ಅತ್ಯಾಚಾರಕ್ಕೊಳಗಾದ ಅರಹಂತೆ ಮತ್ತು ಬುದ್ಧನ ವೈಶಾಲ್ಯತೆ : ಉತ್ಪಲಾವರ್ಣೆಯ ಕಥೆ

ಉತ್ಪಲಾವರ್ಣೆ ಬಿಕ್ಖುಣಿಯಾದುದು ಶ್ರೀಮಂತನ ದಾಯಾದಿಗಳಿಗೆ ಸರಿ ಕಾಣಲಿಲ್ಲ. ತಮ್ಮ ಮನೆತನದ ಹೆಣ್ಣು ಕೂದಲು ಬೋಳಿಸಿಕೊಂಡು ಸನ್ಯಾಸಿನಿಯಾಗುವುದನ್ನು ಅವರು ಸಹಿಸಲಿಲ್ಲ. ಏನಾದರೂ ಮಾಡಿ ತಮ್ಮ ಅಸಮಾಧಾನವನ್ನು ಸ್ಪಷ್ಟಪಡಿಸಬೇಕು ಮತ್ತು ಮನೆತನದ ಮರ್ಯಾದೆ ತೆಗೆದುದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಅವರು ನಿರ್ಧರಿಸಿದರು. ಅವರಲ್ಲೊಬ್ಬ ಸಮಯಸಾಧಿಸಿ ಅವಳ ಮೇಲೆ ಅತ್ಯಾಚಾರವನ್ನೆಸಗಿಯೂ ಬಿಟ್ಟ…. ~ ಚೇತನಾ ತೀರ್ಥಹಳ್ಳಿ

p26

ಶ್ರಾವಸ್ತಿ ಶ್ರೀಮಂತ ನಗರ. ಆ ನಗರದಲ್ಲೊಬ್ಬ ಶ್ರೀಮಂತ ವ್ಯಾಪಾರಿ. ಅವನಿಗೊಬ್ಬಳು ಮಗಳಿದ್ದಳು. ಹೆಸರು ಉತ್ಪಲಾವರ್ಣಾ. ಆ ಹೆಸರನ್ನು ಅವಳಿಗೆ ಅನ್ವರ್ಥಕವಾಗಿಯೇ ಇಟ್ಟಿದ್ದರು. ನೀಲಿ ಕಮಲದಂತೆ ಸುಕೋಮಲೆಯೂ ಮಧುರಳೂ ಆಗಿದ್ದಳಾಕೆ. ಉತ್ಪಲಾವರ್ಣಾ ಮನೆ ಮಂದಿಯೆಲ್ಲರ ಕಣ್ಮಣಿಯಾಗಿ ಬೆಳೆದಳು. ಅವಳು ಯಾರನ್ನೂ ಅಪ್ಪಿತಪ್ಪಿಯೂ ನೋಯಿಸುತ್ತಿರಲಿಲ್ಲ. ಬೀದಿಯ ಮೇಲೆ ಅನಾಥವಾಗಿ ಕಂಡು ಪಶು ಪಕ್ಷಿಗಳಿಗೆಲ್ಲ ಮನೆಯ ಹಿತ್ತಲಲ್ಲಿ ನೆಲೆ ಒದಗಿಸಿಕೊಡುತ್ತಿದ್ದಳು. ಅವಕ್ಕೆ ಆರೈಕೆ ನೀಡಿ, ಅವು ತಮ್ಮನ್ನು ಹೊರೆದುಕೊಳ್ಳಲು ಸಮರ್ಥವಾದ ಕೂಡಲೆ ಕಳಿಸಿಬಿಡುತ್ತಲೂ ಇದ್ದಳು! ಅಂಥದೊಂದು ನಿರ್ಲಿಪ್ತತೆ ಅವಳಲ್ಲಿ ಬಾಲ್ಯದಿಂದಲೇ ಬೆಳೆದುಬಂದಿತ್ತು.

ಉತ್ಪಲಾವರ್ಣಾಳ ತಂದೆ ಆಕೆಗೆ ಒಳ್ಳೆಯ ಶಿಕ್ಷಣ ಒದಗಿಸಿದ. ಸಂಗೀತ, ನೃತ್ಯಗಳಲ್ಲಿಯೂ ಅವಳು ತರಬೇತಿ ಪಡೆದಳು. ಈ ಎಲ್ಲದರ ಜೊತೆ ಜೊತೆಯಲ್ಲಿಯೇ ಉತ್ಪಲೆ ತನ್ನ ತಂದೆಯೊಡನೆ ಸೇವಾ ಕಾರ್ಯಗಳಲ್ಲಿಯೂ ತೊಡಗಿಕೊಳ್ಳುತ್ತಿದ್ದಳು. ಅವಳ ತಂದೆ ಬುದ್ಧಾನುಯಾಯಿಯಾಗಿದ್ದ. ಆಗಾಗ ಬಿಕ್ಖುಗಳನ್ನು ಕರೆದು ಔತಣವೀಯುತ್ತಿದ್ದ. ಉತ್ಪಲಾವರ್ಣಾ ಆ ಬಿಕ್ಖುಗಳೊಡನೆ ರೋಗಿಗಳ ಶುಷ್ರೂಶೆ ಮತ್ತಿತರ ಸೇವಾಕಾರ್ಯಗಳಿಗೆಂದು ಹೊರಟುಬಿಡುತ್ತಿದ್ದಳು.

ಉತ್ಪಲಾವರ್ಣಾ ಬೆಳೆದು ತಾರುಣ್ಯಕ್ಕೆ ಕಾಲಿಡುತ್ತಿದ್ದಂತೆ ಆಕೆಯ ಸತ್ಕಾರ್ಯಕ್ಕೊಂದು ತಡೆ ಆರಂಭವಾಯ್ತು. ಅವಳ ಸೌಂದರ್ಯವೇ ಆಕೆಗೆ ಅಡ್ಡಿಯಾಗತೊಡಗಿತು. ಉತ್ಪಲೆಯನ್ನು ನೋಡುವ, ಮಾತನಾಡಿಸುವ ಆಸೆಯಿಂದ ಕೆಲವು ಪುರುಷರು ಅನಾರೋಗ್ಯದ ನೆವ ಹೇಳಿಯೋ ಸಹಾಯದ ಯಾಚನೆ ಮಾಡಿಯೋ ಅವಳಿದ್ದಲ್ಲಿಗೆ ಬರತೊಡಗಿದರು. ಇದರಿಂದ ಸಂಘದಲ್ಲಿ ಚಡಪಡಿಕೆ ಶುರುವಾಯ್ತು. ಈ ಸಂಗತಿ ಉತ್ಪಲೆಯ ತಂದೆಯನ್ನೂ ತಲುಪಿತು. ಆತನಿಗೆ ತನ್ನ ಮಗಳು ಮದುವೆಯ ವಯಸ್ಸಿಗೆ ಬಂದಿದ್ದಾಳೆಂದು ಹೊಳೆದಿದ್ದು ಆವಾಗಲೇ! ಅಲ್ಲಿಯವರೆಗೆ ಆತ ತನ್ನ ಮಗಳನ್ನು ಪುಟ್ಟ ಹುಡುಗಿಯೆಂದೇ ಭಾವಿಸುತ್ತಿದ್ದ, ಅಷ್ಟು ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದ.

ಆದರೀಗ ಮಗಳಿಗೆ ಮದುವೆ ಮಾಡಬೇಕಾದ ಕಾಲ ಕಣ್ಮುಂದೆ ಬಂದಿತ್ತು. ಮನೆಯರೊಡನೆ ಚರ್ಚಿಸಿ, ನೆರೆಯೂರಿನ ಶ್ರೀಮಂತರ ಕುಟುಂಬಗಳಿಗೆಲ್ಲ ಓಲೆ ಕಳಿಸಿದ. ಆಯಾ ಕುಟುಂಬಗಳ ವಿವಾಹ ಯೋಗ್ಯ ಯುವಕರು ನಾ ಮುಂದು ತಾ ಮುಂದು ಎಂದು ಉತ್ಪಲೆಯನ್ನು ವಿವಾಹವಾಗುವ ಪೈಪೋಟಿಗೆ ಬಿದ್ದರು. ಅಲ್ಲೊಂದು ಸಂಘರ್ಷವೇ ಏರ್ಪಡುವಷ್ಟು ಸ್ಪರ್ಧೆ ಉಂಟಾಗಿಹೋಯಿತು!

ಇದೆಲ್ಲವನ್ನೂ ಕಂಡು ಉತ್ಪಲಾವರ್ಣಾ ಬೇಸರಗೊಂಡಳು. ಇಂದಲ್ಲ ನಾಳೆ ನಶಿಸಿ ಹೋಗುವ ಸೌಂದರ್ಯಕ್ಕೆ ಈ ಜನ ಯಾಕಿಷ್ಟು ಬೆಲೆ ಕೊಡುತ್ತಾರೆ ಎಂದು ಯೋಚಿಸತೊಡಗಿದಳು. ಇರುವ ಒಂದು ಜನ್ಮವನ್ನು ಸರಿಯಾಗಿ ಬಳಸಿಕೊಳ್ಳಲು ಬಾರದ ಜನರೇ ತುಂಬಿರುವ ಸಂಸಾರದಲ್ಲಿ ಇರುವುದು ವ್ಯರ್ಥವೆನ್ನಿಸಿತು ಉತ್ಪಲೆಗೆ. ಒಂದು ವಾರ ಪೂರ್ತಿ ಚಿಂತಿಸಿ ದೃಢ ನಿರ್ಧಾರಕ್ಕೆ ಬಂದಳು. ತಂದೆಯ ಬಳಿ ಬಂದು, `ತಂದೆಯೇ, ನಾನು ಮದುವೆಯಾಗುವುದಿಲ್ಲ. ನನ್ನನ್ನು ಬಿಕ್ಖುಣಿ ಸಂಘಕ್ಕೆ ಸೇರಿಸು’ ಎಂದಳು. ಮಗಳ ಮಾತನ್ನು ಕೇಳಿದ ಶ್ರೀಮಂತನಿಗೆ ಅವಳ ಮನಸ್ಸನ್ನು ಅರಿಯುವುದು ಕಷ್ಟವೇನಾಗಲಿಲ್ಲ. ತನ್ನ ಮಗಳು ಏನನ್ನೇ ಮಾತನಾಡಿದರೂ ಯಾವ ಕೆಲಸವನ್ನೇ ಮಾಡಿದರೂ ಸರಿಯಾಗಿ ಯೋಚಿಸಿಯೇ ಮಾಡುವಂಥವಳು ಎಂಬ ಅಚಲ ವಿಶ್ವಾಸ ಅವನಲ್ಲಿತ್ತು. ಅದರಂತೆ ಆತ ಭಂತೇ ಗಣಕ್ಕೆಲ್ಲ  ಔತಣ ಏರ್ಪಡಿಸಿ, ಮಗಳ ಮದುವೆ ಹಾಗೂ ಒಡವೆಗಳಿಗೆಂದು ತೆಗೆದಿಟ್ಟಿದ್ದ ಹಣವನ್ನೆಲ್ಲ ದಾನ ನೀಡಿ, ಅತ್ಯಂತ ವಿಜೃಂಭಣೆಯಿಂದ ಉತ್ಪಲೆಯನ್ನು ಬಿಕ್ಖುಣಿ ಸಂಘಕ್ಕೆ ಸೇರಿಸಿದ.

ಆದರೆ ಶ್ರೀಮಂತನ ಈ ಕೃತ್ಯ ಅವನ ದಾಯಾದಿಗಳಿಗೆ ಸರಿ ಕಾಣಲಿಲ್ಲ. ತಮ್ಮ ಮನೆತನದ ಹೆಣ್ಣು ಕೂದಲು ಬೋಳಿಸಿಕೊಂಡು ಸನ್ಯಾಸಿನಿಯಾಗುವುದನ್ನು ಅವರು ಸಹಿಸಲಿಲ್ಲ. ಏನಾದರೂ ಮಾಡಿ ತಮ್ಮ ಅಸಮಾಧಾನವನ್ನು ಸ್ಪಷ್ಟಪಡಿಸಬೇಕು ಮತ್ತು ಮನೆತನದ ಮರ್ಯಾದೆ ತೆಗೆದುದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಅವರು ನಿರ್ಧರಿಸಿದರು. ಮತ್ತು ಸೂಕ್ತ ಸಮಯಕ್ಕಾಗಿ ಕಾಯತೊಡಗಿದರು.

ಇತ್ತ ಉತ್ಪಲಾವರ್ಣಾ ಸಂಘದಲ್ಲಿ ಬಹಳ ಬೇಗ ಪ್ರವರ್ಧಮಾನಕ್ಕೆ ಬಂದಳು. ಅವಳ ಧ್ಯಾನ, ಸಾಧನೆಗಳಿಂದಾಗಿ ಹೆಚ್ಚಿನ ಜವಾಬ್ದಾರಿಯ ಕೆಲಸಗಳಿಗೆ ನಿಯುಕ್ತಿಗೊಳ್ಳುತ್ತಾ ಹೋದಳು. ಹೀಗಿರುತ್ತ, ಆಕೆಗೆ ಕರುಣಾ ಮಂದಿರ ವಿಹಾರದಲ್ಲಿ ದೀಪ ಬೆಳಗುವ ಕಾಯಕವನ್ನು ನೀಡಲಾಯಿತು. ಒಂದು ಸಂಜೆ ಅವಳು ವಿಹಾರದ ಕಸ ಗುಡಿಸಿ, ಬಾಗಿಲನ್ನು ಮುಚ್ಚಿ, ದೀಪ ಬೆಳಗಿದಳು. ಅನಂತರ ಆ ದೀಪದ ಕಾಂತಿಯಿಂದ ಆಕರ್ಷಿತಳಾಗಿ, ಅದರಲ್ಲೆ ಮನಸ್ಸನ್ನು ನಿಲ್ಲಿಸಿ, ಧ್ಯಾನಮಗ್ನಳಾದಳು. ಧ್ಯಾನ ತೀವ್ರತೆ ಆಕೆಯನ್ನು ಸಮಾಧಿ ಸ್ಥಿತಿಗೆ ಕೊಂಡೊಯ್ದಿತು. ಅವಳ ಅಂತರಂಗದ ಜ್ಞಾನವನ್ನು ಪ್ರಕಾಶಗೊಳಿಸಿ, ಅಜ್ಞಾನವನ್ನು ತೊಡೆದು ಹಾಕಿತು. ಈ ಮೂಲಕ ಅವಳು ಅರಹಂತೆಯೂ ಆದಳು.

ಈಗ ಉತ್ಪಲಾವರ್ಣಾ ಸಂಪೂರ್ಣ ವಿರಕ್ತಿಯನ್ನು ಸಾಧಿಸಿದ್ದಳು. ಈಗ ಹಸಿವೆ ನೀರಡಿಕೆಯಿಂದ ಹಿಡಿದು ಯಾವ ದೈಹಿಕ ಸಂಗತಿಗಳೂ ಅವಳನ್ನು ಬಾಧಿಸುತ್ತಿರಲಿಲ್ಲ. ಅಂತರಂಗದ ಚಿಂತನೆಯಲ್ಲಿ ಮಗ್ನಳಾಗಿರುತ್ತಾ ಸೇವಾ ಕಾರ್ಯಗಳಲ್ಲಿ, ಸಂಘದ ಚಟುವಟಿಕೆಗಳಲ್ಲಿ ಹಾಗೂ ಸಾಧನೆಯಲ್ಲಿ ನಿರತಳಾಗಿರುತ್ತಿದ್ದಳು.

ಅರಹಂತೆಯ ಸ್ಥಾನವನ್ನೇರಿದ ಉತ್ಪಲೆಯು ಏಕಾಂತ ಧ್ಯಾನಕ್ಕಾಗಿ ಅಂಧವನವೆಂಬ ದಟ್ಟವಾದ ಕಾಡಿಗೆ ಹೋದಳು. ಅಲ್ಲಿಯ ರುದ್ರ ರಮಣೀಯ ಪರಿಸರದಲ್ಲಿ ಧ್ಯಾನಕ್ಕೆ ಕುಳಿತಳು. ಸದಾ ಅವಳನ್ನು ಹಿಂಬಾಲಿಸುತ್ತಿದ್ದ ಉತ್ಪಲಾವರ್ಣಾಳ ದಾಯಾದಿ ಆ ಕಾಡಿಗೂ ಬಂದ. ಪ್ರತೀಕಾರದ ಮನೋಭಾವ ಅವನನ್ನು ಸುಡುತ್ತಿತ್ತು. ಧ್ಯಾನಮಗ್ನಳಾಗಿ ಕುಳಿತಿದ್ದ ಉತ್ಪಲನೆಯ ಮೇಲೆ ಅತ್ಯಾಚಾರ ಎಸಗಿದ. ಅವನ ಪಾಪಕ್ಕೆ ತಕ್ಕ ಶಿಕ್ಷೆಯೂ ಆ ಕ್ಷಣದಲ್ಲಿ ದೊರಕಿತು. ಘೋರ ಸರ್ಪವೊಂದು ಆ ಸ್ಥಳದಲ್ಲಿ ಅವನನ್ನು ಕಚ್ಚಿ, ವಿಷವೇರಿ ಅವನು ಸತ್ತುಹೋದ. ಅವನ ಕಳೇವರವನ್ನು ಮಹಾಗ್ನಿಯು ಸೆಳೆದೊಯ್ದು ಭೂಗರ್ಭದ ಅವೀಚಿ ನರಕಕ್ಕೆ ಕೊಂಡುಹೋಯಿತು.

ಅದಾಗಲೇ ಅರಹಂತ ಪದವನ್ನು ಪಡೆದಿದ್ದ ಉತ್ಪಲೆಗೆ ದೇಹದ ಮೇಲೆ ನಡೆದ ಈ ಘಟನೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಅವಳು ಇತರ ಬಿಕ್ಖುಣಿಯರ ಬಳಿಸಾರಿ ಈ ವಿಷಯವನ್ನು ತಿಳಿಸಿದಳು. ಸಂಘದೊಳಗೆ ಗುಸುಗುಸು ಶುರುವಾಯ್ತು. ವಿಷಯ ಜೇತವನದಲ್ಲಿ ತಂಗಿದ್ದ ಬುದ್ಧನ ಕಿವಿಯನ್ನೂ ತಲುಪಿತು. ಆಗ ಬುದ್ಧ ಎಂದಿನ ಮುಗುಳ್ನಗೆಯನ್ನೇ ಸೂಸುತ್ತ, “ಈ ಪ್ರಕರಣದಲ್ಲಿ ಅಪರಾಧಿಗೆ ಮರಣದ ಶಿಕ್ಷೆಯಾಗಿದೆ. ಇಲ್ಲಿ ಉತ್ಪಲಾವರ್ಣೆಯ ಅಪರಾಧವೇನೂ ಇಲ್ಲ. ಆದ್ದರಿಂದ ಅವಳ ಪರಿಶುದ್ಧತೆಗಾಗಲೀ ಸಾಧನೆಗಾಗಲೀ ಯಾವ ಕುಂದು ಕೂಡ ಉಂಟಾಗಿಲ್ಲ. ಅವಳು ತನ್ನ ಸಾಧನೆಯನ್ನು ಮುಂದುವರೆಸಲಿ” ಎಂದ. ಈ ಘಟನೆಯಿಂದ ಸಂಘದಲ್ಲಿ ಹೆಣ್ಣುಮಕ್ಕಳನ್ನು ಇರಿಸಿಕೊಳ್ಳುವ ಔಚಿತ್ಯದ ಬಗೆಗಿನ ಹಳೆಯ ಚರ್ಚೆ ಮತ್ತೆ ಕಾವು ಪಡೆದಿತ್ತು. ಬುದ್ಧ, “ಈಗ ನಾವು ಚರ್ಚೆ ಮಾಡಬೇಕಿರುವುದು ಸಂಘದೊಳಗಿನ ಬಿಕ್ಖುಗಳ ಸಾಧನೆಯನ್ನು ಮತ್ತಷ್ಟು ಕ್ರಮಬದ್ಧಗೊಳಿಸುವುದು ಹೇಗೆ, ಅವರು ಜಿತಕಾಮರಾಗಿ ಸಂಯಮಿಗಳಾಗುವಂತೆ ಸಾಧನೆ ಮಾಡುವುದು ಹೇಗೆ ಎಂಬ ಬಗ್ಗೆ ಹೊರತು ಮಹಿಳೆಯರನ್ನು ಹೊರಹಾಕುವ ಬಗ್ಗೆ ಅಲ್ಲ” ಎಂದು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ. 

ಬುದ್ಧನ ಈ ಮಾತುಗಳಿಗೆ ಭಂತೇ ಗಣ ತಲೆದೂಗಿತು. ಈ ಮೂಲಕ ಬುದ್ಧನ ದೃಷ್ಟಿ ವೈಶಾಲ್ಯತೆ ಮತ್ತೊಮ್ಮೆ ಸಾಬೀತಾಗಿತ್ತು. ಉತ್ಪಲಾವರ್ಣಾ ತನ್ನ ಸಾಧನೆಯನ್ನು ಮುಂದುವರೆಸಿದಳು. ಉನ್ನತ ಆಧ್ಯಾತ್ಮಿಕ ಪದವಿಗಳನ್ನು ಗಳಿಸಿದಳು.

 

 

 

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.