲ್ಲಿ ಮತ್ತು ಕರ್ಮಗಳಲ್ಲಿ ಆಸಕ್ತಿ ಮತ್ತು ಮಮತ್ವದ ತ್ಯಾಗ
ಪ್ರಾಪಂಚಿಕವಾದ ಸಮಸ್ತ ವಸ್ತುಗಳು ಅಂದರೆ ಕುಟುಂಬ ಬಂಧು ಬಾಂಧವರು, ವಸ್ತುಗಳು ಆಸ್ತಿ ಪಾಸ್ತಿ, ಸಾಮಾಜಿಕ ಮಾನ ಸಮಾನ, ಪ್ರತಿಷ್ಥೆ, ವಡವೆ ವಸ್ತ್ರ ಮುಂತಾದ ಭೊಗರೂಪಿ ಪದಾರ್ಥಗಳೆಲ್ಲ ಸಮಯದ ಹೊಡೆತಕ್ಕೆ ಸಿಕ್ಕಿ ನಾಶವಾಗಿ ಹೋಗತಕ್ಕವುಗಳು. ಆದ್ದರಿಂದ ಆ ಸತ್ಯವನ್ನು ಮನದಟ್ಟು ಮಾಡಿಕೊಂಡು ಅವುಗಳ ಬಗ್ಗೆ ”ಮಮತ್ವ ಅಥವಾ ಮಮತೆ” ಅಂದರೆ ”ಅದು ನನ್ನದು” ಎಂಬ ಭಾವವನ್ನು ಹಾಗೂ ಅವುಗಳಲ್ಲಿ ಆಸಕ್ತಿಯನ್ನು ತೊರೆಯುವುದು ಆರನೆಯ ಶ್ರೇಣಿಯ ತ್ಯಾಗವಾಗಿದೆ

7. ಸಂಸಾರ, ಶರೀರ ಮಾತ್ತು ಎಲ್ಲಾ ಕರ್ಮಗಳಲ್ಲಿ ಸೂಕ್ಷ್ಮವಾಸನಾ ಮತ್ತು ಅಹಂಭಾವದ ತ್ಯಾಗ
ಸಾಂಸಾರಿಕ ಪದಾರ್ಥಗಳೆಲ್ಲ ಮಾಯೆಯ ಕಾರ್ಯವಾದ್ದರಿಂದ ಅವುಗಳು ಅನಿತ್ಯವಾಗಿವೆ. ಆದರೆ ಅವುಗಳಲ್ಲೆಲ್ಲ ಏಕ ಮಾತ್ರ ಸಚ್ಚಿದಾನಂದ ರೂಪಿಯಾದ ಪರಮಾತ್ಮ ಅಥವಾ ಆತ್ಮತತ್ವವೇ ವ್ಯಾಪಿಸಿದೆ, ಎಲ್ಲೆಲ್ಲಿಯೂ ಆತ್ಮವೇ ವ್ಯಾಪಿಸಿಕೊಂಡಿದೆ ಎಂಬ ಮನವರಿಕೆ ಮಾಡಿಕೊಂಡು ಅದರ ಹೊರತಾಗಿ ನಾಮ ರೂಪಗಳ ಆಧಾರದ ಮೇಲೆ ಮತ್ತೊಂದು ವಸ್ತುವನ್ನು ಗುರುತಿಸದೆ ಎಲ್ಲದರಲ್ಲಿ ಏಕತೆಯನ್ನು ಕಂಡು ವಸ್ತು ಮತ್ತು ಕರ್ಮಗಲ್ಲಿನ ಸೂಕ್ಷ್ಮವಾಸನೆ ಅಂದರೆ ವಸ್ತು-ವಿಷಯಗಳ ಸಂಸ್ಕಾರ ರೂಪಿಯಾದ ನಾಮ-ರೂಪಾತ್ಮಕ ಚಿತ್ರವನ್ನು ಹೊಂದದೇ ಇರುವುದು, ಹಾಗೂ ಶರೀರದಲ್ಲಿ ಅಹಂಭಾವ ಸಂಪೂರ್ಣವಾಗಿ ಇಲ್ಲದಂತಾಗಿ ದೇಹ, ಮನಸ್ಸು ಮತ್ತು ವಾಕ್ಕು ಈ ಮೂರರಿಂದಲೂ ನಡೆಯುವ ಕರ್ಮಗಳಲ್ಲಿ ”ಕರ್ತೃತ್ವ ಭಾವ” ಅಂದರೆ ”ನಾನು ಅವುಗಳನ್ನು ಮಾಡಿದೆ” ಎಂಬ ಭಾವವನ್ನು ತ್ಯಜಿಸುವುದು ಏಳನೆಯ ಹಂತದ ತ್ಯಾಗವಾಗಿದೆ.
ಪ್ರಾಪಂಚಿಕ ವಸ್ತುಗಳಲ್ಲಿ ಮತ್ತು ಕರ್ಮಗಳಲ್ಲಿ ಆಸೆ ಮತ್ತು ಫಲಾಪೇಕ್ಷೆ, ಮಮತೆ ಹಾಗೂ ಆಸಕ್ತಿಗಳು ಸಂಪೂರ್ಣವಾಗಿ ನಾಶವಾಗಿದ್ದರೂ ಸಹ ಅವುಗಳ ಮೇಲೆ ಸೂಕ್ಷ್ಮ ಅಭಿಲಾಷೆ, ಮತ್ತು ಕರ್ತೃತ್ವದ ಅಭಿಮಾನ ಹಾಗೆಯೇ ಉಳಿದುಕೊಂಡಿರುತ್ತದೆ. ಆದುದರಿಂದ ಸೂಕ್ಷ್ಮ ಇಚ್ಛೆ ಮತ್ತು ಅಹಂಭಾವಗಳ ತ್ಯಾಗವನ್ನು ಏಳನೆಯ ಹಂತದ ತ್ಯಾಗವೆಂದು ಹೇಳಿದೆ.

ಈ ರೀತಿಯಲ್ಲಿ ಏಳು ಹಂತದ ತ್ಯಾಗವನ್ನು ರೂಢಿಸಿಕೊಂಡಲ್ಲಿ ಅರ್ಜಿತ, ಸಂಚಿತ ಮತ್ತು ಪ್ರಾರಬ್ಧ ಎಂಬ ಮೂರೂ ರೀತಿಯ ಕರ್ಮಗಳು ನಾಶವಾಗುತ್ತವೆ. ಇಂತಹ ತ್ಯಾಗದ ಪಾಲನೆಯಿಂದ ಎಲ್ಲ ರೀತಿಯ ಕರ್ಮಗಳನ್ನು ಆಚರಿಸುತ್ತಾ, ಲೋಕವ್ಯವಹಾರಗಳನ್ನು ಮಾಡುತ್ತಲೇ, ಸಾಂಸಾರಿಕ ಜೀವನದಲ್ಲಿ ಇದ್ದುಕೊಂಡೇ ಸುಲಭವಾಗಿ ಮುಕ್ತಿಯನ್ನು ಹೊಂದಬಹುದಾಗಿದೆ. ಆದ್ದರಿಂದ ತ್ಯಾಗವೇ ಎಲ್ಲಕ್ಕಿಂತ ಮಿಗಿಲಾದ ತಪಸ್ಸು ಎಂದು ಕರೆಯಲ್ಪಟ್ಟಿದೆ.

1 Comment

  1. ತುಂಬಾ ಅರ್ಥಪೂರ್ಣ
    ಧರ್ಮ ಕಾಪಾಡುವ
    ಸರಳವಾಗಿ
    ಸರ್ವರಿಗೂ
    ತಿಳಿನೀಡುವ ಕರ್ಯ

Leave a Reply