ರೈತನ ಕಾಳು, ದೇವರ ಕಾಳು : ನಾನಕರ ಬಾಲ್ಯದ ಒಂದು ಕಥೆ

ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ ಕಾಳುಗಳನ್ನು ತಿನ್ನತೊಡಗಿದವು…. 

nanak

ಒಂದೂರಿನಲ್ಲಿ ಒಬ್ಬ ಬಾಲಕ. ಅವನು ವ್ಯವಹಾರ ಜ್ಞಾನ ಕಲಿಯಲೆಂದು ತಂದೆ ಶಾಲೆಗೆ ಸೇರಿಸಿದರು. ಅವನು ತಪ್ಪಿಸಿಕೊಂಡು ಕಾಡು ಸೇರುತ್ತಿದ್ದ, ಭಗವಂತನನ್ನು ಧ್ಯಾನಿಸುತ್ತಾ ಕುಳಿತುಬಿಡುತ್ತಿದ್ದ.

ಒಮ್ಮೆ ಅದೇ ಊರಿನ ವೃದ್ಧನೊಬ್ಬ ತೀರ್ಥಯಾತ್ರೆ ಹೊರಟ. ತನ್ನ ಗದ್ದೆ ನೊಡಿಕೊಳ್ಳಲು ಒಂದು ಜನ ಬೇಕಾಗಿತ್ತು. ಆ ಬಾಲಕ ಬಹಳ ಒಳ್ಳೆಯ, ವಿನಯವಂತ ಹುಡುಗನೆಂದು ಹೆಸರಾಗಿದ್ದ. ವೃದ್ಧ ಅವನ ಬಳಿ ಹೋಗಿ, “ನೋಡು! ನಾನು ತೀರ್ಥಯಾತ್ರೆಗೆ ಹೋಗುತ್ತಿದ್ದೇನೆ. ನಾಲ್ಕೈದು ದಿನಗಳಲ್ಲಿ ಮರಳಿ ಬಂದುಬಿಡುತ್ತೇನೆ. ಅಲ್ಲಿಯವರೆಗೆ ನನ್ನ ಹೊಲವನ್ನು ಕಾಯುತ್ತಿರು.  ನಿನಗೆ ಚೀಲದ ತುಂಬ ಗೋಧಿ ಕೊಡುತ್ತೇನೆ. ನನ್ನ ಹೊಲದಲ್ಲಿ ಹತ್ತು ಚೀಲ ಗೋಧಿ ಬೆಳೆಯುತ್ತದೆ” ಎಂದ.

ಬಾಲಕ ಸಂತೋಷದಿಂದಲೇ ಅದಕ್ಕೆ ಒಪ್ಪಿಕೊಂಡ. ಹೊಲದ ದಿಬ್ಬದ ಮೇಲೆ ಕುಳಿತು ಕಾಯತೊಡಗಿದ. ಹೊಲದಲ್ಲಿ ಸಾಕಷ್ಟು ಗೋಧಿಯ ತೆನೆಗಳು ಬಂದಿದ್ದವು. ಬಾಲಕ ನೋಡುತ್ತಿದ್ದಂತೆಯೇ ಹಕ್ಕಿಗಳು ಗುಂಪು ಗುಂಪಾಗಿ ಅಲ್ಲಿ ಬಂದವು. ತೆನೆಯಿಂದ ಗೋಧಿಯ ಕಾಳುಗಳನ್ನು ತಿನ್ನತೊಡಗಿದವು. 

ಬಾಲಕನಿಗೆ ಅವನ್ನು ಓಡಿಸಲು ಮನಸ್ಸಾಗಲಿಲ್ಲ. ಆಕಾಶದೆಡೆ ಮುಖ ಮಾಡಿ ಕಣ್ಮುಚ್ಚಿದ. “ದೇವರೇ, ರೈತನ ಗೋಧಿಯ ರಕ್ಷಣೆ ಮಾಡು. ಹಕ್ಕಿಗಳಿಗೆ ನಿನ್ನ ಕಾಳುಗಳನ್ನು ತಿನ್ನಿಸು” ಎಂದು ಪ್ರಾರ್ಥನೆ ಮಾಡಿದ. ಹೀಗೇ ನಾಲ್ಕು ದಿನ ಕಳೆಯಿತು. ಹಕ್ಕಿಗಳು ಪ್ರತಿ ದಿನವೂ ಬಂದು ಪ್ರತಿದಿನ ಕಾಳು ತಿನ್ನುತ್ತಿದ್ದವು. 
ನಾಲ್ಕು ದಿನಗಳ ನಂತರ ರೈತನು ಮರಳಿ ಬಂದ. ಹೊಲದಲ್ಲಿನ ಬೆಳೆಯ ಮೇಲಿನ ಹಕ್ಕಿಗಳ ಗುಂಪನ್ನು ನೋಡಿ ಅವನಿಗೆ ವಿಪರೀತ ಕೋಪ ಬಂತು.

ಬಾಲಕ ಅವನನ್ನು ಸಮಾಧಾನಪಡಿಸುತ್ತಾ, “ಅಜ್ಜ! ಕೋಪ ಬೇಡ… ಪೈರು ಕೊಯ್ದು, ಕಾಳಿನ ಎಣಿಕೆ ಮಾಡಿ. ನಾನು ದೇವರ ಕಾಳನ್ನು ಹಕ್ಕಿಗಳಿಗೆ ತಿನಿಸಿದ್ದೇನೆ. ನಿಮ್ಮ ಕಾಳು ಹಾಗೇ ಇದೆ” ಎಂದ.
ಅದರಂತೆ ರೈತ ಹೊಲದ ಬೆಳೆಯನ್ನು ಕೊಯ್ದು. ಕಾಳುಗಳನ್ನು ಬೇರ್ಪಡಿಸಿ, ಅಳೆದು ನೋಡಿದ. ಏನಾಶ್ಚರ್ಯ! ಹನ್ನೊಂದು ಗೋಧಿಯ ಚೀಲಗಳು ತುಂಬಿದ್ದವು!! 

ಬಾಲಕ ಹೇಳಿದಂತೆಯೇ ಹಕ್ಕಿಗಳು ತಿಂದಿದ್ದು ದೇವರ ಕಾಳು. ರೈತನಿಗೆ ಒಂದು ಮೂಟೆ ಹೆಚ್ಚು ಪಾಲು!!
ಇದು ಸಾಧ್ಯವಾಗಿದ್ದು ಬಾಲಕನ ಶ್ರದ್ಧೆಯಿಂದ. ಈ ಬಾಲಕ ಯಾರು ಗೊತ್ತೆ? ಸಿಕ್ಖ್ ಮತದ ಸ್ಥಾಪಕ ಗುರು ನಾನಕ್!

“ನಮ್ಮ ಶರೀರ ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೇ ಈ ಹೊಲದಲ್ಲಿ ಬಿತ್ತುವ ಬೀಜಗಳು. ಈ ಬೀಜಗಳು ಮೊಳಕೆ ಒಡೆಯುವುದು ಪ್ರೇಮದಿಂದ. ಅರಳಿ ಫಲ ನೀಡುವುದೂ ಪ್ರೇಮದಿಂದಲೇ. ನಮ್ಮ ಹೊಲದಿಂದ ಈ ರೀತಿಯಲ್ಲಿ ಕುಟುಂಬವನ್ನು ಪೊರೆಯುವಷ್ಟು ಆದಾಯ ಹೊಂದಿಸುವ ಫಸಲು ತೆಗೆಯಬಹುದು” ಎನ್ನುತ್ತಿದ್ದ ಗುರು ನಾನಕ್, ಬದುಕಿದ್ದು ಅಕ್ಷರಶಃ ಹಾಗೆಯೇ.

Leave a Reply