ಕೆಲಸದಲ್ಲಿ ಶ್ರದ್ಧೆ ಮೂಡುವುದು ಹೇಗೆ? : ಭಗವದ್ಗೀತೆಯ ಬೋಧನೆ

“ಒಂದು ಕೆಲಸವನ್ನು ಸಮರ್ಥವಾಗಿ ನೆರವೇರಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳು: ಸಂಪನ್ಮೂಲದ ಉಪಯೋಗ, ಕಾಯಕ ಶ್ರದ್ಧೆ, ಕಾರ್ಯ ಬದ್ಧತೆ ಹಾಗೂ ಕಾಯಕ ಸಂಸ್ಕೃತಿ” ಅನ್ನುತ್ತದೆ ಭಗವದ್ಗೀತೆ ~ ಸಾ.ಹಿರಣ್ಮಯಿ

ಗವದ್ಗೀತೆಯಲ್ಲಿ ಗೀತಾಚಾರ್ಯನು ಅರ್ಜುನನಿಗೆ ನೀಡುವ ಉಪದೇಶವನ್ನು ನಾವು ಕಾರ್ಯಸಾಧನೆಯ ಯಶಸ್ವೀಸೂತ್ರಗಳನ್ನಾಗಿಯೂ ಬಳಸಿಕೊಳ್ಳಬಹುದು. ಭಗವದ್ಗೀತೆಯಿಂದ ನಾವು ಗ್ರಹಿಸಬಹುದಾದಂತೆ, ಒಂದು ಕೆಲಸವನ್ನು ಸಮರ್ಥವಾಗಿ ನೆರವೇರಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳು: ಸಂಪನ್ಮೂಲದ ಉಪಯೋಗ, ಕಾಯಕ ಶ್ರದ್ಧೆ, ಕಾರ್ಯ ಬದ್ಧತೆ ಹಾಗೂ ಕಾಯಕ ಸಂಸ್ಕೃತಿ.

ಸೀಮಿತ ಸಂಪನ್ಮೂಲದ ಉಪಯೋಗ
ಮಹಾಭಾರತ ಯುದ್ಧಾರಂಭಕ್ಕೆ ಮೊದಲು ದುರಾಸೆಯ ದುರ್ಯೋಧನನು ಕೃಷ್ಣನ ಬಹುದೊಡ್ಡ ಯಾದವ ಸೇನೆಯನ್ನು ತನಗಾಗಿ ಕೇಳಿ ಪಡೆಯುತ್ತಾನೆ. ಆದರೆ ಅರ್ಜುನನು ಸರ್ವಸಮರ್ಥನಾದ ಕೃಷ್ಣನೊಬ್ಬನೇ ತನಗೆ ಸಾಕೆಂದು ಆಯ್ದುಕೊಳ್ಳುತ್ತಾನೆ. ಕಾರ್ಯ ಸಾಧನೆಯ ಛಲವುಳ್ಳ ಜಾಣನು ಜ್ಞಾನವನ್ನು ಆಯ್ದುಕೊಂಡರೆ, ಮೂರ್ಖನು ಸಂಖ್ಯೆಯನ್ನಷ್ಟೆ ಗಮನಿಸುತ್ತಾನೆ. ಸಂಪನ್ಮೂಲ ಕ್ರೋಢೀಕರಿಸುವಾಗ ನಾವು ಅನುಸರಿಸಬೇಕಾದ ಮಾನದಂಡವನ್ನಿದು ಸೂಚಿಸುತ್ತದೆ. ಸಂಖ್ಯೆ ಎಷ್ಟಿದ್ದರೂ ಅದರ ಉಪಯೋಗದ ಅರಿವಿಲ್ಲದೆ ಹೋದರೆ ಎಲ್ಲವೂ ವ್ಯರ್ಥ. ಹಾಗೆಯೇ ಸೀಮಿತ ಸಂಪನ್ಮೂಲವನ್ನೂ ಉನ್ನತ ಕಾರ್ಯ ಸಾಧನೆಗೆ ಬಳಸಿಕೊಳ್ಳಲು ಸಾಧ್ಯ ಎಂಬುದನ್ನಿದು ಸಾಬೀತು ಮಾಡಿ ತೋರಿಸುತ್ತದೆ.

ಕಾಯಕ ಶ್ರದ್ಧೆ
ನಾವು ಬಹುತೇಕ ಕೆಲಸಗಳನ್ನು ಗೊಣಗಿಕೊಂಡೇ ಮಾಡುತ್ತೇವೆ. ನಮ್ಮ ಹೊಟ್ಟೆ ಹೊರೆಯಲಿಕ್ಕೆ, ನಮ್ಮ ಸಂಸಾರ ಸಂಭಾಳಿಸಲಿಕ್ಕೆಂದೇ ನಾವು ದುಡಿಯುತ್ತಿದ್ದರೂ ಮತ್ಯಾರದೋ ಉಪಕಾರಕ್ಕೆ ಜೀವ ತೇಯುತ್ತಿದ್ದೇವೆ ಅನ್ನುವ ಅಸಹನೆಯನ್ನು ಇಟ್ಟುಕೊಂಡಿರುತ್ತೇವೆ. ಕೇವಲ ನಾನು – ನನ್ನದೆನ್ನುವ ಸ್ವಾರ್ಥ ಮನಸ್ಥಿತಿಯುಳ್ಳವರಷ್ಟೆ ಹೀಗೆ ಯೋಚಿಸುತ್ತಾರೆ. ಕೃಷ್ಣನು ಅರ್ಜುನನಿಗೆ ‘ಬಂಧು – ಪರಿವಾರ ಎಂಬೆಲ್ಲ ಪರಿಗಣನೆಯನ್ನು ತೊರೆದು, ಜನ ಹಿತಕ್ಕಾಗಿ ಕಾರ್ಯೋನ್ಮುಖನಾಗು’ ಎಂದು ಸೂಚಿಸುತ್ತಾನೆ. ತಾನು ಮಾಡಲು ಹೊರಟಿರುವ ಕೆಲಸವನ್ನು ಶ್ರದ್ಧೆಯಿಂದ, ಗೌರವದಿಂದ ಮಾಡುವಂತೆ ಸೂಚಿಸುತ್ತಾನೆ.

ಕಾರ್ಯಬದ್ಧತೆ
ಭಗವದ್ಗೀತೆಯು ಫಲಾಫಲಗಳನ್ನು ಯೋಚಿಸದೆ ಕೆಲಸ ಮಾಡಬೇಕೆಂದು ಸೂಚಿಸುತ್ತದೆ. ಪ್ರತಿಯೊಂದು ಕರ್ಮಕ್ಕೂ ಫಲವಿದ್ದೇ ಇರುತ್ತದೆ ಎಂದಾದಮೇಲೆ ಅದು ಸಕಾಲದಲ್ಲಿ ಸೂಕ್ತ ರೂಪದಲ್ಲಿ ಬಂದೇ ತೀರುತ್ತದೆ. ಆದರೆ ಆ ಫಲವನ್ನೆ ಚಿಂತಿಸುತ್ತ, ಅದಕ್ಕಾಗಿಯೇ ಮಾಡುವ ಕೆಲಸವು ಪರಿಣಾಮಕಾರಿಯಾಗುವುದಿಲ್ಲ. ಕಾರ್ಯಬದ್ಧತೆಯುಳ್ಳವರು ಫಲದ ಬಗ್ಗೆ ಚಿಂತಿಸಕೂಡದು. – ಇದು ಗೀತೆಯ ಸರ್ವೋತ್ಕೃಷ್ಟ ಪಾಠಗಳಲ್ಲಿ ಒಂದಾಗಿದೆ.
ನಿಷ್ಕಾಮ ಮನೋಭಾವದಿಂದ ಮಾಡುವ ಯಾವುದೇ ಕೆಲಸವು ನಮಗೆ ಸಹಜವಾಗಿಯೇ ಸಂತೃಪ್ತಿಯನ್ನು ನೀಡುತ್ತದೆ. ಅಲ್ಲಿ ಯಾವುದೇ ಗೊಣಗುವಿಕೆ ಅಥವಾ ಹಿಂಜರಿಕೆ ಇರುವುದಿಲ್ಲ. ಅಹಮಿಕೆಯ ನಾಶಕ್ಕೆ ಇದು ಅತ್ಯುತ್ತಮ ಮಾರ್ಗವೂ ಆಗಿದೆ.

ಕಾಯಕ ಸಂಸ್ಕೃತಿ
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದೈವೀ ಸಂಪದ ಹಾಗೂ ಆಸುರೀ ಸಂಪದಗಳೆಂಬ ಎರಡು ಬಗೆಯ ಕಾಯಕ ಸಂಸ್ಕೃತಿಗಳ ಕುರಿತು ಮಾತನಾಡುತ್ತಾನೆ. ಕೊಟ್ಟ ಕೆಲಸವನ್ನು ನೆರವೇರಿಸಲು ಅನುಸರಿಸುವ ಮಾರ್ಗವು ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ.
ನಿರ್ಭೀತ, ಪರಿಶುದ್ಧ, ಸ್ವನಿಯಂತ್ರಣವುಳ್ಳ, ತ್ಯಾಗ ಮನೋಭಾವದ, ನಿಸ್ವಾರ್ಥ, ಶಾಮತ, ದೋಷದೃಷ್ಟಿಯಿಲ್ಲದ, ದುರಾಸೆಯಿಲ್ಲದ, ವಿನಯವಂತಿಕೆಯ ಹಾಗೂ ಮದ ಮತ್ಸರಗಳಿಲ್ಲದ ಮನಸ್ಥಿತಿಯಿಂದ ಮಾಡುವ ಕೆಲಸವು ದೈವೀ ಸಂಪದ ವರ್ಗಕ್ಕೆ ಸೇರುತ್ತದೆ.

ಅಹಂಕಾರ, ಪೊಳ್ಳು ಪ್ರತಿಷ್ಠೆ, ಸ್ವಾರ್ಥ, ಮಾತ್ಸರ್ಯ, ಶ್ರದ್ಧಾಹೀನತೆ, ಸ್ವಹಿತಾಸಕ್ತಿಗಳಿಂದ ಮಾಡುವ ಕೆಲಸವು ಆಸುರೀ ಸಂಪದ ವರ್ಗಕ್ಕೆ ಸೇರುತ್ತದೆ.
ಹೀಗೆ ಕಾಯಕ ಸಂಸ್ಕೃತಿಯನ್ನು ವಿಭಜಿಸಿ ಹೇಳುವ ಕೃಷ್ಣ, ದೈವೀ ಸಂಪದ ವರ್ಗಕ್ಕೆ ಸೇರುವಂತೆ ಮನಸ್ಸನ್ನು ಸಜ್ಜುಗೊಳಿಸುವುದು ಹೇಗೆಂಬುದನ್ನೂ ವಿವರಿಸುತ್ತಾನೆ. ನೈತಿಕ ಸ್ಥೈರ್ಯದಿಂದ ನಡೆಸುವ ಯಾವುದೇ ಕೆಲಸಕ್ಕೆ ಸೋಲಿಲ್ಲ ಎಂಬುದನ್ನು ಒತ್ತಿ ಹೇಳುವ ಕೃಷ್ಣ, ಯಶಸ್ಸಿನ ಸಕಲ ಸೂತ್ರಗಳನ್ನೂ ಈ ಒಂದೇ ಹೇಳಿಕೆಯ ಮೂಲಕ ಕಟ್ಟಿಕೊಡುತ್ತಾನೆ.

1 Comment

Leave a Reply